ಅಮೆರಿಕದ ಹಿರಿಯ ರಾಜತಾಂತ್ರಿಕ ಸಲಹೆಗಾರ ಬಾಂಗ್ಲಾದೇಶದಲ್ಲಿ!

ಬಾಂಗ್ಲಾದೇಶದ ಆಂತರಿಕ ಸರಕಾರದ ಪ್ರಮುಖ ಮೊಹಮ್ಮದ್ ಯೂನಸ್ ಅವರ ಜೊತೆ ಭೇಟಿ

ಢಾಕಾ – ಬಾಂಗ್ಲಾದೇಶದಲ್ಲಿ ಅಧಿಕಾರ ಬದಲಾದ ಬಳಿಕ ಅಮೆರಿಕಾದ ವಿದೇಶಾಂಗ ಸಚಿವಾಲಯದ ಓರ್ವ ಹಿರಿಯ ರಾಜತಾಂತ್ರಿಕ ಸಲಹೆಗಾರ ಡೊನಾಲ್ಡ್ ಲು ಅವರು ನಿಯೋಗದೊಂದಿಗೆ ಬಾಂಗ್ಲಾದೇಶಕ್ಕೆ ಆಗಮಿಸಿದ್ದಾರೆ. ಅವರು ಬಾಂಗ್ಲಾದೇಶದಲ್ಲಿ ಮಧ್ಯಂತರ ಸರ್ಕಾರದೊಂದಿಗೆ ಆರ್ಥಿಕ ಮತ್ತು ವ್ಯಾಪಾರ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ನಿಯೋಗದಲ್ಲಿ ದಕ್ಷಿಣ ಮತ್ತು ಮಧ್ಯ ಏಷ್ಯಾದ ಅಮೇರಿಕಾದ ಸಹಾಯಕ ವ್ಯಾಪಾರ ಪ್ರತಿನಿಧಿ ಬ್ರಾಡನ್ ಲಿಂಚ್ ಕೂಡ ಭಾಗಿಯಾಗಲಿದ್ದಾರೆ. ಬಾಂಗ್ಲಾದೇಶದಲ್ಲಿ ಆಡಳಿತ ಬದಲಾಯಿಸುವುದರ ಹಿಂದೆ ಅಮೆರಿಕಾದ ಕೈವಾಡವಿತ್ತು ಎಂದು ಆರೋಪಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಡೊನಾಲ್ಡ್ ಲು ಬಾಂಗ್ಲಾದೇಶಕ್ಕೆ ಆಗಮಿಸಿರುವುದು ಇಡೀ ವಿಶ್ವದ ಗಮನ ಸೆಳೆದಿದೆ. ಅವರು ಬಾಂಗ್ಲಾದೇಶದಲ್ಲಿ ಮಧ್ಯಂತರ ಸರಕಾರದ ಸಲಹೆಗಾರ ಮೊಹಮ್ಮದ್ ಯೂನಸ್ ಅವರನ್ನು ಭೇಟಿಯಾಗಲಿದ್ದಾರೆ. ಅಲ್ಲದೆ, ನಿಯೋಗವು ಹಣಕಾಸು ಮತ್ತು ವಾಣಿಜ್ಯ ಸಲಹೆಗಾರ ಸಾಲೇಹುದ್ದೀನ್ ಅಹ್ಮದ್ ಅವರನ್ನು ಭೇಟಿ ಮಾಡಲಿದೆ.

ಇದಕ್ಕೂ ಮುನ್ನ ಬಾಂಗ್ಲಾದೇಶದ ವಿದೇಶಾಂಗ ಸಚಿವ ಎಂ.ಡಿ.ಜಾಶೀಮ್ ಉದ್ದೀನ್ ಅವರು ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ,ಮಧ್ಯಂತರ ಸರಕಾರದ ರಚನೆಯಾದ ನಂತರ ಅಮೆರಿಕಾದ ನಿಯೋಗದ ಆಗಮನದಿಂದ ಬಾಂಗ್ಲಾದೇಶದೊಂದಿಗಿನ ಸಂಬಂಧಕ್ಕೆ ಅಮೆರಿಕ ಎಷ್ಟು ಪ್ರಾಮುಖ್ಯತೆ ನೀಡುತ್ತಿದೆ, ಎಂಬುದನ್ನು ತೋರಿಸುತ್ತದೆ ಎಂದಿದ್ದಾರೆ.

ಡೊನಾಲ್ಡ್ ಲು ಭಾರತಕ್ಕೂ ಭೇಟಿ ನೀಡಲಿದ್ದಾರೆ!

ಡೊನಾಲ್ಡ್ ಲು ಅವರು ನವದೆಹಲಿಯಲ್ಲಿ ವಿದೇಶಾಂಗ ಮತ್ತು ರಕ್ಷಣಾ ಸಚಿವಾಲಯಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಿದ್ದಾರೆ. ಅಮೆರಿಕಾದ ಇಂಡೋ-ಪೆಸಿಫಿಕ್ ಭದ್ರತಾ ವ್ಯವಹಾರಗಳ ಪ್ರಧಾನ ಉಪ ಸಹಾಯಕ ಸಚಿವ ಜೆಡೀದಿಯಾ ಪಿ. ರಾಯಲ್ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ತೇಜಸ್ ಯುದ್ಧ ವಿಮಾನದ ಎಂಜಿನ್ ಪೂರೈಕೆಯಲ್ಲಿನ ವಿಳಂಬದ ಬಗ್ಗೆಯೂ ಚರ್ಚೆ ನಡೆಯಬಹುದು.