ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಗಳ ಬಿಡುಗಡೆ; ಇದು ಭಾರತ ದೇಶದ ರಾಜತಾಂತ್ರಿಕ ವಿಜಯ !

ಬಿಡುಗಡೆಯಾದ ನೌಕಾದಳದ ಕೆಲವು ನಿವೃತ್ತ ಅಧಿಕಾರಿಗಳು

ಭಾರತೀಯ ನೌಕಾದಳದ ೮ ಜನ ಹಿರಿಯ ನಿವೃತ್ತ ಅಧಿಕಾರಿಗಳಿಗೆ ಕತಾರ್‌ನ ಪ್ರಥಮ ಹಂತದ ನ್ಯಾಯಾಲಯ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸಿರುವ ವಾರ್ತೆ ಕಳೆದ ವರ್ಷ ನವೆಂಬರ ತಿಂಗಳಲ್ಲಿ ಬೆಳಕಿಗೆ ಬಂದಿತ್ತು ಹಾಗೂ ದೇಶದಾದ್ಯಂತ ಚಿಂತೆಯ ವಾತಾವರಣ ನಿರ್ಮಾಣವಾಯಿತು. ಭಾರತದೊಂದಿಗೆ ಸುಮಾರು ೫೦ ವರ್ಷಗಳಿಂದ ರಾಜತಾಂತ್ರಿಕ ಹಾಗೂ ಉತ್ತಮ ವ್ಯಾಪಾರಿ ಸಂಬಂಧವಿರುವ ದೇಶ ಅನಿರೀಕ್ಷಿತವಾಗಿ ಇಂತಹ ಹೆಜ್ಜೆ ಇಟ್ಟಿರುವ ಕಾರಣ ಅನೇಕ ಜನರು ಆಶ್ಚರ್ಯವನ್ನೂ ವ್ಯಕ್ತಪಡಿಸಿದರು. ಅನಂತರ ಭಾರತ ಸರಕಾರ ಈ ಅಧಿಕಾರಿಗಳ ಬಿಡುಗಡೆಗಾಗಿ ತಕ್ಷಣ ಧೋರಣಾತ್ಮಕ ಪ್ರಯತ್ನವನ್ನು ಆರಂಭಿಸಿತು. ಭಾರತದ ವಿನಂತಿಗನುಸಾರ ನೌಕಾದಳದ ಈ ಮಾಜಿ ಅಧಿಕಾರಿಗಳ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಗೆ ಬದಲಾಯಿಸಲಾಯಿತು. ಅನಂತರ ಇತ್ತೀಚೆಗಷ್ಟೇ ಈ ೮ ಜನ ಅಧಿಕಾರಿಗಳು ಮುಕ್ತರಾಗಿ ತಮ್ಮ ದೇಶಕ್ಕೆ ಹಿಂತಿರುಗಿದ್ದಾರೆ. ಭಾರತಕ್ಕೆ ಬಂದ ನಂತರ ಈ ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗಳು ಮಹತ್ವದ್ದಾಗಿವೆ. ‘ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಈ ಪ್ರಕರಣದಲ್ಲಿ ಹಸ್ತಕ್ಷೇಪ ಮಾಡದೆ ಇರುತ್ತಿದ್ದರೆ, ನಮ್ಮ ಬಿಡುಗಡೆ ಅಸಾಧ್ಯವಾಗಿತ್ತು’ ಎಂದು ಈ ಅಧಿಕಾರಿಗಳು ಬಹಿರಂಗ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಅವರ ಬಿಡುಗಡೆಯು ಭಾರತದ ಕೂಟನೀತಿಯ ಹಾಗೂ ಮುತ್ಸದ್ದಿತನದ ದೊಡ್ಡ ವಿಜಯವಾಗಿದೆ.

ಭಾರತದ ವಿದೇಶ ವ್ಯವಹಾರ ನೀತಿ ಇತ್ತೀಚೆಗೆ ಒಂದು ವಿಭಿನ್ನ ಎತ್ತರಕ್ಕೆ ತಲುಪಿದೆ. ಈ ಘಟನೆ ಅದಕ್ಕೆ ಸಾಕ್ಷಿಯಾಗಿದೆ. ಇದರ ಕಾರಣ ಸಾಮಾನ್ಯವಾಗಿ ವಿದೇಶಗಳಲ್ಲಿ ಸಿಲುಕಿದ ನಾಗರಿಕರನ್ನು ಬಿಡಿಸಿಕೊಂಡು ಬರುವಂತಹ ‘ರೆಸ್ಕ್ಯೂ ಅಪರೇಶನ್’ ಜಾಗತಿಕ ಬಲಶಾಲಿಯಾಗಿರುವ ಅಮೇರಿಕಾದ ‘ಸೈಎ’ಯಂತಹ ಸಂಸ್ಥೆಗಳು ಮಾಡಿರುವುದನ್ನು ನಾವು ಇಂದಿನ ವರೆಗೆ ನೋಡಿದ್ದೇವೆ; ಆದರೆ ಭಾರತ ಕಳೆದ ಕೆಲವು ವರ್ಷಗಳಲ್ಲಿ ವಿದೇಶಗಳಲ್ಲಿ ಸಿಲುಕಿದ ಭಾರತೀಯರನ್ನು ಕೇವಲ ಸಂಕಟಕಾಲದಲ್ಲಿ ತನ್ನ ದೇಶಕ್ಕೆ ತಂದಿರು ವುದಷ್ಟೇ ಅಲ್ಲ, ಗೂಢಚಾರಿಕೆಯಂತಹ ಗಂಭೀರ ಆರೋಪದಲ್ಲಿ ಸಿಲುಕಿದ ಹಾಗೂ ಅವರಿಗೆ ಮರಣದಂಡನೆಯ ಶಿಕ್ಷೆ ವಿಧಿಸಿರುವಂತಹ ವ್ಯಕ್ತಿಗಳನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬಂದಿದೆ. ಇದು ಭಾರತದ ಬದಲಾಗಿರುವ ವಿದೇಶಾಂಗನೀತಿಯ ಪ್ರಭಾವ ಹೆಚ್ಚುತ್ತಿರುವುದರ ಸಂಕೇತವಾಗಿದೆ.

೧. ನೌಕಾದಳದ ನಿವೃತ್ತ ಅಧಿಕಾರಿಗಳ ಬಂಧನ ಹಾಗೂ ಬಿಡುಗಡೆಯ ಹಿಂದಿನ ಘಟನಾವಳಿಗಳು 

ನೌಕಾದಳದ ನಿವೃತ್ತ ಅಧಿಕಾರಿಗಳ ಬಿಡುಗಡೆ ಅಷ್ಟು ಸಹಜವಾಗಿ ಆಗಿಲ್ಲ. ಕತಾರ್‌ ರಾಜಾಶಾಹಿ ಪದ್ಧತಿಯಿಂದ ನಡೆಯುವ ಇಸ್ಲಾಮಿಕ್‌ ದೇಶವಾಗಿದೆ, ಈ ದೇಶದಲ್ಲಿ ಗೂಢಚಾರಿಕೆಯನ್ನು ಅತ್ಯಂತ ಗಂಭೀರ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸುಮಾರು ಒಂದು ವರ್ಷದ ಹಿಂದೆ ಕತಾರ್‌ನ ಗೂಢಚಾರ ಸಂಸ್ಥೆ ಭಾರತದ ಈ ನಿವೃತ್ತ ನೌಕಾದಳ ಅಧಿಕಾರಿಗಳನ್ನು ಅನಿರೀಕ್ಷಿತವಾಗಿ ತಮ್ಮ ವಶಕ್ಕೆ ತೆಗೆದುಕೊಂಡಿತ್ತು. ಈ ೮ ಜನ ಅಧಿಕಾರಿಗಳು ಸಬ್‌ಮರಿನ್‌ ವಿಕಸನಗೊಳಿಸುವ ಒಂದು ಯೋಜನೆಯಲ್ಲಿ ಕಾರ್ಯನಿರತರಾಗಿದ್ದರು. ಈ ಸಬ್‌ಮರಿನ್‌ನ ಗುಪ್ತ ಮಾಹಿತಿಯನ್ನು ಈ ಅಧಿಕಾರಿಗಳು ಇಸ್ರೈಲ್‌ಗೆ ನೀಡಿದ್ದಾರೆಂದು ಹೇಳುತ್ತಾ ಇಸ್ರೈಲ್‌ಗೆ ರಹಸ್ಯ ಮಾಹಿತಿ ನೀಡಿರುವ ಆರೋಪವನ್ನು ಅವರ ಮೇಲೆ ಹೇರಲಾಯಿತು ಹಾಗೂ ಅವರನ್ನು ತಕ್ಷಣ ಬಂಧಿಸಲಾಯಿತು. ಈ ವಿಷಯದಲ್ಲಿ ಭಾರತಕ್ಕೆ ಯಾವುದೇ ಕಲ್ಪನೆಯನ್ನು ನೀಡಲಿಲ್ಲ. ಆರೋಪ ಮಾಡಿದ ನಂತರ ಅವರಿಗೆ ಕಾನೂನು ಸಹಾಯ, ‘ಕೌನ್ಸಿಲರ್‌ ಎಕ್ಸೆಸ್’ (ವಕೀಲರೊಂದಿಗೆ ಚರ್ಚೆ ಮಾಡುವ ಅನುಮತಿ) ನೀಡಲಿಲ್ಲ.ಅನಂತರ ಅನಿರೀಕ್ಷಿತವಾಗಿ ಅಲ್ಲಿನ ಪ್ರಥಮ ಹಂತದ ನ್ಯಾಯಾಲಯ ಅವರಿಗೆ ಮರಣದಂಡನೆಯ ಶಿಕ್ಷೆಯನ್ನು ಘೋಷಿಸಿತು. ಪಶ್ಚಿಮ ಏಶಿಯಾದ ರಾಜಕಾರಣವನ್ನು ನೋಡಿದರೆ ಅಲ್ಲಿ ಇಸ್ಲಾಮಿಕ್‌ ದೇಶ ಹಾಗೂ ಇಸ್ರೈಲ್‌ ಎಂಬ  ಧ್ರುವೀಕರಣ ಪರಂಪರಾಗತವಾಗಿ ನಡೆಯುತ್ತಾ ಬಂದಿದೆ. ಇಸ್ರೈಲ್ನ್ನು ಅರಬ ರಾಷ್ಟ್ರಗಳ ‘ಪ್ರಮುಖ ಶತ್ರು ದೇಶ’ವೆಂದು ಗುರುತಿಸಲಾಗುತ್ತದೆ. ಇಂತಹ ದೇಶಕ್ಕಾಗಿ ಗೂಢಚಾರಿಕೆ ನಡೆಸಿದ ಆರೋಪ ಮಾಡಿರುವುದರಿಂದ ಅದರ ಗಾಂಭೀರ್ಯದ ಅರಿವಾಗುತ್ತದೆ; ಆದರೆ ಮರಣದಂಡನೆಯ ಶಿಕ್ಷೆ ವಿಧಿಸಿರುವುದರ ವಾರ್ತೆ ಬಂದ ನಂತರ ಭಾರತ ತಕ್ಷಣ ಈ ವಿಷಯದಲ್ಲಿ ಸಕ್ರಿಯವಾಯಿತು. ದುಬೈಯಲ್ಲಿ ‘ಕಾಪ್‌-೨೮’ ಪರಿಷತ್ತಿನಲ್ಲಿ ಪ್ರಧಾನಮಂತ್ರಿ ಮೋದಿ ಮತ್ತು ಕತಾರ್‌ನ ಆಮೀರ್‌ ಶೇಖ್‌ ತಮೀಮ್‌ ಬಿನ್‌ ಹಮಾದ ಅಲ್‌ ಇವರ ಭೇಟಿಯಾಯಿತು ಹಾಗೂ ನಂತರ ಕೆಲವೇ ತಿಂಗಳುಗಳಲ್ಲಿ ಈ ಅಧಿಕಾರಿಗಳ ಬಿಡುಗಡೆಯ ಆನಂದದ ಸುದ್ದಿಯೂ ಬಂದಿತು.

೨. ಕತಾರ್‌ನ ಪರಿಚಯವೆಂದರೆ ಭಯೋತ್ಪಾದಕರಿಗೆ ಪ್ರತ್ಯಕ್ಷ-ಪರೋಕ್ಷ ಬೆಂಬಲ ನೀಡುವ ದೇಶ !

ಕತಾರ್‌ನ ರಾಜ ಆಮೀರ್‌ ಇವರಿಗೆ ವರ್ಷದಲ್ಲಿ ೨ ಬಾರಿ ಗಂಭೀರ ಅಪರಾಧಿಗಳಿಗೆ ವಿಧಿಸಿದ ಶಿಕ್ಷೆಯನ್ನು ಕ್ಷಮಿಸುವ ಅಧಿಕಾರವಿದೆ. ಅದೇ ಅಧಿಕಾರದಲ್ಲಿ ಈ ೮ ಮಾಜಿ ನೌಕಾದಳ ಅಧಿಕಾರಿಗಳ ಶಿಕ್ಷೆಯನ್ನು ರದ್ದುಪಡಿಸಲಾಯಿತು ಹಾಗೂ ಅವರು ಸುಖವಾಗಿ ಭಾರತಕ್ಕೆ ಹಿಂದಿರುಗಿದ್ದಾರೆ. ಕತಾರ್‌ ಈ ದೇಶ ಇತ್ತೀಚೆಗೆ ಭಯೋತ್ಪಾದಕರಿಗೆ ಪ್ರತ್ಯಕ್ಷ-ಪರೋಕ್ಷ ಬೆಂಬಲ ನೀಡುವ ದೇಶವೆಂಬುದು ಚರ್ಚೆಯಲ್ಲಿದೆ. ಕತಾರ್‌ ಪಾಕಿಸ್ತಾನದಂತೆಯೆ ಅನೇಕ ಕುಖ್ಯಾತ ಅಪರಾಧಿಗಳಿಗೆ ನೆಲೆಬೀಡಾಗಿದೆ. ತಾಲಿಬಾನ್‌ ಅಥವಾ ಹಮಾಸ್‌ ಇವುಗಳಂತಹ ಅನೇಕ ಭಯೋತ್ಪಾದಕರ ಮುಖ್ಯಾಲಯಗಳು ಇಂದು ಕತಾರ್‌ನಲ್ಲಿ ಇವೆ. ಅಫ್ಘಾನಿಸ್ತಾನದಲ್ಲಿ ತಾಲೀಬಾನ್‌ ಸರಕಾರವನ್ನು ಸ್ಥಾಪಿಸುವ ಮೊದಲಿನ ಚರ್ಚೆ ಕತಾರ್‌ನ ರಾಜಧಾನಿ ದೋಹಾದಲ್ಲಿ ನಡೆದಿತ್ತು. ಸೌದಿ ಅರೇಬಿಯಾ, ಯುಎಇಯಂತಹ ದೇಶಗಳು ತಮ್ಮ ಧೋರಣೆಯನ್ನು ಬದಲಾಯಿಸಿ ಉದಾರತೆಯ ಕಡೆಗೆ ಹೋಗುತ್ತಿದ್ದರೆ, ಕತಾರ್, ತುರ್ಕಸ್ತಾನ ಈ ದೇಶಗಳು ಮಾತ್ರ ಮೂಲಭೂತವಾದದ ಕಡೆಗೆ ವಾಲುತ್ತಿವೆ.

೩. ನೌಕಾದಳದ ಮಾಜಿ ಅಧಿಕಾರಿಗಳ ಬಿಡುಗಡೆ ಹೇಗಾಯಿತು ? 

ಇಂತಹ ದೇಶದಲ್ಲಿ ಇಸ್ರೈಲ್‌ಗೆ ಸಹಾಯ ಮಾಡಿದ ಆರೋಪದಲ್ಲಿ ಬಂಧಿಸಲ್ಪಟ್ಟ ಅಧಿಕಾರಿಗಳ ಬಿಡುಗಡೆ ಮಾಡಿಸುವುದೆಂದರೆ, ಇದು ಸಿಂಹದ ದವಡೆಯಿಂದ ಬಿಡಿಸಿಕೊಂಡಂತೆ ಇದೆ. ಇದು ಹೇಗೆ ಸಾಧ್ಯವಾಯಿತು ? ಕಳೆದ ಒಂದು ದಶಮಾನದಲ್ಲಿ ಇಸ್ಲಾಮಿಕ್‌ ದೇಶಗಳೊಂದಿಗೆ ಭಾರತದ ಸಂಬಂಧ ಸುಧಾರಿಸಿದೆ. ಭಾರತ ಪೂರ್ವದಿಕ್ಕಿನ ದೇಶಗಳೊಂದಿಗೆ ಸಂಬಂಧವನ್ನು ಸುಧಾರಿಸಲು ೧೯೯೨ ರಲ್ಲಿ ‘ಲುಕ್‌ ಈಸ್ಟ್‌’ ಧೋರಣೆ (ದಕ್ಷಿಣ-ಪೂರ್ವ ಏಶಿಯಾದಲ್ಲಿನ ದೇಶಗಳೊಂದಿಗೆ ವ್ಯಾಪಕ ಸಂಬಂಧ) ತಂದಿತು ಹಾಗೂ ಮೋದಿ ಸರಕಾರದ ಅವಧಿಯಲ್ಲಿ ಅದರ ನಾಮಕರಣ ‘ಎಕ್ಟ್ ಈಸ್ಟ್‌’ ಧೋರಣೆ (ದಕ್ಷಿಣ-ಪೂರ್ವ ಏಶಿಯಾ ದೇಶಗಳೊಂದಿಗೆ ವ್ಯಾಪಕ ಸಂಬಂಧವನ್ನು ನಿರಂತರವಾಗಿ ದೃಢಪಡಿಸುವುದು) ಎಂದು ಮಾಡಲಾಯಿತು. ಈ ಮೂಲಕ ಭಾರತ ಈ ದೇಶಗಳೊಂದಿಗಿನ ಸಂಬಂಧವನ್ನು ಅತ್ಯಂತ ಉತ್ತಮ ರೀತಿಯಲ್ಲಿ ಸುಧಾರಣೆ ಮಾಡಿತು. ಅದೇ ರೀತಿ ಭಾರತ ಕೊಲ್ಲಿ ರಾಷ್ಟ್ರಗಳೊಂದಿಗೆ ಸಂಬಂಧವನ್ನು ಸುಧಾರಿಸಲು ‘ಲುಕ್‌ ವೆಸ್ಟ್‌’ ಧೋರಣೆ (ಪಶ್ಚಿಮ ಏಶಿಯಾ  ದೇಶಗಳೊಂದಿಗಿನ ಸಂಬಂಧವನ್ನು ದೃಢಪಡಿಸುವುದು) ಅವಲಂಬಿಸಿತು. ಇದರ ಮೂಲಕ ಭಾರತ ಈಗ ಆರ್ಥಿಕ ಹಾಗೂ ವ್ಯಾಪಾರಿ ಸಂಬಂಧವನ್ನು ದೃಢಪಡಿಸುತ್ತಾ ಅನೇಕ ಇಸ್ಲಾಮಿಕ್‌ ದೇಶಗಳಿಗೆ ರಕ್ಷಣೆಯ ದೃಷ್ಟಿಯಲ್ಲಿಯೂ ಪ್ರತ್ಯಕ್ಷ-ಪರೋಕ್ಷವಾಗಿ ಸಹಾಯ ನೀಡುತ್ತಿದೆ. ಈ ಪ್ರಕರಣದಲ್ಲಿ ಕತಾರ್‌ಗಾಗಿ ಕೆಲಸ ಮಾಡುವ ಕಂಪನಿ ಓಮಾನ್‌ನದ್ದಾಗಿತ್ತು. ಅವರಿಗೆ ನೌಕಾದಳದ ತರಬೇತಿ ನೀಡುವ ಕಾರ್ಯವನ್ನು ಈ ನೌಕಾದಳದ ಅಧಿಕಾರಿಗಳು ಮಾಡುತ್ತಿದ್ದರು. ಇಂತಹ ರಕ್ಷಣಾ ತರಬೇತಿ ನೀಡುವ ಕಾರ್ಯವನ್ನು ಇತ್ತೀಚೆಗೆ ಭಾರತ ಆರಂಭಿಸಿದೆ.

೪. ಇಸ್ಲಾಮೀ ರಾಷ್ಟ್ರಗಳಲ್ಲಿ ಭಾರತಕ್ಕೆ ಗೌರವದ ಸ್ಥಾನ ಹೇಗೆ ಸಿಕ್ಕಿತು ?

ಭಾರತ ಇಸ್ಲಾಮಿಕ್‌ ದೇಶಗಳ ಮೇಲೆ ಗಮನ ಹರಿಸುವುದರ ಕಾರಣವೆಂದರೆ ಭಾರತ ಅತೀ ಹೆಚ್ಚು ತೈಲ ಆಮದು ಮಾಡುವ ಜಗತ್ತಿನ ಮೂರನೆ ಕ್ರಮಾಂಕದ ದೇಶವಾಗಿದೆ ಹಾಗೂ ಕೊಲ್ಲಿಯ ಇಸ್ಲಾಮಿಕ್‌ ದೇಶಗಳು ಭಾರತಕ್ಕೆ ತೈಲ ಪೂರೈಕೆಯ ಮೂಲವಾಗಿವೆ. ಇನ್ನೊಂದು ಕಾರಣವೆಂದರೆ ಸದ್ಯ ೯೦ ಲಕ್ಷ ಭಾರತೀಯರು ಕೊಲ್ಲಿ ರಾಷ್ಟ್ರಗಳಲ್ಲಿದ್ದಾರೆ. ಅವರಿಂದ ಪ್ರತಿವರ್ಷ ೪೦ ಅಬ್ಜ ಡಾಲರ್ಸ್‌ನಷ್ಟು (೩ ಲಕ್ಷದ ೩೨ ಸಾವಿರ ಕೋಟಿ ರೂಪಾಯಿಗಳು) ‘ವಿದೇಶಿ ಹಣ ಭಾರತಕ್ಕೆ ಬರುತ್ತಿದೆ. ಆದ್ದರಿಂದ ಕೊಲ್ಲಿ ರಾಷ್ಟ್ರಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿವೆ. ಆದರೆ ದೀರ್ಘಕಾಲದ ವರೆಗೆ ಅವು ಭಾರತದ ವಿದೇಶ ಧೋರಣೆಯಿಂದ ದುರ್ಲಕ್ಷಿಸಲ್ಪಟ್ಟಿದ್ದವು. ಅದರ ಪರಿಣಾಮವೆಂದು ಪಾಕಿಸ್ತಾನದ ಅಪಪ್ರಚಾರಕ್ಕೆ ಈ ದೇಶಗಳು ಮೋಹಗೊಂಡು ಕಾಶ್ಮೀರದ ಸಮಸ್ಯೆಯ ವಿಷಯದಲ್ಲಿ ಈ ದೇಶಗಳಿಗೆ ನಕಾರಾತ್ಮಕ ಅಭಿಪ್ರಾಯವಿತ್ತು; ಆದರೆ ಈಗ ಪಾಶ್ಚಿಮಾತ್ಯ ಪ್ರಸಾರಮಾಧ್ಯಮಗಳು ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರ ಮೇಲೆ ಅನ್ಯಾಯ-ಅತ್ಯಾಚಾರ ಆಗುತ್ತಿದೆ ಎಂದು ಟೀಕೆ ಮಾಡುತ್ತಿವೆ ಹಾಗೂ ಇನ್ನೊಂದು ಕಡೆಯಲ್ಲಿ ಇಸ್ಲಾಮಿಕ್‌ ದೇಶಗಳು ಭಾರತವನ್ನು ಹೊಗಳುತ್ತಿರುವುದು ಕಾಣಿಸುತ್ತದೆ. ಈಗ ಈ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ ಸಾಕಷ್ಟು ಸುಧಾರಣೆ ಆಗಿದೆ. ಸಂಯುಕ್ತ ಅರಬ ಅಮಿರಾತ್‌ನಂತಹ (ಯುಎಇ) ದೇಶದೊಂದಿಗೆ ಭಾರತದ ವ್ಯಾಪಾರ ೯೦ ಅಬ್ಜ ಡಾಲರ್ಸ್‌ಗೆ (೭ ಲಕ್ಷದ ೪೭ ಸಾವಿರ ಕೋಟಿ ರೂಪಾಯಿಗಳು) ತಲುಪಿದೆ.

‘ಯುಎಇ’ಯಲ್ಲಿ ಜಗತ್ತಿನ ಅತೀ ದೊಡ್ಡ ಹಿಂದೂ ಮಂದಿರ ನಿರ್ಮಾಣವಾಗಿದೆ. ಇದನ್ನು ಭಾರತ ಹಾಗೂ ಇಸ್ಲಾಮಿಕ್‌ ರಾಷ್ಟ್ರಗಳ ಸಂಬಂಧ ಸುಧಾರಣೆಯಾಗಿರುವುದರ ಸಂಕೇತವೆಂದೇ ಹೇಳಬೇಕಾಗುತ್ತದೆ. ಇಸ್ಲಾಮಿಕ್‌ ದೇಶಗಳಿಂದ ಭಾರತದಲ್ಲಿನ ಹೂಡಿಕೆಯೂ ಹೆಚ್ಚುತ್ತಿದೆ. ಅವರ ಅನೇಕ ಯೋಜನೆಗಳಲ್ಲಿ ಭಾರತವನ್ನು ಸೇರಿಸಿಕೊಳ್ಳಲಾಗುತ್ತಿದೆ. ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ ಜಮ್ಮು-ಕಾಶ್ಮೀರದಲ್ಲಿನ ಕಲಮ್‌ ೩೭೦ (ಜಮ್ಮು-ಕಾಶ್ಮೀರಕ್ಕೆ ವಿಶೇಷ ರಾಜ್ಯದ ಸ್ಥಾನಮಾನ ನೀಡುವ ಕಲಮ್) ರದ್ದುಪಡಿಸುವ ನಿರ್ಣಯ ತೆಗೆದುಕೊಂಡಾಗ ೫೩ ಇಸ್ಲಾಮಿಕ್‌ ದೇಶಗಳ ಪೈಕಿ ೨-೩ ದೇಶಗಳ ಹೊರತುಪಡಿಸಿ ಇತರ ಯಾವುದೇ ದೇಶ ಭಾರತದ ವಿರುದ್ಧ ಮಾತನಾಡಲಿಲ್ಲ. ಭಾರತ ದೊಡ್ಡ ಪ್ರಮಾಣದಲ್ಲಿ ಮಾಡಿದ ರಾಜಕೀಯ ಹೂಡಿಕೆಯಿಂದಾಗಿ ಇದು ಸಾಧ್ಯವಾಗಿತ್ತು. ‘ಯುಎಇ’ಯ ಉದಾಹರಣೆ ನೋಡಿದರೆ ೨೦೧೫ ರಿಂದ ೨೦೨೪ ರ ವರೆಗೆ ಪ್ರಧಾನಮಂತ್ರಿ ಮೋದಿಯವರು ೭ ಸಲ ಈ ದೇಶಗಳಿಗೆ ಭೇಟಿ ನೀಡಿದ್ದಾರೆ. ಅವರು ಸೌದಿ ಅರೇಬಿಯಾಗೆ ೪ ಸಲಭೇಟಿ ನೀಡಿದ್ದಾರೆ. ಕತಾರ್‌ಗೆ ಅವರು ೨ ಸಲ ಭೇಟಿ ನೀಡಿದ್ದಾರೆ. ಈ ಹಿಂದೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಇಸ್ಲಾಮಿಕ್‌ ದೇಶಗಳಿಗೆ ಯಾರೂ ಯಾವತ್ತೂ ಭೇಟಿ ನೀಡಿರಲಿಲ್ಲ. ಅತ್ಯಂತ ಸುನಿಯೋಜಿತ ಪದ್ಧತಿಯಲ್ಲಿ ಈ ಸಂಬಂಧವನ್ನು ನಿರ್ಮಾಣ ಮಾಡಲಾಗಿದೆ. ಆದ್ದರಿಂದಲೇ ಈ ರಾಷ್ಟ್ರಗಳಲ್ಲಿ ಭಾರತದ ಮಾತಿಗೆ ಗೌರವ ಸಿಗುತ್ತಿದೆ.

‘ಆರ್ಗನೈಝೇಶನ್‌ ಆಫ್‌ ಇಸ್ಲಾಮಿಕ್‌ ಕಾನ್ಫರನ್ಸ್‌’ (ಓಐಸಿ) ಈ ಸಂಘಟನೆ ಈ ಹಿಂದೆ ನಿರಂತರವಾಗಿ ಭಾರತವನ್ನು ಟೀಕಿಸುತ್ತಿತ್ತು. ಪಾಕಿಸ್ತಾನದ ಸಮರ್ಥನೆಗಾಗಿ ವಿಶ್ವ ಸಂಸ್ಥೆಯಲ್ಲಿ ಭಾರತದ ವಿರುದ್ಧದ ಠರಾವ್‌ಗಳಲ್ಲಿ ಈ ದೇಶಗಳು ಭಾಗವಹಿಸು ತ್ತಿದ್ದವು; ಆದರೆ ಈ ಸಂಘಟನೆಗಳು ಇತ್ತೀಚೆಗೆ ಅಪ್ಪಿತಪ್ಪಿಯೂ ಪಾಕಿಸ್ತಾನದ ಪರವಾಗಿರುವುದು ಕಾಣಿಸುವುದಿಲ್ಲ. ತದ್ವಿರುದ್ಧ ಭಾರತದ ಪರವಾಗಿ ಈ ಸಂಘಟನೆಗಳು ನಿರ್ಣಯ ತೆಗೆದು ಕೊಳ್ಳುತ್ತಿವೆ. ಇದರ ಒಂದು ಕಾರಣವೆಂದರೆ ಈ ದೇಶಗಳಲ್ಲಿ ಭಾರತೀಯರು ದೊಡ್ಡ ಪ್ರಮಾಣದಲ್ಲಿದ್ದು ಅಲ್ಲಿನ ವಿಕಾಸದಲ್ಲಿ ಅವರ ಯೋಗದಾನ ಹೆಚ್ಚುತ್ತಿದೆ. ಅದರ ಜೊತೆಗೆ ಈ ದೇಶ ಗಳೊಂದಿಗೆ ಭಾರತದ ಸಂಬಂಧ ಸುಧಾರಣೆಯಾಗುತ್ತಿದೆ. ಭಾರತದ ಅಂತಾರಾಷ್ಟ್ರೀಯ ಪ್ರಭಾವ ಈ ದೇಶಗಳಲ್ಲಿ ಹೆಚ್ಚುತ್ತಿದೆ. ಕತಾರದಲ್ಲಿನ ಬಿಡುಗಡೆಯಲ್ಲಿ ಇದರ ಸ್ಪಷ್ಟ ಪ್ರತಿಬಿಂಬ ಕಾಣಿಸುತ್ತಿದೆ, ಎಂದು ಹೇಳಬೇಕಾಗುತ್ತದೆ.

೫. ಭಾರತಕ್ಕೆ ಇತರರ ಮೇಲೆ ಒತ್ತಡ ಹೇರುವ ಸಾಮರ್ಥ್ಯ ಅಧಿಕಾರದ ಅಳತೆ, ಇದನ್ನು ೨ ಪದ್ಧತಿಗಳಲ್ಲಿ ಅಳೆಯಲಾಗುತ್ತದೆ.

ಮೊದಲನೆಯದ್ದು, ಇತರರು ಒತ್ತಡ ಹೇರಿದಾಗ ಅದನ್ನು ಯಾವ ಮಿತಿಯ ತನಕ ತಡೆಯಲಾಗುತ್ತದೆ, ಇದರ ಮೇಲಿನಿಂದ ಅಧಿಕಾರದ ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ. ಇನ್ನೊಂದು ಬೇರೆಯವರ ಮೇಲೆ ಒತ್ತಡ ಹೇರಿ ನಿಮಗೆ ಬೇಕಾದುದನ್ನು ಎಷ್ಟು ಪ್ರಮಾಣದಲ್ಲಿ ಮಾಡಿಸಿಕೊಳ್ಳಬಲ್ಲಿರಿ, ಇದು ಕೂಡ ಸಾಮರ್ಥ್ಯವನ್ನು ಅಳೆಯುವ ಪದ್ಧತಿಯಾಗಿದೆ. ಇಷ್ಟರವರೆಗೆ ಇತರರು ಹಾಕಿರುವ ಒತ್ತಡವನ್ನು ತಡೆಯುವಷ್ಟು ಭಾರತದ ಸಾಮರ್ಥ್ಯ ಸೀಮಿತವಾಗಿತ್ತು; ಆದರೆ ಈಗ ಇತರರ ಮೇಲೆ ಒತ್ತಡ ಹೇರಿ ತನ್ನ ಇಚ್ಛೆಗನುಸಾರ ಅವರು ವರ್ತಿಸುವಂತೆ ಮಾಡುವ ಸಾಮರ್ಥ್ಯವನ್ನು ಭಾರತ ತೋರಿಸಲು ಪ್ರಾರಂಭಿಸಿದೆ ಹಾಗೂ ಅದು ಯಶಸ್ವಿಯಾಗುತ್ತಿದೆ. ಕತಾರ ಪ್ರಕರಣದ ಅನ್ವಯಾರ್ಥ ಇದೇ ಆಗಿದೆ. ಭಾರತದ ಮುತ್ಸದ್ದಿತನ, ಇಸ್ಲಾಮಿಕ್‌ ದೇಶಗಳೊಂದಿಗಿನ ಆತ್ಮೀಯತೆ ಹಾಗೂ ಎಲ್ಲಕ್ಕಿಂತ ಮಹತ್ವದ್ದೆಂದರೆ ಪ್ರಧಾನಮಂತ್ರಿ ಮೋದಿಯವರ ‘ಪ್ರಭಾವ’ದ ವಿಜಯವೆಂದೇ ಇದನ್ನು ನೋಡಬೇಕಾಗುತ್ತದೆ.

– ಡಾ. ಶೈಲೇಂದ್ರ ದೇವಳಾಣಕರ್, ವಿದೇಶ ಧೋರಣೆಯ ವಿಶ್ಲೇಷಕರು

(ಆಧಾರ : ಡಾ. ಶೈಲೇಂದ್ರ ದೇವಳಾಣಕರ್‌ ಇವರ ಫೇಸ್‌ ಬುಕ್‌ ಖಾತೆ)