ಹಿಂದೂ ಧರ್ಮದ ಆಧಾರ ಶಿಲೆಗಳಾಗಿರುವ ದೇವಸ್ಥಾನಗಳು !

ದೇವಸ್ಥಾನಗಳು ಹಿಂದೂ ಧರ್ಮದ ಆಧಾರ ಶಿಲೆಗಳಾಗಿವೆ ! ಬ್ರಹ್ಮಾಂಡದಿಂದ ಈಶ್ವರೀ ಶಕ್ತಿಯನ್ನು ಸೆಳೆದುಕೊಂಡು ಅದನ್ನು ವಿಶ್ವದಲ್ಲಿ ಪ್ರಕ್ಷೇಪಣೆ ಮಾಡುವುದು ಈ ಕಾರ್ಯವನ್ನು ಹಿಂದೂಗಳ ದೇವಸ್ಥಾನಗಳು ಮಾಡುತ್ತವೆ. ಸಾವಿರಾರು ವರ್ಷಗಳಿಂದ ಸನಾತನ ಹಿಂದೂ ಧರ್ಮದ ರಕ್ಷಣೆ, ಜೋಪಾಸನೆ ಹಾಗೂ ಸಂವರ್ಧನೆಯಲ್ಲಿ ದೇವಸ್ಥಾನಗಳ ಪಾತ್ರ ಅಸಾಧಾರಣವಾಗಿದೆ. ‘ಹಿಂದೂ’ ಶ್ರದ್ಧಾವಂತನಾಗಿರುತ್ತಾನೆ. ಅವನು ತನ್ನ ಎಲ್ಲ ದುಃಖಗಳನ್ನು ದೇವರಿಗೆ ಹೇಳಿ ತನ್ನ ಮನಸ್ಸನ್ನು ಹಗುರ ಮಾಡಿಕೊಳ್ಳುತ್ತಾನೆ ಹಾಗೂ ‘ದೇವರೆ ಅಡಚಣೆಯಿಂದ ಹೊರಗೆ ತರುವನು’, ಎಂಬ ಶ್ರದ್ಧೆಯಿಂದ ಅವನ ಜೀವನ ನಡೆಸುವ ಆಸೆ ಚಿಗುರುತ್ತದೆ ! ಈ ರೀತಿ ದೇವಸ್ಥಾನಗಳಿಂದ ಹಿಂದೂಗಳಿಗೆ ಮಾನಸಿಕ ದೃಷ್ಟಿಯಲ್ಲಿ ಆಧಾರ ಸಿಗುವುದು ಮಾತ್ರವಲ್ಲ, ಆಧ್ಯಾತ್ಮಿಕ ದೃಷ್ಟಿಯಲ್ಲಿಯೂ ಚೈತನ್ಯದ ಲಾಭವಾಗುತ್ತದೆ. ಈ ಚೈತನ್ಯದಿಂದಲೆ ಲಕ್ಷಗಟ್ಟಲೆ ಹಿಂದೂಗಳು ಪ್ರತಿದಿನ ದೇವಸ್ಥಾನಗಳಿಗೆ ಅಥವಾ ತೀರ್ಥಕ್ಷೇತ್ರಗಳಿಗೆ ಆಕರ್ಷಿಸಲ್ಪಡುತ್ತಾರೆ. ವಿವಿಧ ನೈಸರ್ಗಿಕ ಆಪತ್ತುಗಳ ಸಮಯದಲ್ಲಿ ಹಿಂದೂಗಳಿಗೆ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳೆ ಆಧಾರವಾಗಿರುತ್ತವೆ. ಹೀಗಿರುವಾಗ ಬೇರೆ ಬೇರೆ ರಾಜ್ಯಗಳಲ್ಲಿನ ದೇವಸ್ಥಾನಗಳು ಮತ್ತು ಧಾರ್ಮಿಕ ಸಂಸ್ಥೆಗಳನ್ನು ಸರಕಾರ ವಶಪಡಿಸಿಕೊಳ್ಳಲು ಪ್ರಯತ್ನಿಸುವುದೆಂದರೆ ಇದು ಹಿಂದೂಗಳ ಮಾನಸಿಕ, ಆಧ್ಯಾತ್ಮಿಕ ಹಾಗೂ ಆಪತ್ಕಾಲಿಕ ಆಧಾರವನ್ನು ಕಸಿದುಕೊಂಡಂತಾಗುತ್ತದೆ. ಅಷ್ಟು ಮಾತ್ರವಲ್ಲ, ಇದು ಹಿಂದೂ ಧರ್ಮದ ಮೇಲಿನ ಆಕ್ರಮಣವೇ ಆಗಿದೆ.