ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜರಿವಾಲರ ಬಂಧನದ ಬಗ್ಗೆ ಅಮೇರಿಕಾ ದೇಶವು ಚಿಂತಿಸುವ ಕಾರಣವಿರಲಿಲ್ಲ; ಆದರೆ ಎಂದಿನಂತೆ ಅದು ಭಾರತದ ಆಂತರಿಕ ವ್ಯವಹಾರಗಳಲ್ಲಿ ತನ್ನ ಮೂಗನ್ನು ತೂರಿಸಿಯೇ ಬಿಟ್ಟಿದೆ ! ‘ಕೇಜರಿವಾಲರ ಘಟನೆಯಲ್ಲಿ ನಿಷ್ಪಕ್ಷ, ಪಾರದರ್ಶಕ ಮತ್ತು ತ್ವರಿತ ಕಾನೂನು ಪ್ರಕ್ರಿಯೆ ನಡೆಯಬೇಕು’, ಎಂದು ಅಮೇರಿಕಾ ತನ್ನ ಅಪೇಕ್ಷೆಯನ್ನು ವ್ಯಕ್ತಪಡಿಸಿದೆ. ಅಮೇರಿಕಾ ದೇಶಕ್ಕೆ ಕೇಜರಿವಾಲರ ಬಗ್ಗೆ ಇಷ್ಟ ಪ್ರೀತಿ ಉಕ್ಕಿ ಬರಲು ಕಾರಣವೇನು ? ಕೆಲವು ದಿನಗಳ ಹಿಂದೆ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ ಸೊರೆನ ಅವರನ್ನೂ ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿತ್ತು. ಆ ಸಮಯದಲ್ಲಿ ಮಾತ್ರ ಅಮೇರಿಕಾ ಸೊರೆನ ಇವರ ಪ್ರಕರಣದಲ್ಲಿ ನಿಷ್ಪಕ್ಷ, ಪಾರದರ್ಶಕ ಇತ್ಯಾದಿ ಪ್ರಕ್ರಿಯೆಯ ವಿಷಯದಲ್ಲಿ ಏನೂ ಮಾತನಾಡಿರಲಿಲ್ಲ. ಕೇಜರಿವಾಲರ ಹಗರಣದ ಮೊತ್ತವು ಸೊರೆನವರಿಗಿಂತ ಅಧಿಕವಿದೆ ಎನ್ನುವುದು ಅಮೇರಿಕೆಗೆ ತಿಳಿದಿದೆ. ಇದರಿಂದ ಭಾರತದಲ್ಲಿ ನಡೆಯುವ ಪ್ರತಿಯೊಂದು ಪ್ರಕರಣ ದಲ್ಲಿಯೂ ಅಮೇರಿಕಾ ಆಸಕ್ತಿ ಹೊಂದಿರುತ್ತದೆ ಎಂದೇನಿಲ್ಲ. ಯಾವ ಪ್ರಕರಣದಿಂದ ಅಮೇರಿಕೆಯ ಹಿತಾಸಕ್ತಿಗಳಿಗೆ ಧಕ್ಕೆಯಾಗ ಬಹುದೋ, ಅವುಗಳೆಡೆಗೆ ಅದು ಸೂಕ್ಷ್ಮವಾಗಿ ನಿಗಾ ಇಟ್ಟಿರುತ್ತದೆ ಎಂದು ನಾವು ಹೇಳಬಹುದು. ‘ಕೇಜರಿವಾಲರ ಬಂಧನದ ಬಳಿಕ ಅಮೇರಿಕಾ ಏಕೆ ಕಸಿವಿಸಿಗೊಂಡಿದೆ ?’ ಎಂದು ತಿಳಿದು ಕೊಳ್ಳಬೇಕಾಗಿದ್ದರೆ, ಅಮೇರಿಕಾ ಮತ್ತು ಕೇಜರಿವಾಲರ ನಡುವಿನ ಸಾಮ್ಯತೆಯನ್ನು ತಿಳಿದುಕೊಳ್ಳಬೇಕು. ಯಾವ ವಿಷಯಗಳು ಅಥವಾ ಸಮಸ್ಯೆಗಳಿಂದ ಭಾರತದ ಹಿತಕ್ಕೆ ಧಕ್ಕೆಯಾಗಬಹುದೋ, ಆ ವಿಷಯಗಳನ್ನು ಕೇಜರಿವಾಲ ಬೆಂಬಲಿಸಿದರು. ಕೃಷಿ ಕಾನೂನು, ಪೌರತ್ವ ತಿದ್ದುಪಡಿ ಕಾಯ್ದೆ (‘ಸಿ.ಎ.ಎ.’) ಇವು ಭಾರತೀಯರ ಒಳಿತಿಗೆ ಸಂಬಂಧಿಸಿತ್ತು; ಆದರೆ ಇದರಿಂದ ಕೇಜರಿವಾಲರಿಗೆ ಅಸೂಯೆಯುಂಟಾಯಿತು. ‘ಸಿಈ’ಅನ್ನು ವಿರೋಧಿಸುವ ಸಮಾಜ ವಿಧ್ವಂಸಕಾರಿಗಳ ಗುಂಪು, ಶಾಹೀನ್‌ಬಾಗ್‌ನಲ್ಲಿ ಗಟ್ಟಿಯಾಗಿ
ನೆಲೆಯೂರಿದಾಗ, ಕೇಜರಿವಾಲರು ಅವರಿಗೆ ಕೆಂಪು ಕಂಬಳಿ ಹಾಸಿದರು. ಅವರನ್ನು ವಿರೋಧಿಸುವ ಬದಲು ಅವರ ಹೇಳಿಕೆಗಳನ್ನು ಬೆಂಬಲಿಸಿದರು, ಇದೇ ವಿಷಯ ಕೃಷಿ ಕಾನೂನಿಗೆ ಆಗಿರುವ ವಿರೋಧದ ಸಮಯದಲ್ಲಿಯೂ ಕಂಡು ಬಂದಿತು. ಅಮೇರಿಕಾ ಕೂಡ ‘ಸಿಈ’ ಕೃಷಿ ಕಾನೂನುಗಳನ್ನು ವಿರೋಧಿಸಿದೆ. ಸದ್ಯ ಬೇರೆ ಉಪಾಯವಿಲ್ಲದಿರುವುದರಿಂದ ಅಮೇರಿಕಾ ಭಾರತದೊಂದಿಗೆ ಸೌಹಾರ್ದ ಸಂಬಂಧವನ್ನು ಸ್ಥಾಪಿಸಿದೆ; ಆದರೆ ಇದರಿಂದ ‘ಅಮೇರಿಕಾ ಭಾರತದ ಮಿತ್ರ ದೇಶ’ ಎಂದು ಹೇಳಲು ಸಾಧ್ಯವಿಲ್ಲ. ಆದುದರಿಂದ ಭಾರತವಿರೋಧಿ ಗುಂಪುಗಳ ಕುಣಿಕೆಯನ್ನು ಭಾರತ ಬಿಗಿ ಮಾಡತೊಡಗಿದಾಗ ಅದರಿಂದ ಅಮೇರಿಕೆಗೆ ತೊಂದರೆಯಾಗುತ್ತಿದೆ. ಈ ಎಲ್ಲ ಮಗ್ಗಲುಗಳನ್ನು ವಿಚಾರ ಮಾಡಿದಾಗ ಕೇಜರಿವಾಲ ಮತ್ತು ಮದ್ಯ ಹಗರಣ ಇವುಗಳಿಗೆ ಮಾತ್ರ ಚರ್ಚೆ ಸೀಮಿತಗೊಳ್ಳಬಾರದು. ‘ಇ.ಡಿ.ಯ ಕೆಲವು ಅಧಿಕಾರಿಗಳ ಮೊಬೈಲ್ ‘ಟ್ಯಾಪ್’ ಮಾಡುವ ಪ್ರಯತ್ನವನ್ನು ಆಪ್ ಸರಕಾರ ಮಾಡಿತ್ತು’, ಎನ್ನುವ ಮಾಹಿತಿ ಬಹಿರಂಗವಾಗಿದೆ. ‘ಭ್ರಷ್ಟಚಾರದ ವಿರುದ್ಧ ಪ್ರಬಲ ಧ್ವನಿ’ ಎಂದು ಕೇಜರಿವಾಲರು ತಮ್ಮ ಗುರುತನ್ನು ನಿರ್ಮಿಸಿದರು. ಯಾರು ಭ್ರಷ್ಟಚಾರವನ್ನು ಸಂಪೂರ್ಣವಾಗಿ ತೊಡೆದುಹಾಕಲು ರಾಜಕೀಯವನ್ನು ಪ್ರವೇಶಿಸಿದರೋ, ಆ ಪಕ್ಷದ ಅನೇಕ ಸಚಿವರು ಭ್ರಷ್ಟಚಾರದ ಪ್ರಕರಣದಲ್ಲಿ ಕಾರಾಗೃಹದಲ್ಲಿದ್ದಾರೆ. ಆಪ್ ವಿಷಯದಲ್ಲಿ ಬಹಿರಂಗವಾಗುತ್ತಿರುವ ಕಥೆಗಳಿಂದ ಪಕ್ಷಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಾರೊಂದಿಗಾದರೂ ಹಿತಸಂಬಂಧವಿದೆಯೇ ? ಎನ್ನುವುದನ್ನು ಪರಿಶೀಲಿಸುವ ಸಮಯ ಬಂದಿದೆ. ಈ ಪಕ್ಷದ ಮತ್ತು ಅದರ ನಾಯಕರ ‘ಮುಖ್ಯ ರೂವಾರಿ ಯಾರು ?’ ಎನ್ನುವುದೂ ಬಹಿರಂಗವಾಗಬೇಕಾಗಿದೆ.
ಭಾರತದ ಪಾತ್ರ ಮಹತ್ವದ್ದು !
ಜಾಗತಿಕ ರಾಜಕಾರಣದಲ್ಲಿ ತನ್ನ ಹಿಡಿತ ಯಾವತ್ತೂ ಮೇಲಿರಬೇಕು ಎಂದು ಅಮೇರಿಕಾ ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಅದು ಯಾವ ದೇಶದ ಆಂತರಿಕ ವಿಷಯಗಳಲ್ಲಿ ತನ್ನ ಮೂಗು ತೂರಿಸಿದೆಯೋ, ಆ ದೇಶ ವಿನಾಶವಾಗಿರುವ ಇತಿಹಾಸವೇ ಇದೆ. ಅಫಘಾನಿಸ್ತಾನ ಇದಕ್ಕೆ ತಾಜಾ ಉದಾಹರಣೆ ಯಾಗಿದ್ದರೆ, ಲೆಬನಾನ, ಸಿರಿಯಾ, ಇರಾನಗಳ ಉದಾಹರಣೆಯನ್ನು ಇಲ್ಲಿ ತೆಗೆದುಕೊಳ್ಳಬಹುದು. ರಶಿಯಾ ಯುದ್ಧಕ್ಕೆ ಕರೆ ನೀಡಿದಾಗ ಅಮೇರಿಕಾ ಉಕ್ರೇನ ದೇಶವನ್ನು ಯಾವ ರೀತಿ ಗಾಳಿಗೆ ತೂರಿತು ಎನ್ನುವುದು ಸಂಪೂರ್ಣ ಜಗತ್ತು ನೋಡಿದೆ. ಅಮೇರಿಕಾ ದೇಶಕ್ಕೆ ಭಾರತವನ್ನು ತನ್ನ ವಶದಲ್ಲಿಟ್ಟುಕೊಳ್ಳಬೇಕಾಗಿದೆ; ಆದರೆ ಅದು ಸಾಧ್ಯವಾಗದೇ ಇರುವುದರಿಂದ ಅದು ವಿವಿಧ ರೀತಿಯಲ್ಲಿ ಪ್ರಯತ್ನಗಳನ್ನು ಮಾಡುತ್ತಿರುವುದು ಕಂಡು ಬರುತ್ತಿದೆ. ಸದ್ಯದ ಸ್ಥಿತಿಯಲ್ಲಿ ಖಲಿಸ್ತಾನಿ ಭಯೋತ್ಪಾದಕರಿಗೆ ಅಮೇರಿಕಾ ನೀಡುತ್ತಿರುವ ಅಭಯವು, ಅದರ ಕುಟಿಲ ರಾಜನೀತಿಯ ಒಂದು ಭಾಗವಾಗಿದೆ. ಅಮೇರಿಕಾ ಪಾಕಿಸ್ತಾನದಲ್ಲಿ ನುಗ್ಗಿ ಒಸಾಮಾ ಬಿನ್ ಲಾಡೆನನನ್ನು ಹತ್ಯೆ ಮಾಡಿತು ಮತ್ತು ‘ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ,’ ಎಂದು ತೋರಿಸಿಕೊಟ್ಟಿತು. ಇದೇ ಅಮೇರಿಕಾ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನೂವಿನ ಸಂದರ್ಭದಲ್ಲಿ ಮಾತ್ರ ಭಾರತವನ್ನು ಪ್ರಶ್ನಿಸುತ್ತದೆ. ಇಷ್ಟ ಅಲ್ಲ, ಅಮೇರಿಕದಲ್ಲಿರುವ ಭಾರತದ ರಾಯಭಾರಿ ಕಛೇರಿಯ ಮೇಲೆ ಖಲಿಸ್ತಾನಿ ಭಯೋತ್ಪಾದಕರು ದಾಳಿ ನಡೆಸಿದಾಗ ಅಮೇರಿಕಾ ಅದರ ವಿರುದ್ಧ ನಿರ್ದಿಷ್ಟ ನಿಲುವನ್ನು ತೆಗೆದುಕೊಳ್ಳುವುದಿಲ್ಲ. ಅಮೇರಿಕಾ ಮನಸ್ಸು ಮಾಡಿದರೆ, ಅಲ್ಲಿರುವ ಖಲಿಸ್ತಾನವಾದಿಗಳಿಗೆ ಪೆಟ್ಟು ಕೊಡಲು ಸಾಧ್ಯವಿದೆ. ಆದರೆ ಅಮೇರಿಕ ಖಲಿಸ್ತಾನವಾದಿಗಳ ಹೆಗಲ ಮೇಲೆ ಬಂದೂಕು ಇಟ್ಟುಕೊಂಡು, ಭಾರತವನ್ನು ಅಶಾಂತಿಯಿಂದ ಇಡಲು ಇಚ್ಛಿಸುತ್ತದೆ. ಅಮೇರಿಕಾ ತನ್ನ ಭೂಮಿಯಲ್ಲಿ ಖಲಿಸ್ತಾನವಾದ ವನ್ನು ಪೋಷಿಸುತ್ತದೆ. ಖಲಿಸ್ತಾನವಾದಿಗಳ ವಿಷಯದಿಂದ ಕೆನಡಾ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳೊಂದಿಗೆ ಸೇರಿಕೊಂಡು ಅಮೇರಿಕಾ ಭಾರತದ ಮೇಲೆ ಅಂತಾರಾಷ್ಟ್ರೀಯ ಒತ್ತಡವನ್ನು ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದೆಯೆನ್ನುವುದು ತೆರೆದ ಕಣ್ಣಿಗೆ ಕಾಣಿಸುತ್ತಿರುವ ಸತ್ಯವಾಗಿದೆ.
ಜರ್ಮನಿಯು ಕೇಜರಿವಾಲರ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದಾಗ ಭಾರತ ಆಕ್ರಮಣಕಾರಿ ನಿಲುವು ತಳೆದು ಅದರ ಕಿವಿ ಹಿಂಡಿತು. ಅಮೇರಿಕಾ ಕೇಜರಿವಾಲರ ಸಂದರ್ಭದಲ್ಲಿ ಹೇಳಿಕೆ ನೀಡಿದಾಗ ಭಾರತವು ಭಾರತದಲ್ಲಿರುವ ಅಮೇರಿಕೆಯ ರಾಯಭಾರಿಯನ್ನು ಕರೆಸಿಕೊಂಡು ಬುದ್ಧಿ ಹೇಳಿತು. ಈ ಪ್ರಕರಣದಲ್ಲಿ ಭಾರತ ಅಧಿಕ ಆಕ್ರಮಣಕಾರಿ ನೀತಿಯನ್ನು ಅನುಸರಿಸುವುದೇ ? ಎನ್ನುವ ಕಡೆಗೆ ಎಲ್ಲರ ಗಮನವಿದೆ.
ಆಪ್ ಮತ್ತು ಖಲಿಸ್ತಾನಿ
ಆಪ್ ಮತ್ತು ಖಲಿಸ್ತಾನಿ ಇವರ ನಡುವಿನ ಸಂಬಂಧ ಈಗ ಬಹಿರಂಗವಾಗಿದೆ. ಕೇಜರಿವಾಲರ ಬಂಧನದ ಬಳಿಕ ಅಮೇರಿಕೆಯಲ್ಲಿ ವಾಸಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನೂ ಕೇಜರಿವಾಲರ ನಿಜಸ್ವರೂಪವನ್ನು ಬಹಿರಂಗಗೊಳಿಸಿದ್ದಾನೆ. ಅವನು ಆಪ್ ಸರಕಾರ ಸ್ಥಾಪನೆಗಾಗಿ ಕೇಜರಿವಾಲರಿಗೆ ೧೩೩ ಕೋಟಿ ರೂಪಾಯಿಗಳಷ್ಟು ಹಣ ನೀಡಿರುವುದಾಗಿ ಹೇಳಿದ್ದಾನೆ. ‘ಆಪ್ ಸರಕಾರ ಸ್ಥಾಪನೆಯಾದ ಬಳಿಕ ಬಂಧನದಲ್ಲಿರುವ ಭಯೋತ್ಪಾದಕ ದೇವಿಂದರ ಪಾಲ ಸಿಂಹ ಭುಲ್ಲರನನ್ನು ಬಿಡುಗಡೆಗೊಳಿಸುವುದಾಗಿ ಕೇಜರಿವಾಲರು ಖಲಿಸ್ತಾನವಾದಿಗಳಿಗೆ ಹೇಳಿದ್ದರು’, ಎಂದು ಪನ್ನೂ ಹೇಳಿದ್ದಾನೆ. ಪನ್ನೂ ಈ ಹೇಳಿಕೆಯನ್ನು ಬಹಿರಂಗವಾಗಿ ಹೇಳಿದ ಬಳಿಕವೂ ಆಪ್ ಪಕ್ಷದವರು ಯಾರೂ ಮುಂದೆ ಬಂದು ಈ ವಿಷಯವನ್ನು ಖಂಡಿಸಿಲ್ಲ. ಹಿಂದಿನ ಚುನಾವಣೆಯ ಸಮಯದಲ್ಲಿ ಪ್ರಸಾರ ಮಾಡುವಾಗ ಆಪ್ ಪಕ್ಷದವರು ಖಲಿಸ್ತಾನವಾದಿಗಳ ಮನೆಯಲ್ಲಿ ವಾಸ್ತವ್ಯ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಭಯೋತ್ಪಾದಕರೊಂದಿಗೆ ಸಂಬಂಧವಿರುವ ಪಕ್ಷವು ದೇಶದ ರಾಜಧಾನಿಯಲ್ಲಿ ಅಧಿಕಾರದಲ್ಲಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಆಪ್ ಪಕ್ಷದ ಒಂದರ ಹಿಂದೆ ಒಂದು ಹಗರಣಗಳು ಬಹಿರಂಗವಾಗುತ್ತಿರುವಾಗ ಅದನ್ನು ಈ ಮಗ್ಗುಲಿನಿಂದಲೂ ತನಿಖೆ ನಡೆದು ಸತ್ಯ ಬಹಿರಂಗವಾಗುವುದು ಆವಶ್ಯಕವಾಗಿದೆ.
ಕೇಜರಿವಾಲರ ಬಂಧನದ ಬಳಿಕ ಅಂತಾರಾಷ್ಟ್ರೀಯ ಸ್ತರದಲ್ಲಿ ಮೂಡಿರುವ ಪ್ರತಿಧ್ವನಿಯ ಹಿಂದೆ ಗೂಡಾರ್ಥವಿದೆ. ಕೇಜರಿವಾಲರನ್ನು ಆಳವಾಗಿ ವಿಚಾರಣೆ ನಡೆಸಿ, ಅವರೊಂದಿಗೆ ಅನೇಕ ದೇಶಗಳ ಅಥವಾ ಅಲ್ಲಿಯ ರಾಜಕಾರಣಿಗಳೊಂದಿಗೆ ಇರುವ ಹಿತಸಂಬಂಧ ಬಹಿರಂಗವಾದರೆ, ಆ ದೇಶದ ಅಪಕೀರ್ತಿಯಾಗುವ ಸಾಧ್ಯತೆಯಿದೆ. ಅದಾಗಬಾರದು ಎಂದು ಆ ದೇಶಗಳು ಭಾರತದ ಮೇಲೆ ಒತ್ತಡ ತರುತ್ತಿವೆಯೇ ? ಈ ಸಾಧ್ಯತೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಭಾರತವಿರೋಧಿ ಗುಂಪುಗಳನ್ನು ಮುಷ್ಟಿಯಲ್ಲಿಟ್ಟುಕೊಂಡು ಭಾರತವನ್ನು ಬಗ್ಗಿಸಲು ಪ್ರಯತ್ನಿಸುತ್ತಿರುವ ವಿದೇಶಿ ಶಕ್ತಿಗಳು ರಚಿಸಿರುವ ಷಡ್ಯಂತ್ರ ಬಹಿರಂಗವಾಗುವುದು ಆವಶ್ಯಕವಾಗಿದೆ.