ಸರಕಾರದಿಂದ ಜನರ ಹಣದ ‘ದರೋಡೆ’ !

ಕಳೆದ ಕೆಲವು ದಿನಗಳಿಂದ ಕರ್ನಾಟಕ ಸರಕಾರದ ವಿವಿಧ ಸಚಿವರು ‘ಕೇಂದ್ರ ಸರಕಾರ ನಮಗೆ ನಿಧಿ ಪೂರೈಸದ ಕಾರಣ ರಾಜ್ಯದ ವಿಕಾಸ ಮಾಡಲು ಸಾಧ್ಯವಿಲ್ಲ’, ಎಂದು ಬೊಬ್ಬೆ ಹೊಡೆಯುತ್ತಿದ್ದಾರೆ ಹಾಗೂ ಬಾಕಿ ಎಷ್ಟು ಬರಬೇಕು ಎಂಬುದರ ಲೆಕ್ಕಾಚಾರವನ್ನು ಕೂಡ ಘೋಷಣೆ ಮಾಡುತ್ತಿದ್ದಾರೆ. ನಿಜವಾಗಿಯೂ ನಿಯಂತ್ರಕ ಹಾಗೂ ಮಹಾಲೆಕ್ಕಪರೀಕ್ಷಕ (‘ಕಾಗ್‌’) ಇದು ಇತ್ತೀಚೆಗೆ ಕರ್ನಾಟಕ ಸರಕಾರಕ್ಕೆ ಸಂಬಂಧಿಸಿದ ಒಂದು ವರದಿಯನ್ನು ಪ್ರಸ್ತುತಪಡಿಸಿದ್ದು ಇದರಿಂದ ಕರ್ನಾಟಕದ ಸ್ಥಿತಿ ‘ಕಳ್ಳನೇ ತಿರುಗಿ ಬೊಬ್ಬೆ ಹೊಡೆದಂತೆ’ ಆಗಿದೆ ಎಂಬುದು ಬೆಳಕಿಗೆ ಬಂದಿದೆ. ‘ಕಾಗ್‌’ನ ವರದಿಗನುಸಾರ ರಾಜ್ಯ ಸರಕಾರ ವಿವಿಧ ಸಂಸ್ಥೆಗಳಿಗೆ ನೀಡಿರುವ ೧೦ ಸಾವಿರ ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಸಾಲವನ್ನು ವಸೂಲು ಮಾಡಿಲ್ಲ. ಇದರಲ್ಲಿ ಆಘಾತಕಾರಿ ವಿಷಯವೆಂದರೆ, ಈ ಸಾಲ ೧೯೭೭ ರಿಂದ ಬಾಕಿ ಇದೆ ಹಾಗೂ ಅದು ರಾಜ್ಯ ಸರಕಾರದ್ದೇ ವಿವಿಧ ವಿಭಾಗ ಮತ್ತು ಉಪಕ್ರಮಗಳಿಗೆ ಸಂಬಂಧಿಸಿದೆ. ಆದ್ದರಿಂದ ಕರ್ನಾಟಕ ಸರಕಾರದ ಸುಳ್ಳು ಬೆಳಕಿಗೆ ಬಂದಿದ್ದು ಅದು ತನ್ನ ವೈಫಲ್ಯವನ್ನು ಅಡಗಿಸಲು ಕೇಂದ್ರ ಸರಕಾರದ ಮೇಲೆ ಹೇಗೆ ಆರೋಪ ಮಾಡುತ್ತಿದೆ, ಎಂಬುದು ಸ್ಪಷ್ಟವಾಗುತ್ತದೆ.

ಈ ವರದಿಗನುಸಾರ ಸಾಲ ಪಡೆದಿರುವ ೨೧ ಸಂಸ್ಥೆಗಳಲ್ಲಿ ೧೫ ಸಾವಿರದ ೮೫೬ ಕೋಟಿ ರೂಪಾಯಿಗಳು ಬಾಕಿಯಿದ್ದು ಅದರರಲ್ಲಿ ೯ ಸಾವಿರದ ೩೮೦ ಕೋಟಿ ರೂಪಾಯಿಗಳ ಮೂಲ ಬೆಲೆಯು ಸೇರ್ಪಡೆಯಾಗಿದೆ. ಇದರಲ್ಲಿ ೧೯೭೭ ರಿಂದ ಎಲ್ಲಕ್ಕಿಂತ ಹಳೆಯ ಬಾಕಿ ‘ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ’, ‘ಕರ್ನಾಟಕ ಸ್ಟೇಟ್‌ ಸೀಡ್ಸ್ ಕಾರ್ಪೋರೇಶನ್‌ ಲಿ.’, ‘ಇಲೆಕ್ಟ್ರಿಕ್ಟ್ರೋ ಮೋಬೈಲ್‌ ಇಂಡಿಯಾ’ ಮತ್ತು ‘ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ’ ಇವರಿಗೆ ನೀಡಿದ ಸಾಲವಾಗಿದೆ. ೩೧ ಮಾರ್ಚ್ ೨೦೨೩ ರ ವರೆಗೆ ೧ ಸಾವಿರದ ೪೬೨ ಕೋಟಿ ರೂಪಾಯಿಗಳ ಸಾಲ ತೀರಿಸುವ ಅಥವಾ ಅದಕ್ಕೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆ ಕಾಣಿಸಲಿಲ್ಲ.

‘ಪುಕ್ಕಟೆ’ ಯೋಜನೆಗಳಿಂದಾಗಿ ಬೊಕ್ಕಸ ಖಾಲಿ !

ಕಾಂಗ್ರೆಸ್‌ ಸರಕಾರವೇ ಗೆಲ್ಲಬೇಕೆಂದು ಅದು ಸಾಮಾನ್ಯ ಜನರಿಗೆ ವಿಧಾನಸಭಾ ಚುನಾವಣೆಯ ಮೊದಲು ಅನೇಕ ‘ಪುಕ್ಕಟೆ’ ಯೋಜನೆಗಳ ಆಮಿಷ ತೋರಿಸಿತು. ಇದರಲ್ಲಿ ಮುಖ್ಯವಾಗಿ ಮಹಿಳೆಯರಿಗೆ ಉಚಿತ ಬಸ್‌ ಸೇವೆ, ‘೧೦೦ ಯುನಿಟ್‌ ವಿದ್ಯುತ್‌ ಉಚಿತ, ಇದರ ಜೊತೆಗೆ ಅನೇಕ ಯೋಜನೆಗಳಿವೆ. ಈ ಯೋಜನೆಗಳು ಉಚಿತವಾಗಿದ್ದರೂ, ಸರಕಾರಕ್ಕೆ ಆ ಯೋಜನೆಗಾಗಿ ತನ್ನ ಬೊಕ್ಕಸೆಯಿಂದಲೇ ಹಣ ಕೊಡಬೇಕಾಗುತ್ತಿತ್ತು ಹಾಗೂ ‘ವಿದ್ಯುತ್‌ ಬಿಲ್‌ ತುಂಬಿಸಬೇಡಿ’, ಎಂಬಂತಹ ಯೋಜನೆಯಿಂದ ಬೊಕ್ಕಸದಲ್ಲಿ ಆ ಕಡೆಯಿಂದ ಹಣ ಜಮೆಯಾಗುತ್ತಿರಲಿಲ್ಲ. ಆದ್ದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ಸ್ಥಾಪನೆಯಾದ ನಂತರ ಕೆಲವೇ ತಿಂಗಳಲ್ಲಿ ಕರ್ನಾಟಕ ಸರಕಾರದ ಬೊಕ್ಕಸ ಖಾಲಿಯಾಗಿದೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಪ್‌ ಇಂತಹ ವಿವಿಧ ಪಕ್ಷಗಳು ದೇಶ, ರಾಜ್ಯಗಳ ಆರ್ಥಿಕ ಭವಿಷ್ಯದ ಬಗ್ಗೆ ಸ್ವಲ್ಪವೂ ವಿಚಾರ ಮಾಡದೆ ಕೇವಲ ಚುನಾವಣೆಯನ್ನು ಗೆಲ್ಲುವ ಒಂದೇ ಧ್ಯೇಯವನ್ನಿಟ್ಟು ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಅಭಿವೃದ್ಧಿ ಯೋಜನೆಗಿಂತ ಉಚಿತ ಯೋಜನೆಗಳ ವಿಚಾರವನ್ನೇ ಮಾಡುತ್ತಿವೆ. ಪುಕ್ಕಟೆಯ ಯೋಜನೆಗಳಿಂದ ನಾಗರಿಕರನ್ನು ನಾವು ಆಲಸಿಯನ್ನಾಗಿಸುತ್ತೇವೆ ಮತ್ತು ಏನಾದರೂ ಪುಕ್ಕಟೆ ಸಿಗುತ್ತದೆ, ಎಂದು ಅರಿವಾದರೆ, ಹೀಗೆ ಪುಕ್ಕಟೆ ಪಡೆಯುವರ ಅಪೇಕ್ಷೆ ಹೆಚ್ಚುತ್ತಾ ಹೋಗುತ್ತದೆ ಹಾಗೂ ಅದರಿಂದ ಸಹಜವಾಗಿ ರಾಜ್ಯದ ಕ್ರಿಯಾಶಕ್ತಿಯೂ ಕುಸಿಯುತ್ತದೆ.

ವಾಸ್ತವಿಕತೆಯನ್ನು ನೋಡಿದರೆ ರಾಜ್ಯದ ಅಭಿವೃದ್ಧಿಗೆ ಆಯಾ ರಾಜ್ಯದ ಉತ್ಪನ್ನಕ್ಕನುಸಾರ ಖರ್ಚು ಮಾಡಬೇಕಾಗುತ್ತದೆ. ಯಾವುದೇ ವಿಶಿಷ್ಟ ಸಮೂಹವನ್ನು ಓಲೈಸಲು ಇಂತಹ ಉಚಿತ ಯೋಜನೆಯಿಂದ ರಾಜ್ಯದ ಬೊಕ್ಕಸಕ್ಕೆ ಎಷ್ಟು ಒತ್ತಡ ಬೀಳುತ್ತದೆಯೆಂದರೆ, ಅದರ ಪರಿಣಾಮದಿಂದ ಮುಂದೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ನಿಲ್ಲಿಸಬೇಕಾಗುತ್ತದೆ. ಕೆಲವೊಮ್ಮೆ ಈ ಪರಿಸ್ಥಿತಿಯಿಂದ ಎಷ್ಟು ಬಿಕ್ಕಟ್ಟಾಗುತ್ತದೆಯೆಂದರೆ, ಸಾಮಾನ್ಯರಿಗಾಗಿ ನಡೆಸುವ ಯೋಜನೆಗಳಲ್ಲಿಯೂ ಕಡಿತಗೊಳಿಸಬೇಕಾಗುತ್ತದೆ. ಈ ರೀತಿ ಪುಕ್ಕಟೆ ಯೋಜನೆಗಳ ವಿರುದ್ಧ ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದು ಅದರ ಆಲಿಕೆ ನಡೆಯುತ್ತಿದೆ.

ಬಂಗಾಲದಲ್ಲಿ ಕೋಟಿಗಟ್ಟಲೆ ರೂಪಾಯಿಗಳ ಹಗರಣ !

ಕರ್ನಾಟಕ ಸರಕಾರದಂತೆಯೇ ಬಂಗಾಲ ಸರಕಾರವೂ ‘ಕೇಂದ್ರ ನಮಗೆ ನಮ್ಮ ಪಾಲಿನ ಹಣವನ್ನು ಕೊಡುವುದಿಲ್ಲ’, ಎಂದು ಹೇಳಿ ಬೊಬ್ಬೆ ಹೊಡೆಯುತ್ತಿದೆ. ಅದಕ್ಕಾಗಿ ಮಮತಾ ಬ್ಯಾನರ್ಜಿ ೪೮ ಗಂಟೆ ಸತ್ಯಾಗ್ರಹ ಆಂದೋಲನವನ್ನೂ ಮಾಡಿದರು. ಕರ್ನಾಟಕದಂತೆಯೇ ಬಂಗಾಲ ಸರಕಾರದ ಬಣ್ಣವನ್ನು ‘ಕಾಗ್’ ಬಯಲು ಮಾಡಿದ್ದು ಫೆಬ್ರವರಿಯ ಮೊದಲ ವಾರದಲ್ಲಿ ‘ಕಾಗ್’ ಬಂಗಾಲದ ವಿಷಯದಲ್ಲಿ ಘೋಷಣೆ ಮಾಡಿದ ವರದಿಯಲ್ಲಿ ಹೇಳಿದೆ, ‘ಮಮತಾ ಬ್ಯಾನರ್ಜಿಯವರ ಸರಕಾರದಲ್ಲಿ ‘೧.೯ ಲಕ್ಷ ಕೋಟಿ ರೂಪಾಯಿಗಳ ಹಗರಣವಾಗಿದೆ, ಹಣ ಸಿಕ್ಕಿದ ನಂತರ ಹಾಗೂ ಕೆಲಸ ಪೂರ್ಣವಾದ ನಂತರ ಒಂದು ವರ್ಷದ ಒಳಗೆ ಕೆಲಸ ಪೂರ್ಣವಾಗಿರುವುದರ ‘ಪ್ರಮಾಣಪತ್ರ’ ಕೊಡಬೇಕಾಗುತ್ತದೆ. ಮಮತಾ ಸರಕಾರ ೧.೯ ಲಕ್ಷ ಕೋಟಿ ರೂಪಾಯಿಗಳ ‘ಬಳಕೆ ಪ್ರಮಾಣಪತ್ರ ಕೊಟ್ಟಿಲ್ಲ.’ ಭಾಜಪದ ಸುಕಾಂತ ಮುಜುಮದಾರ ಇವರು ಆರೋಪ ಮಾಡಿರುವುದೇನೆಂದರೆ, ೨೦೧೮ ರಿಂದ ೨೦೨೧ ರ ವರೆಗೆ ಕೋಟಿಗಟ್ಟಲೆ ರೂಪಾಯಿಗಳ ಕೆಲಸ ಮಾಡಿದ ಯೋಜನೆಗಳ ಖರ್ಚಿನ ‘ಬಳಕೆ ಪ್ರಮಾಣಪತ್ರ’ ನೀಡಿಲ್ಲ. ಇದರಲ್ಲಿ ಗ್ರಾಮೀಣ ಹಾಗೂ ನಗರ ವಿಕಾಸ, ಶಿಕ್ಷಣ ವಿಭಾಗಗಳ ಸಮಾವೇಶವಿದೆ. ಈ ವಿಭಾಗಗಳಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಇದ್ದು ಶಿಕ್ಷಣ ವಿಭಾಗದಲ್ಲಿ ಆಗಿರುವ ಹಗರಣದಲ್ಲಿ ಮಾಜಿ ಶಿಕ್ಷಣಸಚಿವರು ಜೈಲುಶಿಕ್ಷೆಯನ್ನೂ ಅನುಭವಿಸಿದ್ದಾರೆ.

ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿತ್ಯನಿಯಮ ದಂತೆ ಬೊಬ್ಬೆ ಹೊಡೆಯುತ್ತಾ ‘ಕಾಗ್‌’ನ ವರದಿ ಸುಳ್ಳಾಗಿದೆ. ಕೇಂದ್ರ ಸರಕಾರ ರಾಜ್ಯ ಸರಕಾರವನ್ನು ಅವಮಾನ ಮಾಡಲು ಇಂತಹ ವರದಿಗಳನ್ನು ಘೋಷಣೆ ಮಾಡುತ್ತಿದೆ’, ಎಂದು ಆರೋಪ ಮಾಡಿದ್ದಾರೆ. ವಾಸ್ತವಿಕವೆಂದರೆ, ‘ಕಾಗ್’ ಇದು ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು ಅದು ಪ್ರಾಮುಖ್ಯವಾಗಿ ಸರಕಾರದ ಕಾರ್ಯ ಹಾಗೂ ಖರ್ಚನ್ನು ತಪಾಸಣೆ ಮಾಡುತ್ತದೆ. ಇದರಲ್ಲಿ ಸರಕಾರದ ಹಸ್ತಕ್ಷೇಪವಾಗದಂತೆ ಕಾಳಜಿ ವಹಿಸಿಕೊಳ್ಳಲಾಗಿದೆ. ಈ ‘ಕಾಗ್‌’ನ ವರದಿಗನುಸಾರ ಕರ್ನಾಟಕ ಭಾಜಪದ ಮುಖಂಡ ಹಾಗೂ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಇವರ ಮೇಲೆ ಕೂಡ ಅಪರಾಧ ದಾಖಲಾಗಿತ್ತು. ಆದ್ದರಿಂದ ಮಮತಾ ಬ್ಯಾನರ್ಜಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ‘ಕಾಗ್‌’ನ ವಿರುದ್ಧ ರಾಜಕೀಯ ದ್ವೇಷದಿಂದ ಹಾಗೂ ಹಗರಣವನ್ನು ಅಡಗಿಸಲು ಆರೋಪ ಮಾಡುತ್ತಿದ್ದರೂ, ಎರಡೂ ರಾಜ್ಯಗಳ ನಿಜಸ್ವರೂಪ ಹೇಗಿದೆ, ಎಂಬುದು ಜನರಿಗೆ ಅರಿವಾಗಿದೆ !

ಹಗರಣಕೋರರಿಗೆ ಕಠೋರ ಶಿಕ್ಷೆಯಾಗಲೇ ಬೇಕು !

ಜನರು ಆಯ್ದು ಕಳುಹಿಸಿದ ಜನಪ್ರತಿನಿಧಿಗಳು ಒಂದು ರೀತಿಯಲ್ಲಿ ರಾಜ್ಯದ ‘ಬೊಕ್ಕಸ’ದ ವಿಶ್ವಸ್ತರಾಗಿರುತ್ತಾರೆ. ಅವರು ರಾಜ್ಯದ ಬೊಕ್ಕಸವನ್ನು ರಕ್ಷಣೆ ಮಾಡಬೇಕಾಗಿದೆ. ತದ್ವಿರುದ್ಧ ೪೭ ವರ್ಷಗಳಲ್ಲಿ ೧೦ ಸಾವಿರ ಕೋಟಿ ರೂಪಾಯಿಗಳು ಬಾಕಿ ಇದೆಯೆಂದಾದರೆ, ಅದೊಂದು ರೀತಿಯಲ್ಲಿ ರಾಜ್ಯದ ಬೊಕ್ಕಸದ ಮೇಲೆ ಮಾಡಿದ ದರೋಡೆಯೆ ಆಗಿದೆ. ಬಂಗಾಲದಲ್ಲಿಯೂ ೧.೯ ಲಕ್ಷ ಕೋಟಿ ರೂಪಾಯಿಗಳ ಕೆಲಸದ ಪ್ರಮಾಣಪತ್ರವನ್ನೇ ಕೊಡದಿರುವಾಗ ‘ಈ ಕೆಲಸ ನಿಜವಾಗಿ ಆಗಲೇ ಇಲ್ಲ’, ಎಂದು ಹೇಳಬೇಕಾಗುತ್ತದೆ. ಆದ್ದರಿಂದ ಕರ್ನಾಟಕದಲ್ಲಿ ಈ ರೀತಿ ಸಾಲದಿಂದ ದಾನ ಮಾಡುವ, ವಸೂಲಿಗೆ ಯಾವುದೇ ಪ್ರಯತ್ನ ಮಾಡದಿರುವ ಹಾಗೂ ಬಂಗಾಲದಲ್ಲಿನ ಜನರ ನಿಧಿಯನ್ನು ದೋಚುವ ಜನಪ್ರತಿನಿಧಿಗಳಿಗೆ ಕಠೋರ ಶಿಕ್ಷೆಯಾಗಲೇ ಬೇಕು. ‘ಕಾಗ್’ ನೀಡಿದ ವರದಿಯ ಬಗ್ಗೆ ರಾಜ್ಯ ಸರಕಾರ ಏನೂ ಮಾಡುವುದಿಲ್ಲ. ಆದ್ದರಿಂದ ಕೇಂದ್ರ ಸರಕಾರವೇ ನೇರವಾಗಿ ಮುಂದಾಳತ್ವ ವಹಿಸಿ ಅಪರಾಧವನ್ನು ದಾಖಲಿಸಬೇಕು ಹಾಗೂ ಅವರನ್ನು ಸೆರೆಮನೆಗೆ ತಳ್ಳಬೇಕು. ಇದರ ಜೊತೆಗೆ ಹೊಣೆಗಾರರಿಂದಲೇ ಬಡ್ಡಿಸಹಿತ ಹಣ ವಸೂಲು ಆಗುವವರೆಗೆ ಈ ಕ್ರಮ ಕೈಗೊಳ್ಳಬೇಕು, ಹಾಗೆ ಮಾಡಿದರೆ ಮಾತ್ರ ಇತರರು ಅದರಿಂದ ಪಾಠ ಕಲಿಯುವರು !