ಕಾಠ್ಮಂಡು (ನೇಪಾಳ): ಹಿಂದೂ ರಾಷ್ಟ್ರದ ಬೇಡಿಕೆಗಾಗಿ ಹಿಂಸಾತ್ಮಕ ಪ್ರತಿಭಟನೆ!

  • ರಾಜಾ ಜ್ಞಾನೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸುವಂತೆ ಪ್ರತಿಭಟನಾಕಾರರ ಆಗ್ರಹ

  • ಬೇಡಿಕೆಗಳು ಈಡೇರದಿದ್ದರೆ ಪ್ರತಿಭಟನೆ ತೀವ್ರಗೊಳಿಸುವ ಎಚ್ಚರಿಕೆ

  • ಭಾರತ ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಕಾರ

ಕಾಠ್ಮಂಡು – ನೇಪಾಳದಲ್ಲಿ ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರದ ಪುನಃಸ್ಥಾಪನೆಗಾಗಿ ಹಿಂದೂಗಳು ಬೃಹತ್ ಪ್ರತಿಭಟನೆ ನಡೆಸಿದರು. ಈ ವೇಳೆ ನಡೆದ ಹಿಂಸಾಚಾರದಲ್ಲಿ ವಿಧ್ವಂಸಕ ಕೃತ್ಯ ಮತ್ತು ಬೆಂಕಿ ಹಚ್ಚುವಿಕೆ ನಡೆಯಿತು. ಪೊಲೀಸರು ಅಶ್ರುವಾಯು ಸಿಡಿಸಿದರು. ಈ ಹಿಂಸಾಚಾರದಲ್ಲಿ ಯುವಕನೊಬ್ಬ ಗಾಯಗೊಂಡಿದ್ದಾನೆ. ಈ ಬಗ್ಗೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ ಮಿಸ್ತ್ರಿ ಅವರು ಮಾತನಾಡಿ, ಇದು ಒಂದು ದೇಶದ ಆಂತರಿಕ ಘಟನೆಯಾಗಿರುವುದರಿಂದ ನಾವು ಅದರ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದು ಹೇಳಿದರು.

೧. ದೇಶದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ ಮತ್ತು ಪದೇ ಪದೇ ನಡೆಯುತ್ತಿರುವ ಅಧಿಕಾರದ ಬದಲಾವಣೆಯಿಂದ ನೇಪಾಳದ ಜನರು ಬೇಸತ್ತಿದ್ದಾರೆ. ಇದರಿಂದಾಗಿ ಅಲ್ಲಿನ ಜನರು ರಾಜಪ್ರಭುತ್ವ ಮತ್ತು ಹಿಂದೂ ರಾಷ್ಟ್ರವನ್ನು ಒತ್ತಾಯಿಸುತ್ತಿದ್ದಾರೆ. ನೇಪಾಳದ ಮಾಜಿ ರಾಜಾ ಜ್ಞಾನೇಂದ್ರ ಅವರು ಫೆಬ್ರವರಿ 19 ರಂದು ಗಣರಾಜ್ಯ ದಿನದಂದು ಜನರ ಬೆಂಬಲವನ್ನು ಕೋರಿದ್ದರು. ಅಂದಿನಿಂದ ದೇಶದಲ್ಲಿ ‘ರಾಜನನ್ನು ವಾಪಸ್ಸು ತನ್ನಿ, ರಾಷ್ಟ್ರವನ್ನು ಉಳಿಸಿ’ ಎಂಬ ಆಂದೋಲನ ನಡೆಯುತ್ತಿದೆ.

೨. ಈ ಪ್ರತಿಭಟನೆಯಲ್ಲಿ 40 ಕ್ಕೂ ಹೆಚ್ಚು ನೇಪಾಳದ ವಿವಿಧ ಸಂಘಟನೆಗಳು ಭಾಗವಹಿಸಿದ್ದವು. ಪ್ರತಿಭಟನಾಕಾರರು ‘ರಾಜ, ದೇಶವನ್ನು ಉಳಿಸಿರಿ’, ‘ಭ್ರಷ್ಟ ಸರಕಾರಕ್ಕೆ ಧಿಕ್ಕಾರ’ ಮತ್ತು ‘ನಮಗೆ ರಾಜಪ್ರಭುತ್ವ ಮರಳಿ ಬೇಕು’ ಎಂಬ ಘೋಷಣೆಗಳನ್ನು ಕೂಗುತ್ತಿದ್ದರು. ಪ್ರತಿಭಟನಾಕಾರರು ಸರಕಾರಕ್ಕೆ ಒಂದು ವಾರದ ಗಡುವು ನೀಡಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸದಿದ್ದರೆ, ಇನ್ನಷ್ಟು ಹಿಂಸಾತ್ಮಕ ಪ್ರತಿಭಟನೆ ನಡೆಯುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

೩. ಈ ಆಂದೋಲನದ ನೇತೃತ್ವವನ್ನು 87 ವರ್ಷದ ನವರಾಜ ಸುವೇದಿ ಅವರು ವಹಿಸಿದ್ದಾರೆ. ನವರಾಜ ಸುವೇದಿ ಅವರು ಈ ಬಗ್ಗೆ ಮಾತನಾಡಿ, ನಾವು ನಮ್ಮ ಬೇಡಿಕೆಗಳನ್ನು ಶಾಂತಿ ಮಾರ್ಗದಲ್ಲಿ ಮಂಡಿಸುತ್ತಿದ್ದೇವೆ; ಆದರೆ ನಮಗೆ ಸಕಾರಾತ್ಮಕ ಪ್ರತಿಕ್ರಿಯೆ ಸಿಗದಿದ್ದರೆ, ನಾವು ಈ ಪ್ರತಿಭಟನೆಯನ್ನು ತೀವ್ರಗೊಳಿಸಬೇಕಾತ್ತದೆ. ನಮ್ಮ ಗುರಿ ಸಾಧಿಸುವವರೆಗೂ ನಮ್ಮ ಪ್ರತಿಭಟನೆ ಮುಂದುವರಿಯುತ್ತದೆ’ ಎಂದು ಹೇಳಿದರು.