ಆನ್‌ಲೈನ್ ವಂಚನೆ ಮತ್ತು ಅದರಲ್ಲಿಯೂ ಸದ್ಯದ ಡಿಜಿಟಲ್ ಅರೆಸ್ಟ್ (ಭಾಸಮಾನ ಬಂಧನ) ಪ್ರಕರಣಗಳು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿವೆ. ಅದರಲ್ಲಿ ಸಾಮಾನ್ಯರಿಂದ ಹಿಡಿದು ಉನ್ನತ ವರ್ಗದ ಗಣ್ಯ ವ್ಯಕ್ತಿಗಳೂ ವಂಚನೆಗೊಳಗಾಗುತ್ತಿದ್ದಾರೆ. ವ್ಯವಹಾರಿಕ ಕ್ಷೇತ್ರದಲ್ಲಿ ಉನ್ನತ ಹುದ್ದೆಯಲ್ಲಿರುವ ಪ್ರಾಧ್ಯಾಪಕರು, ಅಭಿಯಂತರರು, ಡಾಕ್ಟರರು ಕೂಡ ವಂಚನೆಗೆ ಒಳಗಾಗುತ್ತಿದ್ದಾರೆ. ‘ಡಿಜಿಟಲ್ ಅರೆಸ್ಟ್’ ಒಂದು ವಿಶಾಲವಾದ ಪರಿಕಲ್ಪನೆಯಾಗಿದ್ದರೂ, ವಂಚನೆಯ ಹಲವು ರೂಪಗಳು ಹೆಚ್ಚುತ್ತಿವೆ. ಮುಖ್ಯವಾಗಿ, ಇದರಲ್ಲಿ ವ್ಯಕ್ತಿಯು ವಂಚನೆಗೊಳಗಾದ ನಂತರ, ಅದನ್ನು ಪೊಲೀಸರಿಗೆ ವರದಿ ಮಾಡುವುದು, ಪರಿಹಾರವನ್ನು ಪಡೆಯುವುದು ಬಹಳ ದೊಡ್ಡ ಪ್ರಕ್ರಿಯೆಯನ್ನು ಒಳಗೊಂಡಿರುತ್ತದೆ. ಅದಕ್ಕೂ ಮುಂಚೆಯೇ ಈ ಘಟನೆಗಳ ಬಗ್ಗೆ ನಾವು ಹೇಗೆ ಜಾಗರೂಕರಾಗಿರಬಹುದು ? ಇದನ್ನು ನನ್ನ ಸ್ವಂತ ಅನುಭವದಿಂದ ನಾನು ಇಲ್ಲಿ ಹೇಳಲು ಪ್ರಯತ್ನಿಸುತ್ತಿದ್ದೇನೆ.
೧. ಆನ್‌ಲೈನ್ ಖರೀದಿಯ ನಂತರ ಬಹುಮಾನಗಳಿಗಾಗಿ ಸಂಪರ್ಕಿಸುವುದು
ಒಮ್ಮೆ ನಾನು ‘ಫ್ಲಿಪ್‌ಕಾರ್ಟ್’ ಎಂಬ ‘ಆನ್‌ಲೈನ್ ಶಾಪ್’ನಿಂದ ಕೆಲವು ವಸ್ತುಗಳನ್ನು ಖರೀದಿಸಿದ್ದೆನು. ೪ ದಿನಗಳ ನಂತರ, ‘ಫ್ಲಿಪ್‌ಕಾರ್ಟ್’ನಿಂದ ಒಂದು ಕರೆ ಬಂದಿತು. ಅವರು ನೀವು ‘ಫ್ಲಿಪ್‌ಕಾರ್ಟ್ ಕಸ್ಟಮರ್ ಲಕ್ಕಿ ಡ್ರಾ’ ಸ್ಪರ್ಧೆಯನ್ನು ಗೆದ್ದಿದ್ದೀರಿ. ನಿಮಗೆ ಸ್ಕಾರ್ಪಿಯೋ ಕಾರು ಬಹುಮಾನವಾಗಿ ಬಂದಿದೆ’ ಎಂದರು. ಕೂಡಲೇ ಸಂಬಂಧಪಟ್ಟವರು ಕಾರಿನ ಚಿತ್ರ ಕಳುಹಿಸಿ ‘೭೦ ಸಾವಿರ ಮಾತ್ರ ಆರ್.ಟಿ.ಒ. ಪಾಸಿಂಗ (ಉಪಪ್ರಾದೇಶಿಕ ಸಾರಿಗೆ ಕಚೇರಿಯ ರಸ್ತೆ ಪರವಾನಗಿ ಪತ್ರ)’ ಮತ್ತು ವಾಹನ ಸಾರಿಗೆ ವೆಚ್ಚಗಳನ್ನು ಕಳುಹಿಸಿ’ ಎಂದು ಹೇಳಿದರು. ಸಂಬಂಧಪಟ್ಟ ವ್ಯಕ್ತಿಯು ನನಗೆ ಆ ವ್ಯಕ್ತಿಯ ‘ಫ್ಲಿಪ್‌ಕಾರ್ಟ್’ ಸಂಸ್ಥೆಯ ಗುರುತಿನ ಚೀಟಿಯನ್ನೂ ಕಳುಹಿಸಿದಳು. ಈ ಹಠಾತ್ ಕರೆಯಿಂದ ನಾನು ಮೊದಲು ಗೊಂದಲಕ್ಕೊಳಗಾಗಿದ್ದೆ; ಏಕೆಂದರೆ ಅವರು ಹೇಳಿದ ಮಾಹಿತಿ ಸ್ವಲ್ಪ ಮಟ್ಟಿಗೆ ನಿಜವಾಗಿತ್ತು. ನಂತರ ನಾನು ಮೊದಲು ಸಂಬಂಧಿಸಿದ ‘ಈಆ’ ಅನ್ನು ಅದು ಅಸಲಿಯೋ ಅಥವಾ ನಕಲಿಯೋ ಎಂದು ಖಚಿತಪಡಿಸಲು ‘ಫ್ಲಿಪ್‌ಕಾರ್ಟ್’ ಗ್ರಾಹಕರ ಕಕ್ಷೆಗೆ ಕಳುಹಿಸಿದೆನು. ಆಗ ಗುರುತಿನ ಚೀಟಿ ನಕಲಿ ಎಂಬುದು ತಿಳಿಯಿತು.
ಆಗ ನಾನು ಸಂಬಂಧಪಟ್ಟವರಿಗೆ ‘ವಾಹನವನ್ನು ಪಡೆದು ಕೊಳ್ಳಲು (ಬೆಂಗಳೂರಿನಿಂದ ಕಳುಹಿಸಲಿದ್ದರಿಂದ) ‘ನಾನೇ ವಿಮಾನದಲ್ಲಿ ಈಗಲೇ ಬೆಂಗಳೂರಿಗೆ ಬರುತ್ತಿದ್ದೇನೆ’ ಎಂದು ಹೇಳಿದೆ. ಆಗ ಆ ವ್ಯಕ್ತಿ ‘ಬೇಡ, ಆರ್.ಟಿ.ಓ. ಪಾಸಿಂಗ್ ನಲ್ಲಿ ನಿಮಗೆ ಸಮಸ್ಯೆ ಎದುರಾಗುತ್ತದೆ’ ಎಂದು ಹೇಳಿದನು. ನಾನು ಆ ವ್ಯಕ್ತಿಗೆ ನಾನು ಹೇಳಿದೆ ‘ನನ್ನ ಸಂಬಂಧಿಕರು ಬೆಂಗಳೂರಿನಲ್ಲಿದ್ದಾರೆ, ನನಗೆ ಯಾವುದೇ ತೊಂದರೆ ಆಗುವುದಿಲ್ಲ. ನನಗೆ ನೀವು ಕೂಡಲೇ ಶೋರೂಂ ವಿಳಾಸವನ್ನು ವಾಟ್ಸಾಪ್ ಮಾಡಿರಿ. ನನ್ನ ದಾಖಲೆಪತ್ರಗಳನ್ನು ಸಿದ್ಧಪಡಿಸಿರಿ, ನಾನೀಗ ಹೊರಡುತ್ತೇನೆ’ ಎಂದು ಹೇಳಿದೆನು. ಆಗ ಆ ವ್ಯಕ್ತಿ ಸಂಪರ್ಕ ಕಡಿತಗೊಳಿಸಿದನು.
೨. ಆಧಾರಕಾರ್ಡ್ ಅನ್ನು ‘ಲಿಂಕ್’ ಮಾಡಿದ ನಂತರ ಕರೆ
ನಾನು ನನ್ನ ಆಧಾರಕಾರ್ಡ್ನ್ನು ಮೊಬೈಲ್ ಸಂಖ್ಯೆಯೊಂದಿಗೆ ‘ಲಿಂಕ್’ (ಜೋಡಿಸುವುದು) ಮಾಡಿದೆನು. ನಂತರ ಸುಮಾರು ೨-೩ ದಿನಗಳಲ್ಲಿ ನನ್ನ ‘ಎಟಿಎಂ’ (ಬ್ಯಾಂಕಿನಿಂದ ಹಣವನ್ನು ಹಿಂಪಡೆಯುವ ಕಾರ್ಡು) ಯಾವ ಬ್ಯಾಂಕಿನದ್ದಾಗಿದೆಯೋ, ಆ ಬ್ಯಾಂಕಿನಿಂದ ನನಗೆ ಕರೆ ಬಂದಿತು. ಅವರು ನನಗೆ ‘ನಿಮ್ಮ ಖಾತೆ ಯಲ್ಲಿ ಏನೋ ಸಮಸ್ಯೆ ಇದೆ. ನೀವು ಏಙಾ (ನೊ ಯುವರ ಕಸ್ಟಮರ – ಗ್ರಾಹಕರ ಸತ್ಯತೆಯನ್ನು ಪರಿಶೀಲಿಸುವ ಪದ್ಧತಿ) ಮಾಡಬೇಕಾಗಿದೆ ಮತ್ತು ಈಗ ನಾನು ಕಳುಹಿಸುತ್ತಿರುವ ಲಿಂಕ್ ನಲ್ಲಿ ನಾನು ಹೇಳುವಂತೆ ಮಾಡಬೇಕು’ ಎಂದು ಹೇಳಿದರು. ನನಗೆ ಏನೋ ಸರಿ ಇಲ್ಲ ಎಂದೆನಿಸಿತು; ಏಕೆಂದರೆ ನಾನು ಮೊಬೈಲ್ ಸಂಖ್ಯೆಗೆ ಆಧಾರಕಾರ್ಡ್ನ್ನು ಲಿಂಕ್ ಮಾಡಿದ್ದೇನೆ ಮತ್ತು ಬ್ಯಾಂಕಿನಿಂದ ಕರೆ ಬಂದಿದ್ದರಿಂದ ನಾನು ವ್ಯಕ್ತಿಗೆ ನೇರವಾಗಿ ಹೇಳಿದೆನು, ‘ಸರಿ, ನಾನು ಪೊಲೀಸರನ್ನು ಸಂಪರ್ಕಿಸಿ ಮತ್ತು ನಿಮ್ಮ ಸಂಖ್ಯೆಯನ್ನು ಅವರಿಗೆ ನೀಡುತ್ತೇನೆ, ಇದರಿಂದ ನನಗೆ ನೀವು ಸರಿಯಾದ ವ್ಯಕ್ತಿಯೆಂದು ದೃಢವಾಗುವುದು’ ಎಂದು ಹೇಳಿದಾಗ ಅವನು ನನ್ನನ್ನು ಬೈಯ್ಯತೊಡಗಿದನು. ‘ನಿನ್ನನ್ನು ನೋಡಿಕೊಳ್ಳುತ್ತೇನೆ’ ಎಂದು ಹೇಳಿ ಅವನು ಸಂಪರ್ಕ ಕಡಿತಗೊಳಿಸಿದನು. ಇದರಿಂದ ಆತನೊಬ್ಬ ನಕಲಿ ಬ್ಯಾಂಕಿನ ಸಿಬ್ಬಂದಿಯಾಗಿದ್ದನು ಮತ್ತು ಅವನು ನನ್ನ ಬಳಿ ನೇರವಾಗಿ ನನ್ನ ಖಾತೆಯ ವಿವರಗಳನ್ನು ಕೇಳಿ ಖಾತೆಯಿಂದ ಹಣ ತೆಗೆಯಲು ಬಯಸಿದ್ದನು. ಇದು ನನ್ನ ಗಮನಕ್ಕೆ ಬಂದಿತು.
೩. ಆಧಾರಕಾರ್ಡ್ ವಿಳಾಸ ಬದಲಾವಣೆಯ ಸಂದರ್ಭದಲ್ಲಿ, ಆ ಕಾರ್ಡ್‌ನಲ್ಲಿ ತೊಂದರೆಯಿದೆಯೆಂದು ಹೇಳುವುದು
ನಾನು ನನ್ನ ಹಳೆಯ ಆಧಾರ ಕಾರ್ಡ್ ವಿಳಾಸವನ್ನು ಹೊಸ ವಿಳಾಸಕ್ಕೆ ಬದಲಾಯಿಸಿಕೊಂಡೆನು. ನಂತರ ಅದೇ ದಿನ ಸಂಜೆ ನನಗೆ ಒಂದು ಕರೆ ಬಂದಿತು. ಆ ವ್ಯಕ್ತಿಯು, ‘ನೀವು ಸುರೇಶ ಸಾವಂತ ಅಲ್ಲವೇ ? ನಿಮ್ಮ ಕಾರ್ಡ್ನ್ನು ನವೀಕರಿಸಲು ‘ವಿನಂತಿಯನ್ನು’ ಸ್ವೀಕರಿಸಲಾಗಿದೆ, ನಿಮಗೆ ಸಹಕರಿಸಲು ಬಯಸುತ್ತೇವೆ. ನಿಮ್ಮ ಪ್ರಕ್ರಿಯೆಯಲ್ಲಿ ಏನೋ ತಪ್ಪಾಗಿದೆ. ಅದನ್ನು ಸರಿಪಡಿಸ ಬೇಕಾಗುವುದು. ನಿಮ್ಮ ಖಾತೆಯ ವಿವರಗಳನ್ನು ಕಳುಹಿಸಿ’ ಎಂದು ಹೇಳಿದನು. ಆಗ ನನಗೆ ಇದು ಒಂದು ರೀತಿಯ ವಂಚನೆಯೆಂದು ಗಮನಕ್ಕೆ ಬಂದಿತು. ಆಗ ನಾನು ಅವರಿಗೆ ‘ನಾನು ಸುರೇಶ ಸಾವಂತ ಅಲ್ಲ, ಅದು ‘ರಾಂಗ್ ನಂಬರ್’ (ತಪ್ಪು ಕರೆ)’ ಎಂದು ಹೇಳಿ ಸಂಪರ್ಕ ಕಡಿತಗೊಳಿಸಿದೆನು.
೪. ‘ಡಿಜಿಟಲ್ ಮಾರ್ಕೆಟಿಂಗ್’ ಸಂಸ್ಥೆಯಿಂದ ಕರೆ
ಒಮ್ಮೆ ಒಂದು ಕರೆ ಬಂದಿತು. ಆಗ ಎದುರಿಗಿದ್ದ ಮಹಿಳೆ, ‘ನಾನು ಡಿಜಿಟಲ್ ಮಾರ್ಕೆಟಿಂಗ್ ಸಂಸ್ಥೆಯ ವ್ಯವಸ್ಥಾಪಕಳಾಗಿದ್ದೇನೆ. ನೀವು ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ನಂತರ ಗೂಗಲ್‌ನಲ್ಲಿ ಉತ್ತಮ ಪ್ರತಿಕ್ರಿಯೆ ನೀಡುತ್ತಿರಿ. (ನಾವು ದೇಶ, ವಿದೇಶಗಳಲ್ಲಿ ಪ್ರಯಾಣಿಸಿದಾಗಲೆಲ್ಲಾ ನಾವು ಭೇಟಿ ನೀಡಿದ ಸ್ಥಳ (‘ಲೊಕೇಶನ’) ‘ಗೂಗಲ್’ ಜಾಲತಾಣದಲ್ಲಿರುವ ವ್ಯವಸ್ಥೆಯಿಂದಾಗಿ ಅವರಿಗೆ ತಿಳಿಯುತ್ತದೆ. ಆ ಸ್ಥಳದ ಮಾಹಿತಿಯನ್ನು ನಮಗೆ ಇಚ್ಛೆಯಿದ್ದಲ್ಲಿ, ಗೂಗಲ ಒದಗಿಸಿದ ಆನ್‌ಲೈನ್ ಅರ್ಜಿಯನ್ನು ಭರ್ತಿ ಮಾಡ ಬಹುದು. ಸಂಬಂಧಿತ ಸ್ಥಳದ ಸೌಲಭ್ಯಗಳು ಮತ್ತು ಅನುಕೂಲಕ್ಕೆ ಅನುಗುಣವಾಗಿ ನಾವು ಈ ಸ್ಥಳವನ್ನು ‘ಕೆಟ್ಟದ್ದು, ಒಳ್ಳೆಯದು’ ಎಂದು ಮೌಲ್ಯಮಾಪನ ನೀಡಬಹುದು. ನಮ್ಮ ಅಭಿಪ್ರಾಯ ಮತ್ತು ಆ ಸ್ಥಳದ ಕುರಿತು ಹೆಚ್ಚಿನ ವಿವರವಾದ ಮಾಹಿತಿಯನ್ನು, ಅನೇಕ ಸ್ಥಳಗಳು, ಸ್ಥಾನಗಳಿಗಾಗಿ ನೀಡಿದ ನಂತರ, ನಮಗೆ ಗೂಗಲ್ ಮೂಲಕ ಮುಂದಿನ ಹಂತಗಳ ಒಂದು ‘ಬ್ಯಾಡ್ಜ್’ (ವರ್ಗ) ನೀಡಲಾಗುತ್ತದೆ.) ನಮ್ಮದೂ ಹೋಟೆಲ್‌ಗಳ ‘ಗುಂಪು’ ಇದೆ. ನೀವು ಇಂತಹ ಅಭಿಪ್ರಾಯವನ್ನು ನಮ್ಮ ಹೋಟೆಲ್‌ಗಳ ಸರಣಿಗೆ ನೀಡಿದರೆ, ನಾವು ನಿಮಗೆ ಸಾವಿರಾರು ರೂಪಾಯಿಗಳನ್ನು ನೀಡುತ್ತೇವೆ ಎಂದು ಹೇಳಿದರು. ಕೆಲವು ತಿಂಗಳ ನಂತರ, ಅಂತಹ ಸಂಪರ್ಕಗಳು ತಿಂಗಳಿಗೊಮ್ಮೆ ‘ವಾಟ್ಸಾಪ್’ ಸಂದೇಶಗಳು ಮತ್ತು ‘ಟೆಲಿಗ್ರಾಮ್’ ಸಾಮಾಜಿಕ ಮಾಧ್ಯಮಗಳ ಮೂಲಕ ಬರಲು ಪ್ರಾರಂಭಿಸಿದವು. ಒಮ್ಮೆ ಇದು ಯಾವ ರೀತಿಯ ಮೋಸದಾಟ ಆಗಿದೆ ಎಂದು ತಿಳಿದುಕೊಳ್ಳಬೇಕೆಂದು ನಾನು ಒಬ್ಬರಿಗೆ ಅವರೊಂದಿಗೆ ಕೆಲಸ ಮಾಡಲು ಒಪ್ಪಿಕೊಂಡೆನು.
ಒಂದು ‘ಡಿಜಿಟಲ್ ಮಾರ್ಕೆಟಿಂಗ್’ ಸಂಸ್ಥೆಯು ‘ಅಮೆಜಾನ್’ (ಆನ್‌ಲೈನ ಶಾಪ್)ಗಾಗಿ ಕಾರ್ಯನಿರ್ವಹಿಸುತ್ತದೆ. ಅವರ ಒಟ್ಟಾರೆ ಜಾಲತಾಣದ ಸ್ವರೂಪ ಸ್ವಲ್ಪಮಟ್ಟಿಗೆ ಸೂಕ್ತವಾಗಿದೆಯೆಂದು ಅನಿಸಿದ್ದರಿಂದ ನಾನು ಅವರಿಗೆ ಒಪ್ಪಿಗೆ ನೀಡಿದೆನು. ಅದರಲ್ಲಿ ಅವರು ಕೆಲವು ‘ಟಾಸ್ಕ್’ಗಳನ್ನು (ಕೆಲಸ ಪೂರ್ಣಗೊಳಿಸುವ ಗುರಿ) ನೀಡಿದ್ದರು. ಅವು ಬಹಳ ಸುಲಭವೆನ್ನಿಸಿತು. ನಾನು ಅವುಗಳನ್ನು ಸಹಜವಾಗಿ ಮಾಡಿ ಮುಗಿಸಿದೆನು ಮತ್ತು ಅವರು ತಕ್ಷಣವೇ ಹಣವನ್ನು ಕಳುಹಿಸಿದರು. ಅಂದರೆ ಈ ಹಂತದವರೆಗೆ ಯಾವುದೇ ತೊಂದರೆಗಳಿರಲಿಲ್ಲ. ಅವರ ಟೆಲಿಗ್ರಾಮ್ ಚಾನಲ್ ನಲ್ಲಿ ನನ್ನಂತೆ ಅನೇಕ ಜನರು ಕೆಲಸ ಮಾಡುತ್ತಿರುವುದು ‘ಆನ್‌ಲೈನ್’ನಲ್ಲಿ ಕಾಣಿಸಿತು. ನಂತರ ಅವರು ಮುಂದಿನ ಹಂತದ ಗುರಿಯನ್ನು ತಿಳಿಸಿದರು.
ನನಗೆ ಅದರಲ್ಲಿ ಸ್ವಲ್ಪ ಗೊಂದಲ ಮತ್ತು ಅನುಮಾನವೆನಿಸುತ್ತಿತ್ತು. ಆ ಟಾಸ್ಕ್ ಹೀಗಿತ್ತು ‘ಅಮೆಜಾನ್ ಡೀಲರ್’ಗಳಿಗೆ ದೊಡ್ಡ ಖರೀದಿ ಮಾಡಲು ಸ್ವಲ್ಪ ಹಣವನ್ನು ಹೂಡಿಕೆ ಮಾಡುವುದು ಮತ್ತು ಹೂಡಿಕೆ ಮಾಡಿದ ಮೊತ್ತಕ್ಕೆ ಅನುಗುಣವಾಗಿ ನಿಮಿಷಗಳಲ್ಲಿ ಹಣವನ್ನು ಎರಡುಪಟ್ಟು, ಮೂರು ಪಟ್ಟು ಪಡೆಯುವುದು. ‘ಈ ಟಾಸ್ಕ ಅನ್ನು ಕೆಲವೇ ನಿಮಿಷಗಳಲ್ಲಿ ಅಂದರೆ ೫ ನಿಮಿಷಗಳಲ್ಲಿ ಪೂರ್ಣಗೊಳಿಸುವುದಿತ್ತು. ಈ ‘ಟಾಸ್ಕ’ ನಲ್ಲಿ ಮಾತ್ರ ನಾನು ಜಾಗರೂಕನಾಗಿದ್ದೆ ಮತ್ತು ೨ ದಿನಗಳ ಕಾಲ ಈ ‘ಟಾಸ್ಕ್’ದಲ್ಲಿ ಭಾಗವಹಿಸಲಿಲ್ಲ. ಇದರಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳು ಹಣ ಹೂಡಿಕೆ ಮಾಡಿದಾಗ ದುಪ್ಪಟ್ಟು ಅಥವಾ ಮೂರು ಪಟ್ಟು ಹಣ ಸಿಕ್ಕಿದೆ ಎಂದು ಟೆಲಿಗ್ರಾಂ ಗುಂಪಿನಲ್ಲಿ ತಿಳಿಸಿದರು. ಯಾರೇ ಆದರೂ ‘ಇಷ್ಟು ಬೇಗ ಹಣ ಸಿಗುತ್ತಿದ್ದರೆ, ತಕ್ಷಣ ದೊಡ್ಡ ಮೊತ್ತವನ್ನು ಹೂಡಿಕೆ ಮಾಡೋಣ ಎಂದು ವಿಚಾರ ಮಾಡಿ ಹೂಡಿಕೆ ಮಾಡುತ್ತಾನೆ’ ಎನ್ನುವ ವಾತಾವರಣ ಅದರಲ್ಲಿ ನಿರ್ಮಾಣವಾಗುತ್ತದೆ. ಈ ಜನರು ಯಾರು ? ಮತ್ತು ಇಷ್ಟು ಲಕ್ಷ ರೂಪಾಯಿಗಳ ವ್ಯವಹಾರವನ್ನು ಅವರು ಹೇಗೆ ಸುಲಭವಾಗಿ ಮಾಡುತ್ತಿದ್ದಾರೆ ? ಎನ್ನುವುದನ್ನು ನಾನು ಹುಡುಕಲು ಪ್ರಾರಂಭಿಸಿದೆ. ಅವರ ಪ್ರೊಫೈಲ್ (ಅಂದರೆ ವ್ಯಕ್ತಿಯ ಮಾಹಿತಿ) ಪರಿಶೀಲಿಸಿದಾಗ, ವ್ಯಕ್ತಿಗಳು ಅನುಮಾನಾಸ್ಪದ ಎನಿಸತೊಡಗಿದರು. ನಾನು ಈ ಎಲ್ಲ ವ್ಯಕ್ತಿಗಳೊಂದಿಗೆ ‘ಗುಂಪಿನಲ್ಲಿ’ ಇದ್ದೆ. ಆ ಗುಂಪಿನಲ್ಲಿರುವ ವ್ಯಕ್ತಿಗಳೊಂದಿಗೆ ಈ ಕಾರ್ಯಗಳು ನಿಜವೋ ಸುಳ್ಳೋ ಎಂದು ನಾನು ಕೇಳಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಪ್ರತಿಯೊಬ್ಬರಿಗೂ ವೈಯಕ್ತಿಕ ‘ಸಂದೇಶ’ ಕಳುಹಿಸುವ ಮೂಲಕ, ಅವರು ನಿಖರವಾಗಿ ಯಾರು ? ನಾನು ಅದನ್ನು ಪರೀಕ್ಷಿಸಲು ಪ್ರಾರಂಭಿಸಿದಾಗ, ಅವರಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ.
ಸಂಸ್ಥೆಯ ಲೋಗೋವನ್ನು ಖಚಿತಪಡಿಸಿದ ನಂತರ, ಅದು ‘ಅಮೆಜಾನ್’ಗೆ ಸೇರಿದ್ದರೂ ಸಹ ಅನುಮಾನಾಸ್ಪದವಾಗಿ ಕಾಣಿಸಿತು. ಅದರಲ್ಲಿ ಭಾಗವಹಿಸುವವರು ಮತ್ತು ಇತರರು ಎಲ್ಲರೂ ಅನುಮಾನಾಸ್ಪದ ಎನಿಸತೊಡಗಿದರು ಮತ್ತು ನಂತರ ಅವರಲ್ಲಿ ಭಾಗವಹಿಸುವುದನ್ನು ತಪ್ಪಿಸಿದೆನು. ಈ ಡಿಜಿಟಲ್ ಸಂಸ್ಥೆಯ ವ್ಯವಸ್ಥಾಪಕಿಯು ‘ನೀವು ಈ ‘ಟಾಸ್ಕ್’ದಲ್ಲಿ ಭಾಗವಹಿಸಬೇಕು ಇಲ್ಲದಿದ್ದರೆ ನಿಮ್ಮನ್ನು ಈ ಗುಂಪಿನಿಂದ ಹೊರಹಾಕಲಾಗುವುದು’ ಎಂದು ನನಗೆ ಹೇಳುತ್ತಿದ್ದಳು. ಆದರೂ ಅವಳಿಗೆ ಕೆಲವು ಕಾರಣಗಳನ್ನು ಹೇಳಿ ಭಾಗವಹಿಸುವುದನ್ನು ತಪ್ಪಿಸಿದೆ. ನಂತರ ೨ ದಿನಗಳಲ್ಲಿ ಸಂಪೂರ್ಣ ‘ಟೆಲಿಗ್ರಾಮ್’ ಮಾಧ್ಯಮ ಗುಂಪು ಕಣ್ಮರೆಯಾಯಿತು, ಅಂದರೆ ಗುಂಪು ಮತ್ತು ಸ್ಥಾಪನೆ ನಕಲಿ ಎಂದು ಇದರಿಂದ ಗಮನಕ್ಕೆ ಬಂದಿತು.
ಆನ್‌ಲೈನ್ ವಂಚಕರ ದೊಡ್ಡ ಗ್ಯಾಂಗ್ ಕೆಲಸ ಮಾಡುತ್ತಿರುವುದು ಮತ್ತು ಜನರನ್ನು ವಂಚಿಸಲು ‘ಟ್ರ್ಯಾಪ್’ (ಮೋಸ ಮಾಡುವ ಯೋಜನೆಗಳು) ಇರುವುದು ಗಮನಕ್ಕೆ ಬಂದಿತು. ಈ ವಂಚನೆ ಡಿಜಿಟಲ್ ರೂಪದಲ್ಲಿರುತ್ತದೆ. ಅಂತಹ ಗುಂಪುಗಳು ಆರಂಭದಲ್ಲಿ ನೀವು ಮಾಡಿದ ಸಣ್ಣ ಕೆಲಸಗಳಿಗೆ ಹಣ ಪಾವತಿಸುತ್ತಾರೆ.
ನಂತರ ಜನರು ಅದರ ಮೇಲೆ ವಿಶ್ವಾಸವಿಟ್ಟು ಅವರು ಹೇಳಿ ದಂತೆ ಮಾಡಲು ಪ್ರಾರಂಭಿಸುತ್ತಾರೆ ಮತ್ತು ತಕ್ಷಣದ ದೊಡ್ಡ ಆದಾಯಕ್ಕಾಗಿ ಅವರು ದೊಡ್ಡ ಹಣವನ್ನು ಹೂಡಿಕೆ ಮಾಡಿದಾಗ, ಆ ಹಣದೊಂದಿಗೆ ವಾಟ್ಸಾಪ್ ಮತ್ತು ಟೆಲಿಗ್ರಾಂನಲ್ಲಿ ಸ್ಥಾಪನೆಯ ಗುಂಪು ಕಣ್ಮರೆಯಾಗುತ್ತದೆ. ಹಾಗಾಗಿ ಯಾರ ವಿರುದ್ಧವೂ ದೂರು ನೀಡುವ ಸೌಲಭ್ಯವಿಲ್ಲ; ಏಕೆಂದರೆ ಹೆಸರುಗಳು, ಸಂಸ್ಥೆ ಗಳು, ಅವುಗಳ ಕಾರ್ಯವಿಧಾನಗಳು ಎಲ್ಲಾ ನಕಲಿ. ಇದೂ ಹೊಸ ಬಗೆಯ ಹಗರಣ. ದೇವರ ದಯೆಯಿಂದ ಇಂತಹ ಮೋಸ ಗಮನಕ್ಕೆ ಬಂತು ಮತ್ತು ನಾನು ಅವರ ಯಾವುದೇ ಆಮಿಷಕ್ಕೆ ಒಳಗಾಗದೆ ಸಂಬಂಧಪಟ್ಟವರ ಜಾಲದೊಳಗಿನಿಂದ ಸುರಕ್ಷಿತವಾಗಿ ಅನುಭವ ಸಹಿತ ಹೊರಬಂದೆನು.
೫. ಬ್ಯಾಂಕ್ ಖಾತೆಗೆ ಜೋಡಿಸಲು ಬ್ಯಾಂಕಿನಿಂದ ಸಂದೇಶ
ಒಮ್ಮೆ ನನ್ನ ತಂದೆಗೆ ಖಾತೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಬ್ಯಾಂಕಿನಿಂದ ಕೆಲವು ಸಂದೇಶಗಳು ಬಂದವು. ‘ಲಿಂಕ್’ ನೀಡುವ ಮೂಲಕ ಅಲ್ಲಿನ ಮಾಹಿತಿಯನ್ನು ನವೀಕರಿಸಲು ತಿಳಿಸಲಾಗಿತ್ತು. ಈ ಲಿಂಕ್ ಏನು ? ಬ್ಯಾಂಕಿನಿಂದ ಇಂತಹ ಸಂದೇಶ ಏಕೆ ಬಂದಿದೆ ಎಂದು ಕೇಳಲು ನಾವು ಬ್ಯಾಂಕಿಗೆ ಹೋದಾಗ, ‘ಬ್ಯಾಂಕಿನವರು ತಾವು ಆ ಲಿಂಕ್ ಅನ್ನು ಕಳುಹಿಸಿಲ್ಲ’ ಎಂದು ಹೇಳಿದರು. ನಾನು ಆ ಸಂದೇಶವನ್ನು ನೋಡಿರಲಿಲ್ಲ, ನಾನು ಅದನ್ನು ನಿಜವಾಗಿ ನೋಡಿದಾಗ, ಅದು ನಕಲಿ ಸಂದೇಶ ಎಂದು ನನ್ನ ಹಿಂದಿನ ಅನುಭವದಿಂದ ನನ್ನ ಗಮನಕ್ಕೆ ಬಂದಿತು.
೬. ಬ್ಯಾಂಕು ಮತ್ತು ಹೆಚ್ಚಿನ ಇತರ ವಿವರಗಳಿಗಾಗಿ ಬರುವ ಕರೆಗಳ ಬಗ್ಗೆ ಜಾಗರೂಕರಾಗಿರಬೇಕು!
ನಾವು ಬ್ಯಾಂಕು ಮತ್ತು ಇತರ ಸಂಸ್ಥೆಗಳಿಂದ ಬರುವ ಪ್ರತಿಯೊಂದು ಕರೆಯನ್ನು ಅನುಮಾನದಿಂದ ನೋಡುವಷ್ಟು ಜಾಗರೂಕತೆಯನ್ನು ವಹಿಸುವುದಿಲ್ಲ. ಮುಖ್ಯವಾಗಿ, ನಾವು ಕೆಲವು ಕೆಲಸಗಳನ್ನು ಬ್ಯಾಂಕು, ನಮ್ಮ ವಿವಿಧ ಗುರುತುಪತ್ರಗಳ ಸಂದರ್ಭದಲ್ಲಿ ಮಾಡಿರುತ್ತೇವೆಯೋ, ಅದನ್ನು ಗುರುತಿಸಿ ಅವರು ಸಂಪರ್ಕಿಸುತ್ತಾರೆ. ಆದ್ದರಿಂದ ನಾವು ಅದರ ಬಗ್ಗೆ ಖಚಿತವಾಗಿರುತ್ತೇವೆ. ವಂಚಕರ ಗುಂಪು ಇದರ ಹಿಂದೆ ಕೆಲಸ ಮಾಡುತ್ತಿರುತ್ತದೆ ಮತ್ತು ಗೂಗಲ ಮೂಲಕವೂ ನಮ್ಮ ಸ್ಥಳವಿಳಾಸ ಅವರಿಗೆ ಸಿಗುತ್ತದೆ. ಬ್ಯಾಂಕ್ ವಹಿವಾಟುಗಳು ಅಥವಾ ಇತರ ಆನ್‌ಲೈನ್ ವಹಿವಾಟುಗಳಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಸಂಸ್ಥೆಯು ಎಷ್ಟು ಭದ್ರತೆಯನ್ನು ಖಾತರಿಪಡಿಸಿದರೂ, ಮೇಲಿನ ಉದಾಹರಣೆಗಳು ಈ ವ್ಯವಹಾರ ಅಥವಾ ನಮ್ಮ ಸಂಪರ್ಕದ ಮೇಲೆ ‘ಡಿಜಿಟಲ್ ಕಳ್ಳರು ಎಷ್ಟು ಕಣ್ಣಿಟ್ಟಿದ್ದಾರೆ’ ಎಂಬುದು ಮೇಲಿನ ಉದಾಹರಣೆಗಳಿಂದ ಗಮನಕ್ಕೆ ಬರುತ್ತದೆ. ಅಂತಹ ಕರೆಗಳು ಅಥವಾ ಸಂದೇಶಗಳು ಬಂದಾಗ, ವ್ಯಕ್ತಿಯು ವಿಭಿನ್ನ ಮನಸ್ಥಿತಿಯಲ್ಲಿ ತನ್ನ ಕೆಲಸದಲ್ಲಿರುತ್ತಾನೆ. ಆದ್ದರಿಂದ, ಹೆಚ್ಚು ಅನುಮಾನ ಪಡುವುದಿಲ್ಲ ಮತ್ತು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದಿಲ್ಲ. ಆದ್ದರಿಂದ ವ್ಯಕ್ತಿಯು ಅದರಲ್ಲಿ ಸಿಲುಕಿಕೊಳ್ಳುತ್ತಾನೆ.
೭. ಸಾಧನೆಯ ಅಂಗದ ಮಹತ್ವ
ಒಟ್ಟಾರೆ, ಈ ಎಲ್ಲಾ ವಂಚನೆಗಳು ‘ಡಿಜಿಟಲ್’ ಅಂದರೆ ಮೈಕ್ರೋ ಲೆವೆಲ್ (ಸೂಕ್ಷ್ಮ ಸ್ತರದಲ್ಲಿ ನಡೆಯುತ್ತವೆ), ಆ ಸ್ಥಳದಲ್ಲಿ ಮನಸ್ಸು, ಬುದ್ಧಿಯನ್ನು ಸ್ಥಿರವಾಗಿಟ್ಟುಕೊಂಡು ವಿಷಯವನ್ನು ನಿಭಾಯಿಸುವುದರೊಂದಿಗೆ ಆಧ್ಯಾತ್ಮಿಕ ಅಂಗ, ಅಂದರೆ ಸೂಕ್ಷ್ಮ ಸ್ಪಂದನಗಳನ್ನು ಅನುಭವಿಸುವುದು, ದೊಡ್ಡ ಭಾಗವಾಗಿದೆ; ಏಕೆಂದರೆ ಎದುರಿಗಿರುವ ವ್ಯಕ್ತಿ ಯಾರು ? ನಕಲಿ ಅಥವಾ ನಿಜವಾಗಿದ್ದಾನೆಯೇ ? ಯಾರೊಂದಿಗೆ ಮಾತನಾಡುತ್ತಿದ್ದೇವೆ ಅಥವಾ ವ್ಯವಹರಿಸುತ್ತಿದ್ದೇವೆ ಎನ್ನುವುದನ್ನು ತಿಳಿಯಲು ಯಾವುದೇ ಮಾರ್ಗವಿರುವುದಿಲ್ಲ. ಇಂತಹ ಸೂಕ್ಷ್ಮ ಸ್ಪಂದನಗಳನ್ನು ಗ್ರಹಿಸುವುದು ಇದು ಕೇವಲ ಸಾಧನೆಯ ಮೂಲಕ ಮಾತ್ರ ಸಾಧ್ಯ. ಸಾಧನೆ ಮಾಡಿದ ನಂತರ, ಅಂತಹ ಸಂದರ್ಭಗಳಲ್ಲಿ ಮೊದಲೇ ಏನಾದರೂ ಎಡವಟ್ಟು ಇದೆಯೆಂದು ಅರಿವಾದ ಕೂಡಲೇ, ಅದು ಏನು ? ಎನ್ನುವುದನ್ನು ಅರ್ಥಮಾಡಿಕೊಳ್ಳಲು ಮನಸ್ಸು-ಬುದ್ಧಿಯಿಂದ ಸರಿಯಾಗಿ ಪ್ರಯತ್ನಗಳನ್ನು ಮಾಡಬಹುದು. ಒಟ್ಟಿನಲ್ಲಿ ಈಗಿನ ಹೊಸ ಬಗೆಯ ವಂಚನೆಗೆ ಸಿಕ್ಕಿಹಾಕಿಕೊಳ್ಳುವುದನ್ನು ತಪ್ಪಿಸಲು ಭಗವಂತನ ಸಹಾಯ ಪಡೆಯುವುದು ಅಗತ್ಯವಾಗಿದೆ.
ಶ್ರೀ ಗುರುಚರಣಾರ್ಪಣಮಸ್ತು
– ಶ್ರೀ. ಯಜ್ಞೇಶ ಸಾವಂತ, ಸನಾತನ ಸಂಕುಲ, ದೇವದ, ಪನವೇಲ (೧೧.೧೨.೨೦೨೪)