ವಿಷಯಾಸಕ್ತ ಮನಸ್ಸನ್ನು ಭಗವಂತನ ನಾಮದಿಂದ ಶುದ್ಧಗೊಳಿಸಿ ಆನಂದ ಮತ್ತು ಶಾಂತಿಯನ್ನು ಅನುಭವಿಸೋಣ !

ಶ್ರೀ. ಅಶೋಕ ಲಿಮಕರ

ವ್ಯಕ್ತಿಯು ಹುಟ್ಟಿನಿಂದಲೇ ಆನಂದವನ್ನು ಪಡೆಯಲು ಶ್ರಮಿಸುತ್ತಿರುತ್ತಾನೆ. ಆನಂದವು ಶಾಶ್ವತ ಸ್ವರೂಪದ್ದಾಗಿದೆ ಮತ್ತು ಈ ಆನಂದವು ಶಾಶ್ವತನಾದಂತಹ ಭಗವಂತನ ಉಪಾಸನೆಯಿಂದಲೇ ಪ್ರಾಪ್ತ ವಾಗುತ್ತದೆ. ವ್ಯಕ್ತಿಯು ತನ್ನ ಮನಸ್ಸಿಗನುಸಾರ ವರ್ತಿಸುತ್ತಿರುತ್ತಾನೆ. ‘ವ್ಯಕ್ತಿಯ ಸ್ವಂತ ಮನಸ್ಸಿನಂತೆ ವರ್ತಿಸುವುದು ಮತ್ತು ಅವನ ಪ್ರಾರಬ್ಧ’ ಇವುಗಳಿಂದ ಅವನು ಸುಖ-ದುಃಖವನ್ನು ಭೋಗಿಸಬೇಕಾಗುತ್ತದೆ. ಈ ಲೇಖನದಲ್ಲಿ ‘ಆನಂದಪ್ರಾಪ್ತಿಗಾಗಿ ಮನಸ್ಸನ್ನು ಶುದ್ಧಗೊಳಿಸುವ ಮಹತ್ವ ಮತ್ತು ವ್ಯಕ್ತಿಯು ಪರಮಾರ್ಥದ ಆಧಾರ ಪಡೆಯುವ ಆವಶ್ಯಕತೆ’, ಇವುಗಳ ಬಗ್ಗೆ ಅರಿತುಕೊಳ್ಳೋಣ.

೧. ವಿಷಯಾಸಕ್ತವಾದ ಮನಸ್ಸು ಬಂಧನಕ್ಕೆ ಕಾರಣವಾಗಿ ವ್ಯಕ್ತಿಯ ಅವನತಿಯಾಗುವುದು ಮತ್ತು ವಿಷಯಮುಕ್ತ ಮನಸ್ಸು ವ್ಯಕ್ತಿಗೆ ಮೋಕ್ಷಪ್ರಾಪ್ತಿ ಮಾಡಿಸುತ್ತದೆ

ಮನಸ್ಸೇ ವ್ಯಕ್ತಿಯನ್ನು ಬಂಧನದಲ್ಲಿ ಸಿಲುಕಿಸುತ್ತದೆ ಮತ್ತು ಮನಸ್ಸೇ ವ್ಯಕ್ತಿಯನ್ನು ಬಂಧನದಿಂದ ಮುಕ್ತಗೊಳಿಸಿ ಮೋಕ್ಷವನ್ನು ಪ್ರಾಪ್ತಮಾಡಿಕೊಡುತ್ತದೆ. ‘ಯಾರ ಧ್ಯಾನವು ಹೇಗಿದೆಯೋ, ಹಾಗೆಯೇ ಅವನ ಮನಸ್ಸಿರುತ್ತದೆ’, ಎಂದರೆ ಧ್ಯಾನದಲ್ಲಿನ ವಿಷಯಗಳಿಗನುಸಾರ ವ್ಯಕ್ತಿಯ ಮನಸ್ಸು ರೂಪುಗೊಳ್ಳುತ್ತದೆ. ಮನಸ್ಸು ವಿಷಯಾಸಕ್ತವಾಗಿದ್ದರೆ, ಅದು ಬಂಧನಕ್ಕೆ ಕಾರಣವಾಗಿ ವ್ಯಕ್ತಿಯ ಅಧೋಗತಿಯಾಗುತ್ತದೆ; ಆದರೆ ಅದೇ ಮನಸ್ಸು ವಿಷಯಮುಕ್ತವಾಗಿದ್ದರೆ ಅದು ವ್ಯಕ್ತಿಯನ್ನು ಮೋಕ್ಷದವರೆಗೆ ತಲುಪಿಸುತ್ತದೆ; ಆದುದರಿಂದಲೇ, ತುಕಾರಾಮ ಮಹಾರಾಜರು ತಮ್ಮ ಅಭಂಗದಲ್ಲಿ ‘ನೀವು ನಿಮ್ಮ ಮನಸ್ಸನ್ನು ಸಂತುಷ್ಟ ಅಂದರೆ ಅನುಕೂಲವಾಗುವಂತೆ ಮಾಡಿ. ಇದೇ ಎಲ್ಲ ಸಿದ್ಧಿಗಳಿಗೆ ಕಾರಣವಾಗಿದೆ’, ಎಂದಿದ್ದಾರೆ.

೨. ಮನಸ್ಸನ್ನು ಶುದ್ಧಗೊಳಿಸುವುದರ ಮಹತ್ವ

೨ ಅ. ಶುದ್ಧ ಮನಸ್ಸಿನ ವ್ಯಕ್ತಿಗೆ ಮಾತ್ರ ಆನಂದ ಸಿಗುವುದು ಮತ್ತು ಈ ಆನಂದವು ಭಗವಂತನ ಪ್ರಾಪ್ತಿಯ ಹೊರತು ಇತರ ಯಾವುದರಿಂದಲೂ ಸಿಗದಿರುವುದು : ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯು ‘ಆನಂದ ಸಿಗಬೇಕೆಂದು’ ಶ್ರಮಿಸುತ್ತಿರುತ್ತಾನೆ. ‘ಆನಂದ ಬೇಡ’ ಎಂದು ಹೇಳುವ ವ್ಯಕ್ತಿಗಳು ಅಪರೂಪವೇ ಆಗಿದ್ದಾರೆ ! ಈ ಶಾಶ್ವತವಾದ ಆನಂದ ಶುದ್ಧ ಮನಸ್ಸಿನ ವ್ಯಕ್ತಿಗೆ ಭಗವಂತನ ಪ್ರಾಪ್ತಿಯ ಹೊರತಾಗಿ ಬೇರೆ ಎಲ್ಲಿಯೂ ಸಿಗುವುದಿಲ್ಲ, ಇಲ್ಲದಿದ್ದರೆ ಆನಂದಪ್ರಾಪ್ತಿಗಾಗಿ ಮಾಡಿದ ಇತರ ಎಲ್ಲ ಪ್ರಯತ್ನ ಗಳು ವ್ಯರ್ಥವಾಗುತ್ತವೆ. ‘ಭಗವಂತ ಬೇಕು’, ಎಂದು ವ್ಯಕ್ತಿಗೆ ಮನಃಪೂರ್ವಕ ಅನಿಸಬೇಕು. ಭಗವಂತನ ಪ್ರಾಪ್ತಿಗಾಗಿ ಭಗವಂತನ ನಾಮಜಪಿಸುವುದು, ಇದೊಂದೇ ಸಹಜ ಮತ್ತು ಸುಲಭ ಸಾಧನವಾಗಿದೆ. ನಮ್ಮ ಮನಸ್ಸನ್ನು ಭಗವಂತನ ಚರಣಗಳ ಬಳಿ ಇಡಬೇಕು ಮತ್ತು ದೇಹವನ್ನು ಪ್ರಾರಬ್ಧ ಅನುಭವಿಸಲು ಬಿಡಬೇಕು. ‘ದೇಹವನ್ನು ಪ್ರಾರಬ್ಧ ಅನುಭವಿಸಲು ಬಿಡಿ, ಚಿತ್ತ ವನ್ನು ಚೈತನ್ಯದೊಂದಿಗೆ ಜೋಡಿಸಿ |’, ಎಂದು ಪ.ಪೂ. ಭಕ್ತರಾಜ ಮಹಾರಾಜರು ಹೇಳಿದ್ದಾರೆ.

೨ ಆ. ಚಿತ್ತದ ಅನೇಕ ಪೂರ್ವಜನ್ಮಗಳ ಅಸಂಖ್ಯಾತ ಸಂಸ್ಕಾರಗಳನ್ನು ಅಳಿಸಿ ಪಾಟಿಯನ್ನು ಖಾಲಿ ಮಾಡುವುದು ಅಂದರೆ ಮನಸ್ಸನ್ನು ಶುದ್ಧಗೊಳಿಸುವುದು ಮತ್ತು ಅದಕ್ಕಾಗಿ ಗುರುಕೃಪಾಯೋಗಾನುಸಾರ ಸಾಧನಾಮಾರ್ಗದಲ್ಲಿ ಹೇಳಿದ ಅಷ್ಟಾಂಗ ಸಾಧನೆಯು ಆವಶ್ಯಕ : ನಾವು ಚಿತ್ತದಲ್ಲಿನ ಸಂಸ್ಕಾರಗಳಿಗನುಸಾರ ವರ್ತಿಸುತ್ತಿರುತ್ತೇವೆ. ನಮ್ಮ ಅನೇಕ ಪೂರ್ವಜನ್ಮಗಳ ಅಸಂಖ್ಯಾತ ಸಂಸ್ಕಾರಗಳು ನಮ್ಮ ಚಿತ್ತದಲ್ಲಿರುತ್ತವೆ. ಆ ಎಲ್ಲ ಸಂಸ್ಕಾರಗಳನ್ನು ಅಳಿಸಿ ಹಾಕಿ ಪಾಟಿಯನ್ನು ಖಾಲಿ ಮಾಡುವುದು, ಅಂದರೆ ಮನಸ್ಸನ್ನು ಶುದ್ಧಗೊಳಿಸುವುದಾಗಿದೆ. ಅದಕ್ಕಾಗಿ ಗುರುಕೃಪಾಯೋಗಾನುಸಾರ ಹೇಳಿದ ಅಷ್ಟಾಂಗ ಸಾಧನೆಯನ್ನು ಮಾಡಬೇಕು.

ಅಷ್ಟಾಂಗ ಸಾಧನೆಯಲ್ಲಿ ‘ಸ್ವಭಾವದೋಷ ನಿರ್ಮೂಲನೆ ಮತ್ತು ಗುಣ-ಸಂವರ್ಧನೆ, ಅಹಂ-ನಿರ್ಮೂಲನೆ, ನಾಮಜಪ, ಭಾವಜಾಗೃತಿಗಾಗಿ ಮಾಡಬೇಕಾದ ಪ್ರಯತ್ನ, ಸತ್ಸಂಗ, ಸತ್ಸೇವೆ, ಸತ್‌ಗಾಗಿ ತ್ಯಾಗ, ಪ್ರೀತಿ (ಇತರರ ವಿಷಯದಲ್ಲಿ ನಿರಪೇಕ್ಷ ಪ್ರೇಮ)’ ಈ ಹಂತಗಳು ಬರುತ್ತವೆ.

೨ ಇ. ಮನಸ್ಸು ಎಷ್ಟು ಶುದ್ಧವೋ, ಅಷ್ಟು ಅದನ್ನು ಪರಮಾರ್ಥದ ಕಡೆಗೆ ಹೊರಳಿಸಲು ಸುಲಭ : ಮನಸ್ಸು ಎಷ್ಟು ಶುದ್ಧವೋ, ಅಷ್ಟು ಅದನ್ನು ನಿಯಂತ್ರಿಸಲು ಸುಲಭವಾಗಿರುತ್ತದೆ ಮತ್ತು ಮನಸ್ಸನ್ನು ಪರಮಾರ್ಥದ ಕಡೆಗೆ ಹೊರಳಿಸಲು ಅನುಕೂಲವಾಗುತ್ತದೆ. ಪರಮಾರ್ಥವು ಅಂತಃಕರಣದ ವೃತ್ತಿಯಾಗಿದೆ. ಇಚ್ಛಾಶಕ್ತಿ ಯೊಂದಿಗೆ ವಿಚಾರಗಳ ಸಂಯೋಗವಾದಾಗ ಅದಕ್ಕೆ ‘ಸಾಮರ್ಥ್ಯ’ ಎಂದು ಹೇಳುತ್ತಾರೆ. ವಿಚಾರವಿಲ್ಲದಿದ್ದರೆ ಸಾಮರ್ಥ್ಯವೇ ಕಾರ್ಯ ಮಾಡುತ್ತದೆ. ಯಾರಲ್ಲಿ ಯಾವುದೇ ಕೆಟ್ಟ ವಿಚಾರಗಳು ಇಲ್ಲವೋ, ಅವನಿಗೆ ಇತರರಲ್ಲಿಯೂ ಯಾವುದೇ ಕೆಟ್ಟದ್ದು ಕಾಣಿಸುವುದಿಲ್ಲ. ನಿಮ್ಮೊಳಗೆ ಏನಿದೆಯೋ, ಅದೇ ನಿಮಗೆ ಇತರರಲ್ಲಿ ಕಾಣಿಸುತ್ತದೆ.

೨ ಈ. ಚಂಚಲ ಮನಸ್ಸನ್ನು ನಾಮಜಪದೆಡೆಗೆ ಸೆಳೆಯಲು ‘ವ್ಯಕ್ತಿಯಲ್ಲಿ ಶ್ರಮಪಡುವ ಸಿದ್ಧತೆ ಮತ್ತು ಜಿಗುಟುತನ ಮತ್ತು ಸಾತತ್ಯ’ ಈ ಗುಣಗಳಿರುವುದು ಆವಶ್ಯಕವಾಗಿದೆ : ‘ಮನಸ್ಸನ್ನು ಯಾವುದರಿಂದ ನಿಯಂತ್ರಿಸಬೇಕು ಮತ್ತು ಶುದ್ಧ ಮಾಡಬೇಕು ?’, ಎಂದು ಅರ್ಜುನನು ಕೇಳಿದಾಗ ಭಗವಾನ ಶ್ರೀಕೃಷ್ಣನು, ‘ಅಭ್ಯಾಸದಿಂದ, ಅಂದರೆ ಪ್ರಯತ್ನದಿಂದ ಮನಸ್ಸನ್ನು ನಿಯಂತ್ರಣದಲ್ಲಿಡಬಹುದು’, ಎಂದು ಹೇಳುತ್ತಾನೆ. ಚಂಚಲ ಮನಸ್ಸನ್ನು ಹೋದಲ್ಲಿಂದ ಎಳೆದು ತಂದು ನಾಮದಲ್ಲಿಡಬೇಕಾಗುತ್ತದೆ. ಅದೂ ಪ್ರೀತಿಯಿಂದ ಮತ್ತು ಮನಸ್ಸನ್ನು ನಿಧಾನವಾಗಿ ಓಲೈಸಿ ಮಾಡಬೇಕು. ಅದಕ್ಕಾಗಿ ವ್ಯಕ್ತಿಯಲ್ಲಿ ‘ಶ್ರಮ ಪಡುವ ಸಿದ್ಧತೆ, ಜಿಗುಟುತನ ಮತ್ತು ಸಾತತ್ಯ’ ಈ ಗುಣಗಳಿರುವುದು ಆವಶ್ಯಕವಾಗಿದೆ.

೩. ‘ಪರಮಾನಂದ ಪಡೆಯುವುದೇ ಮನುಷ್ಯಜನ್ಮದ ಉದ್ದೇಶ’ ಅದಕ್ಕಾಗಿ ಪರಮಾರ್ಥದ ಆಧಾರ ಆವಶ್ಯಕ

೩ ಅ. ಪರಮಾರ್ಥವೆಂದರೆ ಒಬ್ಬ ಭಗವಂತನೊಂದಿಗೆ ಸಂಬಂಧವನ್ನು ಜೋಡಿಸಿ ಆ ಮೂಲಕ ಆನಂದವನ್ನು ಪಡೆಯಲು ಪ್ರಾಮಾಣಿಕವಾಗಿ ವ್ಯವಹರಿಸುವುದು : ಮನುಷ್ಯಜನ್ಮ ಸಿಗುವುದು ದುರ್ಲಭವಾಗಿದೆ. ‘ಪರಮಾನಂದವನ್ನು ಪಡೆಯುವುದು’ ಇದೇ ಮನುಷ್ಯಜನ್ಮದ ಉದ್ದೇಶವಾಗಿದೆ. ಹೀಗಿದ್ದರೂ ನಾವು ಆನಂದವನ್ನು ಅನುಭವಿಸುತ್ತಿದ್ದೇವೆಯೇ ? ನಾವು ಪ್ರಾಪಂಚಿಕ ಜನರಾಗಿದ್ದೇವೆ. ಪ್ರಪಂಚ ಮಾಡುವುದು, ಅಂದರೆ ವ್ಯವಹಾರದಲ್ಲಿ ಅನೇಕರೊಂದಿಗೆ ಸಂಬಂಧ ಜೋಡಿಸಿ ಆ ಮೂಲಕ ವ್ಯವಹಾರ ಮಾಡಿ ಆನಂದವನ್ನು ಪಡೆಯುವುದು; ಆದರೆ ಆ ಪ್ರಯತ್ನ ಫಲ ನೀಡುವುದಿಲ್ಲ; ಏಕೆಂದರೆ ಸಂಸಾರವನ್ನು ಮಾಡುವಾಗ ನಮ್ಮಿಂದ ಪರಮಾರ್ಥ ಸಾಧಿಸುವುದಿಲ್ಲ. ಪರಮಾರ್ಥ ಅಂದರೆ ಭಗವಂತನೊಬ್ಬನೊಂದಿಗೇ ಸಂಬಂಧವನ್ನು ಜೋಡಿಸಿ ಆ ಮೂಲಕ ಆನಂದವನ್ನು ಪಡೆಯಲು ಪ್ರಾಮಾಣಿಕವಾಗಿ ವ್ಯವಹರಿಸುವುದಾಗಿದೆ. ಭೌತಿಕ ವ್ಯವಹಾರದಲ್ಲಿ ನಮಗೆ ಕೆಲವು ವೈರಿಗಳಿರುತ್ತಾರೆ; ಆದರೆ ‘ಪರಮಾರ್ಥ ಮಾಡುವುದು’ ಇದು ಅಂತರಂಗದ ಆಟವಾಗಿರುವುದರಿಂದ ನಾವೇ ನಮ್ಮ ವೈರಿಗಳಾಗಿರುತ್ತೇವೆ. ನಮ್ಮಿಂದ ಪ್ರಯತ್ನವಾಗದಿರಲು ಅನೇಕ ಕಾರಣಗಳಿವೆ.

೩ ಆ. ಈಶ್ವರನ ಮೇಲೆ ಶ್ರದ್ಧೆ ಬೇಕು : ಮೊದಲು ನಮಗೆ ನಮ್ಮ ಮೇಲೆ ವಿಶ್ವಾಸವಿರಬೇಕು ಮತ್ತು ನಂತರವೇ ನಾವು ಈಶ್ವರನ ಮೇಲೆ ಶ್ರದ್ಧೆಯನ್ನಿಡಬಹುದು. ನಾವು ಯಾವುದಾದರೊಂದು ವ್ಯಕ್ತಿಯ ಮೇಲೆ ನಂಬಿಕೆ ಇಡುತ್ತೇವೆ; ಆದರೆ ಈಶ್ವರನನ್ನು ನಂಬುವುದಿಲ್ಲ. ನಮ್ಮ ಜೀವನದಲ್ಲಿ ಅನುಕೂಲ ವಿಷಯ ಘಟಿಸಿದಾಗ ನಾವು ಈಶ್ವರನ ಮೇಲೆ ವಿಶ್ವಾಸ ಇಡುತ್ತೇವೆ ಮತ್ತು ಆನಂದಿಯಾಗುತ್ತೇವೆ. ನಂಬಿಕೆಯಲ್ಲಿ ಈಶ್ವರನಿದ್ದಾನೆ ಮತ್ತು ಈಶ್ವರನಲ್ಲಿ ನಂಬಿಕೆ ಇದೆ.’

(ಮುಂದುವರಿಯುವುದು)

– ಶ್ರೀ. ಅಶೋಕ ಲಿಮಕರ (ವಯಸ್ಸು ೭೩ ವರ್ಷಗಳು), ಸನಾತನ ಆಶ್ರಮ, ದೇವದ, ಪನವೇಲ. (೨.೯.೨೦೨೪)