ಸೈಬರ್‌ ಅಪರಾಧಗಳು ಮತ್ತು ಅವುಗಳ ಬಗ್ಗೆ ವಹಿಸಬೇಕಾದ ಜಾಗರೂಕತೆ !

ಸೈಬರ್‌ ಅಪರಾಧಗಳಿಗೆ ಸಂಬಂಧಿತ ಸಾಂಕೇತಿಕ ಛಾಯಾಚಿತ್ರ

 

‘ಸೈಬರ್‌ ಅಪರಾಧ’ಗಳೆಂದರೆ ಗಣಕಯಂತ್ರ ಮತ್ತು ಇಂಟರ್‌ನೆಟ್‌ ಬಳಸಿ ಮಾಡುವ ಅಪರಾಧಗಳು !)

ಶ್ರೀ ಪ್ರವೀಣ ದೀಕ್ಷಿತ

‘ಪ್ರತಿದಿನ ಮತ್ತು ಪ್ರತಿಯೊಂದು ಸ್ಥಳದಲ್ಲಿ ಸೈಬರ್‌ ಅಪರಾಧಗಳ ಹೆಚ್ಚುತ್ತಿರುವ ಸಂಖ್ಯೆಯು ಕೇವಲ ಚಿಂತಾಜನಕ ಮಾತ್ರವಲ್ಲದೇ, ವೇದನಾದಾಯಕವೂ ಆಗಿವೆ. ಶ್ರೀಮಂತರು ಅಥವಾ ಬಡವರು, ವಿದ್ಯಾವಂತರು ಅಥವಾ ಅವಿದ್ಯಾವಂತರು, ಪುರುಷರು ಮತ್ತು ಸ್ತ್ರೀಯರು, ವೃದ್ಧರು ಹಾಗೂ ಯುವಕರು ಯಾರೇ ಇರಲಿ, ಹೆಚ್ಚು ಕಡಿಮೆ ಪ್ರತಿಯೊಬ್ಬರೂ ಇದಕ್ಕೆ ಮೋಸ ಹೋಗುತ್ತಿದ್ದಾರೆ. ಇದಕ್ಕೆ ಯಾರೂ ಅಪವಾದವಾಗಿಲ್ಲ. ಅಪರಾಧಿಗಳು ಯಾವಾಗಲೂ ಅದೃಶ್ಯರಾಗಿರುತ್ತಾರೆ ಹಾಗೂ ಕಾಣಿಸಿದರೂ ಅದು ಅವರ ನಕಲಿ ಪರಿಚಯ ಆಗಿರುತ್ತದೆ. ಮೋಸ ಹೋಗುವವರು ಮುಗ್ಧರು, ಸಂಶಯ ಪಡದಿರುವವರಾಗಿರುತ್ತಾರೆ. ಅವರು ಸಹಜವಾಗಿ ಇಂತಹ ಯುಕ್ತಿಗಳಿಗೆ ಬಲಿಯಾಗುತ್ತಾರೆ. ಈ ಸಂತ್ರಸ್ತರು ಹೆಚ್ಚಾಗಿ ನಾಚಿಕೆ ಅಥವಾ ಭಯದಿಂದ ಹಾಗೂ ಜಾಗರೂಕತೆಯ ಅಭಾವದಿಂದಾಗಿ ಈ ಅಪರಾಧಗಳ ಬಗ್ಗೆ ದೂರು ನೀಡುವುದಿಲ್ಲ. ಯಾವಾಗ ಅವರಿಗೆ ತನಗೆ ಮೋಸವಾಗಿದೆ ಎಂದು ತಿಳಿಯುತ್ತದೆಯೋ, ಆಗ ಸಮಯ ಮೀರಿ ಹೋಗಿರುತ್ತದೆ ಹಾಗೂ ಅಷ್ಟರವರೆಗೆ ವ್ಯವಹಾರ ಪೂರ್ಣಗೊಂಡು ಹಸ್ತಾಂತರವಾದ ಮೊತ್ತವನ್ನು ಅಪರಾಧಿ ಕಬಳಿಸಿರುತ್ತಾನೆ.

೧. ಸಂತ್ರಸ್ತರನ್ನು ಮೋಸಗೊಳಿಸಲು ಸೈಬರ್‌ ಅಪರಾಧಿಗಳಿಂದ ವಿಶಿಷ್ಟ ತಂತ್ರಗಳ ಬಳಕೆ

ಸೈಬರ್‌ ಅಪರಾಧಗಳ ಸ್ವರೂಪವು ಸ್ಥಳ ಮತ್ತು ಘಟನೆಗನುಸಾರ ಬದಲಾಗುತ್ತದೆ. ಅದು ನಕಲಿ ‘ಪೋರ್ಟಲ್’ ಮೂಲಕದ (ಜಾಲತಾಣದ ಮೂಲಕ) ‘ಇಕ್ವಿಟಿ ಮಾರ್ಕೆಟ್‌’ನಲ್ಲಿನ (ಕಂಪನಿಗಳ ಪಾಲುದಾರಿಕೆಯ ವ್ಯವಹಾರಕ್ಕಾಗಿ ಇರುವ ವೇದಿಕೆ) ಹೂಡಿಕೆಯಾಗಿರಬಹುದು, ಅದು ಯಾವುದಾದರೂ ಹೆಸರಾಂತ ಕಂಪನಿಯ ಹೆಸರಿನಲ್ಲಿ ನೌಕರಿಯ ಆಕರ್ಷಕ ಯೋಜನೆ ಆಗಿರಬಹುದು, ಅದು ವೈವಾಹಿಕ ಪ್ರಸ್ತಾಪವಿರಬಹುದು ಅಥವಾ ಅದಕ್ಕೆ ‘ಡಿಜಿಟಲ್‌ ಬಂಧನ’ ಎನ್ನಬಹುದು. (‘ಡಿಜಿಟಲ್‌ ಬಂಧನ’ವೆಂದರೆ ಸೈಬರ್‌ ಅಪರಾಧಿಯು ಕಾನೂನಿನ ಭಯ ತೋರಿಸಿ ಜನರನ್ನು ಮೋಸಗೊಳಿಸುವುದು) ಸೈಬರ್‌ ಅಪರಾಧಿಗಳು ಸಂತ್ರಸ್ತರನ್ನು ಮೋಸಗೊಳಿಸಲು ‘ಎಸ್‌.ಇ.ಒ.’ (ಸರ್ಚ್ ಇಂಜಿನ್‌ ಆಪ್ಟಿಮೈಸೇಶನ್‌’, ಅಂದರೆ ವಿಶಿಷ್ಟ ರೀತಿಯ ತಂತ್ರಾಂಶದಿಂದ ತನ್ನ ಜಾಲತಾಣ ಅಥವಾ ‘ಬ್ಲಾಗ್’ ಸರ್ಚ್ ಇಂಜಿನ್‌ನಲ್ಲಿ ಶ್ರೇಯಾಂಕದಲ್ಲಿ ಬರುವ ಪ್ರಕ್ರಿಯೆ) ತಂತ್ರಜ್ಞಾನದ ಮೂಲಕ ಹೆಚ್ಚೆಚ್ಚು ಲಾಭಗಳಿಸುತ್ತಿದ್ದಾರೆ. ‘ಎಸ್‌.ಇ.ಓ’ ತಂತ್ರಜ್ಞಾನದ ಕೌಶಲ್ಯದಿಂದ ಅಪರಾಧಿಗೆ ಈ ಮೋಸದ ಜಾಲತಾಣವನ್ನು ಅಗ್ರಸ್ಥಾನದಲ್ಲಿರಿಸಲು ಅನುಮತಿ ಸಿಗುತ್ತದೆ. ಇದರಿಂದ ಈ ಜಾಲತಾಣಗಳ ಹುಡುಕಾಟದಲ್ಲಿರುವವರಿಗೆ ಈ ಜಾಲತಾಣಗಳು ಅಧಿಕೃತ ಹಾಗೂ ವಿಶ್ವಾಸಾರ್ಹವೆನಿಸುತ್ತವೆ. ಹಾಗಾಗಿ ಸಂವೇದನಾಶೀಲ ವೈಯಕ್ತಿಕ ಹಾಗೂ ಆರ್ಥಿಕ ಮಾಹಿತಿಯನ್ನು ಹಂಚಿಕೊಳ್ಳಲು ಹೇಳಿ ಸಂತ್ರಸ್ತರಿಗೆ ಮೋಸ ಮಾಡಲಾಗುತ್ತದೆ. ವಂಚಕರು ನಕಲಿ ಜಾಲತಾಣವನ್ನು ಸಿದ್ಧಪಡಿಸುತ್ತಾರೆ, ಅದು ಅಧಿಕೃತ ವ್ಯವಸಾಯ, ಆನ್‌ಲೈನ್‌ ಮಳಿಗೆ ಅಥವಾ ಆರ್ಥಿಕ ಸಂಸ್ಥೆಯೆಂದು ಅನಿಸುತ್ತದೆ.

೨. ವಿವಿಧ ರೀತಿಯಲ್ಲಿ ಸಂತ್ರಸ್ತ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಪಡೆಯುವುದೇ ಸೈಬರ್‌ ಅಪರಾಧಿಗಳ ಪ್ರಯತ್ನವಾಗಿರುತ್ತದೆ

ಹುಡುಕುವ ಪ್ರಕ್ರಿಯೆಯಲ್ಲಿ (ಸರ್ಚ್ ಇಂಜಿನ್‌ನಲ್ಲಿ) ನಮ್ಮ ಜಾಲತಾಣಕ್ಕೆ ಉಚ್ಚ ಸ್ಥಾನ ಪಡೆಯಬೇಕೆಂದಾದರೆ ಅದಕ್ಕೆ ಸಶುಲ್ಕ ಪ್ರಕ್ರಿಯೆ ಇರುತ್ತದೆ. ಇಂತಹ ನಕಲಿ ಜಾಲತಾಣಗಳು ಅಧಿಕೃತ (ಮೂಲ) ಜಾಲತಾಣಗಳಂತೆಯೇ ಕಾಣಿಸುತ್ತವೆ. ಯಾವಾಗ ಸಂತ್ರಸ್ತ ವ್ಯಕ್ತಿಯು ಮುಂದುಮುಂದಿನ ಪ್ರಕ್ರಿಯೆ ಮಾಡುತ್ತಾ ಹೋಗುತ್ತಾನೆಯೋ, ಆಗ ಚಾತುರ್ಯದಿಂದ ಹಣವನ್ನು ಮೂರನೇ ವ್ಯಕ್ತಿಗೆ ಹಸ್ತಾಂತರಿಸಲಾಗುತ್ತದೆ. ಸಂತ್ರಸ್ತರ ಕಾಗದಪತ್ರಗಳನ್ನು ಮೂರನೇ ಪಕ್ಷದೊಂದಿಗೆ ಹಂಚಿಕೊಳ್ಳುವಾಗ ಬ್ಯಾಂಕ್‌ ನೌಕರರ ಕೈವಾಡ ಸಹ ಇರಬಹುದೆಂಬ ಸಂಶಯವಿದೆ. ಬ್ಯಾಂಕ್‌ಗಳು ಖಾತೆದಾರನ ‘ಕೆ.ವೈ.ಸಿ.’ (ಖಾತೆದಾರನನ್ನು ಗುರುತಿಸುವ ಕಾಗದಪತ್ರಗಳು) ನವೀಕರಿಸುತ್ತಿರಬೇಕು; ಆದರೆ ಅನೇಕ ಬ್ಯಾಂಕ್‌ಗಳು ಇದರತ್ತ ದುರ್ಲಕ್ಷ ಮಾಡುತ್ತವೆ. ಅದರಿಂದ ಖಾತೆಯ ಮಾಹಿತಿಯನ್ನು ಹುಡುಕಲು (ಟ್ರಾಕ್‌ ಮಾಡಲು) ಅಡಚಣೆಯಂಟಾಗುತ್ತದೆ. ಸಾಲದ ‘ಯಾಪ್ಸ್‌’ ಮತ್ತು ‘ಗೇಮಿಂಗ್‌ ‘ಯಾಪ್ಸ್‌’ (ಆನ್ಲೈನ್‌ ಆಟ ಆಡುವ ಪದ್ಧತಿ) ಇವು ಖಾಸಗಿ ಮಾಹಿತಿಯನ್ನು ಕಳೆದುಕೊಳ್ಳುವ ಇನ್ನೊಂದು ಮಾಧ್ಯಮವಾಗಿವೆ. ‘ಫೆಡೆಕ್ಸ್‌’ ಕೊರಿಯರ್ ನ ಹೆಸರಿನಲ್ಲಿ ಮಾಡುವ ಹಗರಣ ಸದ್ಯ ಮುಗಿಲು ಮುಟ್ಟಿದೆ. ಕೆಲವೊಮ್ಮೆ ಆಕರ್ಷಕ ಸೌಲಭ್ಯಗಳನ್ನು ನೀಡುವ ಅಜ್ಞಾತ ಹಾಗೂ ನಕಲಿ ವ್ಯಕ್ತಿಯ ಕರೆಯ ಮೂಲಕ ಸೈಬರ್‌ ಅಪರಾಧ ನಡೆಯುತ್ತದೆ ಅಥವಾ ಯಾವತ್ತೂ ಘಟಿಸದ ಅಪರಾಧಕ್ಕಾಗಿ ಬೆದರಿಕೆ ಹಾಕಬಹುದು.

ಗ್ಯಾಸ್‌ ಪೂರೈಕೆ ಮಾಡುವ ಕಂಪನಿಯ ಹೆಸರಿನಲ್ಲಿ ನಿಮಗೆ ನಿಮ್ಮ ವೈಯಕ್ತಿಕ ವಿವರಣೆಯನ್ನು ನವೀಕರಿಸಲು ಹೇಳುತ್ತಾರೆ ಮತ್ತು ಬ್ಯಾಂಕ್‌ ಖಾತೆಯ ವಿವರ ಕೇಳುವುದು, ಹೀಗೂ ಆಗುತ್ತದೆ. ವಿ-ಅಂಚೆಯ ಮೂಲಕ ನಿಮ್ಮ ವೈಯಕ್ತಿಕ ಬ್ಯಾಂಕ್‌ನ ವಿವರಗಳನ್ನು ನೀಡಲು ಹೇಳಬಹುದು ಅಥವಾ ‘ವಿಡಿಯೋ ಕಾಲ್’ ಮೂಲಕ ‘ಡಿಜಿಟಲ್‌ ಬಂಧನ’ ಮಾಡಬಹುದು ಹಾಗೂ ತಕ್ಷಣ ದೊಡ್ಡ ಮೊತ್ತದ ಬೇಡಿಕೆ ಮಾಡಬಹುದು. ಹಣ ತುಂಬಿಸಿ ಆಗುವ ವರೆಗೆ ಮೋಸ ಮಾಡುವವರು ನಿಮ್ಮನ್ನು ಕೋಣೆಯಿಂದ ಹೊರಗೆ ಹೋಗಲು ಕೂಡ ಬಿಡುವುದಿಲ್ಲ. ನಿವೃತ್ತಿಯ ನಂತರದ ಲಾಭವನ್ನು ಆಕರ್ಷಕ ಬಡ್ಡಿ ದರ ಇರುವಲ್ಲಿ ಹೂಡಿಕೆ ಮಾಡಲು ಇಚ್ಛಿಸುವ ಇತ್ತೀಚೆಗಷ್ಟೇ ನಿವೃತ್ತರಾಗಿರುವ ವ್ಯಕ್ತಿ ಅಥವಾ ಭಾರತದಲ್ಲಿ ಅಥವಾ ವಿದೇಶದಲ್ಲಿ ನೌಕರಿಯ ಹುಡುಕಾಟದಲ್ಲಿರುವ ನಿರುದ್ಯೋಗಿ ಯುವಕರು ಇದಕ್ಕೆ ಮೋಸ ಹೋಗಬಹುದು ಅಥವಾ ಇಂತಹ ಮೋಸಗಾರಿಕೆಯಲ್ಲಿ ವಿವಾಹದ ಪ್ರಸ್ತಾಪದಲ್ಲಿ ಆಸಕ್ತಿ ಇರುವ ಯುವತಿಯೂ ಇರಬಹುದು.

೩. ಸುಳ್ಳು ಆಶ್ವಾಸನೆಗಳಿಂದ ಸಂತ್ರಸ್ತರನ್ನು ಆಕರ್ಷಿಸುವುದು

ಮಹಿಳೆಯರಿಗೆ ಆಮಿಷ ತೋರಿಸಿ ಅಥವಾ ಅವರ ಅಶ್ಲೀಲ ಛಾಯಾಚಿತ್ರಗಳನ್ನು ಪ್ರಸಾರ ಮಾಡುವುದಾಗಿ ಬೆದರಿಕೆಗಳನ್ನು ನೀಡಿರುವ ಉದಾಹರಣೆಗಳೂ ಇವೆ. ಸುಳ್ಳು ಆಶ್ವಾಸನೆಗಾಗಿ ನಿಮ್ಮನ್ನು ಆಕರ್ಷಿಸಲು ಬೇರೆ ಬೇರೆ ಯುಕ್ತಿಗಳನ್ನು ಉಪಯೋಗಿಸಲಾಗುತ್ತದೆ. ನಿಮ್ಮ ಲೋಭದಿಂದ ನಿಮಗೆ ಅಸಾಮಾನ್ಯ ಬಡ್ಡಿಯ ಆಮಿಷ ತೋರಿಸುವುದು ಅಥವಾ ನೀವು ಅರ್ಹರಲ್ಲದಿದ್ದರೂ ನಿಮ್ಮ ಕನಸು ನನಸಾಗಿಸುವ ಅಪೇಕ್ಷೆ ಮಾಡುವುದು, ಈ ರೀತಿಯಲ್ಲಿ ಸೈಬರ್‌ ಅಪರಾಧಿಗಳು ಮೋಸ ಮಾಡಬಹುದು. ನಿಃಸಂಶಯವಾಗಿ ಸಾಕಷ್ಟು ಹಣವಿರುವ ವ್ಯಕ್ತಿಗಳು ಈ ಯುಕ್ತಿಗಳಿಗೆ ಬಲಿಯಾಗುತ್ತಾರೆ ಹಾಗೂ ದುರದೃಷ್ಟವಶಾತ್‌ ಮೋಸ ಹೋಗುವವರಲ್ಲಿ ಸಾಮಾಜಿಕ ಮಾಧ್ಯಮ, ಸಂಚಾರಿವಾಣಿ ಬಳಕೆದಾರರು ಅಥವಾ ಗಣಕಯಂತ್ರತಜ್ಞರೂ ಸೇರಿರುತ್ತಾರೆ.

೪. ಭಾರತೀಯ ಯುವಕರನ್ನು ಕಳ್ಳಸಾಗಾಟ ಮಾಡಿ ಅವರನ್ನು ಸೈಬರ್‌ ಹಗರಣ ಮಾಡುವಂತೆ ಒತ್ತಡ ಹೇರುವ ಪಾಕಿಸ್ತಾನ ಅಥವಾ ಚೀನಾದ ಅಪರಾಧಿಗಳು !

ಕಾನೂನು ಕ್ರಮ ತೆಗೆದುಕೊಳ್ಳುವ ಸಂಸ್ಥೆಗಳು ಕೆಲವು ಪ್ರಕರಣಗಳಲ್ಲಿ ಅಪರಾಧಿಗಳನ್ನು ಹಿಡಿಯುವುದರಲ್ಲಿ ಯಶಸ್ವಿಯಾಗಿದ್ದರೂ, ಅಲ್ಲಿ ಈ ಅಪರಾಧಿಗಳಿಗೂ ಹಣ ಯಾರಿಗೆ ಹಸ್ತಾಂತರವಾಗಿದೆ ಎಂಬುದು ತಿಳಿದಿರುವುದಿಲ್ಲ. ೧೦ ಅಕ್ಟೋಬರ ೨೦೨೪ ರಂದು ರಾಷ್ಟ್ರೀಯ ತನಿಖಾ ದಳದವರು ಒಂದು ಮನವಿಯನ್ನು ಪ್ರಸಿದ್ಧಪಡಿಸಿದ್ದಾರೆ. ಅದರಲ್ಲಿ ಮುಂದಿನಂತೆ ಹೇಳಲಾಗಿದೆ, ‘ವಿಭಾಗದ ತನಿಖೆಯಲ್ಲಿ ಬೆಳಕಿಗೆ ಬಂದಿರುವ ವಿಷಯವೆಂದರೆ, ‘ಲಾವೋ ಪಿ.ಡಿ.ಆರ್. ದೇಶದಲ್ಲಿರುವ ವಿಶೇಷ ಆರ್ಥಿಕ ವಲಯದಲ್ಲಿ ಸಿಲುಕಿರುವ ಅಸುರಕ್ಷಿತ ಭಾರತೀಯ ಯುವಕರ ಕಳ್ಳಸಾಗಾಣಿಕೆಯಲ್ಲಿ ೫ ವ್ಯಕ್ತಿಗಳ ಸಹಭಾಗವಿತ್ತು. ಅಲ್ಲಿ ಈ ಯುವಕರಿಗೆ ಯುರೋಪಿಯನ್‌ ಹಾಗೂ ಅಮೇರಿಕನ್‌ ನಾಗರಿಕರನ್ನು ಗುರಿಪಡಿಸಿ ಸೈಬರ್‌ ಹಗರಣ ಮಾಡುವಂತೆ ಒತ್ತಡ ಹೇರಲಾಯಿತು. ಮಾನವ ಕಳ್ಳಸಾಗಾಣಿಕೆಗಾಗಿ ಅವರ ಒಂದು ತಂಡವೇ ಕಾರ್ಯ ಮಾಡುತ್ತಿತ್ತು. ಅವರು ‘ಆಲ್‌ ಇಂಟರ್‌ನ್ಯಾಶನಲ್‌ ಸರ್ವಿಸೆಸ್’ ಈ ಸಲಹೆಗಾರ ಸಂಸ್ಥೆಯ ಮೂಲಕ ಕಾರ್ಯ ಮಾಡಿದರು. (ಆಧಾರ : The Perfect Voice, Oct ೧೧, ೨೦೨೪). ನಿಜವಾದ ಅಪರಾಧಿಗಳು ಚೀನಾ ಅಥವಾ ಪಾಕಿಸ್ತಾನದವರಾಗಿದ್ದು ಅವರು ಭಾರತ, ಅಮೇರಿಕಾ, ಬ್ರಿಟನ್‌ ಇತ್ಯಾದಿ ದೇಶಗಳಲ್ಲಿ ಈ ಸೈಬರ್‌ ಅಪರಾಧಗಳ ಮೂಲಕ ಉಪದ್ರವ ನೀಡುತ್ತಿರುವುದು ತಿಳಿದುಬಂದಿದೆ.

ಸೈಬರ್‌ ಅಪರಾಧಗಳ ಜಾಗರೂಕತೆಯ ವಿಷಯದಲ್ಲಿ ಭಾರತೀಯ ಬ್ಯಾಂಕ್‌ಗಳಿಂದ ಗ್ರಾಹಕರಿಗೆ ಸೂಚನೆ ‘ಭಾರತೀಯ ನ್ಯಾಯ ಸಂಹಿತೆ ೨೦೨೩’ ಮತ್ತು ‘ಮಾಹಿತಿ ತಂತ್ರಜ್ಞಾನ ಕಾನೂನು’ ಇವುಗಳ ಅಂತರ್ಗತ ವಿವಿಧ ಏರ್ಪಾಡುಗಳಿಗನುಸಾರ ಅಪರಾಧವನ್ನು ದಾಖಲಿಸುವುದರ ಜೊತೆಗೆ ಭಾರತೀಯ ರಿಜರ್ವ್ ಬ್ಯಾಂಕ್‌ ಮತ್ತು ಇತರ ಸಾರ್ವಜನಿಕ ಹಾಗೂ ಖಾಸಗಿ ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಮತ್ತು ಜನಸಾಮಾನ್ಯರಿಗೆ ಇಂತಹ ಮೋಸದ ಜಾಲದಿಂದ ಜಾಗರೂಕರಾಗಿರಲು ಹಾಗೂ ಅವರ ಖಾತೆಯ ವಿವರ ನೀಡದಂತೆ ಪದೇ ಪದೇ ಜಾಗರೂಕಗೊಳಿಸುತ್ತಿವೆ. ಬ್ಯಾಂಕ್‌ಗಳು ತಮ್ಮ ‘ಹೆಲ್ಪ್‌ಲೈನ್ಸ್‌’ನ ಜಾಹೀರಾತನ್ನೂ ನೀಡಿವೆ. ಅದರಲ್ಲಿ ಸಂತ್ರಸ್ತರಿಗೆ ಆದಷ್ಟು ಬೇಗನೇ ದೂರನ್ನು ದಾಖಲಿಸಲು ಹೇಳಲಾಗುತ್ತದೆ.               (ಮುಂದುವರಿಯುವುದು)

– ಶ್ರೀ. ಪ್ರವೀಣ ದೀಕ್ಷಿತ, ಮಾಜಿ ಪೊಲೀಸ್‌ ಮಹಾಸಂಚಾಲಕರು, ಮುಂಬೈ (೨೩.೧೦.೨೦೨೪)