ಭಾರತದಲ್ಲಷ್ಟೇ ಅಲ್ಲ, ಸಂಪೂರ್ಣ ವಿಶ್ವದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅರ್ಥಾತ್ ಶ್ರೀಕೃಷ್ಣ ಜಯಂತಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣಜನ್ಮಾಷ್ಟಮಿಯು ಒಂದು ಹಬ್ಬ, ವ್ರತ ಮತ್ತು ಉತ್ಸವವಾಗಿದೆ.
ಶ್ರೀಕೃಷ್ಣಜನ್ಮಾಷ್ಟಮಿಯ ಉತ್ಸವ : ಗೋಕುಲ, ಮಥುರಾ, ಬೃಂದಾವನ, ದ್ವಾರಕಾ, ಪುರಿ ಇವು ಶ್ರೀಕೃಷ್ಣನ ಉಪಾಸನೆಗೆ ಸಂಬಂಧಿಸಿದ ಪವಿತ್ರಸ್ಥಾನಗಳಾಗಿವೆ. ಇಲ್ಲಿ ಈ ಉತ್ಸವವನ್ನು ವಿಶೇಷ ರೂಪದಲ್ಲಿ ಆಚರಿಸಲಾಗುತ್ತದೆ. ಈ ದಿನ ಬೃಂದಾವನದಲ್ಲಿ ಡೋಲೋತ್ಸವವಾಗುತ್ತದೆ. ಅದು ನೋಡಲು ಆನಂದದಾಯಕವಾಗಿರುತ್ತದೆ. ಇತರ ಕ್ಷೇತ್ರಗಳ ಅನೇಕ ಸ್ಥಳಗಳಲ್ಲಿ ಶ್ರೀಕೃಷ್ಣನ ದೇವಾಲಯದಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಈ ದಿನ ಕೆಲವರು ತಮ್ಮ ಮನೆಯಲ್ಲಿಯೇ ಗೋಕುಲ-ಬೃಂದಾವನದಂತೆ ಪ್ರತಿರೂಪ ಮಾಡಿ ಶ್ರೀಕೃಷ್ಣನ ಜನ್ಮೋತ್ಸವವನ್ನು ಆಚರಿಸುತ್ತಾರೆ. ವೈಷ್ಣವ ಪಂಥೀಯರು ಈ ದಿನವನ್ನು ಅತೀವ ಭಕ್ತಿಭಾವದಿಂದ ಆಚರಿಸುತ್ತಾರೆ. ಅನೇಕ ವೈಷ್ಣವ ದೇವಾಲಯಗಳಲ್ಲಿ ದೀಪಾರಾಧನೆ, ಶೋಭಾಯಾತ್ರೆ, ಕೃಷ್ಣಲೀಲೆ, ಭಾಗವತ ಪಠಣ, ಕೀರ್ತನೆ, ಭಜನೆ, ನೃತ್ಯ-ಗಾಯನ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮವು ಶ್ರಾವಣ ಕೃಷ್ಣ ಪಾಡ್ಯದಿಂದ ಶ್ರಾವಣ ಕೃಷ್ಣಾಷ್ಟಮಿಯವರೆಗೂ ನಡೆಯುತ್ತದೆ.
ಶ್ರೀಕೃಷ್ಣಜನ್ಮಾಷ್ಟಮಿ ವ್ರತ : ಈ ವ್ರತವನ್ನು ಅಷ್ಟಮಿಯಂದು ಮಾಡಲಾಗುತ್ತದೆ ಮತ್ತು ಎರಡನೆಯ ದಿನ ಅರ್ಥಾತ್ ಶ್ರಾವಣ ಕೃಷ್ಣ ನವಮಿಯಂದು ಪಾರಾಯಣ ಮಾಡಿ ವ್ರತವನ್ನು ಸಂಪನ್ನಗೊಳಿಸುತ್ತಾರೆ. ಈ ವ್ರತವು ಎಲ್ಲರೂ ಮಾಡುವಂತಹದ್ದಾಗಿದೆ. ಈ ವ್ರತವನ್ನು ಮಕ್ಕಳು, ಯುವಕರು, ವೃದ್ಧರು, ಸ್ತ್ರೀ- ಪುರುಷರು ಎಲ್ಲರೂ ಮಾಡಬಹುದು. ಪಾಪನಾಶ, ಸೌಖ್ಯವೃದ್ಧಿ, ಸಂತತಿ-ಸಂಪತ್ತಿ ಮತ್ತು ವೈಕುಂಠ ಪ್ರಾಪ್ತಿಯು ಈ ವ್ರತದ ಫಲವಾಗಿದೆ.
ಶ್ರೀಕೃಷ್ಣಜನ್ಮಾಷ್ಟಮಿಯ ವ್ರತಕ್ಕೆ ಸಂಬಂಧಿಸಿದ ಉಪವಾಸ : ಈ ದಿನ ದಿನವಿಡೀ ಉಪವಾಸವನ್ನು ಮಾಡಲಾಗುತ್ತದೆ. ನಿರಾಹಾರ ಉಪವಾಸವು ಸಾಧ್ಯವಿಲ್ಲದಿದ್ದರೆ ಫಲಾಹಾರ ಮಾಡಬಹುದು. ಇದಕ್ಕೆ ಒಂದು ದಿನ ಮುಂಚೆ ಅರ್ಥಾತ್ ಶ್ರಾವಣ ಕೃಷ್ಣ ಸಪ್ತಮಿಯಂದು ಅಂಶಾತ್ಮಕ ಭೋಜನವನ್ನು ಮಾಡುತ್ತಾರೆ.
ಶ್ರೀಕೃಷ್ಣಜನ್ಮಾಷ್ಟಮಿಯ ಪೂಜಾವಿಧಿ : ಶ್ರೀಕೃಷ್ಣ ಜಯಂತಿಯಂದು ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಭಗವಾನ ಶ್ರೀಕೃಷ್ಣನು ಮಧ್ಯರಾತ್ರಿಯಲ್ಲಿ ಜನಿಸಿದ್ದನು. ಆದುದರಿಂದ ಶ್ರೀಕೃಷ್ಣನ ವಿಶೇಷ ಪೂಜೆಯನ್ನು ಮಧ್ಯರಾತ್ರಿಯಲ್ಲಿ ಮಾಡಲಾಗುತ್ತದೆ. ಮಧ್ಯರಾತ್ರಿ ಸ್ನಾನವನ್ನು ಮಾಡಿ ಪೂಜೆಯನ್ನು ಆರಂಭಿಸಲಾಗುತ್ತದೆ. ‘ಭಗವಾನ ಶ್ರೀಕೃಷ್ಣನ ಜನ್ಮವಾಗಿದೆ’ ಎಂಬ ಧಾರಣೆಯಿಂದ ಪೂಜೆಯನ್ನು ಮಾಡಬೇಕು.