ಮಕರ ಸಂಕ್ರಾಂತಿ

ತಿಥಿ

ಈ ಹಬ್ಬವು ತಿಥಿವಾಚಕವಾಗಿರದೇ ಅಯನ-ವಾಚಕವಾಗಿದೆ. ಈ ದಿನ ಸೂರ್ಯನ ನಿರಯನ ಮಕರ ರಾಶಿಯಲ್ಲಿ ಸಂಕ್ರಮಣವಾಗುತ್ತದೆ. ಸೂರ್ಯನ

ಭ್ರಮಣದಿಂದಾಗಿ ಆಗುವ ಕಾಲ ವ್ಯತ್ಯಾಸವನ್ನು ಸರಿಪಡಿಸಲು ಪ್ರತಿ ೮೦ ವರ್ಷಕ್ಕೊಮ್ಮೆ ಸಂಕ್ರಾಂತಿ ಯನ್ನು ೧ ದಿನ ಮುಂದೂಡಲಾಗುತ್ತದೆ. ಇತ್ತೀಚೆಗೆ ಮಕರ ಸಂಕ್ರಾಂತಿಯು ಜನವರಿ ೧೪ ಕ್ಕೆ ಬರುತ್ತದೆ.

ಇತಿಹಾಸ ಮತ್ತು ಮಹತ್ವ

ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿಯು ಸಂಕರಾಸುರನೆಂಬ ದೈತ್ಯನ ವಧೆ ಮಾಡಿದ್ದಾಳೆ ಎಂಬ ಕಥೆಯಿದೆ. ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯನ ಉತ್ತರಾಯಣ ಪ್ರಾರಂಭವಾಗುತ್ತದೆ. ಕರ್ಕಸಂಕ್ರಾಂತಿಯಿಂದ ಮಕರಸಂಕ್ರಾಂತಿಯ ವರೆಗಿನ ಕಾಲವನ್ನು ‘ದಕ್ಷಿಣಾಯನ’ ಎನ್ನುತ್ತಾರೆ. ದಕ್ಷಿಣಾಯನ ಕಾಲದಲ್ಲಿ ಮೃತನಾದ ವ್ಯಕ್ತಿಯು, ದಕ್ಷಿಣಲೋಕಕ್ಕೆ (ಯಮಲೋಕಕ್ಕೆ) ಹೋಗುವ ಸಾಧ್ಯತೆ ಉತ್ತರಾಯಣದಲ್ಲಿ ಮೃತನಾದ ವ್ಯಕ್ತಿಗಿಂತ ಹೆಚ್ಚಿರುತ್ತದೆ. ಈ ದಿನ ಪಂಚಾಂಗದ ನಿರಯನ ಪದ್ಧತಿಗನುಸಾರ ಸೂರ್ಯೋದಯದಿಂದ ಸೂರ್ಯಾಸ್ತದ ವರೆಗಿನ ವಾತಾವರಣವು ಅಧಿಕ ಚೈತನ್ಯಮಯವಾಗಿರುವುದರಿಂದ ಸಾಧನೆಯನ್ನು ಮಾಡುವವರಿಗೆ ಈ ಚೈತನ್ಯದ ಲಾಭವಾಗುತ್ತದೆ.

ಪರ್ವಕಾಲದಲ್ಲಿ ಮಾಡುವಂತಹ ದಾನ

ಅ. ‘ಪರ್ವಕಾಲದ ದಾನ’ದ ಮಹತ್ವ : ಮಕರಸಂಕ್ರಾಂತಿಯಿಂದ ರಥಸಪ್ತಮಿಯ ವರೆಗಿನ ಕಾಲವು ಪರ್ವಕಾಲವಾಗಿರುತ್ತದೆ. ಈ ಪರ್ವಕಾಲದಲ್ಲಿ ಮಾಡಿದ ದಾನ ಮತ್ತು ಪುಣ್ಯಕರ್ಮಗಳು ವಿಶೇಷ ಫಲವನ್ನು ಕೊಡುತ್ತವೆ.

ಆ. ದಾನ ಕೊಡುವ ವಸ್ತುಗಳು : ‘ಹೊಸಪಾತ್ರೆ, ವಸ್ತ್ರ, ಅನ್ನ, ಎಳ್ಳು, ಎಳ್ಳುಪಾತ್ರೆ, ಬೆಲ್ಲ, ಆಕಳು, ಕುದುರೆ, ಚಿನ್ನ ಅಥವಾ ಭೂಮಿಯನ್ನು ಯಥಾ ಶಕ್ತಿ ದಾನ ಮಾಡಬೇಕು. ಈ ದಿನ ಮುತ್ತೈದೆಯರು ದಾನ ಮಾಡುತ್ತಾರೆ. ಮುತ್ತೈದೆಯರು ಕೆಲವು ಪದಾರ್ಥಗಳನ್ನು ಕುಮಾರಿಯರಿಂದ ಕಸಿದು ಅವರಿಗೆ ಎಳ್ಳುಬೆಲ್ಲ ಕೊಡುತ್ತಾರೆ. ಮುತ್ತೈದೆಯರು ಅರಿಶಿನ-ಕುಂಕುಮದ ಕಾರ್ಯಕ್ರಮವನ್ನು ಮಾಡಿ ನೀಡುವ ದಾನಕ್ಕೆ ‘ಬಾಗಿನ ನೀಡುವುದು’ ಎಂದು ಹೇಳುತ್ತಾರೆ.

ಆ ೧. ಬಾಗಿನ ನೀಡುವುದರ ಮಹತ್ವ : ‘ಬಾಗಿನ ನೀಡುವುದೆಂದರೆ ಇನ್ನೊಂದು ಜೀವದಲ್ಲಿನ ದೇವತ್ವಕ್ಕೆ ತನು, ಮನ ಮತ್ತು ಧನದಿಂದ ಶರಣಾಗುವುದು. ಸಂಕ್ರಾಂತಿಯ ಕಾಲವು ಸಾಧನೆಗೆ ಪೂರಕವಾಗಿರುವುದರಿಂದ ಈ ಕಾಲ ದಲ್ಲಿ ನೀಡಿದ ಬಾಗಿನದಿಂದ ದೇವತೆಯ ಕೃಪೆಯಾಗಿ ಜೀವಕ್ಕೆ ಇಚ್ಛಿತ ಫಲಪ್ರಾಪ್ತಿಯಾಗುತ್ತದೆ’.

ಆ ೨. ಬಾಗಿನವೆಂದು ಯಾವ ವಸ್ತುಗಳನ್ನು ಕೊಡಬೇಕು ? : ಸೌಭಾಗ್ಯದ ವಸ್ತುಗಳು, ಊದುಬತ್ತಿ, ಉಟಣೆ, ಧಾರ್ಮಿಕಗ್ರಂಥ, ಪುರಾಣಗ್ರಂಥ, ದೇವತೆಗಳ ಚಿತ್ರ, ಅಧ್ಯಾತ್ಮದ ಬಗೆಗಿನ ಧ್ವನಿಚಿತ್ರಮುದ್ರಿಕೆ ಮುಂತಾದ ಅಧ್ಯಾತ್ಮಕ್ಕೆ ಪೂರಕವಾಗಿರುವ ವಸ್ತುಗಳನ್ನು ಕೊಡಬೇಕು.

ಇ. ಮಡಿಕೆ : ‘ಸಂಕ್ರಾಂತಿಯ ಹಬ್ಬಕ್ಕೆ ಸಣ್ಣ ಮಣ್ಣಿನ ಮಡಿಕೆಗಳು’ ಬೇಕಾಗುತ್ತವೆ.  ಅವುಗಳಿಗೆ ಅರಿಶಿನ ಕುಂಕುಮವನ್ನು ಹಚ್ಚಿ ದಾರವನ್ನು ಸುತ್ತುತ್ತಾರೆ. ಮಡಕೆ ಗಳಲ್ಲಿ ಗಜ್ಜರಿ, ಬೋರೇಹಣ್ಣು, ಕಬ್ಬಿನ ತುಂಡು, ನೆಲಗಡಲೆ, ಹತ್ತಿ, ಕಡಲೆಕಾಳು, ಎಳ್ಳುಬೆಲ್ಲ, ಅರಿಶಿನ ಕುಂಕುಮ ಮುಂತಾದವುಗಳನ್ನು ತುಂಬಿಸುತ್ತಾರೆ. ರಂಗೋಲಿ ಬಿಡಿಸಿ ಮಣೆ ಹಾಕಿ ಅದರ ಮೇಲೆ ೫ ಮಡಕೆಗಳನ್ನಿಟ್ಟು ಪೂಜಿಸತ್ತಾರೆ. ೩ ಮಡಕೆಗಳನ್ನು ಸೌಭಾಗ್ಯವತಿಯರಿಗೆ ಬಾಗಿನವೆಂದು ಒಂದು ಮಡಕೆಯನ್ನು ತುಳಸಿಗೆ ಮತ್ತು ಇನ್ನೊಂದನ್ನು ತಮಗಾಗಿ ಇಟ್ಟುಕೊಳ್ಳುತ್ತಾರೆ.

ಎಳ್ಳಿನ ಉಪಯೋಗ

ಸಂಕ್ರಾಂತಿಗೆ ಎಳ್ಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸುತ್ತಾರೆ, ಉದಾ. ಎಳ್ಳುನೀರಿನಿಂದ ಸ್ನಾನ ಮಾಡಿ ಎಳ್ಳು ಬೆಲ್ಲವನ್ನು ಸೇವಿಸುವುದು ಹಾಗೂ ಇತರರಿಗೂ ಕೊಡುವುದು, ಬ್ರಾಹ್ಮಣರಿಗೆ ಎಳ್ಳು ದಾನ ಮಾಡುವುದು, ಶಿವಮಂದಿರದಲ್ಲಿ ಎಳ್ಳೆಣ್ಣೆಯ ದೀಪ ಹಚ್ಚುವುದು, ಪಿತೃಶ್ರಾದ್ಧ ಮಾಡುವುದು (ಇದರಲ್ಲಿ ತಿಲಾಂಜಲಿ ನೀಡುತ್ತಾರೆ).

ಎಳ್ಳಿನ ಮಹತ್ವ

ಅ. ಎಳ್ಳನ್ನು ಉಪಯೋಗಿಸುವುದರಿಂದ ಪಾಪಕ್ಷಾಲನೆಯಾಗುವುದು : ‘ಈ ದಿನ ಎಳ್ಳೆಣ್ಣೆ ಮತ್ತು ಉಟಣೆಯನ್ನು ಮೈಗೆ ಹಚ್ಚುವುದು, ಎಳ್ಳುಮಿಶ್ರಿತ ಜಲದಿಂದ ಸ್ನಾನ ಮಾಡುವುದು, ಎಳ್ಳು ಮಿಶ್ರಿತ ನೀರು ಕುಡಿಯುವುದು, ಎಳ್ಳಿನ ಹೋಮ ಮಾಡುವುದು ಮತ್ತು ಎಳ್ಳನ್ನು ದಾನ ಮಾಡುವುದು. ಈ ಪದ್ಧತಿ ಯಿಂದ ಎಳ್ಳನ್ನು ಉಪಯೋಗಿಸುವವರ ಎಲ್ಲ ಪಾಪಗಳು ನಾಶವಾಗುತ್ತವೆ.

ಆ. ಆಯುರ್ವೇದಕ್ಕನುಸಾರ ಮಹತ್ವ : ಚಳಿಗಾಲದಲ್ಲಿ ಬರುವ ಸಂಕ್ರಾಂತಿಯಂದು ಎಳ್ಳನ್ನು ತಿನ್ನುವುದು ಲಾಭದಾಯಕವಾಗಿರುತ್ತದೆ.

ಇ. ಅಧ್ಯಾತ್ಮಕ್ಕನುಸಾರ ಮಹತ್ವ : ೧. ಎಳ್ಳಿನಲ್ಲಿ ಸತ್ತ್ವಲಹರಿಗಳನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯು ಹೆಚ್ಚಿರುವುದರಿಂದ ಎಳ್ಳುಬೆಲ್ಲವನ್ನು ಸೇವಿಸುವುದರಿಂದ ಅಂತಃಶುದ್ಧಿಯಾಗಿ ಸಾಧನೆಯು ಒಳ್ಳೆಯ ರೀತಿಯಿಂದಾಗಲು ಸಹಾಯವಾಗುತ್ತದೆ. ಎಳ್ಳುಬೆಲ್ಲವನ್ನು ಒಬ್ಬರಿಗೊಬ್ಬರು ಹಂಚುವುದರಿಂದ ಸಾತ್ತ್ವಿಕತೆಯ ಕೊಡುಕೊಳ್ಳುವಿಕೆಯಾಗುತ್ತದೆ.

೨. ‘ಶ್ರಾದ್ಧ’ದಲ್ಲಿ ಎಳ್ಳನ್ನು ಉಪಯೋಗಿಸಿದರೆ ಅಸುರ ಮುಂತಾದವರು ಶ್ರಾದ್ಧದಲ್ಲಿ ವಿಘ್ನವನ್ನುಂಟು ಮಾಡುವುದಿಲ್ಲ.

ಗಾಳಿಪಟವನ್ನು ಹಾರಿಸಬೇಡಿ !

ಸದ್ಯ ರಾಷ್ಟ್ರ ಮತ್ತು ಧರ್ಮವು ಸಂಕಟದಲ್ಲಿರುವಾಗ ಮನೋರಂಜನೆಗಾಗಿ ಗಾಳಿಪಟವನ್ನು ಹಾರಿಸುವುದೆಂದರೆ, ‘ರೋಮ್‌ ಹೊತ್ತಿ ಉರಿಯುತ್ತಿರುವಾಗ ನೀರೋ ಪಿಟೀಲು ಬಾರಿಸುತ್ತಿದ್ದನು’, ಎಂಬಂತೆ ಆಗುವುದು. ಗಾಳಿಪಟ ಹಾರಿಸುವ ಸಮಯವನ್ನು ರಾಷ್ಟ್ರದ ವಿಕಾಸಕ್ಕಾಗಿ ಉಪಯೋಗಿಸಿದರೆ, ಬೇಗನೇ ರಾಷ್ಟ್ರದ ಪ್ರಗತಿಯಾಗುವುದು ಹಾಗೂ ಸಾಧನೆ ಮತ್ತು ಧರ್ಮಕಾರ್ಯಗಳಿಗಾಗಿ ಉಪಯೋಗಿಸಿದರೆ, ತನ್ನೊಂದಿಗೆ ಸಮಾಜದ ಕಲ್ಯಾಣವೂ ಆಗುವುದು.

ಕಿಂಕ್ರಾಂತಿ ಅಥವಾ ಕರಿದಿನ

ಇದು ಸಂಕ್ರಾಂತಿಯ ಮಾರನೆಯ ದಿನವಾಗಿದೆ. ಈ ದಿನ ದೇವಿಯು ಕಿಂಕರಾಸುರನನ್ನು ವಧಿಸಿದ್ದಳು. (ಆಧಾರ : ಸನಾತನ ನಿರ್ಮಿತ ಗ್ರಂಥ ‘ಹಬ್ಬಗಳನ್ನು ಆಚರಿಸುವ ಯೋಗ್ಯ ಪದ್ಧತಿ ಮತ್ತು ಶಾಸ್ತ್ರ’)