ಮುಂಬಯಿ – ಖ್ಯಾತ ತಬಲಾ ವಾದಕ ಉಸ್ತಾದ ಜಾಕಿರ್ ಹುಸೇನ್ ಅವರು ತಮ್ಮ 73 ನೇ ವಯಸ್ಸಿನಲ್ಲಿ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಕೆಲವು ದಿನಗಳಿಂದ ಅವರ ಆರೋಗ್ಯ ಹದಗೆಟ್ಟಿತ್ತು. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ‘ಇಡಿಯೋಪಥಿಕ್ ಪಲ್ಮೋನರಿ ಫೈಬ್ರೋಸಿಸ್’ (ಉಸಿರಾಟ ವ್ಯವಸ್ಥೆಯ ಕಾಯಿಲೆ) ನಿಂದ ನಿಧನರಾದರು. ಉಸ್ತಾದ ಜಾಕಿರ್ ಹುಸೇನ್ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದರು. ದೇಶ ವಿದೇಶಗಳ ಹಲವೆಡೆ ಇವರ ತಬಲಾ ಕಾರ್ಯಕ್ರಮಗಳು ನಡೆದಿದ್ದವು. ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. ಅವರ ನಿಧನವು ಭಾರತೀಯ ಸಂಗೀತಕ್ಷೇತ್ರದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ. ಅವರ ನಿಧನದ ನಂತರ ಪ್ರಪಂಚದಾದ್ಯಂತದ ಅನೇಕ ಕಲಾವಿದರು ಮತ್ತು ಅವರ ಅಭಿಮಾನಿಗಳು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ಭಾರತ ಸರಕಾರ ಜಾಕಿರ್ ಹುಸೇನ್ ಅವರಿಗೆ 1988 ರಲ್ಲಿ ಪದ್ಮಶ್ರೀ, 2002 ರಲ್ಲಿ ಪದ್ಮಭೂಷಣ ಮತ್ತು 2023 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು 5 ಸಲ ಗ್ರ್ಯಾಮಿ ಪ್ರಶಸ್ತಿಗಳನ್ನು ಪಡೆದು ಗೌರವಕ್ಕೆ ಪಾತ್ರರಾಗಿದ್ದರು. ಸಂಗೀತ ಪ್ರಪಂಚದಲ್ಲಿ ಗ್ರ್ಯಾಮಿ ಪ್ರಶಸ್ತಿಗಳನ್ನು ಅತ್ಯಂತ ಪ್ರತಿಷ್ಠಿತ ಪ್ರಶಸ್ತಿ ಎಂದು ಪರಿಗಣಿಸಲಾಗಿದೆ. ಅಮೇರಿಕಾದ ಅಂದಿನ ಅಧ್ಯಕ್ಷ ಬರಾಕ್ ಒಬಾಮ ಅವರು ಶ್ವೇತಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಸ್ತಾದ ಜಾಕಿರ್ ಹುಸೇನ್ ಅವರನ್ನು ತಬಲಾ ನುಡಿಸಲು ಆಹ್ವಾನಿಸಿದ್ದರು. ಅವರು ಶ್ವೇತಭವನದಲ್ಲಿ ಈ ರೀತಿಯ ಕಾರ್ಯಕ್ರಮ ನೀಡಿದ ಮೊದಲ ಭಾರತೀಯರಾಗಿದ್ದರು.
ಉಸ್ತಾದ ಜಾಕಿರ ಹುಸೇನ ಅವರಂತಹ ಪ್ರತಿಭಾವಂತ ಕಲಾವಿದನನ್ನು ಜಗತ್ತು ಕಳೆದುಕೊಂಡಿದೆ ! – ಪ್ರಧಾನಿ ನರೇಂದ್ರ ಮೋದಿ
ನವ ದೆಹಲಿ: ಒಬ್ಬ ಪ್ರತಿಭಾವಂತ ಕಲಾವಿದನನ್ನು ಜಗತ್ತು ಕಳೆದುಕೊಂಡಿದೆ, ಎಂದು ಪ್ರಧಾನಿ ನರೇಂದ್ರ ಮೋದಿಯವರು ಪದ್ಮವಿಭೂಷಣ ತಬಲಾ ವಾದಕ ಉಸ್ತಾದ ಜಾಕೀರ ಹುಸೇನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಅವರು ‘ಎಕ್ಸ್’ ಖಾತೆಯಲ್ಲಿ ಹುಸೇನ ಅವರು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಕ್ರಾಂತಿಯನ್ನೇ ಮಾಡಿದರು’, ಎಂದು ಹೇಳಿದ್ದಾರೆ. ಅವರು ತಬಲಾ ವಾದನವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಗೊಳಿಸಿದರು. ಈ ರೀತಿ ಅವರು ಸಾಂಸ್ಕೃತಿಕ ಏಕತೆಯ ಸಂಕೇತವಾಗಿದ್ದರು.
ಖ್ಯಾತ ತಬಲಾ ವಾದಕ ಉಸ್ತಾದ ಜಾಕೀರ ಹುಸೇನ್ ಅವರ ನಿಧನದಿಂದ ತಬಲಾ ವಾದನದ ನಾದ ಕಳೆದುಹೋಯಿತು ! – ದೇವೇಂದ್ರ ಫಡ್ನವೀಸ, ಮುಖ್ಯಮಂತ್ರಿ
ನಾಗಪುರ – ಖ್ಯಾತ ತಬಲಾ ವಾದಕ ಉಸ್ತಾದ ಜಾಕೀರ ಹುಸೇನ ಅವರ ನಿಧನದಿಂದ ತಬಲಾ ವಾದನ ನಾದ ಕಳೆದುಹೋಗಿದೆ. ತಬಲಾ ವಾದನದ ನಾದಮಾಧುರ್ಯದಿಂದ ವಿಶ್ವದೆಲ್ಲೆಡೆಯ ರಸಿಕ ಪ್ರೇಕ್ಷಕರನ್ನು ಒಂದು ವೇದಿಕೆಯ ಮೇಲೆ ಒಟ್ಟುಗೂಡಿಸಿದ ಮಹಾನ ಸುಪುತ್ರನನ್ನು ಕಳೆದುಕೊಂಡಿದ್ದೇವೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಶೋಕವನ್ನು ವ್ಯಕ್ತಪಡಿಸಿದರು.
ಅವರು, ‘ಮಹಾರಾಷ್ಟ್ರದ ಸುಪುತ್ರನಾಗಿದ್ದ ಜಾಕೀರ ಹುಸೇನ ಸಂಪೂರ್ಣ ವಿಶ್ವಕ್ಕೆ ತಬಲಾದ ಹುಚ್ಚು ಹಿಡಿಸಿದ್ದರು. ಮೂರು ತಲೆಮಾರುಗಳೊಂದಿಗೆ ತಬಲಾ ಜುಗಲ್ ಬಂದಿ ಪ್ರದರ್ಶಿಸಿದ ಜಾಕೀರ ಹುಸೇನ ಅನೇಕ ಯುವಕರನ್ನು ತಬಲಾ ಕಡೆಗೆ ಆಕರ್ಷಿಸಿದರು. ಪದ್ಮವಿಭೂಷಣ ಉಸ್ತಾದ ಜಾಕೀರ ಹುಸೇನ ಮತ್ತು ತಬಲಾ ಅದ್ವೈತರಾಗಿದ್ದರು. ಈ ಅದ್ವೈತ ಈಗ ನಷ್ಟವಾಗಿದೆ. ಅವರ ಶಿಷ್ಯರು ಪ್ರಪಂಚದಾದ್ಯಂತ ಸಂಗೀತ ಸೇವೆ ಸಲ್ಲಿಸುತ್ತಿದ್ದಾರೆ. ಯುವಕರು ಮತ್ತು ಉದಯೋನ್ಮುಖ ಕಲಾವಿದರಿಗೆ ವೇದಿಕೆ ಕಲ್ಪಿಸಲು ಮತ್ತು ಅವರ ಕಲೆಯನ್ನು ಪ್ರಸ್ತುತಪಡಿಸಲು ಅವರು ನಿರಂತರ ಪ್ರಯತ್ನ ಮಾಡಿದರು. ತಬಲಾ ವಾದನಕ್ಕೆ ‘ಜಾಕಿರ ಹುಸೇನ’ ಎಂಬ ಹೆಸರಿನ ಸಮಾನಾರ್ಥಕವಾಗಿತ್ತು. ಅವರ ನಿಧನದಿಂದ ಭಾರತೀಯ ಸಂಗೀತದ ಉಜ್ವಲ ತಾರೆಯೊಬ್ಬರು ಕಳೆದು ಹೋಗಿದ್ದಾರೆ. ನಾನು ಅವರಿಗೆ ನನ್ನ ಹೃತ್ಪೂರ್ವಕ ಶ್ರದ್ಧಾಂಜಲಿ ಸಲ್ಲಿಸುತ್ತೇನೆ. ಅವರ ಕುಟುಂಬ ಹಾಗೂ ಝಾಕಿರ್ ಪ್ರೇಮಿಗಳ ದುಃಖದಲ್ಲಿ ನಾವು ಸಹಭಾಗಿಯಾಗುತ್ತೇವೆ’, ಎಂದು ಹೇಳಿದರು.
Our humble tributes to the real Hindu #ZakirHussain! pic.twitter.com/8cSFCkPWzP
— Sanatan Prabhat (@SanatanPrabhat) December 15, 2024