ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶ ತೀಸ್ತಾ ನದಿಗೆ ಸಂಬಂಧಿಸಿದ ಮಹತ್ವದ ಯೋಜನೆಗೆ ಚೀನಾದ ಬದಲು ಭಾರತವನ್ನು ಆಯ್ಕೆ ಮಾಡಿದೆ. 100 ಕೋಟಿ ಡಾಲರ್ ಮೊತ್ತದ ಈ ಯೋಜನೆಯನ್ನು ಭಾರತ ಪೂರ್ಣಗೊಳಿಸಲಿದೆ ಎಂದು ಪ್ರಧಾನಿ ಶೇಖ್ ಹಸೀನಾ ಘೋಷಿಸಿದ್ದಾರೆ. ಢಾಕಾದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹಸೀನಾ ಮಾತನಾಡಿ, ಚೀನಾ ಸಿದ್ಧವಾಗಿದೆ; ಆದರೆ ಭಾರತವು ಈ ಯೋಜನೆಯನ್ನು ಪೂರ್ಣಗೊಳಿಸಬೇಕು, ಎನ್ನುವುದು ನನ್ನ ಇಚ್ಛೆಯಾಗಿದೆ.’ ಎಂದು ಹೇಳಿದ್ದಾರೆ. ಬಾಂಗ್ಲಾದೇಶದ ಈ ನಿರ್ಣಯದಿಂದ ಭಾರತದ ಭದ್ರತೆಯ ಚಿಂತೆ ಕೊನೆಗೊಳ್ಳಲಿದೆ. ಇತ್ತೀಚೆಗೆ ಪ್ರಧಾನಿ ಶೇಖ್ ಹಸೀನಾ ಇವರು ಚೀನಾಕ್ಕೆ ಭೇಟಿ ನೀಡಿದ್ದರು. ಹೀಗಾಗಿ ‘ಈ ಯೋಜನೆ ಚೀನಾಕ್ಕೆ ಸಿಗುವುದು’ ಎಂಬ ಚರ್ಚೆ ನಡೆಯುತ್ತಿತ್ತು.
ಬಾಂಗ್ಲಾದೇಶವು ತೀಸ್ತಾ ನದಿಯ ನೀರಿನ ನಿರ್ವಹಣೆಯನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಲು ಬಯಸಿದೆ. 414 ಕಿಲೋಮೀಟರ್ ಉದ್ದದ ನದಿಯು ಭಾರತದಲ್ಲಿ ಹುಟ್ಟಿ ಬಾಂಗ್ಲಾದೇಶದ ಮೂಲಕ ಹರಿಯುತ್ತದೆ. ಬಾಂಗ್ಲಾದೇಶ ತೀಸ್ತಾ ನದಿಯ ನೀರನ್ನು ಸಂರಕ್ಷಿಸಿ, ಅದನ್ನು ಉತ್ತಮವಾಗಿ ನಿರ್ವಹಿಸಲು ಬಯಸುತ್ತದೆ. ಈ ಯೋಜನೆಯನ್ನು ಭಾರತವೇ ಬಾಂಗ್ಲಾದೇಶದ ಎದುರಿಗೆ ಪ್ರಸ್ತಾವನೆಯನ್ನು ಮಂಡಿಸಿತ್ತು.