ಶ್ರೀಕೃಷ್ಣಜನ್ಮಾಷ್ಟಮಿಯಂದು ಭಗವಾನ್ ಶ್ರೀಕೃಷ್ಣನ ಪೂಜೆ ಮಾಡುವ ಪದ್ಧತಿ
ಶ್ರಾವಣ ಕೃಷ್ಣ ಪಕ್ಷ ಅಷ್ಟಮಿಯಂದು ಭಗವಾನ್ ಶ್ರೀ ಕೃಷ್ಣನ ಜನ್ಮವಾಯಿತು. ಈ ದಿನವನ್ನು ಶ್ರೀಕೃಷ್ಣ ಜಯಂತಿ / ಶ್ರೀಕೃಷ್ಣ ಜನ್ಮಾಷ್ಟಮಿ ಎಂದು ಆಚರಿಸಲಾಗುತ್ತದೆ. ಈ ಲೇಖನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯಂದು ಭಗವಾನ್ ಶ್ರೀಕೃಷ್ಣನ ಪೂಜೆಯನ್ನು ಹೇಗೆ ಮಾಡಬೇಕೆಂದು ಹೇಳಲಾಗಿದೆ. ಈ ಪೂಜೆಯಲ್ಲಿ ಹೇಳಲಾಗುವ ಮಂತ್ರಗಳ ಅರ್ಥವನ್ನು ತಿಳಿದುಕೊಂಡರೆ ನಾವು ಭಗವಾನ್ ಶ್ರೀಕೃಷ್ಣನ ಪೂಜೆಯನ್ನು ಇನ್ನೂ ಭಾವಪೂರ್ಣವಾಗಿ ಮಾಡಲು ಸಹಾಯವಾಗುತ್ತದೆ. ಈ ದೃಷ್ಟಿಕೋನವನ್ನು ಇಟ್ಟುಕೊಂಡು, ಸಾಧ್ಯವಾದಷ್ಟು ಮಂತ್ರದ ಮುಂದೆ ನಾವು ಕನ್ನಡದಲ್ಲಿ ಅದರ ಅರ್ಥ ಅಥವಾ ಭಾವಾರ್ಥವನ್ನು ಬರೆದಿದ್ದೇವೆ.
ಆಚಮನ
ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು. ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು ಮತ್ತು ಶ್ರೀವಿಷ್ಣುವಿನ ಪ್ರತಿಯೊಂದು ಹೆಸರಿನ ಕೊನೆಗೆ ‘ನಮಃ’ ಉಚ್ಚರಿಸಿ ಆ ನೀರನ್ನು ಕುಡಿಯಬೇಕು.
೧. ಶ್ರೀ ಕೇಶವಾಯ ನಮಃ | ೨. ಶ್ರೀ ನಾರಾಯಣಾಯ ನಮಃ | ೩. ಶ್ರೀ ಮಾಧವಾಯ ನಮಃ |
ನಾಲ್ಕನೇ ಹೆಸರನ್ನು ಉಚ್ಚರಿಸುವಾಗ ‘ನಮಃ’ ಎಂಬ ಶಬ್ದದ ಸಮಯದಲ್ಲಿ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.
೪. ಶ್ರೀ ಗೋವಿಂದಾಯ ನಮಃ |
ಪೂಜಕನು ಕೈಯನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸಬೇಕು ಮತ್ತು ಶರಣಾಗತ ಭಾವದಿಂದ ಮುಂದಿನ ಹೆಸರುಗಳನ್ನು ಉಚ್ಚರಿಸಬೇಕು.
೫. ಶ್ರೀ ವಿಷ್ಣವೇ ನಮಃ | ೬. ಶ್ರೀ ಮಧುಸೂದನಾಯ ನಮಃ | ೭. ಶ್ರೀ ತ್ರಿವಿಕ್ರಮಾಯ ನಮಃ | ೮. ಶ್ರೀ ವಾಮನಾಯ ನಮಃ | ೯. ಶ್ರೀ ಶ್ರೀಧರಾಯ ನಮಃ | ೧೦. ಶ್ರೀ ಹೃಷಿಕೇಶಾಯ ನಮಃ | ೧೧. ಶ್ರೀ ಪದ್ಮನಾಭಾಯ ನಮಃ | ೧೨. ಶ್ರೀ ದಾಮೋದರಾಯ ನಮಃ | ೧೩. ಶ್ರೀ ಸಂಕರ್ಷಣಾಯ ನಮಃ | ೧೪. ಶ್ರೀ ವಾಸುದೇವಾಯ ನಮಃ | ೧೫. ಶ್ರೀ ಪ್ರದ್ಯುಮ್ನಾಯ ನಮಃ | ೧೬. ಶ್ರೀ ಅನಿರುದ್ಧಾಯ ನಮಃ | ೧೭. ಶ್ರೀ ಪುರುಷೋತ್ತಮಾಯ ನಮಃ | ೧೮. ಶ್ರೀ ಅಧೋಕ್ಷಜಾಯ ನಮಃ | ೧೯. ಶ್ರೀ ನಾರಸಿಂಹಾಯ ನಮಃ | ೨೦. ಶ್ರೀ ಅಚ್ಯುತಾಯ ನಮಃ | ೨೧. ಶ್ರೀ ಜನಾರ್ದನಾಯ ನಮಃ | ೨೨. ಶ್ರೀ ಉಪೇಂದ್ರಾಯ ನಮಃ | ೨೩. ಶ್ರೀ ಹರಯೇ ನಮಃ | ೨೪. ಶ್ರೀ ಶ್ರೀಕೃಷ್ಣಾಯ ನಮಃ |
ನಂತರ ಪಂಚಪಾತ್ರೆಯಲ್ಲಿನ ಎಲ್ಲ ನೀರನ್ನು ಹರಿವಾಣದಲ್ಲಿ ಸುರಿಯಬೇಕು ಮತ್ತು ಎರಡೂ ಕೈಗಳನ್ನು ಒರೆಸಿ ಎದೆಯ ಬಳಿ ನಮಸ್ಕಾರದ ಮುದ್ರೆಯಲ್ಲಿ ಕೈಜೋಡಿಸಬೇಕು.
ಪ್ರಾರ್ಥನೆ
ಶ್ರೀಮನ್ಮಹಾಗಣಾಧಿಪತಯೇ ನಮಃ | ಅರ್ಥ: ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ.
ಇಷ್ಟದೇವತಾಭ್ಯೋ ನಮಃ | ಅರ್ಥ: ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ.
ಕುಲದೇವತಾಭ್ಯೋ ನಮಃ | ಅರ್ಥ: ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ.
ಗ್ರಾಮದೇವತಾಭ್ಯೋ ನಮಃ | ಅರ್ಥ: ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ.
ಸ್ಥಾನದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ.
ವಾಸ್ತುದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ವಾಸ್ತುದೇವತೆಗೆ ನಾನು ನಮಸ್ಕರಿಸುತ್ತೇನೆ.
ಆದಿತ್ಯಾದಿನವಗ್ರಹದೇವತಾಭ್ಯೋ ನಮಃ | ಅರ್ಥ: ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ದೇವೇಭ್ಯೋ ನಮಃ | ಅರ್ಥ: ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ.
ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅರ್ಥ: ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ) ನಾನು ನಮಸ್ಕರಿಸುತ್ತೇನೆ.
ಅವಿಘ್ನಮಸ್ತು | ಅರ್ಥ: ಎಲ್ಲ ಸಂಕಟಗಳ ನಾಶವಾಗಲಿ.
ಸುಮುಖಶ್ಚೈಕದನ್ತಶ್ಚ ಕಪಿಲೋ ಗಜಕರ್ಣಕಃ ।
ಲಮ್ಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ ।।
ಧೂಮ್ರಕೇತುರ್ಗಣಾಧ್ಯಕ್ಷೋ ಭಾಲಚನ್ದ್ರೋ ಗಜಾನನಃ ।
ದ್ವಾದಶೈತಾನಿ ನಾಮಾನಿ ಯಃ ಪಠೇಚ್ಛೃಣುಯಾದಪಿ ।।
ವಿದ್ಯಾರಮ್ಭೇ ವಿವಾಹೇ ಚ ಪ್ರವೇಶೇ ನಿರ್ಗಮೇ ತಥಾ ।
ಸಙ್ಗ್ರಾಮೇ ಸಙ್ಕಟೇಚೈವ ವಿಘ್ನಸ್ತಸ್ಯ ನ ಜಾಯತೇ ।।
ಅತ್ಯಂತ ಸುಂದರ ಮುಖ ಹೊಂದಿರುವ, ಆನೆಯಂತೆ ದಂತವನ್ನೂ (ಹಲ್ಲು) ಕಿವಿಗಳನ್ನು ಹೊಂದಿರುವ, ವಿಶಾಲವಾದ ಹೊಟ್ಟೆಯಿರುವ, ದುರ್ಜನರ ವಿನಾಶಕ್ಕಾಗಿ ಭಯಂಕರ ರೂಪವನ್ನು ಧರಿಸುವ, ಸಂಕಟಗಳ ಹರಣ ಮಾಡುವ, ಎಲ್ಲ ದೇವಾನುದೇವತೆಗಳಿಗೆ ನಾಯಕನಾಗಿರುವ ಧೂಮ್ರ (ಅಂದರೆ ಹೊಗೆಯ) ಬಣ್ಣವಿರುವ ಗಣಗಳ ಪ್ರಮುಖ, ಹಣೆಯ ಮೇಲೆ ಸಾಕ್ಷಾತ ಚಂದ್ರನನ್ನು ಧರಿಸಿರುವ ಮತ್ತು ಆನೆಯಂತೆ ಸೊಂಡಿಲು ಇರುವ ಶ್ರೀ ಗಣಪತಿಯ ಈ 12 ಹೆಸರುಗಳನ್ನೂ ಮದುವೆಯ ಸಮಯದಲ್ಲಿ, ವಿದ್ಯಾಭ್ಯಾಸ ಆರಂಭಿಸುವಾಗ, ಮನೆ ಪ್ರವೇಶಿಸುವಾಗ ಅಥವಾ ಮನೆಯಿಂದ ಹೊರಹೋಗುವಾಗ, ಯುದ್ಧಕ್ಕೆ ಹೋಗುವಾಗ ಅಥವಾ ಬಿಕ್ಕಟ್ಟಿನ ಸಮಯದಲ್ಲಿ ಪಠಿಸಿದರೆ ಯಾವುದೇ ಅಡೆತಡೆಗಳು, ಸಂಕಟಗಳು ಪೀಡಿಸಲಾರವು.
ಶುಕ್ಲಾಮ್ಬರಧರಂ ದೇವಂ ಶಶಿವರ್ಣಂ ಚತುರ್ಭುಜಮ್ ।
ಪ್ರಸನ್ನವದನಂ ಧ್ಯಾಯೇತ್ ಸರ್ವವಿಘ್ನೋಪಶಾನ್ತಯೇ ।।
ಸರ್ವ ಸಂಕಟಗಳ ವಿನಾಶ ಮಾಡುವ, ಅತ್ಯಂತ ಶುಭ್ರವಾದ ವಸ್ತ್ರಗಳನ್ನು ಧರಿಸಿರುವ, ಶುಭ್ರ ಕಾಂತಿಯ, ನಾಲ್ಕು ಕೈಗಳಿರುವ, ಪ್ರಸನ್ನ ಮುಖದ ಭಗವಂತನನ್ನು (ಭಗವಾನ್ ಶ್ರೀ ವಿಷ್ಣು) ನಾನು ಧ್ಯಾನಿಸುತ್ತೇನೆ.
ಸರ್ವಮಙ್ಗಲಮಾಙ್ಗಲ್ಯೇ ಶಿವೇ ಸರ್ವಾರ್ಥಸಾಧಿಕೇ ।
ಶರಣ್ಯೇ ತ್ರ್ಯಮ್ಬಕೇ ಗೌರಿ ನಾರಾಯಣಿ ನಮೋಽಸ್ತುತೇ ।।
ಶುಭದಲ್ಲಯೇ ಶುಭಳಾಗಿರುವ, ಪವಿತ್ರಳಾಗಿರುವ, ಎಲ್ಲರ ಕಲ್ಯಾಣ ಮಾಡುವ, ತ್ರಿನೇತ್ರಗಳನ್ನು ಹೊಂದಿರುವ, ಎಲ್ಲರಿಗೂ ಶರಣ ನೀಡುವ, ಅತ್ಯಂತ ಶುಭ್ರವರ್ಣ ಹೊಂದಿರುವ, ನಾರಾಯಣಿದೇವಿಯೇ ನಾನು ನಿನಗೆ ನಮಸ್ಕರಿಸುತ್ತೇನೆ.
ಸರ್ವದಾ ಸರ್ವಕಾರ್ಯೇಷು ನಾಸ್ತಿ ತೇಷಾಮಮಙ್ಗಲಮ್ ।
ಯೇಷಾಂ ಹೃದಿಸ್ಥೋ ಭಗವಾನ್ಮಙ್ಗಲಾಯತನಂ ಹರಿಃ ।।
ವೈಕುಂಠದಲ್ಲಿ ವಾಸಿಸುವ ಭಗವಾನ್ ಶ್ರೀ ವಿಷ್ಣು ಯಾರ ಹೃದಯದಲ್ಲಿ ವಾಸಿಸುತ್ತಾರೆಯೋ ಅಂಥವರ ಎಲ್ಲ ಕಾರ್ಯಗಳೂ ಮಂಗಳಕರವಾಗುತ್ತವೆ.
ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚನ್ದ್ರಬಲಂ ತದೇವ ।
ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಽಙ್ಘ್ರಿಯುಗಂ ಸ್ಮರಾಮಿ ।।
ಹೇ ಲಕ್ಷ್ಮೀಪತಿಯೇ, ನಿಮ್ಮ ಚರಣ ಕಮಲಗಳ ಸ್ಮರಣೆಯೇ ಲಗ್ನ (ಸುಮುಹೂರ್ತ), ಅದೇ ಶುಭ ದಿನ, ಅದೇ ಚಂದ್ರಬಲ, ಅದೇ ತಾರಾಬಲ, ಅದೇ ವಿದ್ಯೆಯ ಬಲ ಮತ್ತು ಅದೇ ದೈವ ಶಕ್ತಿ.
ಲಾಭಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಜಯಃ ।
ಯೇಷಾಮಿನ್ದೀವರಶ್ಯಾಮೋ ಹೃದಯಸ್ಥೋ ಜನಾರ್ದನಃ ।।
ತನ್ನ ಹೃದಯದಲ್ಲಿ ನೀಲಿ ಬಣ್ಣದ, ಎಲ್ಲರ ಕಲ್ಯಾಣ ಮಾಡುವ (ಭಗವಂತ) ವಿಷ್ಣು ಇರುವಾಗ ಹೇಗೆ ತಾನೆ ಸೋಲು ಅನುಭವಿಸಬಹುದು! ಇಂತಹವರು ಯಾವಾಗಲೂ ವಿಜಯಶಾಲಿಯಾಗುತ್ತಾರೆ, ಬಯಸಿದ ಎಲ್ಲ ವಸ್ತುಗಳನ್ನು ಪಡೆಯುತ್ತಾರೆ!
ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।
ತತ್ರ ಶ್ರೀರ್ವಿಜಯೋ ಭೂತಿರ್ಧ್ರುವಾ ನೀತಿರ್ಮತಿರ್ಮಮ ।।
ಶ್ರೇಷ್ಠ ಯೋಗಿ (ಭಗವಂತ) ಶ್ರೀಕೃಷ್ಣ ಮತ್ತು ಶ್ರೇಷ್ಠ ಬಿಲ್ಲುಗಾರ ಅರ್ಜುನ ಇರುವಲ್ಲಿ, ಐಶ್ವರ್ಯ ಮತ್ತು ಜಯ ಖಚಿತ ಎಂಬುದು ನನ್ನ ಬಲವಾದ ನಂಬಿಕೆಯಿದೆ.
ವಿನಾಯಕಂ ಗುರುಂ ಭಾನುಂ ಬ್ರಹ್ಮವಿಷ್ಣುಮಹೇಶ್ವರಾನ್ ।
ಸರಸ್ವತೀಂ ಪ್ರಣೌಮ್ಯಾದೌ ಸರ್ವಕಾರ್ಯಾರ್ಥಸಿದ್ಧಯೇ ।।
ಎಲ್ಲ ಕಾರ್ಯಗಳು ಪೂರೈಸುವಂತಾಗಲಿ ಎಂದು ಮೊದಲನೆಯದಾಗಿ ಗಣಪತಿ, ಗುರು, ಸೂರ್ಯ, ಬ್ರಹ್ಮ-ವಿಷ್ಣು-ಮಹೇಶ ಮತ್ತು ಸರಸ್ವತಿ ದೇವಿಯನ್ನು ನಮಸ್ಕರಿಸುತ್ತೇನೆ.
ಅಭೀಪ್ಸಿತಾರ್ಥಸಿದ್ಧಯರ್ಥಂ ಪೂಜಿತೋ ಯಃ ಸುರಾಸುರೈಃ ।
ಸರ್ವವಿಘ್ನಹರಸ್ತಸ್ಮೈ ಗಣಾಧಿಪತಯೇ ನಮಃ ।।
ಎಲ್ಲ ಕಾರ್ಯಗಳು ಪೂರೈಸುವಂತಾಗಲಿ ಎಂದು ಎಲ್ಲ ದೇವತೆಗಳು ಮತ್ತು ರಾಕ್ಷಸರಿಂದಲೂ ಪೂಜಿಸಲ್ಪಡುವ ಮತ್ತು ಪ್ರತಿಕೂಲತೆಯನ್ನು ನಾಶಮಾಡುವ ಗಣಪತಿಯನ್ನು ನಾನು ನಮಸ್ಕರಿಸುತ್ತೇನೆ.
ಸರ್ವೇಷ್ವಾರಬ್ಧಕಾರ್ಯೇಷು ತ್ರಯಸ್ತ್ರಿಭುವನೇಶ್ವರಾಃ ।
ದೇವಾ ದಿಶನ್ತು ನಃ ಸಿದ್ಧಿಂ ಬ್ರಹ್ಮೇಶಾನಜನಾರ್ದನಾಃ ।।
ಮೂರು ಲೋಕಗಳ ಅಧಿಪತಿಗಳಾದ ತ್ರಿದೇವರು ಅಂದರೆ ಬ್ರಹ್ಮ-ವಿಷ್ಣು-ಮಹೇಶ್ವರರು (ನಾವು) ಪ್ರಾರಂಭಿಸಿದ ಎಲ್ಲ ಕೆಲಸಗಳಲ್ಲಿ ಯಶಸ್ಸು ನೀಡಲಿ.
ದೇಶಕಾಲಕಥನ
‘ದೇಶಕಾಲ’ ಉಚ್ಚರಿಸಿದ ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕಾಗಿರುತ್ತದೆ.
ದೇಶಕಾಲ: ಪೂಜಕನು ತನ್ನ ಎರಡೂ ಕಣ್ಣುಗಳಿಗೆ ನೀರನ್ನು ಹಚ್ಚಿ ಮುಂದಿನ ‘ದೇಶಕಾಲ’ವನ್ನು ಹೇಳಬೇಕು.
ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್ವೇತ-ವಾರಾಹಕಲ್ಪೇ ವೈವಸ್ವತಮನ್ವನ್ತರೇ ಅಷ್ಟಾವಿಂಶತಿತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಕಲಿ ಪ್ರಥಮ ಚರಣೇ ಜಮ್ಬುದ್ವೀಪೇ ಭರತವರ್ಷೇ ಭರತಖಣ್ಡೇ ದಣ್ಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣತೀರೇ ಶಾಲಿವಾಹನಶಕೇ ಅಸ್ಮಿನ್ವರ್ತಮಾನೇ ವ್ಯಾವಹಾರಿಕೇ ಕ್ರೋಧೀ ನಾಮ ಸಂವತ್ಸರೇ, ದಕ್ಷಿಣಾಯನೇ, ವರ್ಷಾ-ಋತೌ, ಶ್ರಾವಣಮಾಸೇ, ಕೃಷ್ಣ ಪಕ್ಷೇ, ಅಷ್ಟಮ್ಯಾನ್ ತಿಥೌ, ಇಂದೂ ವಾಸರೇ, ರೋಹಿಣೀ ದಿವಸ ನಕ್ಷತ್ರೇ, ಹರ್ಷಣ ಯೋಗೇ, ಕೌಲವ ಕರಣೇ, ವೃಷಭ ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ಸಿಂಹ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ವೃಷಭ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶ್ರೀಶನೈಶ್ಚರೇ ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಙ್ ಗ್ರಹ-ಗುಣವಿಶೇಷಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…
‘ದೇಶಕಾಲ’ದ ಸಂದರ್ಭದಲ್ಲಿ ಸೂಚನೆ
೧. ಯಾವ ಪ್ರದೇಶಕ್ಕೆ ‘ದಂಡಕಾರಣ್ಯೇ ದೇಶೇ ಗೋದಾವರ್ಯಾಃ ದಕ್ಷಿಣೇ ತೀರೇ ಬೌದ್ಧಾವತಾರೇ ರಾಮಕ್ಷೇತ್ರೇ’ ಎಂಬ ವರ್ಣನೆಯು ಅನ್ವಯಿಸುವುದಿಲ್ಲವೋ ಅಥವಾ ಪ್ರದೇಶದ ‘ದೇಶಕಾಲ’ವು ಪೂಜಕನಿಗೆ ಗೊತ್ತಿಲ್ಲದಿದ್ದರೆ, ಆಗ ಮೇಲೆ ಉಲ್ಲೇಖಿಸಿದ ಶಬ್ದಗಳ ಜಾಗದಲ್ಲಿ ‘ಆರ್ಯಾವರ್ತೇ ದೇಶೇ’ ಎಂದು ಹೇಳಬೇಕು.
೨. ಯಾರಿಗೆ ಮೇಲಿನ ‘ದೇಶಕಾಲ’ ಹೇಳಲು ಸಾಧ್ಯವಿಲ್ಲವೋ, ಅವರು ಮುಂದಿನ ಶ್ಲೋಕವನ್ನು ಹೇಳಬೇಕು ಮತ್ತು ನಂತರ ‘ಸಂಕಲ್ಪ’ವನ್ನು ಉಚ್ಚರಿಸಬೇಕು.
ತಿಥಿರ್ವಿಷ್ಣುಸ್ತಥಾ ವಾರೋ ನಕ್ಷತ್ರಂ ವಿಷ್ಣುರೇವ ಚ|
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್||
ಅರ್ಥ : ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ಉಚ್ಚರಿಸುವುದರಿಂದ ಸಿಗುವ ಎಲ್ಲ ಫಲವು ಶ್ರೀವಿಷ್ಣುವಿನ ಸ್ಮರಣೆಯಿಂದ ಪ್ರಾಪ್ತವಾಗುತ್ತದೆ; ಏಕೆಂದರೆ ಇಡೀ ಜಗತ್ತೇ ವಿಷ್ಣುಮಯವಾಗಿದೆ.
ಸಂಕಲ್ಪ
ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ‘ಸಂಕಲ್ಪ’ವನ್ನು ಉಚ್ಚರಿಸಬೇಕು.
‘ಸಂಕಲ್ಪ’ದ ಕುರಿತಾದ ಸೂಚನೆ : ಕರಿಷ್ಯೇ ಎಂದು ಹೇಳುವಾಗ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಲಗೈಯಲ್ಲಿರುವ ಅಕ್ಷತೆಯ ಮೇಲೆ ಬಿಟ್ಟು (ಬಲಗೈ ಬೆರಳುಗಳನ್ನು ನೇರವಾಗಿಟ್ಟು) ಅಕ್ಷತೆ ಸಹಿತ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.
ಮಮ ಆತ್ಮನಃ ಪರಮೇಶ್ವರ-ಆಜ್ಞಾರೂಪ-ಸಕಲ-ಶಾಸ್ತ್ರ-ಶ್ರುತಿಸ್ಮೃತಿ-ಪುರಾಣೋಕ್ತ-ಫಲ-ಪ್ರಾಪ್ತಿದ್ವಾರಾ ಶ್ರೀಪರಮೇಶ್ವರಪ್ರೀತ್ಯರ್ಥಂ ಶ್ರೀಕೃಷ್ಣಜನ್ಮಾಷ್ಟಮೀ-ನಿಮಿತ್ತೇನ ಶ್ರೀಕೃಷ್ಣದೇವತಾಪ್ರೀತ್ಯರ್ಥಂ ಪೂಜನಮ್ ಅಹಂ ಕರಿಷ್ಯೇ । ತತ್ರಾದೌ ನಿರ್ವಿಘ್ನತಾಸಿದ್ಧ್ಯರ್ಥಂ ಮಹಾಗಣಪತಿಸ್ಮರಣಂ ಕರಿಷ್ಯೇ । ಶರೀರಶುದ್ಧ್ಯರ್ಥಂ ದಶವಾರಂ ವಿಷ್ಣುಸ್ಮರಣಂ ಕರಿಷ್ಯೇ । ಕಲಶ-ಘಣ್ಟಾ-ದೀಪ-ಪೂಜನಂ ಚ ಕರಿಷ್ಯೇ
ನನಗೆ ಪರಮೇಶ್ವರನ ಆಜ್ಞೆಯಂತಿರುವ ಎಲ್ಲ ಶಾಸ್ತ್ರ-ಶ್ರುತಿ-ಸ್ಮೃತಿ-ಪುರಾಣಗಳ ಫಲ ದೊರೆತು, ಪರಮೇಶ್ವರನನ್ನು ಪ್ರಸನ್ನಗೊಳಿಸಲು, ಶ್ರೀಕೃಷ್ಣಜನ್ಮಾಷ್ಟಮಿ ಮಹೋತ್ಸವದ ನಿಮಿತ್ತ ಭಗವಾನ್ ಶ್ರೀಕೃಷ್ಣನನ್ನು ಪೂಜಿಸುತ್ತೇನೆ. ಅದರಲ್ಲಿ ಮೊದಲನೆಯದಾಗಿ ವಿಘ್ನಗಳ ನಿರ್ಮೂಲನೆಗಾಗಿ ಮಹಾಗಣಪತಿಯನ್ನು ಸ್ಮರಿಸುತ್ತೇನೆ. ಶರೀರದ ಶುದ್ಧಿಗಾಗಿ ಹತ್ತು ಬಾರಿ ವಿಷ್ಣು ಸ್ಮರಣೆಯನ್ನು ಮಾಡುತ್ತೇನೆ. ಅದರೊಂದಿಗೆ ಕಳಶ, ಘಂಟೆ ಹಾಗೂ ದೀಪ ಪೂಜೆಯನ್ನು ಮಾಡುತ್ತೇನೆ.
ಶ್ರೀಗಣಪತಿಸ್ಮರಣೆ
ವಕ್ರತುಣ್ಡ ಮಹಾಕಾಯ ಕೋಟಿಸೂರ್ಯಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ।।
ವಕ್ರ ಸೊಂಡಿಲು, ಬೃಹದಾಕಾರದ ದೇಹ, ಕೋಟಿ ಸೂರ್ಯಗಳ ಪ್ರಕಾಶವಿರುವ ಹೇ (ಗಣಪತಿಯೇ) ನನ್ನ ಯಾವುದೇ ಕೆಲಸಗಳಲ್ಲಿ ವಿಘ್ನಗಳು ಬಾರದಿರಲಿ.
ಋದ್ಧಿ-ಬುದ್ಧಿ-ಶಕ್ತಿ-ಸಹಿತ-ಮಹಾಗಣಪತಯೇ ನಮೋ ನಮಃ ।
ಋದ್ಧಿ, ಬುದ್ಧಿ ಮತ್ತು ಶಕ್ತಿಯೊಂದಿಗೆ ಮಹಾಗಣಪತಿಗೆ ನಮಸ್ಕಾರಗಳನ್ನು ಸಲ್ಲಿಸುತ್ತೇನೆ.
ಮಹಾಗಣಪತಯೇ ನಮಃ. ಧ್ಯಾಯಾಮಿ.
ಮಹಾಗಣಪತಿಗೆ ನಮಸ್ಕಾರಗಳನ್ನು ಸಲ್ಲಿಸಿ, ಧ್ಯಾನಿಸುತ್ತೇನೆ.
ಮಹಾಗಣಪತಿಯನ್ನು ಮನಃಪೂರ್ವಕ ಸ್ಮರಿಸಿ ಕೈಜೋಡಿಸಿ ನಮಸ್ಕಾರಗಳನ್ನು ಸಲ್ಲಿಸಬೇಕು.
ಇದಾದ ನಂತರ ಶರೀರಶುದ್ಧಿಗಾಗಿ ೧೦ ಬಾರಿ ಶ್ರೀವಿಷ್ಣುವಿನ ಸ್ಮರಣೆಯನ್ನು ಮಾಡಬೇಕು. ಅಂದರೆ 9 ಬಾರಿ ‘ವಿಷ್ಣವೇ ನಮೋ’ ಹೇಳಿ, ಕೊನೆಯದಾಗಿ ‘ವಿಷ್ಣವೇ ನಮಃ’ ಎಂದು ಹೇಳಬೇಕು.
ಕಲಶಪೂಜೆ
ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ |
ನರ್ಮದೇ ಸಿಂಧುಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಅರ್ಥ: ಹೇ ಗಂಗಾ, ಯಮುನಾ, ಗೋದಾವರೀ, ಸರಸ್ವತೀ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳೇ, ಈ ನೀರಿನಲ್ಲಿ ನಿಮ್ಮ ವಾಸ್ತವ್ಯವಿರಲಿ.
ಕಲಶಾಯ ನಮಃ । (ಕಲಶಕ್ಕೆ ನಮಸ್ಕಾರಗಳನ್ನು ಸಲ್ಲಿಸುತ್ತೇನೆ)
ಕಲಶೇ ಗಂಗಾದಿತೀರ್ಥಾನ್ಯಾವಾಹಯಾಮಿ || (ಕಲಶದಲ್ಲಿ ಗಂಗಾದಿ ತೀರ್ಥಗಳನ್ನು ಆಹ್ವಾನಿಸುತ್ತೇನೆ)
ಕಲಶದೇವತಾಭ್ಯೋ ನಮಃ | (ಕಲಶ ದೇವತೆಗೆ ನಮಸ್ಕಾರಗಳನ್ನು ಸಲ್ಲಿಸುತ್ತೇನೆ)
ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ||
(ಎಲ್ಲ ರೀತಿಯ ಉಪಚಾರಗಳನ್ನು ಸಲ್ಲಿಸಲು ಗಂಧ, ಹೂವು ಮತ್ತು ಅಕ್ಷತೆಗಳನ್ನು ಅರ್ಪಿಸುತ್ತೇನೆ)
ಕಲಶಕ್ಕೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.
ಘಂಟೆಯ ಪೂಜೆ
ಆಗಮಾರ್ಥಂ ತು ದೇವಾನಾಂ ಗಮನಾರ್ಥಂ ತು ರಕ್ಷಸಾಮ್ |
ಕುರ್ವೇ ಘಂಟಾರವಂ ತತ್ರ ದೇವತಾಹ್ವಾನಲಕ್ಷಣಮ್ ||
ಅರ್ಥ: ದೇವತೆಗಳು ಬರಬೇಕು ಮತ್ತು ರಾಕ್ಷಸರು ತೊಲಗಬೇಕು, ಇದಕ್ಕಾಗಿ ದೇವತೆಗಳ ಆಗಮನವನ್ನು ಸೂಚಿಸುವ ಘಂಟಾನಾದ ಮಾಡುತ್ತೇನೆ.
ಘಂಟಾಯೈ ನಮಃ | (ಘಂಟೆಗೆ ನಮಸ್ಕಾರಗಳನ್ನು ಸಲ್ಲಿಸುತ್ತೇನೆ)
ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ಘಂಟೆಗೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು.
ದೀಪಪೂಜೆ
ಭೋ ದೀಪ ಬ್ರಹ್ಮರೂಪಸ್ತ್ವಂ ಜ್ಯೋತಿಷಾಂ ಪ್ರಭುರವ್ಯಯಃ ।
ಆರೋಗ್ಯಂ ದೇಹಿ ಪುತ್ರಾಂಶ್ಚ ಮತ: ಶಾನ್ತಿಂ ಪ್ರಯಚ್ಛ ಮೇ ।।
ದೀಪದೇವತಾಭ್ಯೋ ನಮಃ|
ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||
ಅರ್ಥ: ಹೇ ದೀಪದೇವತೆ, ನೀನು ಬ್ರಹ್ಮಸ್ವರೂಪ, ಎಲ್ಲ ಜ್ಯೋತಿಗಳ ಅವ್ಯಯನಾದಂತಹ (ನಾಶವಾಗದ) ಸ್ವಾಮಿ. ನೀನು ನನಗೆ ಆರೋಗ್ಯ, ಪುತ್ರಸೌಖ್ಯ, ಬುದ್ಧಿ ಮತ್ತು ಶಾಂತಿಯನ್ನು ಕೊಡು. ನಾನು ನಿನಗೆ ವಂದಿಸಿ ಎಲ್ಲ ಉಪಚಾರಗಳಿಗಾಗಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸುತ್ತೇನೆ. (ದೀಪ ದೇವತೆಗೆ ಅರಿಶಿನ ಕುಂಕುಮ ಅರ್ಪಿಸುವ ಪದ್ಧತಿಯೂ ಇದೆ.)
ಪೂಜಾಸಾಹಿತ್ಯ, ಪೂಜಾಸ್ಥಳ, ಹಾಗೆಯೇ ಸ್ವಂತದ (ಪೂಜಕನ) ಶುದ್ಧಿ
ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ತುಳಸೀ ದಳದಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.
ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||
ಅರ್ಥ: ಅಪವಿತ್ರ ಅಥವಾ ಯಾವುದೇ ಅವಸ್ಥೆಯಲ್ಲಿನ ಮನುಷ್ಯನು ಪುಂಡರೀಕಾಕ್ಷನ (ಶ್ರೀವಿಷ್ಣುವಿನ) ಸ್ಮರಣೆಯಿಂದ ಅಂತರ್ಬಾಹ್ಯ ಶುದ್ಧನಾಗುತ್ತಾನೆ.
ಈಗ ಶ್ರೀಕೃಷ್ಣನ ವಿಗ್ರಹ ಅಥವಾ ಚಿತ್ರಕ್ಕೆ ಮುಂದಿನ ಉಪಚಾರಗಳನ್ನು ಸಲ್ಲಿಸಬೇಕು. ಮೂರ್ತಿಯಿದ್ದರೆ ಮೂರ್ತಿಯ ಚರಣಗಳ ಮೇಲೆ ನೀರು ಬಿಡಬೇಕು, ಚಿತ್ರವಿದ್ದರೆ ಹರಿವಾಣದಲ್ಲಿ ನೀರು ಬಿಡಬೇಕು.
ಶ್ರೀಕೃಷ್ಣನ ಧ್ಯಾನ
ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ।
ಪ್ರಣತಕ್ಲೇಶನಾಶಾಯ ಗೋವಿನ್ದಾಯ ನಮೋ ನಮಃ ।।
ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ ।
ದೇವಕೀಪರಮಾನನ್ದಂ ಕೃಷ್ಣಂ ವನ್ದೇ ಜಗದ್ಗುರುಮ್ ।।
ವಸುದೇವನ ಪುತ್ರ ಕೃಷ್ಣನಿಗೆ, ಎಲ್ಲ ದುಃಖಗಳನ್ನು ದೂರ ಮಾಡುವ ಪರಮಾತ್ಮನಿಗೆ ಮತ್ತು ಶರಣಾದವರ ಸಂಕಷ್ಟಗಳನ್ನು ತೆಗೆದುಹಾಕುವ ಗೋವಿಂದನಿಗೆ ವಂದನೆಗಳು. ವಸುದೇವನ ಪುತ್ರ; ಹಾಗೆಯೇ ಕಂಸ ಚಾಣೂರ ಮುಂತಾದವರನ್ನು ವಧಿಸಿದ, ದೇವಕಿಗೆ ಪರಮಾನಂದ ನೀಡಿದ ಮತ್ತು ಸಂಪೂರ್ಣ ಜಗತ್ತಿಗೆ ಗುರುಸ್ಥಾನದಲ್ಲಿರುವ ಶ್ರೀಕೃಷ್ಣನ್ನು ನಾನು ನಮಸ್ಕರಿಸುತ್ತೇನೆ.
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಧ್ಯಾಯಾಮಿ ।
(ಭಗವಾನ್ ಶ್ರೀಕೃಷ್ಣನಿಗೆ ನಮಸ್ಕರಿಸಿ ಧ್ಯಾನಿಸುತ್ತೇನೆ.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಆವಾಹಯಾಮಿ ।
(ಭಗವಾನ್ ಶ್ರೀಕೃಷ್ಣನಿಗೆ ನಮಸ್ಕರಿಸಿ ಆಹ್ವಾನಿಸುತ್ತೇನೆ.)
(ಅಕ್ಷತೆಗಳನ್ನು ಅರ್ಪಿಸಬೇಕು)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಆಸನಾರ್ಥೇ ಅಕ್ಷತಾನ್ ಸಮರ್ಪಯಾಮಿ ।
(ಶ್ರೀಕೃಷ್ಣನ ಆಸೀನನಾಗಲು ಅಕ್ಷತೆಗಳನ್ನು ಅರ್ಪಿಸಬೇಕು.)
(ವಿಗ್ರಹವಿದ್ದರೆ ಅದನ್ನು ಹರಿವಾಣದಲ್ಲಿಟ್ಟು ಮುಂದಿನ ಉಪಚಾರಗಳನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಪಾದ್ಯಂ ಸಮರ್ಪಯಾಮಿ ।
(ಪಾದಗಳನ್ನು ತೊಳೆಯಲು ನೀರನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಅರ್ಘ್ಯಂ ಸಮರ್ಪಯಾಮಿ ।
(ಅರ್ಘ್ಯಕ್ಕಾಗಿ ನೀರನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಆಚಮನೀಯಂ ಸಮರ್ಪಯಾಮಿ ।
(ಆಚಮನಕ್ಕೆ ನೀರನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಸ್ನಾನಂ ಸಮರ್ಪಯಾಮಿ ।
(ಸ್ನಾನಕ್ಕಾಗಿ ನೀರನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಪಞ್ಚಾಮೃತಸ್ನಾನಂ ಸಮರ್ಪಯಾಮಿ ।
(ಪಂಚಾಮೃತದ ಸ್ನಾನ ಅರ್ಪಿಸಬೇಕು.)
(ಪಂಚಾಮೃತ ಅಥವಾ ಹಾಲಿನ ಅಭಿಷೇಕ ಮಾಡಿ, ನಂತರ ನೀರಿನ ಅಭಿಷೇಕ ಮಾಡಬೇಕು. ಉಳಿದ ಪಂಚಾಮೃತದ ನೈವೇದ್ಯ ತೋರಿಸಬೇಕು. ನಂತರ ಮತ್ತೆ ವಿಗ್ರಹದ ಮೇಲೆ ನೀರಿನ ಅಭಿಷೇಕ ಮಾಡಿ ವಿಗ್ರಹವನ್ನು ತೊಳೆದುಕೊಳ್ಳಬೇಕು. ಸ್ವಚ್ಛವಾದ ಬಟ್ಟೆಯಿಂದ ಒರೆಸಿ ನಂತರ ವಿಗ್ರಹವನ್ನು ಆಸನದ ಮೇಲಿರಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ವಸ್ತ್ರಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ವಸ್ತ್ರ ಅಂದರೆ ಬಟ್ಟೆಯನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಉಪವೀತಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ಯಜ್ಞೋಪವೀತ ಅಂದರೆ ಜನಿವಾರ ಅಥವಾ ಅಕ್ಷತೆಗಳನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಚನ್ದನಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ಗಂಧವನ್ನು ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಮಙ್ಗಲಾರ್ಥೇ ಹರಿದ್ರಾಂ ಸಮರ್ಪಯಾಮಿ ।
(ಅರಿಶಿನ ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಮಙ್ಗಲಾರ್ಥೇ ಕುಙ್ಕುಮಂ ಸಮರ್ಪಯಾಮಿ ।
(ಕುಂಕುಮ ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಅಲಙ್ಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ಅಂಲಂಕಾರಕ್ಕೆಂದು ಅಕ್ಷತೆಗಳನ್ನು ಅರ್ಪಿಸಬೇಕು)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಪೂಜಾರ್ಥೇ ಋತುಕಾಲೋದ್ಭವಪುಷ್ಪಾಣಿ ತುಲಸೀಪತ್ರಾಣಿ ಚ ಸಮರ್ಪಯಾಮಿ ।
(ಪ್ರಸ್ತುತ ಋತುವಿನಲ್ಲಿ ಸಿಗುವಂತಹ ಹೂವುಗಳು, ಹೂಮಾಲೆ, ತುಳಸಿ ಎಲೆಗಳನ್ನು, ತುಳಸಿ ಮಾಲೆಗಳನ್ನು ಅರ್ಪಿಸಬೇಕು.)
ಅಂಗ ಪೂಜೆ
(ಈ ಕೆಳಗಿನ ಮಂತ್ರಗಳನ್ನು ಹೇಳುತ್ತ, ಶ್ರೀಕೃಷ್ಣನ ಅಂಗಗಳ (ವಿವಿಧ ಅವಯವಗಳ) ಮೇಲೆ ಆದರೆ ಅವುಗಳನ್ನು ಮುಟ್ಟದೆ, ಅಕ್ಷತೆಗಳನ್ನು ಅರ್ಪಿಸಬೇಕು.)
ಶ್ರೀಕೃಷ್ಣಾಯ ನಮಃ । ಪಾದೌ ಪೂಜಯಾಮಿ ।
(ಭಗವಾನ ಶ್ರೀಕೃಷ್ಣನ ಚರಣಗಳ ಮೆಳೆ ಅಕ್ಷತೆ ಅರ್ಪಿಸಬೇಕು.)
ಸಙ್ಕರ್ಷಣಾಯ ನಮಃ । ಗುಲ್ಫೌ ಪೂಜಯಾಮಿ ।
(ಗುಲ್ಫಗಳ ಮೇಲೆ ಅಕ್ಷತೆ ಅರ್ಪಿಸಬೇಕು.)
ಕಾಲಾತ್ಮನೇ ನಮಃ । ಜಾನುನೀ ಪೂಜಯಾಮಿ ।
(ಮೊಣಕಾಲುಗಳ ಮೇಲೆ ಅಕ್ಷತೆ ಅರ್ಪಿಸಬೇಕು.)
ವಿಶ್ವಕರ್ಮಣೇ ನಮಃ । ಜಙ್ಘೇ ಪೂಜಯಾಮಿ ।
(ತೊಡೆಯ ಮೇಲೆ ಅಕ್ಷತೆ ಅರ್ಪಿಸಬೇಕು.)
ವಿಶ್ವನೇತ್ರಾಯ ನಮಃ। ಕಟಿಂ ಪೂಜಯಾಮಿ ।
(ಸೊಂಟದ ಮೇಲೆ ಅಕ್ಷತೆ ಅರ್ಪಿಸಬೇಕು.)
ವಿಶ್ವಕರ್ತ್ರೇ ನಮಃ । ಮೇಢ್ರಂ ಪೂಜಯಾಮಿ ।
(ಜನನೇಂದ್ರಿಯಗಳ ಮೇಲೆ ಅಕ್ಷತೆ ಅರ್ಪಿಸಬೇಕು.)
ಪದ್ಮನಾಭಾಯ ನಮಃ । ನಾಭಿಂ ಪೂಜಯಾಮಿ ।
(ಹೊಕ್ಕುಳಿನ ಮೇಲೆ ಅಕ್ಷತೆ ಅರ್ಪಿಸಬೇಕು.)
ಪರಮಾತ್ಮನೇ ನಮಃ । ಹೃದಯಂ ಪೂಜಯಾಮಿ ।
(ಹೃದಯದ ಮೇಲೆ ಅಕ್ಷತೆ ಅರ್ಪಿಸಬೇಕು.)
ಶ್ರೀಕಣ್ಠಾಯ ನಮಃ । ಕಣ್ಠಂ ಪೂಜಯಾಮಿ ।
(ಕಂಠಕ್ಕೆ ಅಕ್ಷತೆ ಅರ್ಪಿಸಬೇಕು.)
ಸರ್ವಾಸ್ತ್ರಧಾರಿಣೇ ನಮಃ । ಬಾಹೂ ಪೂಜಯಾಮಿ ।
(ಎರಡೂ ಕೈಗಳಿಗೆ ಅಕ್ಷತೆ ಅರ್ಪಿಸಬೇಕು.)
ವಾಚಸ್ಪತಯೇ ನಮಃ । ಮುಖಂ ಪೂಜಯಾಮಿ ।
(ವದನಕ್ಕೆ ಅಕ್ಷತೆ ಅರ್ಪಿಸಬೇಕು.)
ಕೇಶವಾಯ ನಮಃ । ಲಲಾಟಂ ಪೂಜಯಾಮಿ ।
(ಕಪಾಳಕ್ಕೆ ಅಕ್ಷತೆ ಅರ್ಪಿಸಬೇಕು.)
ಸರ್ವಾತ್ಮನೇ ನಮಃ । ಶಿರಃ ಪೂಜಯಾಮಿ ।
(ತಲೆಗೆ ಅಕ್ಷತೆ ಅರ್ಪಿಸಬೇಕು.)
ವಿಶ್ವರೂಪಿಣೇ ನಾರಾಯಣಾಯ ನಮಃ । ಸರ್ವಾಙ್ಗಂ ಪೂಜಯಾಮಿ ।
(ತಲೆಯಿಂದ ಚರಣಗಳ ವರೆಗೆ ಅಕ್ಷತೆ ಅರ್ಪಿಸಬೇಕು.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಧೂಪಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ಧೂಪವನ್ನು ಅರ್ಪಿಸಬೇಕು.)
(ಊದುಬತ್ತಿಯಿಂದ ಬೆಳಗಬೇಕು)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ದೀಪಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ನೀರಾಂಜನದಿಂದ ಆರತಿ ಬೆಳಗಬೇಕು)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ನೈವೇದ್ಯಾರ್ಥೇ ಪುರತಸ್ಥಾಪಿತ-ಪೃಥುಕಾದಿ-ಖಾದ್ಯೋಪಹಾರ-ನೈವೇದ್ಯಂ ನಿವೇದಯಾಮಿ ।
(ಶ್ರೀಕೃಷ್ಣನಿಗೆ ನೈವೇದ್ಯವನ್ನು ಅರ್ಪಿಸಬೇಕು.)
(ಮೊಸರವಲಕ್ಕಿಯಂತಹ ನೈವೇದ್ಯವನ್ನು ಅರ್ಪಿಸಬೇಕು)
ಬಲಗೈಯಲ್ಲಿ ೨ ತುಳಸಿ ಎಲೆಗಳನ್ನು ತೆಗೆದುಕೊಂಡು ಅವುಗಳ ಮೇಲೆ ನೀರನ್ನು ಹಾಕಬೇಕು. ನಂತರ ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ಎಲೆಗಳನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು. ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಥವಾ ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಬಲಗೈಯನ್ನು ನೈವೇದ್ಯದಿಂದ ಶ್ರೀಕೃಷ್ಣನ ದಿಕ್ಕಿನಲ್ಲಿ ತೆಗೆದುಕೊಂಡು ಹೋಗುತ್ತ ಮುಂದಿನ ಮಂತ್ರವನ್ನು ಪಠಿಸಬೇಕು.
ಪ್ರಾಣಾಯ ಸ್ವಾಹಾ ।
ಅಪಾನಾಯ ಸ್ವಾಹಾ ।
ವ್ಯಾನಾಯ ಸ್ವಾಹಾ ।
ಉದಾನಾಯ ಸ್ವಾಹಾ ।
ಸಮಾನಾಯ ಸ್ವಾಹಾ ।
ಬ್ರಹ್ಮಣೇ ಸ್ವಾಹಾ ।
ಕೈಯಲ್ಲಿರುವ ಒಂದು ಎಲೆಯನ್ನು ನೈವೇದ್ಯದ ಮೇಲೆ ಮತ್ತು ಇನ್ನೊಂದು ಎಲೆಯನ್ನು ಶ್ರೀಕೃಷ್ಣನ ಚರಣಗಳಲ್ಲಿ ಅರ್ಪಿಸಬೇಕು. ಅಂಗೈಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಮತ್ತು ಮುಂದಿನ ಪ್ರತಿಯೊಂದು ಮಂತ್ರದ ‘ಸಮರ್ಪಯಾಮಿ’ ಎಂದು ಹೇಳುವಾಗ ಆ ನೀರನ್ನು ಹರಿವಾಣದಲ್ಲಿ ಬಿಡಬೇಕು.
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ನೈವೇದ್ಯಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ನೈವೇದ್ಯವನ್ನು ಅರ್ಪಿಸುತ್ತೇನೆ.)
ಮಧ್ಯೇ ಪಾನೀಯಂ ಸಮರ್ಪಯಾಮಿ । (ಮಧ್ಯದಲ್ಲಿ ಕುಡಿಯಲು ನೀರು ಅರ್ಪಿಸುತ್ತೇನೆ)
ಉತ್ತರಾಪೋಶನಂ ಸಮರ್ಪಯಾಮಿ ।
ಹಸ್ತಪ್ರಕ್ಷಾಲನಂ ಸಮರ್ಪಯಾಮಿ । (ಕೈ ತೊಳೆಯಲು ನೀರು ಅರ್ಪಿಸುತ್ತೇನೆ)
ಮುಖಪ್ರಕ್ಷಾಲನಂ ಸಮರ್ಪಯಾಮಿ । (ಮುಖ ತೊಳೆಯಲು ನೀರು ಅರ್ಪಿಸುತ್ತೇನೆ)
ಕರೋದ್ವರ್ತನಾರ್ಥೇ ಚನ್ದನಂ ಸಮರ್ಪಯಾಮಿ । (ಕೈಗಳಿಗೆ ಹಚ್ಚಿಕೊಳ್ಳಲು ಚಂದನ ಅರ್ಪಿಸುತ್ತೇನೆ)
ಮುಖವಾಸಾರ್ಥೇ ಪೂಗೀಫಲತಾಮ್ಬೂಲಂ ಸಮರ್ಪಯಾಮಿ । (ಎಲೆಯಡಿಕೆ ಅರ್ಪಿಸುತ್ತೇನೆ)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಮಙ್ಗಲಾರ್ತಿಕ್ಯದೀಪಂ ಸಮರ್ಪಯಾಮಿ ।
ಶ್ರೀಕೃಷ್ಣನಿಗೆ ನಮಸ್ಕಾರಗಳನ್ನು ಅರ್ಪಿಸಿ ಮಂಗಳಾರತಿಯಿಂದ ಬೆಳಗಬೇಕು.
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಕರ್ಪೂರದೀಪಂ ಸಮರ್ಪಯಾಮಿ ।
ಶ್ರೀಕೃಷ್ಣನಿಗೆ ನಮಸ್ಕಾರಗಳನ್ನು ಅರ್ಪಿಸಿ ಕರ್ಪೂರದ ಆರತಿಯಿಂದ ಬೆಳಗಬೇಕು.
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ನಮಸ್ಕಾರಾನ್ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ನಮಸ್ಕಾರಗಳನ್ನು ಅರ್ಪಿಸುತ್ತೇನೆ.)
ಸಾಷ್ಟಾಂಗ ನಮಸ್ಕಾರ ಹಾಕಬೇಕು.
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಪ್ರದಕ್ಷಿಣಾಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ಪ್ರದಕ್ಷಿಣೆ ಹಾಕುತ್ತೇನೆ.)
ಎದೆಯ ಬಳಿ ಎರಡೂ ಕೈಗಳನ್ನು ನಮಸ್ಕಾರದ ಮುದ್ರೆಯಲ್ಲಿ ಜೋಡಿಸಬೇಕು ಮತ್ತು ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಮ್ಮ ಸುತ್ತಲೂ ಗೋಲಾಕಾರವಾಗಿ ತಿರುಗಿ ಪ್ರದಕ್ಷಿಣೆ ಹಾಕಬೇಕು.
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಮನ್ತ್ರಪುಷ್ಪಾಞ್ಜಲಿಂ ಸಮರ್ಪಯಾಮಿ ।
(ಶ್ರೀಕೃಷ್ಣನಿಗೆ ಮಂತ್ರಪುಷ್ಪಾಂಜಲಿಯನ್ನು ಅರ್ಪಿಸುತ್ತೇನೆ.)
ಅಂಗೈಯಲ್ಲಿ ಹೂವುಗಳನ್ನು ಹಿಡಿದು ಅರ್ಪಿಸಬೇಕು. ‘ರಾಜಾಧಿರಾಜಾಯ… |’ ಮಂತ್ರಪುಷ್ಪಾಂಜಲಿಯನ್ನು ತಿಳಿದವರು ಅದನ್ನು ಹೇಳಬಹುದು.
ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ ।
ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ ।।
ಮನ್ತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ ।
ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ।।
ಅರ್ಥ : ಭಗವಂತಾ, ನನಗೆ ನಿನ್ನ ಆವಾಹನೆ ಮತ್ತು ಅರ್ಚನೆ, ಹಾಗೆಯೇ ನಿನ್ನ ಪೂಜೆಯನ್ನು ಹೇಗೆ ಮಾಡಬೇಕು ಎಂಬುದೂ ತಿಳಿದಿಲ್ಲ. ಪೂಜೆಯನ್ನು ಮಾಡುವಾಗ ಏನಾದರೂ ತಪ್ಪಾಗಿದ್ದಲ್ಲಿ ನನ್ನನ್ನು ಕ್ಷಮಿಸು. ಹೇ ದೇವಾ, ನಾನು ಮಂತ್ರಹೀನ, ಕ್ರಿಯಾಹೀನ ಮತ್ತು ಭಕ್ತಿಹೀನನಾಗಿದ್ದೇನೆ. ನಾನು ಮಾಡಿದ ಪೂಜೆಯನ್ನು ನೀನು ಪರಿಪೂರ್ಣವಾಗಿಸಿಕೋ. ಹಗಲು ರಾತ್ರಿ ನನ್ನಿಂದ ತಿಳಿದೋ ಅಥವಾ ತಿಳಿಯದೆಯೋ ಸಹಸ್ರಾರು ಅಪರಾಧಗಳಾಗುತ್ತಿರುತ್ತವೆ. ‘ನಾನು ನಿನ್ನ ದಾಸನಾಗಿದ್ದೇನೆ’ ಎಂದು ಭಾವಿಸಿ ನನ್ನನ್ನು ಕ್ಷಮಿಸು.
ಕಾಯೇನ ವಾಚಾ ಮನಸೇನ್ದ್ರಿಯೈರ್ವಾ ಬುದ್ಧ್ಯಾತ್ಮನಾ ವಾ ಪ್ರಕೃತಿಸ್ವಭಾವಾತ್ ।
ಕರೋಮಿ ಯದ್ಯತ್ ಸಕಲಂ ಪರಸ್ಮೈ ನಾರಾಯಣಾಯೇತಿ ಸಮರ್ಪಯೇ ತತ್ ।।
ಅರ್ಥ : ಹೇ ನಾರಾಯಣಾ, ಶರೀರ, ವಾಣಿ, ಮನಸ್ಸು, ಇತರ ಇಂದ್ರಿಯಗಳು, ಬುದ್ಧಿ, ಆತ್ಮ ಅಥವಾ ಪ್ರಕೃತಿ ಸ್ವಭಾವಕ್ಕನುಗುಣವಾಗಿ ನಾನು ಏನೇನು ಮಾಡಿದ್ದೇನೆಯೋ, ಅವೆಲ್ಲವನ್ನೂ ನಿಮಗೆ ಅರ್ಪಿಸುತ್ತೇನೆ.
ಅನೇನ ಕೃತಪೂಜನೇನ ಶ್ರೀಕೃಷ್ಣಃ ಪ್ರೀಯನ್ತಾಮ್ ।
(ಈ ಪೂಜೆಯಿಂದ ಶ್ರೀಕೃಷ್ಣನು ಪ್ರಸನ್ನನಾಗಲಿ.)
ಹೀಗೆ ಹೇಳಿ ಬಲಗೈಯಿಂದ ಹರಿವಾಣದಲ್ಲಿ ನೀರು ಬಿಡಬೇಕು ಮತ್ತು ಎರಡು ಸಲ ಆಚಮನ ಮಾಡಬೇಕು.
ಚಂದ್ರಪೂಜೆ
ವೀಳ್ಯದೆಲೆಯ ಮೇಲೆ ಚಂದನದಿಂದ ಚಂದ್ರನ ಆಕೃತಿಯನ್ನು ಬಿಡಿಸಬೇಕು. ಮುಂದಿನ ಮಂತ್ರಗಳೊಂದಿಗೆ ಪೂಜೆ ಮಾಡಬೇಕು.
ಸೋಮೇಶ್ವರಾಯ ಸೋಮಾಯ ತಥಾ ಸೋಮೋದ್ಭವಾಯ ಚ ।
ಸೋಮಸ್ಯ ಪತಯೇ ನಿತ್ಯಂ ತುಭ್ಯಂ ಸೋಮಾಯ ವೈ ನಮಃ ।।
(ಅಮೃತದಂತೆ ಇರುವ ಸೋಮೇಶ್ವರ ಮತ್ತು ಸೋಮ (ಚಂದ್ರ), ಹಾಗೆಯೇ ಸೋಮನಿಂದ ಹುಟ್ಟಿದ ಸೋಮಪತಿ, ಹೇ ಚಂದ್ರ, ನಾನು ನಿನ್ನನ್ನು ಸದಾ ನಮಸ್ಕರಿಸುತ್ತೇನೆ.)
ಚನ್ದ್ರಮಸೇ ನಮಃ । ಧ್ಯಾಯಾಮಿ । ಸರ್ವೋಪಚಾರಾರ್ಥೇ ಗನ್ಧಾಕ್ಷತಪುಷ್ಪಂ ಸಮರ್ಪಯಾಮಿ ।
(ಚಂದ್ರನನ್ನು ಧ್ಯಾನಿಸಿ, ಎಲ್ಲ ಉಪಚಾರಗಳನ್ನು ಸಲ್ಲಿಸಲು ಗಂಧ, ಹೂವು ಮತ್ತು ಅಕ್ಷತೆಗಳನ್ನು ಅರ್ಪಿಸುತ್ತೇನೆ.)
ಮುಂದಿನ ಮಂತ್ರದೊಂದಿಗೆ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಬೇಕು.
(ಕೈಯಲ್ಲಿ ಗಂಧ, ಹೂವು, ಅಕ್ಷತೆ, ನೀರನ್ನು ತೆಗೆದುಕೊಳ್ಳಿ. ಮುಂದಿನ ಮಂತ್ರವನ್ನು ಹೇಳುತ್ತ, ದೇವರೆದುರಿಗೆ ಹರಿವಾಣದಲ್ಲಿ ಅವನ್ನು ಬಿಡಬೇಕು.)
ಕ್ಷೀರೋದಾರ್ಣವಸಮ್ಭೂತ-ಅತ್ರಿಗೋತ್ರಸಮುದ್ಭವ ।
ಗೃಹಾಣಾರ್ಘ್ಯಂ ಶಶಾಙ್ಕೇಶ ರೋಹಿಣೀಸಹಿತೋ ಮಮ ।।
(ಕ್ಷೀರಸಾಗರದಲ್ಲಿ ಉತ್ಪನ್ನವಾಗಿ, ಅತ್ರಿಗೋತ್ರದಲ್ಲಿ ಜನಿಸಿ, ರೋಹಿಣಿಯೊಂದಿಗಿರುವ ಚಂದ್ರನೇ ಈ ಅರ್ಘ್ಯವನ್ನು ಸ್ವೀಕರಿಸು.)
ಜ್ಯೋತ್ಸ್ನಾಪತೇ ನಮಸ್ತುಭ್ಯಂ ಜ್ಯೋತಿಷಾಂ ಪತಯೇ ನಮಃ ।
ನಮಸ್ತೇ ರೋಹಿಣೀಕಾನ್ತ ಅರ್ಘ್ಯಂ ನಃ ಪ್ರತಿಗೃಹ್ಯತಾಮ್ ।।
(ಹೇ ಜ್ಯೋತ್ಸ್ನಾಪತಿಯೇ, ನಾನು ನಿನ್ನನ್ನು ನಮಸ್ಕರಿಸುತ್ತೇನೆ. ಹೇ ರೋಹಿಣಿಪತಿ ಚಂದ್ರ, ನೀನು ಈ ಅರ್ಘ್ಯವನ್ನು ಸ್ವೀಕರಿಸು. ನಾನು ನಿನ್ನನ್ನು ನಮಸ್ಕರಿಸುತ್ತೇನೆ.)
ಚನ್ದ್ರಮಸೇ ನಮಃ । ಇದಮರ್ಘ್ಯಂ ದತ್ತಂ ನ ಮಮ ।
(ನಾನು ಚಂದ್ರನನ್ನು ನಮಸ್ಕರಿಸುತ್ತೇನೆ. ನಾನು ಈ ಅರ್ಘ್ಯವನ್ನು ನೀಡಿದ್ದೇನೆ. ಅದು ಇನ್ನು ನನ್ನದಲ್ಲ.)
ಶ್ರೀಕೃಷ್ಣನಿಗೆ ಅರ್ಘ್ಯವನ್ನು ನೀಡಬೇಕು.
(ಕೈಯಲ್ಲಿ ಗಂಧ, ಹೂವು, ಅಕ್ಷತೆ, ನೀರನ್ನು ತೆಗೆದುಕೊಳ್ಳಿ. ಮುಂದಿನ ಮಂತ್ರವನ್ನು ಹೇಳುತ್ತ, ದೇವರೆದುರಿಗೆ ಹರಿವಾಣದಲ್ಲಿ ಅವನ್ನು ಬಿಡಬೇಕು.)
ಜಾತಃಕಂಸವಧಾರ್ಥಾ ಯ ಭೂಭಾರೋತ್ತಾರಣಾಯ ಚ ।
ಪಾಣ್ಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ ।।
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ।
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ ।।
(ಕಂಸನನ್ನು ವಧಿಸಲು, ಭೂಮಿಯ ಮೇಲಿನ ದುಷ್ಟರ ಭಾರವನ್ನು ಕಡಿಮೆ ಮಾಡಲು, ಪಾಂಡವರ ಹಿತಕ್ಕಾಗಿ, ಧರ್ಮಸಂಸ್ಥಾಪನೆಗಾಗಿ, ಕೌರವರನ್ನು ಮತ್ತು ರಾಕ್ಷಸರನ್ನು ನಾಶಮಾಡಲು ಅವತರಿಸಿದ ಹರಿಯೇ ನಾನು ನೀಡಿದ ಈ ಅರ್ಘ್ಯವನ್ನು ಸ್ವೀಕರಿಸಿ.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಇದಮರ್ಘ್ಯಂ ದತ್ತಂ ನ ಮಮ ।
ತ್ರಾಹಿ ಮಾಂ ಸರ್ವಲೋಕೇಶ ಹರೇ ಸಂಸಾರಸಾಗರಾತ್ ।
ತ್ರಾಹಿ ಮಾಂ ಸರ್ವಪಾಪಘ್ನ ದುಃಖಶೋಕಾರ್ಣವಾತ್ಪ್ರಭೋ ।।
(ಹೇ ಸರ್ವ ಲೋಕಗಳ ಈಶ, ಈ ಸಂಸಾರ ಸಾಗರದಿಂದ ನನ್ನನ್ನು ರಕ್ಷಿಸು. ಸರ್ವ ಪಾಪಗಳನ್ನು ನಷ್ಟ ಮಾಡುವ ಶ್ರೀಕೃಷ್ಣ, ಈ ದುಃಖ ಮತ್ತು ಶೋಕ ಸಮುದ್ರದಿಂದ ನನ್ನನ್ನು ರಕ್ಷಿಸು.)
ಸರ್ವಲೋಕೇಶ್ವರ ತ್ರಾಹಿ ಪತಿತಂ ಮಾಂ ಭವಾರ್ಣವೇ ।
ತ್ರಾಹಿ ಮಾಂ ಸರ್ವದುಃಖಘ್ನ ರೋಗಶೋಕಾರ್ಣವಾದ್ಧರೇ ।।
(ಹೇ ಜಗದೀಶ, ಭವಸಾಗರದಲ್ಲಿ ಸಿಲುಕಿರುವ ನನ್ನನ್ನ ನೀನೇ ಪಾರು ಮಾಡು. ಎಲ್ಲ ದುಃಖಗಳ ಹರಣ ಮಾಡುವ ಶ್ರೀಕೃಷ್ಣ, ನೀನೇ ಈ ಭವಸಾಗರದಿಂದ ನನ್ನನ್ನ ರಕ್ಷಿಸು.)
ದುರ್ಗತಾಂಸ್ತ್ರಾಯಸೇ ವಿಷ್ಣೋ ಯೇ ಸ್ಮರನ್ತಿ ಸಕೃತ್ಸಕೃತ್ ।
ತ್ರಾಹಿ ಮಾಂ ದೇವದೇವೇಶ ತ್ವತ್ತೋ ನಾನ್ಯೋಸ್ತಿ ರಕ್ಷಿತಾ ।।
(ನಿನ್ನನ್ನು ಒಂದೇ ಒಂದು ಬಾರಿ ಸ್ಮರಿಸಿದವರನ್ನೂ ದುರ್ಗತಿಯಿಂದ ರಕ್ಷಿಸುವ ಹೇ ಪರಮೇಶ್ವರ. ಹೇ ದೇವಾಧಿದೇವಾ, ನಿನ್ನಂಥ ರಕ್ಷಕ ಇನ್ನೊಬ್ಬನಿಲ್ಲ, ನನ್ನನ್ನು ರಕ್ಷಿಸು.)
ಯದ್ವಾ ಕ್ವಚನಕೌಮಾರೇ ಯೌವನೇ ಯಚ್ಚವಾರ್ಧಕೇ ।
ತತ್ಪುಣ್ಯಂ ವೃದ್ಧೀಮಾಯಾತು ಪಾಪಂ ದಹ ಹಲಾಯುಧ ।।
(ನನ್ನ ಕೌಮಾರ್ಯದಲ್ಲಿ, ಯೌವನದಲ್ಲಿ ಮತ್ತು ವೃದ್ಧಾಪ್ಯದಲ್ಲಿ, ನಾನು ಮಾಡಿದ ಎಲ್ಲ ಪುಣ್ಯಗಳು ಹೆಚ್ಚಾಗಲಿ ಮತ್ತು ನನ್ನ ಪಾಪಗಳು ಸುಟ್ಟುಹೋಗಲಿ ಎಂದು ಹೇ ಹಲಾಯುಧಾ, ನಿನ್ನ ಚರಣಗಳಲ್ಲಿ ಪ್ರಾರ್ಥಿಸುತ್ತೇನೆ.)
ಓಂ ನಮೋ ಭಗವತೇ ವಾಸುದೇವಾಯ । ಶ್ರೀಕೃಷ್ಣಾಯ ನಮಃ । ಪ್ರಾರ್ಥನಾಂ ಸಮರ್ಪಯಾಮಿ ।
(ಶ್ರೀಕೃಷ್ಣನನ್ನು ಪ್ರಾರ್ಥಿಸುತ್ತೇನ.)
ಕೈಗಳನ್ನು ಜೋಡಿಸಿ, ಪ್ರಾರ್ಥನೆ ಮಾಡಿ ಮತ್ತು ದೇವರ ಕೃಪೆಯಿಂದ ಶ್ರೀಕೃಷ್ಣನ ಸೇವೆ ಮಾಡಲು ದೊರೆತ ಅವಕಾಶಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಕೊನೆಯದಾಗಿ, ಎರಡು ಬಾರಿ ಆಚಮನವನ್ನು ಮಾಡಬೇಕು.