ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಛೀಮಾರಿ ಹಾಕಿದ ಬಾಂಗ್ಲಾದೇಶ !
ಢಾಕಾ (ಬಾಂಗ್ಲಾದೇಶ) – ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಗ್ಗೆ ನಮಗೆ ಗೌರವವಿದೆ. ಅವರೊಂದಿಗೆ ನಾವು ನಿಕಟ ಸಂಬಂಧವನ್ನು ಹೊಂದಿದ್ದೇವೆ; ಆದರೆ ಅವರು ಬಾಂಗ್ಲಾದೇಶದ ಬಗ್ಗೆ ನೀಡಿರುವ ಹೇಳಿಕೆ ಗೊಂದಲಮಯವಾಗಿದೆ. ಹೀಗಾಗಿ ನಾವು ಈ ಸಂದರ್ಭದಲ್ಲಿ ಭಾರತ ಸರ್ಕಾರಕ್ಕೆ ಪತ್ರ ಬರೆದಿದ್ದೇವೆ, ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವ ಹಸನ್ ಮಹಮೂದ್ ಅವರು ಮಾಹಿತಿ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿ ಮೀಸಲಾತಿ ಬಗ್ಗೆ ನಡೆದ ಹಿಂಸಾತ್ಮಕ ಘಟನೆಗಳ ಹಿನ್ನೆಲೆಯಲ್ಲಿ, “ಅಲ್ಲಿನ ಸಂತ್ರಸ್ತ ನಾಗರೀಕರಿಗಾಗಿ ನಮ್ಮ ಬಾಗಿಲು ತೆರೆದಿದ್ದು ಅವರು ಸಹಾಯ ಕೇಳಿದರೆ ಅವರಿಗೆ ಆಶ್ರಯ ನೀಡುತ್ತೇವೆ” ಎಂದು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಒಂದು ಸಭೆಯಲ್ಲಿ ಮಾತನಾಡುವಾಗ ಹೇಳಿದ್ದರು. ಈ ಬಗ್ಗೆ ಬಾಂಗ್ಲಾದೇಶದಿಂದ ಮೇಲಿನ ಪ್ರತಿಕ್ರಿಯೆ ವ್ಯಕ್ತಪಡಿಸಲಾಗಿದೆ.
ಬಾಂಗ್ಲಾದೇಶವು ಆಕ್ಷೇಪಿಸಿದ ನಂತರ, ಬಂಗಾಳ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಮಮತಾ ಬ್ಯಾನರ್ಜಿಯವರ ಹೇಳಿಕೆ ಕುರಿತು ರಾಜ್ಯ ಸರಕಾರದಿಂದ ವರದಿ ಕೇಳಿದ್ದಾರೆ. ‘ವಿದೇಶದಿಂದ ಬರುವ ಜನರಿಗೆ ಆಶ್ರಯ ನೀಡುವ ಭಾಷೆ ತುಂಬಾ ಗಂಭೀರವಾಗಿದ್ದು ಇದು ಸಾಂವಿಧಾನಿಕ ಉಲ್ಲಂಘನೆಯನ್ನು ಪ್ರತಿನಿಧಿಸುತ್ತದೆ’, ಎಂದು ರಾಜಭವನವು ಬಿಡುಗಡೆ ಮಾಡಿರುವ ಮನವಿಯಲ್ಲಿ ಹೇಳಲಾಗಿದೆ.