ಪರಾತ್ಪರ ಗುರು ಡಾ. ಆಠವಲೆಯವರ ಕೃಪೆಯಿಂದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ಸೂಕ್ಷ್ಮಜಗತ್ತಿನ ವಿಷಯದ ಅನುಭವವನ್ನು ನಾವು ಈ ಲೇಖನ ಮಾಲಿಕೆಯಿಂದ ನೋಡುತ್ತಿದ್ದೇವೆ. ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೬/೦೨ ರ ಸಂಚಿಕೆಯಲ್ಲಿ ಈ ಲೇಖನಮಾಲೆಯ ಕೆಲವು ಭಾಗಗಳನ್ನು ನೋಡಿದೆವು. ಈ ವಾರದ ಅದರ ಮುಂದಿನ ಭಾಗವನ್ನು ನೋಡೋಣ. (ಭಾಗ ೧೫)
೧. ಪರಾತ್ಪರ ಗುರು ಡಾ. ಆಠವಲೆಯವರು ಓರ್ವ ಸಾಧಕಿಯ ಮರಣದ ನಂತರ ಅವಳ ಲಿಂಗದೇಹದ ಸೂಕ್ಷ್ಮ ಪರೀಕ್ಷಣೆ ಮಾಡಲು ಹೇಳುವುದು
‘ಸೌ. ಮಂಜೂ ಸಿಂಹ ಇವರು ನಿಧನರಾದಾಗ ‘ಮೃತ್ಯುವಿನ ನಂತರ ಯಾವುದಾದರೊಬ್ಬ ಸಾಧಕಿಯ ಲಿಂಗದೇಹದ ಗತಿ ಹೇಗಿರುತ್ತದೆ ?’, ಎಂಬುದರ ಸೂಕ್ಷ್ಮ ಪರೀಕ್ಷಣೆ ಮಾಡಲು ಪರಾತ್ಪರ ಗುರು ಡಾ. ಆಠವಲೆಯವರು ನಮಗೆ ಹೇಳಿದರು. ಪರೀಕ್ಷಣೆ ಮಾಡುವಾಗ ನಮಗೆ ‘ಮಾನವ ಜೀವಂತ ಇದ್ದಾಗಿನ ಸ್ಥಿತಿಗಿಂತ ಅವನ ಮರಣದ ನಂತರದ ಪ್ರವಾಸ ಅತ್ಯಂತ ಕಷ್ಟಕರವಾಗಿರುತ್ತದೆ ಎಂಬುದು ಅರಿವಾಯಿತು. ಅದರಲ್ಲಿ ಅನೇಕ ಸಂಕಟಗಳಿರುತ್ತವೆ. ಮರಣದ ನಂತರ ನಮ್ಮ ಜೀವನ ಸೂಕ್ಷ್ಮವಾಗುತ್ತದೆ; ಏಕೆಂದರೆ ಸ್ಥೂಲದೇಹ ಮೊದಲೆ ಚಿತೆಯಲ್ಲಿ ಸುಟ್ಟು ಹೋಗಿರುವುದರಿಂದ ಕೇವಲ ಆ ಮೃತವ್ಯಕ್ತಿಯ ಮನಸ್ಸು, ಬುದ್ಧಿ ಮತ್ತು ಇನ್ನಿತರ ಸೂಕ್ಷ್ಮದೇಹ ಮತ್ತು ಕೋಶಗಳು ನಮ್ಮ ಜೊತೆಗೆ ಅನೇಕ ಆವರಣಗಳ ರೂಪದಲ್ಲಿರುತ್ತವೆ. ಮರಣದ ನಂತರ ಒಂದು ರೀತಿ ಸೂಕ್ಷ್ಮ ಜಗತ್ತಿನೊಳಗೆ ಮೃತನ ಪ್ರವೇಶವಾಗುತ್ತದೆ.’
೨. ಮರಣಾನಂತರ ಅನಿಷ್ಟ ಶಕ್ತಿಗಳಿಂದ ಲಿಂಗದೇಹದ ಮೇಲೆ ಆಕ್ರಮಣವಾಗುವುದರಿಂದ ಗುರುಕೃಪೆಯ ಕವಚ ಆವಶ್ಯಕವಾಗಿರುತ್ತದೆ
ಈ ಸೂಕ್ಷ್ಮ ಜಗತ್ತಿನಲ್ಲಿ ಒಳ್ಳೆಯ ಶಕ್ತಿಗಳ ಜೊತೆಗೆ ತೊಂದರೆ ಕೊಡುವ ಅನೇಕ ಸೂಕ್ಷ್ಮ ಶಕ್ತಿಗಳು ಕೂಡ ನಮ್ಮ ಜೊತೆಗೆ ಸಂಚರಿಸುತ್ತಿರುತ್ತವೆ. ಈ ಜೀವನ ನಮಗೆ ಹೊಸತಾಗಿರುತ್ತದೆ. ಸೂಕ್ಷ್ಮ ಜಗತ್ತಿನಲ್ಲಿ ಅಲೆದಾಡುವಾಗ ಅನೇಕ ಅನಿಷ್ಟ ಶಕ್ತಿಗಳು ನಮ್ಮ ಮೇಲೆ ಆಕ್ರಮಣ ಮಾಡುತ್ತವೆ. ಕೆಲವೊಮ್ಮೆ ಅನಿಷ್ಟ ಶಕ್ತಿಗಳು ವಾಸನಾತ್ಮಕ ಲಿಂಗದೇಹಗಳನ್ನು ಕಾರ್ಯ ಮಾಡಿಸಿಕೊಳ್ಳಲು ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳುತ್ತವೆ. ಇಂತಹ ಸಂದರ್ಭದಲ್ಲಿ ನಮ್ಮ ಸುತ್ತಲೂ ಗುರುಕೃಪೆಯ ಕವಚವಿರಬೇಕಾಗುತ್ತದೆ ಅಥವಾ ದೇವರ ಕೃಪೆಯಾದರೂ ಇರಬೇಕಾಗುತ್ತದೆ.
೩. ಸಾಧನೆ ಮಾಡುವ ಲಿಂಗದೇಹದ ಮೇಲೆ ನಾಮಜಪದ ಸಂಸ್ಕಾರ ಇರುವುದರಿಂದ ಅದಕ್ಕೆ ಅನಿಷ್ಟ ಶಕ್ತಿಗಳಿಂದಾಗುವ ತೊಂದರೆ ಕಡಿಮೆ ಪ್ರಮಾಣದಲ್ಲಿರುವುದು
ಸಾಧನೆ ಮಾಡುವ ಲಿಂಗದೇಹಗಳು ವಾತಾವರಣದಲ್ಲಿ ತಿರುಗಾಡುತ್ತಿರುವಾಗ ಅವುಗಳಿಂದ ಪ್ರಕ್ಷೇಪಣೆಯಾಗುವ ದೈವೀ ಸ್ಪಂದನಗಳಿಂದ ಅವುಗಳಿಗೆ ಅನಿಷ್ಟ ಶಕ್ತಿಗಳಿಂದಾಗುವ ತೊಂದರೆ ಕಡಿಮೆ ಪ್ರಮಾಣದಲ್ಲಿ ಆಗುತ್ತದೆ ಮತ್ತು ತೊಂದರೆಯಾದರೂ ಗುರು ಅಥವಾ ಇಷ್ಟದೇವರು ಅವರ ರಕ್ಷಣೆ ಮಾಡುತ್ತಾರೆ. ಆ ವ್ಯಕ್ತಿ ಜೀವಮಾನವಿಡೀ ಸಾಧನೆ ಮಾಡಿದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ; ಏಕೆಂದರೆ ಅವನಲ್ಲಿ ನಾಮಜಪದ ಸಂಸ್ಕಾರ ಇರುವುದರಿಂದ ‘ಸೂಕ್ಷ್ಮ ಜಗತ್ತಿನಲ್ಲಿ ಏನೂ ಅಡಚಣೆ ಇಲ್ಲದೆ ಸಂಚರಿಸಲು’, ಸಾಧ್ಯವಾಗುತ್ತದೆ.
೪. ಜೀವಂತ ಇರುವಾಗಲೇ ಸಾಧನೆ ಮಾಡುವ ಮಹತ್ವವನ್ನು ಪರಾತ್ಪರ ಗುರು ಡಾಕ್ಟರರು ಮನಸ್ಸಿನಲ್ಲಿ ಬಿಂಬಿಸುವುದು
ಮರಣದ ನಂತರದ ಪ್ರವಾಸದಲ್ಲಿನ ಅನೇಕ ಸೂಕ್ಷ್ಮ ವಿಷಯಗಳನ್ನು ಪರಾತ್ಪರ ಗುರು ಡಾಕ್ಟರರು ನಮಗೆ ಈ ಜನ್ಮದಲ್ಲಿ ಕಲಿಸಿ ಜೀವಂತ ಇರುವಾಗಲೇ ಸಾಧನೆ ಮಾಡುವುದರ ಮಹತ್ವವನ್ನು ನಮ್ಮ ಮನಸ್ಸಿನಲ್ಲಿ ಬಿಂಬಿಸಿದರು; ಏಕೆಂದರೆ ಮನುಷ್ಯಜನ್ಮ ಅತ್ಯಂತ ದುರ್ಲಭ ಹಾಗೂ ಅಲ್ಪಾವಧಿಯದ್ದಾಗಿದೆ. ‘ನಮ್ಮ ಆಯುಷ್ಯ ಎಷ್ಟಿದೆ ?’, ಎಂಬುದು ನಮಗೆ ತಿಳಿದಿರುವುದಿಲ್ಲ. ಮನುಷ್ಯ ತನ್ನ ಆಯುಷ್ಯ ಸಾಕಷ್ಟು ಇದೆಯೆನ್ನುವ ಭ್ರಮೆಯಲ್ಲಿರುತ್ತಾನೆ. ಅವನಿಗೆ ಮರಣದ ಭಯವಾಗುತ್ತದೆ; ಆದರೆ ‘ಭಯವೆನಿಸಿದರೂ ಅವನು ಸಾಧನೆಗೆ ಮಹತ್ವ ಕೊಡುವುದಿಲ್ಲ’, ಇದು ಕಲಿಯುಗದ ಮಾನವನ ದುರಂತವಾಗಿದೆ. ಮನುಷ್ಯ ಹೇಳುತ್ತಾನೆ, ‘ನಾನು ವೃದ್ಧಾಪ್ಯದಲ್ಲಿ ಸಾಧನೆ ಮಾಡುವೆನು. ಈಗ ಸಾಧನೆ ಮಾಡುವ ವಯಸ್ಸಾಗಿದೆಯೇ ? ಚಿಕ್ಕ ಮಕ್ಕಳಲ್ಲಿ ತಂದೆತಾಯಿಯರು ಸಾಧನೆಯ ಸಂಸ್ಕಾರ ಮಾಡಬೇಕು. ಹಾಗೆ ಮಾಡಿದರೆ ಮಾತ್ರ ಅವನ ಮರಣದ ನಂತರದ ಜೀವನ ಸಫಲವಾಗುತ್ತದೆ.
೫. ವೇದನೆಯ ಸಂಸ್ಕಾರದಿಂದ ಮರಣದ ನಂತರವೂ ಮಂಜು ಇವರ ನರಳುವ ಧ್ವನಿ ಕೇಳಿಸುವುದು ಹಾಗೂ ‘ಮರಣದ ನಂತರ ವೇದನೆಗಳೂ ನಷ್ಟವಾಗಿದ್ದು ಈಗ ಆನಂದದಿಂದ ಮುಂದಿನ ಪ್ರವಾಸ ಮಾಡು’, ಎಂದು ಪರಾತ್ಪರ ಗುರುದೇವರು ಮಂಜೂ ಇವರಿಗೆ ಸಂದೇಶ ನೀಡಲು ಹೇಳುವುದು
ಮಂಜೂ ಇವರ ಬಗ್ಗೆ ನಮಗೆ ಅರಿವಾದುದೇನೆಂದರೆ, ‘ಸಾಧಕನ ಲಿಂಗದೇಹವನ್ನು ಮರಣದ ನಂತರವೂ ಗುರುಗಳೇ ಕಾಪಾಡುತ್ತಾರೆ.’ ಗುರುಗಳು ಅದರ ರಕ್ಷಣೆ ಮಾಡುತ್ತಾರೆ.’ ಪರೀಕ್ಷಣೆ ಮಾಡುತ್ತಿರುವಾಗ ನಮಗೆ ಮಂಜೂ ಇವರು ಇನ್ನೂ ಅರ್ಬುದರೋಗದ ವೇದನೆಗಳಿಂದ ನರಳುತ್ತಿರುವುದು ಅರಿವಾಗುತ್ತಿತ್ತು. ಅವರ ಧ್ವನಿಯೂ ಕೇಳಿಸುತ್ತಿತ್ತು. ಈ ವಿಷಯದಲ್ಲಿ ನಾನು ಗುರುದೇವರೊಂದಿಗೆ ಮಾತನಾಡಿದೆ. ಆಗ ಅವರು, ”ಅವಳಲ್ಲಿ ವೇದನೆಗಳ ಸಂಸ್ಕಾರವಾಗಿದೆ. ಅವಳಿಗೆ ಸೂಕ್ಷ್ಮದಿಂದ ‘ಮಂಜೂ ಈಗ ನಿನಗೆ ದೇಹವಿಲ್ಲ, ದೇಹದ ಜೊತೆಗೆ ನಿನ್ನ ಅರ್ಬುದರೋಗದ ಯಾತನೆಗಳು ಮುಗಿದುಹೋಗಿವೆ. ದೇಹ ಸುಟ್ಟು ಹೋದಾಗ ನಮ್ಮ ರೋಗ ಮತ್ತು ಅದರ ವೇದನೆಗಳೂ ನಷ್ಟವಾಗುತ್ತವೆ. ಆದ್ದರಿಂದ ನೀನು ಆನಂದದಿಂದ ಮುಂದಿನ ಪ್ರವಾಸ ಮಾಡು. ಸಾಧನೆ ಮಾಡು’’ ಎಂದು ತಿಳಿಸಲು ಹೇಳಿದರು.
೬. ಗುರುದೇವರಲ್ಲಿ ಪ್ರಾರ್ಥಿಸಿದ ತಕ್ಷಣ ಮಂಜೂ ಇವರ ಲಿಂಗದೇಹದ ಅಸ್ತಿತ್ವವು ಸುತ್ತಮುತ್ತಲೂ ಅರಿವಾಗುವುದು ಹಾಗೂ ಅವರಿಗೆ ಗುರುದೇವರ ಸಂದೇಶ ನೀಡಿದಾಗ ಅವರ ನರಳುವ ಧ್ವನಿ ನಿಲ್ಲುವುದು
ನಾವು ಮಂಜೂ ಇವರ ಮುಖವನ್ನು ಕಣ್ಮುಂದೆ ತಂದು ಅವರಿಗೆ ಸೂಕ್ಷ್ಮದಿಂದ ಪರಾತ್ಪರ ಗುರು ಡಾಕ್ಟರರ ಸಂದೇಶವನ್ನು ನೀಡಿದೆವು. ನಾವು ಅದಕ್ಕಾಗಿ ಮೊಟ್ಟಮೊದಲು ಪರಾತ್ಪರ ಗುರು ಡಾಕ್ಟರರ ಚರಣಗಳಲ್ಲಿ ಪ್ರಾರ್ಥನೆ ಮಾಡಿದೆವು, ‘ಗುರುದೇವರೆ, ‘ನಾವು ಏನು ಹೇಳುತ್ತಿದ್ದೇವೆಯೋ’, ಅದು ಮಂಜೂ ಇವರ ಸೂಕ್ಷ್ಮ ದೇಹಕ್ಕೆ ತಿಳಿಯಲಿ.’ ಆಗ ತಕ್ಷಣ ‘ನಮ್ಮ ಸಮೀಪದಲ್ಲಿ ಅವರ ಲಿಂಗದೇಹ ಸಂಚರಿಸುತ್ತಿದೆ, ಎಂದು ನಮಗೆ ಅನಿಸಿತು. ಗುರುಗಳ ಶಕ್ತಿ ಹೇಗಿದೆ ನೋಡಿ ! ಈ ಶಕ್ತಿಯೇ ಸೂಕ್ಷ್ಮ ಜಗತ್ತಿನಲ್ಲಿ ಪ್ರವಾಸ ಮಾಡುವ ಸೂಕ್ಷ್ಮ ಲಿಂಗದೇಹವನ್ನು ಹೀಗೆ ಇಚ್ಛಿಸಿದ ಸ್ಥಳಕ್ಕೆ ತರಲು ಸಾಧ್ಯ. ನಾವು ಕೇವಲ ಆ ದೈವೀ ಶಕ್ತಿಗೆ ಶರಣಾಗಬೇಕು. ನಾವು ಮಂಜೂ ಇವರಿಗೆ ಗುರುದೇವರ ಸಂದೇಶವನ್ನು ನೀಡಿರುವುದರಿಂದ ಕ್ರಮೇಣ ವಾತಾವರಣದಲ್ಲಿ ಅವರ ನರಳುವ ಧ್ವನಿ ಕೇಳಿಸುವುದು ನಿಂತಿತು.
೭. ಜೀವನದಲ್ಲಿ ಮನಸ್ಸಿನ ಅನೇಕ ಸಂಸ್ಕಾರಗಳನ್ನು ಮರಣದ ನಂತರ ಅಳಿಸುವವರು ಗುರುಗಳೇ ಆಗಿರುವುದರಿಂದ ಗುರುಕೃಪೆಯು ಮಹತ್ವದ್ದಾಗಿದೆ
ಇದರಿಂದ ‘ಮನುಷ್ಯನಿಗೆ ಕೊನೆಯ ಕ್ಷಣದಲ್ಲಿ ಬಂದಿರುವ ಕಾಯಿಲೆ ಹಾಗೂ ಅವನು ಅನುಭವಿಸಿದ ಯಾತನೆಗಳ ಸಂಸ್ಕಾರ ಎಷ್ಟು ಆಳವಾಗಿರುತ್ತವೆ !’ ಎಂದು ನಮ್ಮ ಗಮನಕ್ಕೆ ಬಂತು. ಗುರುದೇವರು ನಮಗೆ , ”ಮನುಷ್ಯನಿಗೆ ಆತನ ಮರಣದ ನಂತರ ‘ಈಗ ನನಗೆ ಸ್ಥೂಲದೇಹವಿಲ್ಲ’, ಎಂಬುದು ತಿಳಿಯಲು ಬಹಳಷ್ಟು ದಿನಗಳು ಬೇಕಾಗುತ್ತವೆ’’ ಎಂದು ಹೇಳಿದರು. ಗುರುಕೃಪೆಯಿಂದ ಸಾಧಕನ ಲಿಂಗದೇಹಕ್ಕೆ ಸಹಾಯ ಮಾಡುವವರು ಯಾರಾದರೂ ಸಿಗುತ್ತಾರೆ ಹಾಗೂ ಅದು ಸ್ವಲ್ಪ ದಿನದಲ್ಲಿಯೇ ಅವನಿಗೆ ಅರಿವಾಗುತ್ತದೆ. ಜೀವನದಲ್ಲಿ ಮನಸ್ಸಿನ ಮೇಲಾಗಿರುವ ಅನೇಕ ಪ್ರಕಾರದ ಸಂಸ್ಕಾರಗಳನ್ನು ಮರಣದ ನಂತರ ಅಳಿಸುವವರೂ ಗುರುಗಳೇ ಆಗಿರುತ್ತಾರೆ. ‘ನಮ್ಮ ದೇಹ ಇರಲಿ, ಇಲ್ಲದಿರಲಿ, ಗುರುಕಾರ್ಯ ನಿರಂತರ ನಡೆಯುತ್ತಲೇ ಇರುತ್ತದೆ; ಆದ್ದರಿಂದ ಜೀವನದಲ್ಲಿ ಗುರುಕೃಪೆ ಮಹತ್ವದ್ದಾಗಿರುತ್ತದೆ.’
೮. ಗುರುಗಳು ನಮ್ಮ ಜೀವನದಲ್ಲಿದ್ದರೆ, ನಮ್ಮ ಮರಣವೂ ಆನಂದದಾಯಕ ಹಾಗೂ ಮಂಗಲದಾಯಕವಾಗುತ್ತದೆ !
ಗುರುಚರಣಗಳನ್ನು ಎಂದಿಗೂ ಬಿಡಬೇಡಿ, ಇದನ್ನು ಮತ್ತೊಮ್ಮೆ ಹೇಳಬೇಕೆನಿಸುತ್ತದೆ. ನಮ್ಮ ಮರಣದ ನಂತರವೂ ಅವರು ಜೊತೆಗಿದ್ದು ನಮಗೆ ಸದುಪದೇಶ ಮಾಡುತ್ತಾರೆ. ಅವರೇ ನಮಗೆ ಮಹತ್ವದ ಮಾರ್ಗದರ್ಶಕರಾಗುತ್ತಾರೆ; ಏಕೆಂದರೆ ಮರಣದ ನಂತರ ನಮ್ಮನ್ನು ಕಾಪಾಡಲು ನಮ್ಮ ಆಪ್ತರು ಯಾರೂ ಇರುವುದಿಲ್ಲ; ನಮ್ಮ ಮಿತ್ರರೂ ಇರುವುದಿಲ್ಲ, ಕೇವಲ ‘ನಾವು ಮತ್ತು ನಮ್ಮ ಗುರು !’, ಇವರೇ ಪ್ರವಾಸದಲ್ಲಿ ಜೊತೆಗಿರುತ್ತಾರೆ. ‘ಗುರುಗಳು ನಮ್ಮ ಜೀವನದಲ್ಲಿದ್ದರೆ, ನಮ್ಮ ಮರಣವೂ ಆನಂದದಾಯಕ ಹಾಗೂ ಮಂಗಲದಾಯಕವಾಗುತ್ತದೆ’, ಇದುವೇ ನಿಜ !’
– ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ, ಬೆಂಗಳೂರು ಕರ್ನಾಟಕ. (೨೭.೨.೨೦೨೨)