(ಶ್ರೀ ರಾಮಲಲ್ಲಾ ಎಂದರೆ ಶ್ರೀರಾಮನ ಮಗುವಿನ ರೂಪ)
ನವ ದೆಹಲಿ – ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆಯಾಗಲಿದೆ. ಈ ನಿಮಿತ್ತ ಭಾರತದಾದ್ಯಂತ ಉತ್ಸಾಹದ ವಾತಾವರಣವಿದ್ದು, ಈ ನಿಮಿತ್ತ ದೇಶದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜನವರಿ 22 ರಂದು ನಡೆಯುವ ಈ ಸಮಾರಂಭದ ನೇರ ಪ್ರಸಾರವನ್ನು ಭಾರತದಲ್ಲಿ ಮಾತ್ರವಲ್ಲದೆ ಅಮೆರಿಕದಲ್ಲಿಯೂ ತೋರಿಸಲು ನಿಯೋಜಿಸಲಾಗುತ್ತಿದೆ. ನ್ಯೂಯಾರ್ಕ್‌ನ ಪ್ರತಿಷ್ಠಿತ ‘ಟೈಮ್ಸ್ ಸ್ಕ್ವೇರ್’ ಪ್ರದೇಶದಲ್ಲಿ ನೇರಪ್ರಸಾರವಾಗಲಿದೆ. ‘ಟೈಮ್ಸ್ ಸ್ಕ್ವೇರ್’ ನ್ಯೂಯಾರ್ಕ್ ನಗರದ ಕೇಂದ್ರ ಭಾಗವಾಗಿದೆ. ಇದು ಪ್ರವಾಸೋದ್ಯಮ, ವ್ಯಾಪಾರ ಮತ್ತು ಮನರಂಜನೆಯ ಪ್ರಮುಖ ಕೇಂದ್ರವಾಗಿದೆ.
ವಿದೇಶದಲ್ಲಿರುವ ಭಾರತೀಯ ರಾಯಭಾರ ಕಚೇರಿಗಳಲ್ಲಿ ನೇರ ಪ್ರಸಾರ
ವಿದೇಶದಲ್ಲಿರುವ ವಿವಿಧ ಭಾರತೀಯ ರಾಯಭಾರ ಕಚೇರಿಗಳಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಸಮಾರಂಭದ ನೇರ ಪ್ರಸಾರವನ್ನು ನಿಯೋಜನೆ ಮಾಡಿದ್ದಾರೆ. ಭಾಜಪ ಈ ಸಮಾರಂಭದ ನೇರಪ್ರಸಾರವನ್ನು ಪ್ರತಿಯೊಬ್ಬರಿಗೂ ಅಂದರೆ ಸಮಾಜದ ಕೆಳವರ್ಗದವರಿಗೂ ತೋರಿಸಲು ನಿಯೋಜಿಸಿದೆ. ಈ ಸಮಾರಂಭದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಯ ನಿಮಿತ್ತ ಆಯೋಜಿಸಲಾಗಿರುವ ವಿವಿಧ ವಿಧಿಗಳು ಜನವರಿ 16 ರಿಂದ ಪ್ರಾರಂಭವಾಗಲಿದೆ. ಜನವರಿ 22 ರ ಸಮಾರಂಭಕ್ಕೆ ಸುಮಾರು 60 ಸಾವಿರ ಜನರು ಉಪಸ್ಥಿತರಿರುವ ನಿರೀಕ್ಷೆಯಿದೆ.