ಮಂಗಳೂರು – ಸಾವಿರಾರು ಸಸಿಗಳನ್ನು ಮಕ್ಕಳಂತೆ ಬೆಳಿಸಿದ ಪದ್ಮಶ್ರೀ ಪುರಸ್ಕೃತೆ ಅಂಕೋಲ ತಾಲೂಕಿನ ಹೊನ್ನಳ್ಳಿಯ ತುಳಸಿ ಗೌಡ (ವಯಸ್ಸು 86 ವರ್ಷ) ನಿನ್ನೆ ಸಂಜೆ ನಿಧನರಾಗಿದ್ದರೆ. ಕಳೆದ ಒಂದು ವರ್ಷದಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ತುಳಸಿ ಗೌಡ ಅವರು ಪ್ರತೀವರ್ಷ ಮೂವತ್ತು ಸಾವಿರಕ್ಕೂ ಅಧಿಕ ಸಸಿಗಳನ್ನು ನೆಟ್ಟು ಬೆಳೆಸುತ್ತಿದ್ದರು. ತುಳಸಿ ಗೌಡರ ಅರಣ್ಯ ಪ್ರೀತಿ ಕಂಡ ಕೇಂದ್ರ ಸರಕಾರ 2021 ರಲ್ಲಿ ಅವರಿಗೆ ಅಂದಿನ ರಾಷ್ಟ್ರಪತಿ ರಾಮನಾಥ ಕೋವಿಂದ್ ಇವರು ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದ್ದರು. ಯಾವುದೇ ವೇದಿಕೆಯ ಮೇಲೆ ಎಂದಿಗೂ ಮಾತನಾಡದ ಅವರು ಕೇವಲ ಅರಣ್ಯದೊಂದಿಗೆ ಮಾತನಾಡುತ್ತಿದ್ದರು. ಪತಿಯನ್ನು ಕಳೆದುಕೊಂಡನಂತರ ಇಬ್ಬರು ಮಕ್ಕಳನ್ನು ಸಾಕಲು ಅರಣ್ಯ ಇಲಾಖೆಯಲ್ಲಿ ದಿನಗೂಲಿ ಕೆಲಸಕ್ಕೆ ಸೇರಿದ ಇವರು ಅಲ್ಲಿಯೇ ಗಿಡಗಳ ಆರೈಕೆ ಪೋಷಣೆ ಮಾಡುತ್ತಾ ಹಲವು ಕಾಡು ಗಿಡಗಳ ಬೀಜ ಸಂಗ್ರಹಿಸಿ ಸಸಿಗಳನ್ನು ಮಾಡಿ ಕಾಡಿನಲ್ಲಿ ನೆಡುವ ಮೂಲಕ ಹಸಿರು ಕ್ರಾಂತಿ ಮಾಡಿದರು.
ತುಳಸಿ ಗೌಡ ಇವರ ಪರಿಸರ ಕಾಳಜಿಯನ್ನು ಗಮನಿಸಿ ಇಂದಿರಾ ಪ್ರಿಯದರ್ಶಿನಿ ವೃಕ್ಷ ಮಿತ್ರ ಪ್ರಶಸ್ತಿ, 1999ರಲ್ಲಿ ರಾಜ್ಯೋತ್ಸವ ಪ್ರಶಸ್ತಿ, ಶ್ರೀಮತಿ ಕವಿತಾ ಸ್ಮಾರಕ ಪ್ರಶಸ್ತಿ, ಇಂಡವಾಳು ಎಚ್. ಹೊನ್ನಯ್ಯ ಸಮಾಜ ಸೇವಾ ಪ್ರಶಸ್ತಿ ಸೇರಿದಂತೆ ಹಲವಾರು ರಾಜ್ಯ ಮಟ್ಟದ ಪ್ರಶಸ್ತಿಗಳು ಅವರಿಗೆ ದೊರೆತಿವೆ. ಸಸಿ ಉತ್ಪನ್ನದ ಬಗ್ಗೆ ಇರುವ ಜ್ಞಾನ, ಪ್ರಯೋಗಶೀಲತೆ, ಗಿಡ ಮರ ಬೀಜಗಳ ಕುರಿತಾದ ಮಾಹಿತಿ ಅರಣ್ಯ ವಿಜ್ಞಾನಿಗಳನ್ನು ಕೂಡ ಬೆರಗುಗೊಳಿಸುತ್ತಿತ್ತು.