ಇದು ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗಶಿರ ನಕ್ಷತ್ರ ದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು.
ಮಹತ್ವ
ದತ್ತಜಯಂತಿಯಂದು ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ.
ಜನ್ಮೋತ್ಸವವನ್ನು ಆಚರಿಸುವುದು
ದತ್ತಜಯಂತಿಯನ್ನು ಆಚರಿಸುವ ಸಂಬಂಧದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡು ಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರೆ ಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ.
ದತ್ತನ ಉಪಾಸನೆ ಹೇಗೆ ಮಾಡಬೇಕು ?
೧. ಇತರ ಹೂವುಗಳ ಬದಲು ದತ್ತನಿಗೆ ಜಾಜಿ ಮತ್ತು ಸುಗಂಧರಾಜವನ್ನು ೭ ಅಥವಾ ೭ ರ ಪಟ್ಟಿನಲ್ಲಿ ಅರ್ಪಿಸಬೇಕು.
೨. ಚಂದನ, ಕೇದಗೆ, ಕನಕಾಂಬರ, ಹೀನಾ ಇವುಗಳಲ್ಲಿ ಯಾವುದಾದರೊಂದು ಸುಗಂಧದ ಎರಡು ಊದುಬತ್ತಿ ಗಳಿಂದ ದತ್ತನಿಗೆ ಬೆಳಗಬೇಕು.
೩. ದತ್ತನಿಗೆ ೭ ಅಥವಾ ೭ ರ ಪಟ್ಟಿನಲ್ಲಿ ಪ್ರದಕ್ಷಿಣೆ ಹಾಕಬೇಕು.
೪. ‘ಶ್ರೀ ಗುರುದೇವ ದತ್ತ |’ ನಾಮಜಪವನ್ನು ಪ್ರತಿದಿನ ಕಡಿಮೆಪಕ್ಷ ೧ ಗಂಟೆ (೧೨ ಮಾಲೆ) ಮತ್ತು ಹೆಚ್ಚೆಂದರೆ ೬ ಗಂಟೆ (೭೨ ಮಾಲೆ) ಮಾಡಬೇಕು. (ಶಾಸ್ತ್ರೀಯ ವಿವೇಚನೆಗಾಗಿ ಓದಿರಿ : ಸನಾತನದ ಗ್ರಂಥ ‘ದತ್ತ’)
(ಆಧಾರ: ಸನಾತನ ನಿರ್ಮಿತ ಗ್ರಂಥ ‘ದತ್ತ’)