Bangladesh Protest PM Resigns : ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ಪತ್ರ ನೀಡಿ ದೇಶ ತೊರೆದರು !

  • ಭಾರತದ ಮೂಲಕ ಲಂಡನ್‌ಗೆ ಹೋಗುವ ಮಾರ್ಗದಲ್ಲಿ ಶೇಖ್ ಹಸೀನಾ

  • ಮಧ್ಯಂತರ ಸರಕಾರ ರಚನೆಯಲ್ಲಿ ಬಾಂಗ್ಲಾದೇಶ ಸೇನೆ

  • ಹಿಂಸಾತ್ಮಕ ಪ್ರತಿಭಟನಾಕಾರರು ಪ್ರಧಾನಿ ನಿವಾಸಕ್ಕೆ ನುಗ್ಗಿ ಲೂಟಿ!

  • ಶೇಖ್ ಮುಜಿಬುರ್ ರೆಹಮಾನ್ ಪ್ರತಿಮೆ ಭಗ್ನ !

(ಬಲಬದಿಗೆ) ಶೇಖ್ ಹಸೀನಾ

ಢಾಕಾ (ಬಾಂಗ್ಲಾದೇಶ) – ಕಳೆದ ಹಲವಾರು ದಿನಗಳಿಂದ ಮೀಸಲಾತಿಯ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯು ಆಗಸ್ಟ್ 4 ರಂದು ಹಿಂಸಾತ್ಮಕ ತಿರುವು ಪಡೆದ ನಂತರ ಪ್ರಧಾನಿ ಶೇಖ್ ಹಸೀನಾ ಅವರು ಆಗಸ್ಟ್ 5 ರಂದು ರಾಷ್ಟ್ರಪತಿಗಳಿಗೆ ತಮ್ಮ ರಾಜೀನಾಮೆ ಪತ್ರವನ್ನು ಹಸ್ತಾಂತರಿಸಿ ಅವರ ಸಹೋದರಿ ರೆಹಾನಾ ಜೊತೆ ದೇಶ ತೊರೆದಿದ್ದಾರೆ. ಶೇಖ್ ಹಸೀನಾ ಬಾಂಗ್ಲಾದೇಶ ಸೇನೆಯ ವಿಮಾನದಲ್ಲಿ ಭಾರತದ ಮೂಲಕ ಲಂಡನ್‌ಗೆ ಪ್ರಯಾಣಿಸುತ್ತಿದ್ದಾರೆ. ಮತ್ತೊಂದೆಡೆ, ಶೇಖ್ ಹಸೀನಾ ದೇಶವನ್ನು ತೊರೆದ ನಂತರ, ಹಿಂಸಾತ್ಮಕ ಪ್ರತಿಭಟನಾಕಾರರು ಢಾಕಾದಲ್ಲಿರುವ ಪ್ರಧಾನಿ ನಿವಾಸಕ್ಕೆ ನುಗ್ಗಿ ಅಲ್ಲಿ ಲೂಟಿ ಮಾಡಲು ಪ್ರಾರಂಭಿಸಿದರು. ಹಸೀನಾ ಅವರ ತಂದೆ ಹಾಗೂ ಮಾಜಿ ಪ್ರಧಾನಿ ಶೇಖ್ ಮುಜಿಬುರ್ ರೆಹಮಾನ್ ಅವರ ಪ್ರತಿಮೆಯನ್ನೂ ಧ್ವಂಸಗೊಳಿಸಲಾಗಿದೆ. ಈ ಅವಧಿಯಲ್ಲಿ, ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಜ್-ಝಮಾನ್ ದೇಶವಾಸಿಗಳನ್ನು ಉದ್ದೇಶಿಸಿ ಘಟನೆಯ ಬಗ್ಗೆ ಮಾಹಿತಿ ನೀಡಿದರು. ಸೇನೆಯು ಮಧ್ಯಂತರ ಸರಕಾರವನ್ನು ರಚಿಸಲಿದೆ ಎಂದು ಅವರು ಘೋಷಿಸಿದರು. ಹಸೀನಾ ದೇಶವನ್ನು ತೊರೆಯುವ ಬಗ್ಗೆ ಜನರಲ್ ಜಮಾನ್ ಏನನ್ನೂ ಹೇಳಲಿಲ್ಲ.

ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ ಮನೆಗೆ ಮರಳಬೇಕು !

ದೇಶದಲ್ಲಿ ಕರ್ಫ್ಯೂ ಅಥವಾ ತುರ್ತು ಪರಿಸ್ಥಿತಿ ಹೇರುವ ಅಗತ್ಯವಿಲ್ಲ ಎಂದು ಜನರಲ್ ಜಮಾನ್ ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಉಂಟಾಗಿರುವ ಸಂದಿಗ್ಧತೆಯನ್ನು ಇಂದು (ಆ.5) ರಾತ್ರಿಯೊಳಗೆ ಬಗೆಹರಿಸುತ್ತೇವೆ. ಬಾಂಗ್ಲಾದೇಶದ ಪ್ರಸ್ತುತ ಪರಿಸ್ಥಿತಿಯ ಹಿನ್ನಲೆಯಲ್ಲಿ, ಸೇನೆಯು ಮಧ್ಯಂತರ ಸರಕಾರವನ್ನು ರಚಿಸುತ್ತದೆ. ದೇಶದಾದ್ಯಂತ ಭುಗಿಲೆದ್ದ ಹಿಂಸಾಚಾರದ ಸಂಪೂರ್ಣ ಜವಾಬ್ದಾರಿಯನ್ನು ಸೇನಾ ಮುಖ್ಯಸ್ಥನಾಗಿ ನಾನು ಹೊರುತ್ತೇನೆ. ಪ್ರತಿಭಟನೆ ಹಿಂಪಡೆಯಬೇಕು ಎಂಬುದು ಪ್ರತಿಭಟನಾಕಾರರಲ್ಲಿ ನನ್ನ ಮನವಿ ಎಂದು ಹೇಳಿದರು. ಕಳೆದ ಕೆಲವು ವಾರಗಳಲ್ಲಿ ದೇಶಾದ್ಯಂತ ನಡೆದ ಹತ್ಯೆಗಳ ಬಗ್ಗೆ ಸೇನೆಯು ತನ್ನದೇ ಆದ ತನಿಖೆ ನಡೆಸಲಿದೆ. ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳು ಪ್ರತಿಭಟನೆ ನಿಲ್ಲಿಸಿ ಮನೆಗೆ ಮರಳುವಂತೆ ಮನವಿ ಮಾಡಿದರು.

ಬಾಂಗ್ಲಾದೇಶ ಗಡಿಯಲ್ಲಿ ಭಾರತೀಯ ಸೇನೆ ಅಲರ್ಟ್

ಬಾಂಗ್ಲಾದೇಶದಲ್ಲಿ ಅಸ್ಥಿರತೆಯ ಹಿನ್ನೆಲೆಯಲ್ಲಿ ಗಡಿ ಭದ್ರತಾ ಪಡೆಗೆ ಬಾಂಗ್ಲಾದೇಶದ ಗಡಿಯಲ್ಲಿ ಕಟ್ಟೆಚ್ಚರ ವಹಿಸುವಂತೆ ಸೂಚಿಸಲಾಗಿದೆ. ಈ ಗಡಿಯಿಂದ ಭಾರತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ನಿರಾಶ್ರಿತರು ಬರುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಹಿಂದೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂತಹ ನಿರಾಶ್ರಿತರಿಗೆ ಸ್ವಾಗತವಿದೆ ಎಂದು ಹೇಳಿದ್ದರು. ಇದನ್ನು ಆಗಿನ ಪ್ರಧಾನಿ ಶೇಖ್ ಹಸೀನಾ ವಿರೋಧಿಸಿದ್ದರು.


ಏನಿದು ಪ್ರಕರಣ ?

ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಸರಕಾರವು ಸರಕಾರಿ ಉದ್ಯೋಗಗಳಲ್ಲಿ 1971 ರ ಯುದ್ಧ ವೀರರ ಸಂಬಂಧಿಕರಿಗೆ 30 ಪ್ರತಿಶತದಷ್ಟು ಸೀಟುಗಳನ್ನು ಮೀಸಲಿಡಲು ನಿರ್ಧರಿಸಿತ್ತು. ಇದಕ್ಕೆ ಯುವಕರಿಂದ ಸಾಕಷ್ಟು ವಿರೋಧ ವ್ಯಕ್ತವಾಗತೊಡಗಿತು. ಯುವಕರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ಒಂದು ತಿಂಗಳ ಹಿಂದೆ, ಈ ಪ್ರತಿಭಟನೆಯಲ್ಲಿ ಅನೇಕ ಜನರು ಸತ್ತರು. ಈ ವಿಷಯ ಸುಪ್ರೀಂ ಕೋರ್ಟ್‌ಗೆ ಹೋದಾಗ, ನ್ಯಾಯಾಲಯವು ಮೀಸಲಾತಿಯನ್ನು ಶೇಕಡಾ 30 ರಿಂದ 5 ಕ್ಕೆ ಇಳಿಸಿತು. ಅದರಲ್ಲಿ ಶೇ.3ರಷ್ಟು ಮಾತ್ರ ವೀರಯೋಧರ ಸಂಬಂಧಿಕರಿಗೆ ಮೀಸಲಾಗಿತ್ತು. ನಂತರ ಪೊಲೀಸರು ಮತ್ತು ಸರಕಾರಿ ಭದ್ರತಾ ಪಡೆಗಳ ದೌರ್ಜನ್ಯವನ್ನು ಪ್ರತಿಭಟಿಸಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಇದು ಆಗಸ್ಟ್ 4 ರಂದು ಮತ್ತೆ ಹಿಂಸಾಚಾರಕ್ಕೆ ಕಾರಣವಾಯಿತು ಮತ್ತು 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಸರಕಾರ ದೇಶಾದ್ಯಂತ ಅನಿರ್ದಿಷ್ಟಾವಧಿ ಕರ್ಫ್ಯೂ ಹೇರಿದ್ದರೂ ಮತ್ತೊಂದೆಡೆ ಆಕ್ರೋಶಗೊಂಡಿದ್ದ ಜನಸಮೂಹವು ಪ್ರತಿಭಟನಾ ಮೆರವಣಿಗೆಗಳನ್ನು ಆಯೋಜಿಸಿತ್ತು. ಶೇಖ್ ಹಸೀನಾ ಅವರ ರಾಜೀನಾಮೆಗೆ ಗುಂಪು ನಿರಂತರವಾಗಿ ಒತ್ತಾಯಿಸುತ್ತಿತ್ತು. ಅಂತಿಮವಾಗಿ, ಹಸೀನಾ ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದರು.

ಸಂಪಾದಕೀಯ ನಿಲುವು

ಭಾರತದ ನೆರೆಯ ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಮತ್ತು ಈಗ ಬಾಂಗ್ಲಾದೇಶದಲ್ಲಿ ಅಸ್ಥಿರ ರಾಜಕೀಯ ಪರಿಸ್ಥಿತಿಯನ್ನು ನೋಡಿದರೆ, ಭಾರತವು ಹೆಚ್ಚು ಜಾಗರೂಕರಾಗಿರಬೇಕು.