ವಿಜಯದಶಮಿ

ಇತಿಹಾಸ ಮತ್ತು ಆಚರಣೆಯ ಪದ್ಧತಿ

ವಿಜಯದಶಮಿಯ ದಿನ ಶ್ರೀ ದುರ್ಗಾದೇವಿಯು ಮಹಿಸುರನೊಂದಿಗೆ ನಡೆದ ೯ ದಿನಗಳ ಯುದ್ಧವನ್ನು ಮುಗಿಸಿ ಅವನನ್ನು ಸಂಹರಿಸಿದಳು. ಇದೇ ದಿನ ಶ್ರೀರಾಮನು ರಾವಣನನ್ನು ಸಂಹರಿಸಿ ವಿಜಯ ಸಾಧಿಸಿದನು. ಈ ವಾರ ನಾವು ದಸರಾವನ್ನು ಹೇಗೆ ಆಚರಿಸಬೇಕು ? ದಸರಾದ ಬಗೆಗಿನ ಇತ್ಯಾದಿಗಳನ್ನು ನೋಡೋಣ.

೧.   ದಸರಾ ಎಂದರೆ ಏನು ?

‘ಆಶ್ವಯುಜ ಶುಕ್ಲ ದಶಮಿ’ ಅಂದರೆ ವಿಜಯದಶಮಿ ! ‘ದಸಹರಾ’ ಇದು ದಸರಾ ಶಬ್ದದ ಒಂದು ಉತ್ಪತ್ತಿ ಆಗಿದೆ. ದಶ ಎಂದರೆ ಹತ್ತು ಮತ್ತು ಹರಾ ಅಂದರೆ ಸೋಲುವುದು. ದಸರಾದ ಮೊದಲಿನ ನವರಾತ್ರಿಯ ೯ ದಿನಗಳು ಹತ್ತೂ ದಿಕ್ಕುಗಳು ದೇವಿಯ ಶಕ್ತಿಯಿಂದ ಭರಿತ ಮತ್ತು ನಿಯಂತ್ರಣದಲ್ಲಿರುತ್ತವೆ, ಅಂದರೆ ಹತ್ತು ದಿಕ್ಕುಗಳ ಮೇಲೆ ವಿಜಯ ದೊರಕಿರುತ್ತದೆ. ಈ ದಿನವು ‘ವಿಜಯದಶಮಿ’ ಎಂದರೆ ಅದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ. ನವರಾತ್ರಿ ಮುಗಿದ ತಕ್ಷಣ ಈ ದಿನ ಬರುತ್ತದೆ; ಆದ್ದರಿಂದ ಇದನ್ನು ‘ನವರಾತ್ರಿಯ ಕೊನೆಯ ದಿನ’ ಎಂದೂ ಪರಿಗಣಿಸಲಾಗುತ್ತದೆ. ಈ ದಿನದಂದು ಸರಸ್ವತಿ ತತ್ತ್ವವು ಸಗುಣದ ಹೆಚ್ಚುವರಿ ಭಾವದ ನಿರ್ಮಿತಿಯ ಮೂಲಕ ಬೀಜರೂಪಿ ಅವ್ಯಕ್ತ ಸ್ಥಿತಿಯನ್ನು ಪಡೆದುಕೊಳ್ಳುತ್ತದೆ;  ಆದ್ದರಿಂದ, ಈ ದಿನ ಅವಳ ಕ್ರಿಯಾತ್ಮಕ ಪೂಜೆ ಮಾಡಿ ವಿಸರ್ಜನೆಯನ್ನು ಮಾಡಲಾಗುತ್ತದೆ. ಮೂರೂವರೆ ಮುಹೂರ್ತಗಳಲ್ಲಿ ಒಂದಾದ ಈ ದಿನ ಮಾಡುವ ಯಾವುದೇ ಕಾರ್ಯವು ಶುಭಫಲ ನೀಡುತ್ತದೆ.

೨.  ವಿಜಯದಶಮಿಯ ಹಿಂದಿನ ಇತಿಹಾಸ

೨ ಅ. ಕುಬೇರನಿಂದ ಬನ್ನಿ ಗಿಡ ಮತ್ತು ಶಮಿ ವೃಕ್ಷಗಳ ಮೇಲೆ ಚಿನ್ನದ ನಾಣ್ಯಗಳ ಸುರಿಮಳೆ : ವಿಜಯದಶಮಿಯಂದು, ಪ್ರಭು ಶ್ರೀರಾಮನ ಪೂರ್ವಜರಾದ ರಘು ಎಂಬ ಅಯೋಧ್ಯಾಧೀಶನು ವಿಶ್ವಜಿತ್‌ ಯಜ್ಞವನ್ನು ಮಾಡಿದನು. ತನ್ನೆಲ್ಲ ಸಂಪತ್ತನ್ನು ದಾನ ಮಾಡಿದ ನಂತರ ಅವನು ಒಂದು ಪರ್ಣಕುಟಿಯಲ್ಲಿ ವಾಸಿಸುತ್ತಿದ್ದನು. ಕೌತ್ಸನಿಗೆ ೧೪ ಕೋಟಿ ಚಿನ್ನದ ನಾಣ್ಯಗಳು ಬೇಕಾಗಿದ್ದವು. ಆಗ ರಘುವು ಕುಬೇರನ ಮೇಲೆ ದಾಳಿ ಮಾಡಲು ಸಿದ್ಧನಾದನು. ಆ ಸಮಯದಲ್ಲಿ ಕುಬೇರನು ಬನ್ನಿ ಮತ್ತು ಶಮಿ ವೃಕ್ಷಗಳ ಮೇಲೆ ಚಿನ್ನದ ನಾಣ್ಯಗಳ ಮಳೆಯನ್ನು ಸುರಿದನು. ಕೌತ್ಸನು ಕೇವಲ ೧೪ ಕೋಟಿ ಚಿನ್ನದ ನಾಣ್ಯಗಳನ್ನು ತೆಗೆದುಕೊಳ್ಳುತ್ತಾನೆ. ಉಳಿದ ಚಿನ್ನದ ನಾಣ್ಯಗಳನ್ನು ಪ್ರಜೆಗಳು ಒಯ್ಯುತ್ತಾರೆ. ಅಂದಿನಿಂದ, ಅಂದರೆ ತ್ರೇತಾಯುಗದಿಂದ, ಹಿಂದೂಗಳು ವಿಜಯದಶಮಿ ಮತ್ತು ದಸರಾ ದಿನದಂದು ಜನರು ಪರಸ್ಪರರಿಗೆ ಬನ್ನಿ ಎಲೆಗಳನ್ನು ಚಿನ್ನದ ರೂಪದಲ್ಲಿ ನೀಡುತ್ತಾರೆ.

೨ ಆ. ರಾವಣನ ಮೇಲೆ ಪ್ರಭು ಶ್ರೀರಾಮನ ವಿಜಯ : ತ್ರೇತಾಯುಗದಲ್ಲಿ ಶ್ರೀರಾಮನು ರಾವಣನನ್ನು ಸಂಹರಿಸಿ ವಿಜಯ ಸಾಧಿಸಿದನು, ಅದೂ ಇದೇ ದಿನವಾಗಿತ್ತು. ಈ ಅಭೂತಪೂರ್ವ ವಿಜಯದಿಂದಾಗಿ, ಈ ದಿನವನ್ನು ‘ವಿಜಯದಶಮಿ’ ಎನ್ನಲಾಗುತ್ತದೆ.

೨ ಇ. ಅಜ್ಞಾತವಾಸ ಮುಗಿಸಿ ಪಾಂಡವರ ವಿಜಯ : ಪಾಂಡವರು ಅಜ್ಞಾತವಾಸ ಮುಗಿದ ತಕ್ಷಣ, ಶಕ್ತಿ ಪೂಜೆಯನ್ನು ಮಾಡಿದರು ಮತ್ತು ಶಮಿಯ ಮರದಿಂದ ತಮ್ಮ ಆಯುಧಗಳನ್ನು ಮರಳಿ ಪಡೆದರು ಮತ್ತು ವಿರಾಟನ ಗೋವುಗಳನ್ನು ಕದ್ದೊಯ್ದ ಕೌರವ ಸೈನ್ಯದ ಮೇಲೆ ಯುದ್ಧ ಮಾಡಿ ಸೋಲಿಸಿದರು, ಅದು ಕೂಡ ಇದೇ ದಿನವಾಗಿತ್ತು.

೨ ಈ. ಕೃಷಿ ವಿಷಯದ ಲೋಕೋತ್ಸವ : ಈ ಹಬ್ಬವನ್ನು ‘ಕೃಷಿ ಹಬ್ಬ’ವಾಗಿಯೂ ಆಚರಿಸಲಾಗುತ್ತಿತ್ತು. ಮಳೆಗಾಲದಲ್ಲಿ ಬಿತ್ತಿದ ಮೊದಲ ಬೆಳೆ ಮನೆಗೆ ಬಂದಾಗ ರೈತರು ಈ ಹಬ್ಬ ಆಚರಿಸುತ್ತಿದ್ದರು. ನವರಾತ್ರಿಯಲ್ಲಿ ಘಟಸ್ಥಾಪನೆಯ ದಿನದಂದು ಘಟದ ಕೆಳಗಿನ ಮೃತ್ತಿಕೆಯ ಮೇಲೆ ೯ ಧಾನ್ಯಗಳನ್ನು ಬಿತ್ತುತ್ತಾರೆ. ದಸರಾದಂದು ಆ ಧಾನ್ಯಗಳ ಮೊಳಕೆಗಳನ್ನು ಕಿತ್ತು ದೇವರಿಗೆ ಅರ್ಪಿಸುತ್ತಾರೆ. ಹಲವೆಡೆ ಭತ್ತದ ಗದ್ದೆಗಳಲ್ಲಿನ ತೆನೆಗಳನ್ನು ಕತ್ತರಿಸಿ ಪ್ರವೇಶ ದ್ವಾರಕ್ಕೆ ತೋರಣದಂತೆ ಕಟ್ಟುತ್ತಾರೆ. ಈ ಆಚರಣೆಯು ಈ ಹಬ್ಬದ ಕೃಷಿ ಸ್ವರೂಪವನ್ನು ವ್ಯಕ್ತಪಡಿಸುತ್ತದೆ.

ಶ್ರೀ. ರಮೇಶ ಶಿಂದೆ

೩.  ಹಬ್ಬವನ್ನು ಆಚರಿಸುವ ಸ್ವರೂಪ

ಈ ದಿನ ಸೀಮೋಲ್ಲಂಘನ, ಶಮೀಪೂಜೆ, ಅಪರಾಜಿತಾ ಪೂಜೆ ಮತ್ತು ಆಯುಧಪೂಜೆ ಈ ೪ ಕೃತಿಗಳನ್ನು ಮಾಡಬೇಕಾಗಿರುತ್ತದೆ. ಮಧ್ಯಾಹ್ನ ಗ್ರಾಮದ ಗಡಿಯ ಹೊರಗೆ ಈಶಾನ್ಯ ದಿಕ್ಕಿಗೆ ಸೀಮೋಲ್ಲಂಘನೆಗಾಗಿ ಹೋಗುತ್ತಾರೆ. ಎಲ್ಲಿ ಶಮಿ ಅಥವಾ ಬನ್ನಿ  ವೃಕ್ಷವಿದೆಯೋ ಅಲ್ಲಿ ನಿಲ್ಲುತ್ತಾರೆ. ಅನಂತರ ‘ಶಮಿ ಪಾಪವನ್ನು ನಾಶ ಮಾಡುತ್ತದೆ. ಶಮಿಯ ಮುಳ್ಳುಗಳು ಕೆಂಪಾಗಿರುತ್ತವೆ. ಶಮಿಯು ರಾಮನಿಗೆ ಪ್ರಿಯಳಾಗಿದ್ದು, ಅರ್ಜುನನ ಬಾಣಗಳನ್ನು ಧರಿಸಿದವಳಾಗಿದ್ದಾಳೆ. ಏ ಶಮೀ, ರಾಮನು ನಿನ್ನನ್ನು ಪೂಜಿಸಿದ್ದಾನೆ. ನಾನು ಸಮಯ ಬಂದಾಗ ವಿಜಯಯಾತ್ರೆಗೆ ಹೊರಡುವವನಿದ್ದೇನೆ. ಈ ಪ್ರಯಾಣವನ್ನು ನನಗೆ ನಿರ್ವಿಘ್ನ ಮತ್ತು ಸುಗಮಗೊಳಿಸು’ ಎಂದು ಶಮಿಯಲ್ಲಿ ಪ್ರಾರ್ಥಿಸುತ್ತಾರೆ.

 ೪. ಬನ್ನಿ ಗಿಡದ ಪೂಜೆ

ಶಮೀ ವೃಕ್ಷ ಸಿಗದಿದ್ದರೆ ಬನ್ನಿ ವೃಕ್ಷವನ್ನು ಪೂಜಿಸುವಾಗ ಈ ಕೆಳಗಿನ ಮಂತ್ರವನ್ನು ಪಠಿಸಲಾಗುತ್ತದೆ –

ಅಶ್ಮಂತಕ ಮಹಾವೃಕ್ಷ ಮಹಾದೋಷನಿವಾರಣಾ

ಇಷ್ಟಾನಾಂ ದರ್ಶನಂ ದೇಹಿ ಕುರು ಶತ್ರುವಿನಾಶನಮ್‌

ಅರ್ಥ : ಹೇ ಅಶ್ಮಂತಕ ಮಹಾವೃಕ್ಷವೇ, ನೀನು ಮಹಾದೋಷಗಳನ್ನು ನಿವಾರಿಸುವವನಾಗಿರುವೆ. ನೀನು ನನಗೆ ನನ್ನ ಸ್ನೇಹಿತರ ಭೇಟಿ ಮಾಡಿಸು ಮತ್ತು ನನ್ನ ಶತ್ರುಗಳನ್ನು ನಾಶ ಮಾಡು. ನಂತರ ಅವರು ಮರದ ಬುಡದಲ್ಲಿ ಅಕ್ಕಿ, ವೀಳ್ಯೆದೆಲೆ ಮತ್ತು ಚಿನ್ನದ ನಾಣ್ಯವನ್ನು (ಇಲ್ಲದಿದ್ದರೆ ತಾಮ್ರದ ನಾಣ್ಯವನ್ನು) ಇಡುತ್ತಾರೆ. ನಂತರ ಅವರು ಮರಕ್ಕೆ ಪ್ರದಕ್ಷಿಣೆಗಳನ್ನು ಹಾಕುತ್ತಾರೆ ಮತ್ತು ಅದರ ಕಾಂಡದ ಬಳಿಯ ಸ್ವಲ್ಪ ಮಣ್ಣನ್ನು ಮತ್ತು ಮರದ ಎಲೆಗಳನ್ನು ಮನೆಗೆ ತರುತ್ತಾರೆ.

೫.  ಬನ್ನಿ ಗಿಡದ ಎಲೆಗಳನ್ನು ಚಿನ್ನವೆಂದು ಕೊಡುವುದು

ವಿಜಯದಶಮಿಯಂದು, ಬನ್ನಿ ಎಲೆಗಳನ್ನು ದೇವರಿಗೆ ಚಿನ್ನವೆಂದು ಅರ್ಪಿಸಲಾಗುತ್ತದೆ ಮತ್ತು ಆಪ್ತರಿಗೆ ಸ್ನೇಹಿತರಿಗೆ ನೀಡುತ್ತಾರೆ. ‘ಚಿನ್ನವನ್ನು ಕಿರಿಯರು ಹಿರಿಯರಿಗೆ ನೀಡಬೇಕು’

೬.  ಆಯುಧಗಳು ಮತ್ತು ಉಪಕರಣಗಳ ಪೂಜೆಯ ಹಿಂದಿನ ವಿಜ್ಞಾನ

ಈ ದಿನ, ರಾಜರು, ಸಾಮಂತರು ಮತ್ತು ಸರದಾರರು ತಮ್ಮ ಉಪಕರಣಗಳನ್ನು ಮತ್ತು ಆಯುಧಗಳನ್ನು ಪೂಜಿಸುತ್ತಾರೆ. ರೈತರು ಮತ್ತು ಕುಶಲಕರ್ಮಿಗಳು ತಮ್ಮ ಉಪಕರಣಗಳನ್ನು ಮತ್ತು ಆಯುಧಗಳನ್ನು ಪೂಜಿಸುತ್ತಾರೆ. (ಕೆಲವರು ನವಮಿಯಂದು ಆಯುಧ ಪೂಜೆಯನ್ನೂ ಮಾಡುತ್ತಾರೆ.) ಪೆನ್ನುಗಳು ಮತ್ತು ಪುಸ್ತಕಗಳು ವಿದ್ಯಾರ್ಥಿಗಳ ಆಯುಧಗಳೇ ಆಗಿವೆ; ಆದ್ದರಿಂದ ವಿದ್ಯಾರ್ಥಿಗಳು ಅವುಗಳನ್ನು ಪೂಜಿಸುತ್ತಾರೆ. ಈ ಪೂಜೆಯ ಹಿಂದಿನ ಉದ್ದೇಶವೇನೆಂದರೆ ಆ ವಸ್ತುಗಳಲ್ಲಿ ದೇವರ ರೂಪವನ್ನು ಕಾಣುವುದು, ಅಂದರೆ ದೇವರೊಂದಿಗೆ ಏಕತೆಯನ್ನು ಸಾಧಿಸಲು ಪ್ರಯತ್ನಿಸುವುದು!

– ಶ್ರೀ.  ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರ, ಹಿಂದೂ ಜನಜಾಗೃತಿ ಸಮಿತಿ.