ಢಾಕಾ – ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರಕಾರವನ್ನು ಪದಚ್ಯುತಗೊಳಿಸಿ ಮಧ್ಯಂತರ ಸರಕಾರವನ್ನು ಸ್ಥಾಪಿಸಿದ ನಂತರ ಬಾಂಗ್ಲಾದೇಶದಲ್ಲಿ ಹೊಸ ಬೇಡಿಕೆಗಳೊಂದಿಗೆ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ಆರಂಭವಾಗಿವೆ. ಬಾಂಗ್ಲಾದೇಶದಲ್ಲಿ, ಆಗಸ್ಟ್ 15ರಂದು ‘ಶೋಕ ದಿನ’ವನ್ನಾಗಿ ಆಚರಿಸಲು ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದರು. ರಾಜಧಾನಿ ಢಾಕಾದ ಶಹೀದ್ ಮಿನಾರ್‌ನಲ್ಲಿ ವಿವಿಧ ವಿದ್ಯಾರ್ಥಿ ಗುಂಪುಗಳ ಸಾವಿರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಈ ವೇಳೆ ‘ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ವಾಪಸ್ ದೇಶಕ್ಕೆ ಕರೆತಂದು ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಆಗ್ರಹಿಸಿದರು.
ಇಸ್ಲಾಮಿಕ್ ಆಧಾರದಲ್ಲಿ ಬಾಂಗ್ಲಾದೇಶದ ಇತಿಹಾಸವನ್ನು ಬರೆಯಲಾಗುವುದು ! – ಜಮಾತ್-ಎ-ಇಸ್ಲಾಮಿ
ಬಾಂಗ್ಲಾದೇಶದ ‘ಶೋಕ ದಿನ’ವನ್ನು ಬಹಿಷ್ಕರಿಸಿದ ಜಮಾತ್-ಎ-ಇಸ್ಲಾಮಿ ಸಂಘಟನೆಯ ವಿದ್ಯಾರ್ಥಿಗಳು, ಬಾಂಗ್ಲಾದೇಶದ ಹೊಸ ಇತಿಹಾಸವನ್ನು ಈಗ ಬರೆಯಲಾಗುವುದು ಮತ್ತು ಅದನ್ನು ಇಸ್ಲಾಮಿಕ್ ಆಧಾರದ ಮೇಲೆ ಗುರುತಿಸಲಾಗುವುದು ಎಂದು ಹೇಳಿದರು. ಈ ನಡುವೆ ಪ್ರತಿಭಟನಾಕಾರರು ಶೇಖ್ ಹಸೀನಾ ಅವರ ಮನೆಗೂ ಮುತ್ತಿಗೆ ಹಾಕಿದರು. ಹಲವೆಡೆ ಹಿಂಸಾಚಾರ ನಡೆದಿದ್ದು ಆವಾಮಿ ಕಾರ್ಯಕರ್ತರನ್ನು ಥಳಿಸಿರುವುದು ವರದಿಯಾಗಿದೆ.