Pakistan’s Minorities Condition: ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರ ಸ್ಥಿತಿ ಶೋಚನೀಯ – ಪಾಕ್ ಮಾನವ ಹಕ್ಕುಗಳ ಆಯೋಗ

ಇಸ್ಲಾಮಾಬಾದ್ (ಪಾಕಿಸ್ತಾನ) – ಎ.ಎನ್.ಐ. ಸುದ್ದಿ ಸಂಸ್ಥೆಯ ಪ್ರಕಾರ, ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗವು ಇತ್ತೀಚೆಗೆ ತನ್ನ ವಾರ್ಷಿಕ ವರದಿಯನ್ನು ಪ್ರಸಾರಮಾಡಿದೆ. ಈ ವರದಿಯಲ್ಲಿ ಪಾಕಿಸ್ತಾನದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ವಿವರಿಸಲಾಗಿದೆ. ಈ ವರದಿಯು ಅಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಸ್ಥಿತಿಯ ಮೇಲೆ ಬೆಳಕು ಚೆಲ್ಲಿದೆ. ಹಿಂದೂ ಮತ್ತು ಕ್ರಿಶ್ಚಿಯನ್ ಹುಡುಗಿಯರ ಬಲವಂತದ ಮತಾಂತರದ ಘಟನೆಗಳು, ಅಹ್ಮದೀಯ ಮುಸ್ಲಿಮರ ಮಸೀದಿಗಳ ಮೇಲಿನ ದಾಳಿಗಳು ಮತ್ತು ಆನ್‌ಲೈನ್ ಧರ್ಮನಿಂದೆಯ (ಪ್ರವಾದಿ ಮಹಮ್ಮದ ಪೈಗಂಬರ ಮತ್ತು ಕುರಾನ್‌ ಅವಮಾನ ಪ್ರಕರಣ) ಹೆಚ್ಚುತ್ತಿರುವ ಪ್ರಕರಣಗಳು ಮತ್ತು ಬಂಧಿತರ ವಿವರಗಳನ್ನು ವರದಿಯಲ್ಲಿ ನೊಂದಾಯಿಸಲಾಗಿದೆ. ಪಾಕಿಸ್ತಾನದಲ್ಲಿ ಧಾರ್ಮಿಕ ಅಸಹಿಷ್ಣುತೆಯನ್ನು ತೊಡೆದು ಹಾಕಲು ಮತ್ತು ಮಾನವ ಹಕ್ಕುಗಳನ್ನು ರಕ್ಷಿಸಲು ತುರ್ತು ಕ್ರಮವನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ ಎಂದು ವರದಿ ಹೇಳಿದೆ.

ಪಾಕಿಸ್ತಾನದಲ್ಲಿ ಅಹಮದೀಯರ ಮೇಲೆ ಸರ್ವಾಧಿಕಾರ!

ಪಾಕಿಸ್ತಾನದ ಅಲ್ಪಸಂಖ್ಯಾತರು, ವಿಶೇಷವಾಗಿ ಅಹ್ಮದಿ ಮುಸ್ಲಿಮರು, ಪಾಕಿಸ್ತಾನದಲ್ಲಿ ಅತ್ಯಂತ ಅಸುರಕ್ಷಿತರಾಗಿದ್ದಾರೆ. ಮುಸ್ಲಿಮ್ ಮತಾಂಧರು ಸಾಮಾನ್ಯವಾಗಿ ಸಮುದಾಯಗಳನ್ನು ಗುರಿಯಾಗಿಸುತ್ತಾರೆ. ಅಹ್ಮದಿಯರು ತಮ್ಮನ್ನು ತಾವು ‘ಮುಸ್ಲಿಮರು’ ಎಂದು ಪರಿಗಣಿಸಿದ್ದರೂ ಸಹ, 1974 ರಲ್ಲಿ ಪಾಕಿಸ್ತಾನದ ಸಂಸತ್ತು ಆ ಸಮುದಾಯದವರನ್ನು ‘ಮುಸ್ಲಿಮೇತರ’ ಎಂದು ಘೋಷಿಸಿತ್ತು. ಅಹ್ಮದೀಯರು ತಮ್ಮನ್ನು ತಾವು ಮುಸ್ಲಿಮರು ಎಂದು ಹೇಳಿಕೊಳ್ಳುವುದಷ್ಟೇ ಅಲ್ಲ ಅವರು ಇಸ್ಲಾಂ ಧರ್ಮದ ಕೆಲವು ಅಂಶಗಳನ್ನು ಅನುಸರಿಸುವುದನ್ನು ಸಹ ಅಲ್ಲಿ ನಿಷೇಧಿಸಲಾಗಿದೆ. 1953ರ ಲಾಹೋರ್ ಗಲಭೆಯಲ್ಲಿ ಅಹ್ಮದೀಯ ಸಮುದಾಯದ 200 ರಿಂದ 2 ಸಾವಿರ ಜನರು ಸಾವನ್ನಪ್ಪಿದ್ದರು ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದಲ್ಲಿ ಕೇವಲ ಶೇ.2ರಷ್ಟು ಹಿಂದೂಗಳು!

ಪಾಕಿಸ್ತಾನದಲ್ಲಿ ಮುಸ್ಲಿಮರ ನಂತರ, ಹಿಂದೂಗಳು ಅತಿದೊಡ್ಡ ಧಾರ್ಮಿಕ ಸಮುದಾಯವಾಗಿದೆ. ಆದಾಗ್ಯೂ, ಹಿಂದೂ ಜನಸಂಖ್ಯೆಯು ಪಾಕಿಸ್ತಾನದ ಜನಸಂಖ್ಯೆಯ ಶೇಕಡಾ 2.14 ಮಾತ್ರ ಇದೆ. (ಅಂದಾಜು 40 ಲಕ್ಷ 40 ಸಾವಿರ ಜನರು). ಉಮರ್‌ಕೋಟ್ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ಶೇ. 52.2ರಷ್ಟು ಮತ್ತು ಥರಪಾರಕರ ಜಿಲ್ಲೆಯಲ್ಲಿ 7 ಲಕ್ಷ 14 ಸಾವಿರ 698 ಹಿಂದೂಗಳು ವಾಸಿಸುತ್ತಾರೆ. ಪಾಕಿಸ್ತಾನದಲ್ಲಿ ಹಿಂದೂಗಳು ಮುಖ್ಯವಾಗಿ ಸಿಂಧ್‌ನಲ್ಲಿ ವಾಸಿಸುತ್ತಾರೆ, ಅಲ್ಲಿ ಹೆಚ್ಚಿನ ಹಿಂದೂಗಳ ವಸತಿಗಳಿವೆ.

ಭಾರತದ ವಿಭಜನೆಯ ಮೊದಲು 1941 ರ ಜನಗಣತಿಯ ಪ್ರಕಾರ, ಪಶ್ಚಿಮ ಪಾಕಿಸ್ತಾನದಲ್ಲಿ (ಈಗಿನ ಪಾಕಿಸ್ತಾನದಲ್ಲಿ) ಹಿಂದೂಗಳ ಜನಸಂಖ್ಯೆಯು ಶೇ.14.6 ರಷ್ಟಿತ್ತು, ಹಾಗೆಯೇ ಪೂರ್ವ ಪಾಕಿಸ್ತಾನದಲ್ಲಿ (ಈಗಿನ ಬಾಂಗ್ಲಾದೇಶದಲ್ಲಿ) ಶೇ.28 ರಷ್ಟು ಇತ್ತು. ಪಾಕಿಸ್ತಾನಕ್ಕೆ ಬ್ರಿಟಿಷರ ಆಳ್ವಿಕೆಯಿಂದ ಸ್ವಾತಂತ್ರ್ಯ ಸಿಕ್ಕ ನಂತರ, ಪಶ್ಚಿಮ ಪಾಕಿಸ್ತಾನದಿಂದ 47 ಲಕ್ಷ ಹಿಂದೂಗಳು ಮತ್ತು ಸಿಖ್ಖರು ಗಡಿದಾಟಿ ಭಾರತಕ್ಕೆ ಬಂದರು. ಅದರ ನಂತರ ನಡೆದ ಮೊದಲ ಜನಗಣತಿಯಲ್ಲಿ (ವರ್ಷ 1951ರಲ್ಲಿ), ಹಿಂದೂ ಜನಸಂಖ್ಯೆಯು ಪಶ್ಚಿಮ ಪಾಕಿಸ್ತಾನದ ಒಟ್ಟು ಜನಸಂಖ್ಯೆಯ ಶೇ. 1.6 ರಷ್ಟು ಮತ್ತು ಪೂರ್ವ ಪಾಕಿಸ್ತಾನದ ಶೇ. 22 ರಷ್ಟಿತ್ತು.

ಪಾಕಿಸ್ತಾನದಲ್ಲಿ ಇತರ ಅಲ್ಪಸಂಖ್ಯಾತರು ಮತ್ತು ಹಿಂದೂಗಳ ವಿರುದ್ಧ ಹಿಂಸಾಚಾರ ಮತ್ತು ತಾರತಮ್ಯದ ಅನೇಕ ಪ್ರಕರಣಗಳು ಬೆಳಕಿಗೆ ಬಂದಿವೆ. ಕಟ್ಟುನಿಟ್ಟಾದ ಧರ್ಮನಿಂದನೆ ಕಾನೂನಿಂದಾಗಿ ಹಿಂದೂಗಳ ಮೇಲಿನ ಹಿಂಸಾಚಾರ ಮತ್ತು ದೌರ್ಜನ್ಯ ಪ್ರಕರಣಗಳು ಮುನ್ನೆಲೆಗೆ ಬರುತ್ತಿವೆ.

ಪಾಕಿಸ್ತಾನದಲ್ಲಿ ಉಳಿದಿರುವುದು ಕೆಲವೇ ಸಾವಿರ ಸಿಖ್ಖರು ಉಳಿದಿದ್ದಾರೆ!

1941 ರ ಜನಗಣತಿಯ ಪ್ರಕಾರ, ಸಿಖ್ ಜನಸಂಖ್ಯೆಯು ಸರಿಸುಮಾರು 16 ಲಕ್ಷ 70 ಸಾವಿರಗಳಷ್ಟಿತ್ತು. ಸಿಖ್ಖರು ವಿಶೇಷವಾಗಿ ಪಶ್ಚಿಮ ಪಂಜಾಬ್‌ನಲ್ಲಿ ಕೇಂದ್ರೀಕೃತರಾಗಿದ್ದರು. ವಿಭಜನೆಯ ಸಮಯದಲ್ಲಿ ಪಾಕಿಸ್ತಾನದಲ್ಲಿ ನಡೆದ ಭೀಕರ ಗಲಭೆಯಿಂದಾಗಿ ಸಿಖ್ಖರ ಹೆಚ್ಚಿನ ಜನಸಂಖ್ಯೆಯು ಪಾಕಿಸ್ತಾನದ ಪಶ್ಚಿಮ ಪಂಜಾಬ್ ಅನ್ನು ತೊರೆದು ಭಾರತಕ್ಕೆ ಬಂದಿತು. ಪಾಕಿಸ್ತಾನದಲ್ಲಿ ಸಿಖ್ಖರ ಜನಸಂಖ್ಯೆಯ ಬಗ್ಗೆ ವಿವಿಧ ಅಭಿಪ್ರಾಯಗಳಿವೆ. ಪಾಕಿಸ್ತಾನ ಸರಕಾರದ ರಾಷ್ಟ್ರೀಯ ಅಂಕಿ –ಅಂಶಗಳು ಮತ್ತು ನೋಂದಣಿ ಪ್ರಾಧಿಕಾರದ ಪ್ರಕಾರ, 2012 ರಲ್ಲಿ ಪಾಕಿಸ್ತಾನದಲ್ಲಿ 6 ಸಾವಿರದ 146 ಸಿಖ್ಖರಿದ್ದರು. `ಸೆಂಟರ್ ಫಾರ್ ಸಿಖ್ ರಿಸೋರ್ಸಸ್ ಅಂಡ್ ಸ್ಟಡೀಸ’ ನ 2010ರ ಸಮೀಕ್ಷೆಯ ಪ್ರಕಾರ, ಪಾಕಿಸ್ತಾನದಲ್ಲಿ 50 ಸಾವಿರ ಸಿಖ್ಖರಿದ್ದರು. `ಯುಎಸ್ ಸ್ಟೇಟ್ ಡಿಪಾರ್ಟಮೆಂಟ್ ’ ಸೇರಿದಂತೆ ಇತರ ಮೂಲಗಳ ಪ್ರಕಾರ, ಪಾಕಿಸ್ತಾನದಲ್ಲಿ ಸಿಖ್ಖರ ಜನಸಂಖ್ಯೆಯು 20 ಸಾವಿರ ಎಂದು ಅಂದಾಜಿಸಲಾಗಿದೆ. ಇನ್ನು ಕೆಲವು ಅಂದಾಜಿನ ಪ್ರಕಾರ 20 ರಿಂದ 50 ಸಾವಿರ ಸಿಖ್ಖರಿರಬಹುದು ಎಂದು ಹೇಳಲಾಗಿದೆ. ಪಾಕಿಸ್ತಾನದ ಇತರ ಅಲ್ಪಸಂಖ್ಯಾತರಂತೆ ಸಿಖ್ಖರಿಗೂ ಕೂಡಾ ತಾರತಮ್ಯ ಮತ್ತು ಇತರ ಸವಾಲುಗಳನ್ನು ಎದುರಿಸಬೇಕಾಗುತ್ತದೆ.