ಮಕ್ಕಳಿಗೆ ಶೀತ-ಕೆಮ್ಮು ಆಗಿದೆಯೇ ?

ಚಳಿಗಾಲದ ದಿನಗಳಲ್ಲಿ ಅಥವಾ ಇತರ ಸಮಯದಲ್ಲಿ ಶೀತ-ಕೆಮ್ಮು ಆಗುವುದು, ಇದು ಅತೀ ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕ ಮಕ್ಕಳು ವಾತಾವರಣದಲ್ಲಿರುವ ವಿವಿಧ ರೀತಿಯ ಜೀವಾಣುಗಳೊಂದಿಗೆ (ಬೆಕ್ಟೇರಿಯಾಗಳೊಂದಿಗೆ) ಹೋರಾಡುತ್ತಿರುವುದರಿಂದ ಅವರು ಆಗಾಗ ಶೀತ-ಕೆಮ್ಮು, ಜ್ವರ ಇವುಗಳಂತಹ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈಗ ಶೀತ ಅಥವಾ ಕೆಮ್ಮ ಬಂದರೆ, ಚಿಕ್ಕ ಮಕ್ಕಳು ದಣಿಯುತ್ತಾರೆ, ಕೆಲವೊಮ್ಮೆ ಅವರ ಮೂಗು ಸೋರುತ್ತದೆ, ಕೆಲವೊಮ್ಮೆ ಅವರಿಗೆ ಸರಿಯಾಗಿ ಉಸಿರಾಡಲು ಆಗದೇ ಅಸ್ವಸ್ಥರಾಗುತ್ತಾರೆ. ಅನೇಕಬಾರಿ ಶೀತ ಮತ್ತು ಕಫದಿಂದ ಮಕ್ಕಳು ದುರ್ಬಲರಾಗುತ್ತಾರೆ, ಅವರಿಗೆ ಊಟ ಸೇರುವುದಿಲ್ಲ. ಆದ್ದರಿಂದ ಮನೆಯಲ್ಲಿರುವ ಚಿಕ್ಕಮಕ್ಕಳ ತುಂಟಾಟ ನಿಂತು ಹೋಗುತ್ತದೆ. ಶೀತ-ಕೆಮ್ಮಿನಿಂದ ಬೇಸತ್ತ ಮಕ್ಕಳು ಅನೇಕಬಾರಿ ಕಿರಿಕಿರಿ ಮಾಡುತ್ತಾರೆ ಮತ್ತು ತನ್ನ ತಾಯಿಗೆ ಸತತವಾಗಿ ಅಂಟಿಕೊಂಡಿರುತ್ತಾರೆ.

ಇಂತಹ ಸಮಯದಲ್ಲಿ ಮಕ್ಕಳನ್ನು ತಕ್ಷಣ ಡಾಕ್ಟರರ ಬಳಿ ಕರೆದುಕೊಂಡು ಹೋಗುವುದಕ್ಕಿಂತ ಸುಲಭ ಮನೆಮದ್ದು ಮಾಡಿನೋಡುವುದು ಯಾವಾಗಲೂ ಒಳ್ಳೆಯದು; ಏಕೆಂದರೆ ಹೆಚ್ಚು ಪ್ರಮಾಣದಲ್ಲಿ ಔಷಧಗಳ ಅಭ್ಯಾಸ ಮಾಡುವುದು ಸರಿಯಲ್ಲ. ಸತತವಾಗಿ ಔಷಧಗಳನ್ನು ತೆಗೆದು ಕೊಂಡರೆ, ನಮ್ಮ ಶರೀರದ ನೈಸರ್ಗಿಕ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಿಂದಿನ ಕಾಲದಲ್ಲಿ ಮನೆಯಲ್ಲಿ ಅಜ್ಜಿ ಇರುವುದರಿಂದ ಅವಳು ಮನೆಯಲ್ಲಿ ಯಾರಿಗಾದರೂ ಏನಾದರೂ ಆದರೆ, ತಕ್ಷಣ ಏನಾದರೂ ಚಿಕಿತ್ಸೆ ಮಾಡುತ್ತಿದ್ದಳು ಮತ್ತು ಮಕ್ಕಳಿಗೆ ಆಗಿರುವ ಕಾಯಿಲೆ ದೂರ ಆಗುತ್ತಿತ್ತು; ಆದರೆ ಈಗ ವಿಭಕ್ತ ಕುಟುಂಬದಿಂದಾಗಿ ಅನೇಕ ಮನೆಗಳಲ್ಲಿ ಅಜ್ಜಿ ಇರುವುದಿಲ್ಲ, ಆದ್ದರಿಂದಲೇ ಇಂದು ನಾವು ಒಂದು ವಿಶೇಷ ಪರಿಹಾರವನ್ನು ನೋಡಲಿದ್ದೇವೆ. ಶೀತ-ಕೆಮ್ಮಿನಿಂದ ಪರಿಹಾರ ಪಡೆಯಲು ಇದು ತುಂಬಾ ಉಪಯುಕ್ತವಾಗಿದೆ.

ಈ ಉಪಾಯವನ್ನು ಹೇಗೆ ಮಾಡಬೇಕು ?

೧. ಹಂಚಿನ (ತವೆ) ಮೇಲೆ ೨೦ ಕರಿಮೆಣಸಿನಕಾಳು ಮತ್ತು ೧೦ ಲವಂಗಗಳನ್ನು ಚೆನ್ನಾಗಿ ಹುರಿದುಕೊಳ್ಳಬೇಕು.
೨. ನಂತರ ಅವುಗಳನ್ನು ಒರುಳು ಕಲ್ಲಿನಲ್ಲಿ ಅಥವಾ ಅರೆಗಲ್ಲಿನಲ್ಲಿ ಜಜ್ಜಿ ಸಣ್ಣ ಪುಡಿ ಮಾಡಬೇಕು.
೩. ಹಸಿಶುಂಠಿ (ಅಲಾ) ಯನ್ನು ತುರಿದು ಕೊಳ್ಳಬೇಕು ಮತ್ತು ಹತ್ತಿಯ ಬಟ್ಟೆಯಿಂದ ಹಿಂಡಿ ರಸವನ್ನು ತೆಗೆಯಬೇಕು.
೪. ಈ ಹಸಿಶುಂಠಿಯ ರಸವನ್ನು ಜೇನುತುಪ್ಪದಲ್ಲಿ ಹಾಕಿ ಅದರಲ್ಲಿ ಚಿಟಿಕೆಯಷ್ಟು ಉಪ್ಪು ಮತ್ತು ಅರಿಸಿಣ ಹಾಕಬೇಕು.
೫. ಆ ಮಿಶ್ರಣದಲ್ಲಿ ಮೆಣಸು ಮತ್ತು ಲವಂಗಗಳನ್ನು ಕುಟ್ಟಿ ಮಾಡಿದ ಪುಡಿಯನ್ನು ಹಾಕಬೇಕು ಮತ್ತು ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಬೇಕು.
೬. ದಿನಕ್ಕೆ ೨ ಬಾರಿ ಈ ಲೇಹವನ್ನು ಅರ್ಧ ಚಮಚದಷ್ಟು ತೆಗೆದುಕೊಳ್ಳಬೇಕು. ಇದರಿಂದ ದೇಹಕ್ಕೆ ಉಷ್ಣತೆ ದೊರಕಿ ಶೀತ-ಕಫ ಮತ್ತು ಕೆಮ್ಮು ಕಡಿಮೆಯಾಗಲು ಸಹಾಯವಾಗುತ್ತದೆ.

ಸಂಕಲನಕಾರರು : ಡಾ. ಪ್ರಮೋದ ಢೆರೆ, ನಿಸರ್ಗ ಉಪಚಾರ ತಜ್ಞರು, ಆರೋಗ್ಯದ ವಿಷಯದ ಉಪನ್ಯಾಸಕರು ಮತ್ತು ಲೇಖಕರು, ಪಿಂಪರಿ-ಚಿಂಚವಡ, ಪುಣೆ ಜಿಲ್ಲೆ.