ಭಗವಾನ ಹನುಮಂತನ ಹಾಗೆ ರಾಮಮಂದಿರಕ್ಕಾಗಿ ೪ ದಶಮಾನಗಳಷ್ಟು (೪೦ ವರ್ಷ) ಹೋರಾಡಿಯೂ ಅದರ ಶ್ರೇಯಸ್ಸನ್ನು ತೆಗೆದುಕೊಳ್ಳದಿರುವುದು ! – ವಿನೋದ ಬನ್ಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್ತು

ಶ್ರೀ. ವಿನೋದ ಬನ್ಸಲ್

‘ಅಯೋಧ್ಯೆಯ ಹೆಸರನ್ನು ಉಚ್ಚರಿಸಿದ ಕೂಡಲೇ ಪ್ರಭು ಶ್ರೀರಾಮರ ಜನ್ಮಭೂಮಿ ಹಾಗೂ ಅದಕ್ಕಾಗಿ ನಿರಂತರ ಸಂಘರ್ಷ ಮಾಡಿದ ಒಂದು ಸಂಘಟನೆಯ ಹೆಸರು ತನ್ನಿಂತಾನೆ ಕಣ್ಮುಂದೆ ಬರುತ್ತದೆ. ಅದುವೇ ವಿಶ್ವ ಹಿಂದೂ ಪರಿಷತ್ತು ! ಬನ್ನಿ ರಾಮಮಂದಿರದ ಇತಿಹಾಸವನ್ನು ತಿಳಿದುಕೊಳ್ಳೋಣ, ಅದೂ ಅವರಿಂದಲೇ !

೧. ಶ್ರೀರಾಮ ಮಂದಿರವನ್ನು ರಕ್ಷಿಸಲು ಹುತಾತ್ಮರಾದ ೧ ಲಕ್ಷದ ೭೬ ಸಾವಿರ ರಾಮಭಕ್ತರು !

ಹಿಂದೂಗಳ ಮಂದಿರಗಳನ್ನು ನಾಶಗೊಳಿಸುವುದರ ಹಿಂದೆ ಹಿಂದೂ ಸಮಾಜದ ಶ್ರದ್ಧೆಯ ಮೇಲೆ ಆಘಾತ ಮಾಡಿ ಅವರನ್ನು ಬಲವಂತವಾಗಿ ಮುಸಲ್ಮಾನರನ್ನಾಗಿ ಮಾಡುವ ಮಾನಸಿಕತೆ ಇತ್ತು. ಪ್ರಭು ಶ್ರೀರಾಮರ ಮಂದಿರದ ಮೇಲಿನ ಮೊದಲ ಆಕ್ರಮಣವನ್ನು ತಡೆಯಲು ನಿರಂತರ ೧೫ ದಿನಗಳ ವರೆಗೆ ಸಂಘರ್ಷ ನಡೆದಿತ್ತು. ಈ ೧೫ ದಿನಗಳಲ್ಲಿ ಸುಮಾರು ೧ ಲಕ್ಷದ ೭೬ ಸಾವಿರ ರಾಮಭಕ್ತರು ಹುತಾತ್ಮರಾದರು. ಕೊನೆಗೆ ಮೊಗಲ ದಾಳಿಕೋರನು ತೋಫುಗಳಿಂದ ಮಂದಿರವನ್ನು ಧ್ವಂಸಗೊಳಿಸಿದನು. ೧೫೨೮ ರಿಂದ ೧೯೪೯ ಈ ಅವಧಿಯಲ್ಲಿ ಬೇರೆ ಬೇರೆ ಸಂದರ್ಭಗಳಲ್ಲಿ ರಾಮಮಂದಿರಕ್ಕಾಗಿ ನಡೆದ ಸುಮಾರು ೭೬ ಸಂಘರ್ಷಗಳಲ್ಲಿ ಲಕ್ಷಗಟ್ಟಲೆ ರಾಮಭಕ್ತರು ಪ್ರಾಣಾರ್ಪಣೆ ಮಾಡಿದರು. ನಾವು (ಹಿಂದೂ) ಕೆಲವೊಮ್ಮೆ ಗೆದ್ದೆವು, ಕೆಲವೊಮ್ಮೆ ನಿಂತೆವು; ಆದರೆ ದೇವರ ಜನ್ಮಸ್ಥಾನದ ಮೇಲಿನ ನಮ್ಮ ಹಕ್ಕನ್ನು ಯಾವತ್ತೂ ಬಿಟ್ಟುಕೊಡಲಿಲ್ಲ.

ಕೆಲವೊಮ್ಮೆ ರಾಜರು ಹೋರಾಡಿದರೆ, ಕೆಲವೊಮ್ಮೆ ಜಾಗೀರುದಾರರು, ಕೆಲವೊಮ್ಮೆ ಸಂತರು ಹೋರಾಡಿದರು, ಕೆಲವೊಮ್ಮೆ ಜನಸಾಮಾನ್ಯರು, ಕೆಲವೊಮ್ಮೆ ಸಮೀಪದಿಂದ, ಕೆಲವೊಮ್ಮೆ ದೂರದಿಂದ, ಕೆಲವೊಮ್ಮೆ ದೇವರ ಮೂರ್ತಿಯ ರೂಪದಲ್ಲಿ ಕುಳಿತಿರುವುದು ಕಾಣಿಸುತ್ತದೆ, ಕೆಲವೊಮ್ಮೆ ಕೇವಲ ಅವರ ಜನ್ಮಭೂಮಿಯ ದರ್ಶನ ಮಾಡಲು ಸಿಕ್ಕಿತು. ಕೆಲವೊಮ್ಮೆ ದೇವಸ್ಥಾನದಲ್ಲಿ, ಕೆಲವೊಮ್ಮೆ ಕಟ್ಟೆಯ ಮೇಲೆ ಗೋಣಿಯಿಂದ ನಿರ್ಮಿಸಿದ ಮಂಟಪದಲ್ಲಿ ದರ್ಶನ ಪಡೆದೆವು. ರಾಮಭಕ್ತರ ಹೃದಯದಲ್ಲಿ ವೇದನೆ ಇತ್ತು; ಆದರೆ ಒಂದು ರೀತಿಯಲ್ಲಿ ಸಮಾಧಾನವಿತ್ತು. ಅದೇನೆಂದರೆ, ಏನೇ ಆದರೂ, ಪವಿತ್ರ ಜನ್ಮಭೂಮಿಯ ದರ್ಶನದ ಭಾಗ್ಯ ಲಭಿಸಿತು ಹಾಗೂ ಒಂದು ದಿನ ಭವ್ಯ ಮಂದಿರವೂ ನಿರ್ಮಾಣವಾಗುವುದು. ಅಯೋಧ್ಯೆಗೆ ಬರುವ ಎಲ್ಲ ಭಕ್ತರೂ ‘ರಾಮಲಲ್ಲಾ ಹಮ್‌ ಆಯೆಂಗೆ, ಭವ್ಯ ಮಂದಿರ್‌ ಬನಾಯೆಂಗೆ’, ಈ ರೀತಿ ತೀವ್ರ ವೇದನೆಯಿಂದ ಹಾಗೂ ಮನಸ್ಸಿನಲ್ಲಿ ಸಂಕಲ್ಪ ಮಾಡಿ ಹಿಂತಿರುಗಿ ಹೋಗುತ್ತಿದ್ದರು.

೨. ರಾಮಜನ್ಮಭೂಮಿಗಾಗಿ ಅನೇಕ ವರ್ಷ ನ್ಯಾಯಾಂಗ ಹೋರಾಟ !

ಹೀಗಿರುವಾಗ ೧೮೮೫ ರಲ್ಲಿ ಅಂದಿನ ಬ್ರಿಟಿಷ ಸರಕಾರದ ಅವಧಿಯಲ್ಲಿ ನ್ಯಾಯಾಲಯ ರಾಮಜನ್ಮಭೂಮಿಯ ಪರವಾಗಿ ತೀರ್ಪು ನೀಡಿತ್ತು. ಸ್ವತಂತ್ರ ಭಾರತದಲ್ಲಿ ಶ್ರೀರಾಮನ ಪೂಜೆಯ ಅನುಮತಿಗಾಗಿ ಅಯೋಧ್ಯೆಯಲ್ಲಿ ಶ್ರೀ. ಗೋಪಾಲ ಸಿಂಹ ವಿಶಾರದ ಇವರು ಜನವರಿ ೧೯೫೦ ರಲ್ಲಿ ಫೈಜಾಬಾದದ (ಈಗಿನ ಅಯೋಧ್ಯೆಯ) ಜಿಲ್ಲಾ ನ್ಯಾಯಾಲಯದಲ್ಲಿ ಮೊದಲ ಖಟ್ಲೆಯನ್ನು ದಾಖಲಿಸಿದ್ದರು. ಇದಕ್ಕೆ ಉಚ್ಚ ನ್ಯಾಯಾಲಯ ಕೂಡ ಸಹಕರಿಸಿತು. ೨ ನೇ ಖಟ್ಲೆ ರಾಮಾನಂದ ಪಂಥದ ಸಾಧು ಪರಮಹಂಸ ಶ್ರೀ ರಾಮಚಂದ್ರ ದಾಸ ಇವರು ೫ ಡಿಸೆಂಬರ್‌ ೧೯೫೦ ರಂದು ದಾಖಲಿಸಿದ್ದರು, ಅದನ್ನು ೧೯೯೦ ರಲ್ಲಿ ಹಿಂತೆಗೆದುಕೊಳ್ಳಲಾಯಿತು. ೩ ನೇ ಖಟ್ಲೆ ಶ್ರೀಪಂಚರಾಮಾನಂದೀ ನಿರ್ಮೋಹಿ ಆಖಾಡಾ ಡಿಸೆಂಬರ್‌ ೧೯೫೯ ರಲ್ಲಿ ಹಾಗೂ ನಾಲ್ಕನೆ ಖಟ್ಲೆ ಸುನ್ನೀ ಸೆಂಟ್ರಲ್‌ ವಕ್ಫ್ ಬೋರ್ಡ್ ಡಿಸೆಂಬರ್‌ ೧೯೬೧ ರಲ್ಲಿ ದಾಖಲಿಸಲಾಗಿತ್ತು. ಅನಂತರ ೫ನೇ ಖಟ್ಲೆ ಭಗವಾನ ಶ್ರೀ ರಾಮಲಲ್ಲಾ ವಿರಾಜಮಾನ ಹಾಗೂ ಸ್ಥಾನ ಶ್ರೀ ರಾಮಜನ್ಮಭೂಮಿ ವತಿಯಿಂದ ಜುಲೈ ೧೯೮೯ ರಲ್ಲಿ ದಾಖಲಿಸಲಾಯಿತು.

೩. ರಾಮಜನ್ಮಭೂಮಿಯ ಮುಕ್ತಿಗಾಗಿ ಮಾಜಿ ಪ್ರಧಾನಮಂತ್ರಿ ಕಾಂಗ್ರೆಸ್ಸಿನ ಗುಲ್ಝಾರೀಲಾಲ ನಂದಾ ಹಾಗೂ ದಾವೂ ದಯಾಳ ಖನ್ನಾ ಇವರಿಂದ ಕರೆ

೧೯೪೯ ರಿಂದ ರಾಮಜನ್ಮಭೂಮಿಯ ವಿಷಯದಲ್ಲಿ ನಿರಂತರ ಕಾನೂನು ಕಾರ್ಯಾಚರಣೆ ಆಮೆ ವೇಗದಲ್ಲಿ ಮುಂದುವರಿಯಿತು; ಆದರೆ ಈ ಪ್ರಕರಣಕ್ಕೆ ನಿಜವಾದ ತಿರುವು ಬಂದಿರುವುದು ೧೯೬೪ ರಲ್ಲಿ ಜನಿಸಿದ ವಿಶ್ವ ಹಿಂದೂ ಪರಿಷತ್ತು ತನ್ನ ೧೯ ನೇ ವರ್ಷಕ್ಕೆ ಕಾಲಿಡುವಾಗ ಹಾಗೂ ಯೌವನಾವಸ್ಥೆ
ಯಲ್ಲಿ ಆಂದೋಲನದ ಚುಕ್ಕಾಣಿಯನ್ನು ಕೈಗೆತ್ತಿಕೊಂಡಾಗ. ಇದರ ಶ್ರೇಯಸ್ಸನ್ನು ತಾನು ತೆಗೆದುಕೊಳ್ಳದೆ ಅದನ್ನು ಇತರರಿಗೆ ಕೊಡುತ್ತಾ ಬಂದಿತು. ೬ ಮಾರ್ಚ್ ೧೯೮೩ ರಂದು ಮುಝಫ್ಫರನಗರ (ಉತ್ತರಪ್ರದೇಶ) ದಲ್ಲಿ ನೆರವೇರಿದ ಒಂದು ಹಿಂದೂ ಸಮ್ಮೇಳನದಲ್ಲಿ ಕಾಶಿ, ಮಥುರಾ ಸಹಿತ ರಾಮಜನ್ಮಭೂಮಿಯ ಮುಕ್ತಿಗಾಗಿ ಕರೆ ನೀಡಿದವರು ಬೇರೆ ಯಾರೂ ಅಲ್ಲ, ದೇಶದಲ್ಲಿ ೨ ಬಾರಿ ಮಧ್ಯಂತರ ಪ್ರಧಾನಿಯಾಗಿದ್ದ ಕಾಂಗ್ರೆಸ್ಸಿನ ಗುಲ್ಝಾರೀಲಾಲ ನಂದಾ ಹಾಗೂ ರಾಜ್ಯದ ಮಾಜಿ ಆರೋಗ್ಯ ಸಚಿವ ಹಾಗೂ ಕಾಂಗ್ರೆಸ್ಸಿನ ಹಿರಿಯ ನಾಯಕ ದಾವೂ ದಯಾಳ ಖನ್ನಾ ! ಈ ಬಗ್ಗೆ ಅವರು ಅಂದಿನ ಪ್ರಧಾನಿ
ಶ್ರೀಮತಿ ಇಂದಿರಾ ಗಾಂಧಿಯವರಿಗೆ ಪತ್ರವನ್ನೂ ಬರೆದಿದ್ದರು.

೪. ರಾಮಜನ್ಮಭೂಮಿಯ ಮುಕ್ತಿಗಾಗಿ ವಿಶ್ವ ಹಿಂದೂ ಪರಿಷತ್ತಿನಿಂದ ಇಡೀ ದೇಶದಾದ್ಯಂತ ಯಾತ್ರೆ

ಈ ಮೇಲಿನ ಘಟನೆಯ ನಂತರ ರಾಮಜನ್ಮಭೂಮಿಯ ಮುಕ್ತಿಗಾಗಿ ಒಂದರ ಹಿಂದೆ ಒದರಂತೆ ಚಳುವಳಿಗಳು ಆರಂಭವಾದವು. ಆದರೂ ಈ ಆಂದೋಲನದ ಔಪಚಾರಿಕ ಘೋಷಣೆಯಾಗುವ ಮೊದಲು ವಿಶ್ವ ಹಿಂದೂ ಪರಿಷತ್ತು ಡಿಸೆಂಬರ್‌ ೧೯೮೩ ರಲ್ಲಿ ದೇಶದಾದ್ಯಂತ ಏಕಾತ್ಮತಾ ಯಜ್ಞದಂತಹ ಒಂದು ಹೊಸ ಯೋಜನೆಯನ್ನು ಹಮ್ಮಿಕೊಂಡಿತು. ಅದರ ಮೂಲಕ ‘ಜಾತಿ-ಭಾಷಾ ಅನೇಕ್, ಸಾರಾ ಭಾರತ್‌ ಏಕ್’ ಎಂಬ ರಾಮಭಾವದಿಂದ ಪ್ರೇರಿತವಾಗಿ ಹರಿದ್ವಾರದಿಂದ ರಾಮೇಶ್ವರಮ್‌ನ ವರೆಗೆ ಹಾಗೂ ಗಂಗಾಸಾಗರದಿಂದ ಸೋಮನಾಥದ ವರೆಗೆ ಸಂಪೂರ್ಣ ಭಾರತವನ್ನು ಜೋಡಿಸುವ ಸಣ್ಣ ಹಾಗೂ ದೊಡ್ಡ ೧೦೦ ಯಾತ್ರೆಗಳಿಂದ ೫೦ ಸಾವಿರಕ್ಕೂ ಹೆಚ್ಚು ಕಿಲೋಮೀಟರ್‌ ಅಂತರವನ್ನು ಕ್ರಮಿಸಿದರು. ೨೯ ಡಿಸೆಂಬರ್‌ ೧೯೮೩ ರಂದು ನಾಗಪುರದಲ್ಲಿ ಇವರೆಲ್ಲರ ಸಂಗಮ ಆಯಿತು.

೫. ಫೆಬ್ರವರಿ ೧೯೮೬ ರಲ್ಲಿ ಬಂದಿವಾಸದಿಂದ ರಾಮಲಲ್ಲಾ ಮುಕ್ತ

ಕಾಂಗ್ರೆಸ್ಸಿನ ಗುಲ್ಝಾರಿಲಾಲ ನಂದಾ ಹಾಗೂ ಹಿರಿಯ ನಾಯಕ ದಾವೂ ದಯಾಳ ಖನ್ನಾ ಇವರ ಕರೆ ಮತ್ತು ಏಕಾತ್ಮತಾ ಯಾತ್ರೆಯ ಉತ್ತೇಜನದಿಂದಾಗಿ ರಾಮಜನ್ಮಭೂಮಿಯ ಮುಕ್ತಿಗೆ ಹೊಸ ಶಕ್ತಿ ಸಿಕ್ಕಿತು.

೨೧.೭.೧೯೮೪ ರಂದು ಅಯೋಧ್ಯೆಯ ಭಗವತಾಚಾರ್ಯ ಆಶ್ರಮದಲ್ಲಿ ‘ಶ್ರೀರಾಮಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ’ ಯನ್ನು ಸ್ಥಾಪಿಸಲಾಯಿತು. ಈ ಸಮಿತಿಯಲ್ಲಿ ಗೋರಕ್ಷ ಪೀಠಾಧೀಶ್ವರ ಪೂ. ಮಹಂತ ವೈದ್ಯನಾಥಜೀ ಮಹಾರಾಜರನ್ನು ಅಧ್ಯಕ್ಷ ಹಾಗೂ ದಾವೂ ದಯಾಳ ಖನ್ನಾ ಇವರನ್ನು ಮಹಾಮಂತ್ರಿಗಳನ್ನಾಗಿ ಮಾಡಲಾಯಿತು. ಶ್ರೀರಾಮ ಹಾಗೂ ರಾಷ್ಟ್ರದ ಮೇಲಿನ ಅವರ ಭಕ್ತಿಯಿಂದಾಗಿ ಅವರಿಬ್ಬರೂ ಈ ಪವಿತ್ರ ಕಾರ್ಯದಲ್ಲಿ ಪಾಲ್ಗೊಂಡರು. ಅನಂತರ ಒಂದರ ಹಿಂದೆ ಒಂದು ಕಾರ್ಯಕ್ರಮ, ಚಳುವಳಿ ಹಾಗೂ ಸಂಘಟನೆಗಳು ನಿರ್ಮಾಣವಾಗುತ್ತಾ ಹೋದವು. ಅದೇ ರೀತಿ ರಾಮಭಕ್ತರ ತಂಡ ಬೆಳೆಯುತ್ತಾ ಹೋಯಿತು. ೧೯೮೪ ರಲ್ಲಿ ಶ್ರೀರಾಮ-ಜಾನಕಿಯ ರಥಯಾತ್ರೆ ಹಾಗೂ ಅವರ ಭದ್ರತೆಗಾಗಿ ‘ಬಜರಂಗದಳ’ ಹೆಸರಿನಲ್ಲಿ ಯುವಕರ ಒಂದು ಗುಂಪನ್ನು ಸಿದ್ಧಪಡಿಸಲಾಯಿತು. ಜನ್ಮಭೂಮಿಯ ಬೀಗಮುದ್ರೆಯ ವಿರುದ್ಧ ಆಂದೋಲನ ತೀವ್ರಗೊಳಿಸಲು ‘ಧರ್ಮಸ್ಥಳ ರಕ್ಷಾ ಸಮಿತಿ’ಯ ಸ್ಥಾಪನೆಯನ್ನು ಮಾಡಲಾಯಿತು. ೩೧ ಅಕ್ಟೋಬರ ೧೯೮೫ ರಂದು ಉಡುಪಿಯಲ್ಲಿ ನೆರವೇರಿದ ಧರ್ಮಸಂಸತ್ತಿನಲ್ಲಿನ ಕರೆ ಹಾಗೂ ಮಹಂತ ರಾಮಚಂದ್ರ ದಾಸ ಪರಮಹಂಸ ಇವರ ಆತ್ಮತ್ಯಾಗದ ಎಚ್ಚರಿಕೆಯಿಂದಾಗಿ ೧ ಫೆಬ್ರವರಿ ೧೯೮೬ ರಂದು ರಾಮಲಲ್ಲಾನನ್ನು ಬಂಧನಮುಕ್ತಗೊಳಿಸಲಾಯಿತು.

೬. ೧೯೯೦ ರಲ್ಲಿ ಕಾರಸೇವೆಯ ಘೋಷಣೆ

ದೇವೋತ್ಥಾನ ಏಕಾದಶಿಯಂದು (ಪ್ರಬೋಧಿನಿ ಏಕಾದಶಿ), ಅಂದರೆ ೯ ನವೆಂಬರ್‌ ೧೯೮೯ ರಂದು ದೇಶದ ೪ ಲಕ್ಷ ಊರುಗಳಿಂದ ಪೂಜಿಸಲ್ಪಟ್ಟ ಕಲ್ಲುಗಳ ಸಹಾಯದಿಂದ ಹರಿಜನ ಬಂಧೂ ಶ್ರೀ ಕಾಮೇಶ್ವರ ಚೌಪಾಲ ಇವರ ಶುಭ ಹಸ್ತದಿಂದ ಸಂತರ ಉಪಸ್ಥಿತಿಯಲ್ಲಿ ಶ್ರೀರಾಮ ಮಂದಿರದ ಶಿಲಾನ್ಯಾಸವಾಯಿತು. ಅದಕ್ಕಾಗಿ ದೇಶದಾದ್ಯಂತ ಸುಮಾರು ೭ ಸಾವಿರ ಸ್ಥಳಗಳಲ್ಲಿ ಯಜ್ಞವನ್ನು ಮಾಡಲಾಯಿತು. ಅನಂತರ ಸಂತರ ಕೇಂದ್ರೀಯ ಮಾರ್ಗದರ್ಶಕ ಮಂಡಳಿಯ ಸಭೆಯಲ್ಲಿನ ನಿರ್ಣಯಕ್ಕನುಸಾರ ೩೦ ಅಕ್ಟೋಬರ ೧೯೯೦ ರಂದು ಕಾರಸೇವೆಯ ಘೋಷಣೆಯಿಂದ ರಾಜಕೀಯವೃತ್ತದಲ್ಲಿ ಕೋಲಾಹಲ ನಿರ್ಮಾಣವಾಯಿತು. ಇದನ್ನು ನಿಲ್ಲಿಸಲು ಕೇಂದ್ರದಲ್ಲಿನ ವಿ.ಪಿ. ಸಿಂಗ್‌ ಸರಕಾರ ಹಾಗೂ ರಾಜ್ಯದಲ್ಲಿನ ಮುಲಾಯಮ ಸಿಂಗ ಸರಕಾರದ ಬೆದರಿಕೆ, ಲಾಠಿ ಹಾಗೂ ಗುಂಡುಗಳನ್ನು ಎದುರಿಸಿ ಲಕ್ಷಗಟ್ಟಲೆ ಕಾರಸೇವಕರು ವಿವಿಧ ಮಾರ್ಗದಿಂದ ವಿವಿಧ ವೇಷದಲ್ಲಿ ‘ರಾಮಲಲ್ಲಾ’ನ ಜಯಘೋಷ ನೀಡಲು ಆರಂಭಿಸಿದರು. ತಲೆಯ ಮೇಲೆ ಕೇಸರಿ ಮುಂಡಾಸು ಕಟ್ಟಿಕೊಂಡು ‘ರಾಮಲಲ್ಲಾ ಹಮ್‌ ಆಯೆಂಗೆ, ವಂಹೀ ಮಂದಿರ್‌ ಬನಾಯೆಂಗೆ’, ಇಂತಹ ಹೃದಯಸ್ಪರ್ಶಿ ಹಾಗೂ ಆಕಾಶವನ್ನು ಭೇದಿಸುವ ಘೋಷಣೆಗಳನ್ನು ನೀಡುತ್ತಾ ನಾವು ಅಯೋಧ್ಯೆಯನ್ನು ತಲಪಿದೆವು. ‘ಅಲ್ಲಿ ‘ಪರಿಂದಾಭೀ ಪರ ನಹೀ ಮಾರ್‌ಸಕ್ತಾ (ಒಂದು ಪಕ್ಷಿಯೂ ಬರಲು ಸಾಧ್ಯವಿಲ್ಲ)’, ಎಂದು ಉತ್ತರಪ್ರದೇಶದ ಅಂದಿನ ಅಧಿಕಾರರೂಢ ಮುಲಾಯಮ ಸಿಂಗ ಉದ್ಧಟತನದಿಂದ ಹೇಳಿದ್ದರು. ಉತ್ಸಾಹಿ ರಾಮಭಕ್ತರು ಗುಮ್ಮಟದ ಮೇಲೆ ಕೇಸರಿಧ್ವಜ ಹಾರಿಸಿದರು. ಆಗ ಆಂದೋಲನದ ಮಹಾನಾಯಕ ದಿ. ಅಶೋಕ ಸಿಂಘಲ್‌ ಕೂಡ ರಕ್ತಸಿಕ್ತರಾಗಿದ್ದರು.

೭. ರಾಮಜನ್ಮಭೂಮಿಯ ಹೋರಾಟದಲ್ಲಿ ವಿವಿಧ ಅಡಚಣೆಗಳು ಬಂದರೂ ಪರಿಹಾರೋಪಾಯ ಸಿಗುವುದು

ಅನಂತರ ಭಾಜಪದ ನಾಯಕ ಹಾಗೂ ಮಾಜಿ ಉಪಪ್ರಧಾನಮಂತ್ರಿ ಲಾಲಕೃಷ್ಣ ಅಡ್ವಾಣಿಯವರ ರಥಯಾತ್ರೆ ಇರಲಿ, ವಿ.ಪಿ. ಸಿಂಗ್, ಚಂದ್ರಶೇಖರ ಹಾಗೂ ಪಿ.ವಿ. ನರಸಿಂಹ ರಾವ್‌ ಇವರೊಂದಿಗಿನ ಚರ್ಚೆ ಇರಲಿ, ೬ ಡಿಸೆಂಬರ್‌ ೧೯೯೨ ರಂದು ಬಾಬರಿ ಕೆಡಹುವ ಪ್ರಕರಣವಿರಲಿ ಅಥವಾ ಸಪ್ಟೆಂಬರ್‌ ೨೦೧೦ ರಲ್ಲಿ ಅಲಾಹಾಬಾದ ಉಚ್ಚ ನ್ಯಾಯಾಲಯದ ನಿರ್ಣಯ, ಸರ್ವೋಚ್ಚ ನ್ಯಾಯಾಲಯದ ಆಲಿಕೆಯಲ್ಲಿ ಅಡಚಣೆಯನ್ನುಂಟು ಮಾಡಲು ಹಿಂದೂದ್ರೋಹಿ ಹಾಗೂ ದೇಶದ್ರೋಹಿ ಕಾಂಗ್ರೆಸ್ಸಿನವರು ನ್ಯಾಯಾಲಯದ ಮೇಲೆ ಮಾಡಿದ ವಾಕ್‌ಪ್ರಹಾರವಿರಲಿ ಅಥವಾ ೯ ಸಪ್ಟೆಂಬರ ೨೦೧೯ ಐತಿಹಾಸಿಕ ಒಮ್ಮತದ ಆದೇಶವಿರಲಿ, ಒಂದೊಂದೊದು ಅಡಚಣೆಗಳು ಬರುತ್ತಿದ್ದರೂ ಪರಿಹಾರವೂ ಸಿಗುತ್ತಿತ್ತು. ಇದನ್ನು ಇಡೀ ಜಗತ್ತು ನೋಡುತ್ತಿತ್ತು.

೮. ‘ಶ್ರೀರಾಮಜನ್ಮಭೂಮಿ ನಿಧಿ ಸಮರ್ಪಣ ಅಭಿಯಾನ’ದ ಅಂತರ್ಗತ ೬೫ ಕೋಟಿ ಹಿಂದೂಗಳ ಸಂಪರ್ಕ

ಸರ್ವೋಚ್ಚ ನ್ಯಾಯಾಲಯದ ನಿರ್ಣಯದಿಂದ ಚಳುವಳಿ ಹಾಗೂ ಕಾನೂನು ಯುಕ್ತಿವಾದಗಳು ಮುಗಿದವು. ಆದರೆ ೨೫ ಜನವರಿ ೨೦೨೧ ರಿಂದ ಆರಂಭವಾದ ೪೪ ದಿನಗಳ ‘ಶ್ರೀರಾಮ ಜನ್ಮಭೂಮಿ ನಿಧಿ ಸಮರ್ಪಣ ಅಭಿಯಾನ’ವೂ ಜಗತ್ತಿನಾದ್ಯಂತದ ಜನಜಾಗೃತಿ ಆಂದೋಲನದಲ್ಲಿ ಒಂದು ಹೊಸ ಆಯಾಮವನ್ನು ಸ್ಥಾಪಿಸಲಾಯಿತು. ‘ಕೋವಿಡ್’ ಮಹಾಮಾರಿಯ ಸಂಕಟದ ನಂತರವೂ ‘ಈ ರಾಮ ಮಂದಿರ ನನ್ನದಾಗಿದೆ. ಶ್ರೀರಾಮನ ಆದರ್ಶ ಹಾಗೂ ಜೀವನಶೈಲಿ ನನ್ನದಾಗಿದೆ. ರಾಮರಾಜ್ಯದ ಕಡೆಗೆ ಎಲ್ಲರೂ ಒಂದಾಗಿ ಪ್ರಯಾಣ ಮಾಡೋಣ, ನಮ್ಮ ಮಾರ್ಗದಲ್ಲಿ ಎಷ್ಟೇ ಅಡಚಣೆಗಳು ಬಂದರೂ ನಾವು ದೃಢವಾಗಿರೋಣ ಹಾಗೂ ಸಂಪೂರ್ಣ ಹಿಂದೂ ಸಮಾಜವನ್ನು ಜೊತೆಗಿಟ್ಟುಕೊಂಡು ದಾರಿ ಯಲ್ಲಿ ಎದುರಾಗುವ ಕಷ್ಟಕಾರ್ಪಣ್ಯಗಳನ್ನು ಜಯಿಸೋಣ’, ಎನ್ನುವ ಭಾವದಿಂದ ಪುನಃ ಒಮ್ಮೆ ರಾಮಭಕ್ತರು ಒಗ್ಗಟ್ಟಾದರು. ದೇಶದಲ್ಲಿನ ಒಟ್ಟು ೬ ಲಕ್ಷದ ೫ ಸಾವಿರ ಊರುಗಳ ಪೈಕಿ ೫ ಲಕ್ಷದ ೨೫ ಸಾವಿರ ಊರುಗಳಲ್ಲಿನ ೧೩ ಕೋಟಿಗಿಂತಲೂ ಹೆಚ್ಚು ಕುಟುಂಬಗಳಲ್ಲಿನ ೬೫ ಕೋಟಿ ಹಿಂದೂಗಳೊಂದಿಗೆ ಸಂಪರ್ಕ ಸಾಧಿಸಲು ೧೦ ಲಕ್ಷ ಗುಂಪುಗಳ ಮೂಲಕ ೪೦ ಲಕ್ಷ ಕಾರ್ಯಕರ್ತರು ಒಟ್ಟಾಗಿ ಬಂದಿದ್ದರು. ಮಹಾಮಹೀಮ ರಾಷ್ಟ್ರಪತಿಯವರಿಂದ ಹಿಡಿದು ಬಹಳಷ್ಟು ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ಸಚಿವರು, ಗಣ್ಯವ್ಯಕ್ತಿಗಳು, ಸಮಾಜದ ವಿವಿಧ ಕ್ಷೇತ್ರದಲ್ಲಿನ ಗಣ್ಯರು, ವಂದನೀಯ ಸಂತರ ಅಲ್ಲದೇ ಎಲ್ಲ ಆರ್ಥಿಕ ಹಾಗೂ ಸಾಮಾಜಿಕ ದೃಷ್ಟಿಯಲ್ಲಿ ಬಲಿಷ್ಟರು ಹಾಗೂ ದುರ್ಬಲ ರಾಮಭಕ್ತರು ಭಕ್ತಿ ಹಾಗೂ ಶಕ್ತಿಮೀರಿ ನಿಧಿ ಅರ್ಪಣೆ ಮಾಡಿದರು. ೨೦೨೦ ರಲ್ಲಿ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭೂಮಿ ಪೂಜೆಯ ದೃಶ್ಯವವನ್ನೂ ನಾವೆಲ್ಲರೂ ನೋಡಿದೆವು. ಇದೆಲ್ಲದರ ಪರಿಣಾಮವೆಂದು ಈಗ ೨೨ ಜನವರಿ ೨೦೨೪ ರಂದು ರಾಮಲಲ್ಲಾ ಪುನಃ ಅವರ ಭವ್ಯ ಹಾಗೂ ದಿವ್ಯ ಮೂಲ ಗರ್ಭಗೃಹದಲ್ಲಿ ವಿರಾಜಮಾನರಾಗುವರು.

೯. ‘ಹಿಂದೂಗಳು ಸಂಘಟಿತರಾದರೆ, ರಾಷ್ಟ್ರ ಶಕ್ತಿಶಾಲಿ ಆಗುವುದು’, ಎಂಬುದೇ ವಿಶ್ವ ಹಿಂದೂ ಪರಿಷತ್ತಿನ ಉದ್ದೇಶ

೧೯೮೩ ರಿಂದ ೨೦೨೩ ರ ವರೆಗೆ ಅಂದರೆ ೪ ದಶಮಾನ ಸಂಪೂರ್ಣ ಜಗತ್ತು ವಿಹಿಂಪದ ನಿಯೋಜನೆ, ನಿರ್ಮಾಣ, ಸಂಚಲನ ಹಾಗೂ ಸಂಕಟಮೋಚನದ ರೂಪದಲ್ಲಿ ಈ ಆಂದೋಲನದಲ್ಲಿನ ಯೋಗದಾನವನ್ನು ಪ್ರತ್ಯಕ್ಷ ನೋಡಿದೆ; ಆದರೆ ಅದು ಇದರ ಶ್ರೇಯಸ್ಸನ್ನು ತನ್ನಲ್ಲಿಟ್ಟುಕೊಳ್ಳದೆ ವಂದನೀಯ ಸಂತರು
ಹಾಗೂ ಹಿಂದೂಗಳಿಗೆ ನೀಡಿತು. ಕೆಲವೊಮ್ಮೆ ‘ಮಾರ್ಗದರ್ಶಕ ಮಂಡಳಿ’, ಕೆಲವೊಮ್ಮೆ ‘ಜನ್ಮಭೂಮಿ ಮುಕ್ತಿ ಯಜ್ಞ ಸಮಿತಿ’, ಕೆಲವೊಮ್ಮೆ ‘ಮಂದಿರ ಜೀರ್ಣೊದ್ಧಾರ ಸಮಿತಿ’ ಹಾಗೂ ಕೆಲವೊಮ್ಮೆ ‘ಶ್ರೀರಾಮಜನ್ಮಭೂಮಿ ಟ್ರಸ್ಟ್‌’, ಕೆಲವೊಮ್ಮೆ ‘ಶ್ರೀರಾಮಜನ್ಮ ಭೂಮಿಮುಕ್ತಿ ಸಂಘರ್ಷ ಸಮಿತಿ’ ಮತ್ತು ಈಗ ‘ಶ್ರೀರಾಮಜನ್ಮ ಭೂಮಿತೀರ್ಥ ಕ್ಷೇತ್ರ ಟ್ರಸ್ಟ್‌’ ಈ ರೀತಿ ಎಲ್ಲ ಸ್ತರದಲ್ಲಿ ಅವರು ಸಂತರ ಮಾರ್ಗದರ್ಶನ ಪಡೆದರು. ವಿಹಿಂಪ ಪ್ರತಿಯೊಂದು ಯಶಸ್ಸಿನ ಶ್ರೇಯಸ್ಸನ್ನು ಸಂತರು ಮತ್ತು ಹಿಂದೂ ಸಮಾಜಕ್ಕೆ ನೀಡಿತು. ಅಲ್ಲದೇ ವಿಹಿಂಪ ಅನಾಸಕ್ತ ಭಾವನೆಯಿಂದ ಮಾತೃಭೂಮಿಯ ಸೇವೆ, ಹಿಂದೂ ಸಮಾಜದ ಪ್ರಬೋಧನೆ, ಸಂಘಟನೆಯಂತಹ ಕಾರ್ಯದಲ್ಲಿ ಸಕ್ರಿಯವಿತ್ತು. ವಿಹಿಂಪದ ಒಂದೇ ಉದ್ದೇಶವೇನೆಂದರೆ, ಹಿಂದೂ ಸಂಘಟಿತ ರಾದರೆ ರಾಷ್ಟ್ರ ಬಲಿಷ್ಠವಾಗುವುದು. ಹಿಂದೂ ಸಮಾಜದಲ್ಲಿನ ಭೇದಭಾವ ನಷ್ಟವಾದರೆ ಸಮಾಜದಲ್ಲಿ ಸಾಮರಸ್ಯ ಆನಂದ ವೃದ್ಧಿಯಾಗುವುದು. ಸದ್ಯ ಇತರ ಸಂಘರ್ಷಗಳೊಂದಿಗೆ ವಿಹಿಂಪ ರಾಮಸೇತು ಹಾಗೂ ಅಮರನಾಥ ಯಾತ್ರೆಯ ಭದ್ರತೆಗಾಗಿ ದೊಡ್ಡ ಅಂತಿಮ ಹೋರಾಟವನ್ನು ಮಾಡಿತು. ಈ ಭಾವವನ್ನು ವಿಹಿಂಪ ಹನುಮಂತನಿಂದ ಕಲಿತಿದೆ. ಪ್ರಭು ಶ್ರೀರಾಮನ ಪ್ರತಿಯೊಂದು ಕಠಿಣ ಕಾರ್ಯವನ್ನು ಅವರು ಸುಲಭಗೊಳಿಸಿದರು; ಆದರೆ ಅದರ ಶ್ರೇಯಸ್ಸನ್ನು ಶ್ರೀರಾಮ ಅಥವಾ ಅವರ ಇತರ ಸಹಾಯಕರಿಗೆ ನೀಡಿದರು.’

– ಶ್ರೀ. ವಿನೋದ ಬನ್ಸಲ, ರಾಷ್ಟ್ರೀಯ ವಕ್ತಾರರು, ವಿಶ್ವ ಹಿಂದೂ ಪರಿಷತ್ತು. (೧೬.೧೧.೨೦೨೩)