ಆಮ್ಲಪಿತ್ತದ ತೊಂದರೆಗೆ ಜೀವನಶೈಲಿಯಲ್ಲಿ ಬದಲಾವಣೆ ಮಾಡುವುದು ಅತ್ಯಾವಶ್ಯಕ !

ವೈದ್ಯೆ (ಸೌ.) ಮುಕ್ತಾ ಲೊಟಲೀಕರ

ಸದ್ಯ ಬಹಳಷ್ಟು ಜನರಲ್ಲಿ ಆಮ್ಲಪಿತ್ತದ ತೊಂದರೆ ಇರುವುದು ಕಂಡುಬರುತ್ತದೆ. ಎದೆಯಲ್ಲಿ ಉರಿಯುತ್ತಿರುವಾಗ ಅನೇಕ ಜನರು ಕೂಡಲೇ ಪೇಟೆಯಲ್ಲಿ ಸಿಗುವ ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ೧-೨ ದಿನ ಪಿತ್ತ ಕಡಿಮೆಯಾಗುತ್ತದೆ ಮತ್ತು ಪುನಃ ಅದೇ ತೊಂದರೆ. ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆಮ್ಲಪಿತ್ತದ ‘ಎದೆಯಲ್ಲಿ ಉರಿಯುವುದು’ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ; ಆದರೆ ಆ ಸಮಸ್ಯೆ ಸಂಪೂರ್ಣ ಕಡಿಮೆ ಆಗುವುದಿಲ್ಲ. ಇಲ್ಲಿ ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ರೋಗಿಯು ತನ್ನ ಆಹಾರ ವಿಹಾರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಆದ್ದರಿಂದ ಆಮ್ಲಪಿತ್ತದ ತೊಂದರೆ ಮೇಲಿಂದ ಮೇಲೆ ಆಗುತ್ತಿರುತ್ತದೆ. ಮೊದಲು ಪಿತ್ತವನ್ನು ಹೆಚ್ಚಿಸುವ ಆಹಾರವನ್ನು ಸೇವಿಸಿದ ನಂತರವೇ ಆಮ್ಲಪಿತ್ತದ ತೊಂದರೆ ಆಗುತ್ತದೆ. ನಂತರ ಏನೇ ತಿಂದರೂ, ಆಮ್ಲಪಿತ್ತವಾಗತೊಡಗುತ್ತದೆ. ಉದಾ. ಮೊಸರಿನ ಪಾತ್ರೆಯನ್ನು ತೊಳೆಯದೇ ನಾವು ಅದರಲ್ಲಿ ಹಾಲು ಹಾಕಿದರೆ, ಆ ಹಾಲೂ ಸಹ ತಕ್ಷಣ ಹುಳಿಯಾಗುತ್ತದೆ, ಹಾಗೆಯೇ ನಾವು ಸಾದಾ ಆಹಾರವನ್ನು ಸೇವಿಸಿದರೂ, ಆಮ್ಲಪಿತ್ತವಾಗುತ್ತದೆ ಮತ್ತು ನಂತರ ಈ ತೊಂದರೆ ಹೆಚ್ಚುತ್ತಲೇ ಹೋಗುತ್ತದೆ.

ಇಂದು ನಾವು ಆಮ್ಲಪಿತ್ತದ ತೊಂದರೆಯಾಗುತ್ತಿದ್ದರೆ ಏನು ಮಾಡಬೇಕು ? ಮತ್ತು ಏನು ಮಾಡಬಾರದು ? ಈ ಬಗೆಗಿನ ಮಾಹಿತಿಯನ್ನು ಈ ಲೇಖನದಿಂದ ತಿಳಿದುಕೊಳ್ಳೋಣ. ಮನೆಮದ್ದುಗಳಿಂದ ಆಮ್ಲಪಿತ್ತದ ತೊಂದರೆ ಕಡಿಮೆ ಆಗದಿದ್ದರೆ ವೈದ್ಯರ ಸಲಹೆ ಪಡೆದು ಅವರು ಹೇಳಿದ ಔಷಧಿಗಳನ್ನು ತೆಗೆದುಕೊಳ್ಳಬೇಕು.

೧. ಆಮ್ಲಪಿತ್ತದ ಲಕ್ಷಣಗಳು

ಅ. ಎದೆಯಲ್ಲಿ ಮತ್ತು ಗಂಟಲಿನಲ್ಲಿ ಉರಿಯುವುದು
ಆ. ತಲೆ ನೋಯುವುದು
ಇ. ಹುಳಿ ತೇಗು ಬರುವುದು
ಈ. ಆಹಾರ ಜೀರ್ಣವಾಗದಿರುವುದು
ಉ. ಹೊಟ್ಟೆ ಉಬ್ಬುವುದು
ಊ. ಕೆಲವೊಮ್ಮೆ ವಾಂತಿ ಮತ್ತು ಭೇದಿಯಾಗುವುದು

೨. ಆಮ್ಲಪಿತ್ತದ ತೊಂದರೆ ಹೆಚ್ಚಾಗುವುದರ ಹಿಂದಿನ ಕಾರಣ

೧. ಆಹಾರ ೨. ದೈನಂದಿನ ಕೃತಿ ಮತ್ತು ೩. ಮಾನಸಿಕ ಕಾರಣಗಳು

ಮೊದಲಿಗೆ ಯಾವ ಕಾರಣಗಳಿಂದ ಆಮ್ಲಪಿತ್ತದ ತೊಂದರೆಯಾಗುತ್ತದೆ ? ಎಂಬುದನ್ನು ನಾವು ತಿಳಿದು ಕೊಳ್ಳೋಣ. ಈ ಕಾರಣಗಳನ್ನು ತಡೆಗಟ್ಟಿದರೆ ನಿಮ್ಮ ಈ ತೊಂದರೆ ಸಾಕಷ್ಟು ಪ್ರಮಾಣದಲ್ಲಿ ಕಡಿಮೆಯಾಗುತ್ತದೆ.

೨ ಅ. ಕಾರಣವಾದ ಆಹಾರ :

೧. ಹುಳಿ, ಉಪ್ಪು ಮತ್ತು ಖಾರ ಇಂತಹ ಪದಾರ್ಥಗಳನ್ನು ಮೇಲಿಂದ ಮೇಲೆ ಮತ್ತು ಹೆಚ್ಚು ಪ್ರಮಾಣದಲ್ಲಿ ತಿನ್ನುವುದು, ಅಂದರೆ ಏನು ಮಾಡುವುದು ? ವಿವಿಧ ಪ್ರಕಾರದ ಉಪ್ಪಿನಕಾಯಿ, ಹುಳಿ ಮೊಸರು-ಮಜ್ಜಿಗೆ, ತುಂಬಾ ಮಸಾಲೆಯುಕ್ತ ತರಕಾರಿ ಗಳು, ಬಹಳಷ್ಟು ಎಣ್ಣೆ ಹಾಕಿ ಮಾಡಿದ ಪಲ್ಯ, ವಡಾಪಾವ್, ಹಸಿಮೆಣಸಿನಕಾಯಿಯ ಹಿಂಡಿ (ಖಾರ) ಇತ್ಯಾದಿಗಳನ್ನು ಬಹಳಷ್ಟು ಪ್ರಮಾಣದಲ್ಲಿ ತಿನ್ನುವುದು. ಇದರ ಹೊರತು ಸದ್ಯದ ಮುಖ್ಯ ಕಾರಣವೆಂದರೆ ಚೈನೀಸ್‌ ಪದಾರ್ಥಗಳು. ಇವುಗಳಲ್ಲಿ ಹೆಚ್ಚು ಪ್ರಮಾಣದಲ್ಲಿ ಹಸಿಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನಕಾಯಿಗಳಿರುತ್ತವೆ ಮತ್ತು ‘ವಿನೆಗರ್‌’ವನ್ನೂ ಸೇರಿಸಲಾಗುತ್ತದೆ. ಇಂತಹ ಪದಾರ್ಥಗಳಿಂದ ಪಿತ್ತದ ಜ್ವಾಲೆ ಏಳುವುದು, ಇದರಲ್ಲಿ ಯಾವುದೇ ಸಂಶಯವೇ ಇಲ್ಲ.
೨. ಹುಳಿ ಮಾಡಿದ ಪದಾರ್ಥಗಳು ಉದಾ. ಇಡ್ಲಿ, ದೋಸೆ, ಢೋಕಳಾ, ಪಾವ್, ಟೊಸ್ಟ್‌, ಖಾರಿ ಈ ಪದಾರ್ಥಗಳನ್ನು ಹುಳಿ (ಹುದುಗಿಸಿ) ಮಾಡಲಾಗುತ್ತದೆ. ಆದ್ದರಿಂದ ಈ ಪದಾರ್ಥಗಳನ್ನು ಮೇಲಿಂದ ಮೇಲೆ ಸೇವಿಸಿದರೆ, ಅವು ಪಿತ್ತವನ್ನು ಹೆಚ್ಚಿಸುತ್ತವೆ.
೩. ಮಾಂಸಾಹಾರ, ಸರಾಯಿ, ಸಿಗರೇಟ್‌ ಇಂತಹ ವ್ಯಸನಗಳಿಂದಲೂ ಪಿತ್ತ ಹೆಚ್ಚಾಗುತ್ತದೆ.
೪. ಹಸಿವು ಇಲ್ಲದಿರುವಾಗ ಮೇಲಿಂದ ಮೇಲೆ ಏನಾದರೂ ತಿನ್ನುವುದರಿಂದಲೂ ಆಮ್ಲಪಿತ್ತವಾಗುತ್ತದೆ.
೫. ಮೇಲಿಂದ ಮೇಲೆ ತಂಗಳು ಆಹಾರವನ್ನು ಸೇವಿಸುವುದು.
೬. ಚಹಾ ಅಥವಾ ಕಾಫಿ ಹೆಚ್ಚೆಚ್ಚು ಪ್ರಮಾಣದಲ್ಲಿ ಕುಡಿಯುವುದು.

೨ ಆ. ಕಾರಣವಾಗಿರುವ ದೈನಂದಿನ ಕೃತಿಗಳು :

೧. ಸಮಯಕ್ಕೆ ಸರಿಯಾಗಿ ಶೌಚಕ್ಕೆ ಹೋಗದಿರುವುದು. ಬೆಳಗ್ಗೆ ಕಛೇರಿಯ ಕೆಲಸಕ್ಕಾಗಿ ಅವಸರದಿಂದ ಸಿದ್ಧವಾಗಿ ಹೊರಡಬೇಕಾಗಿರುತ್ತದೆ, ಆಗ ಶೌಚಕ್ಕೆ ಹೋಗುವುದಿದ್ದರೂ ‘ಸಮಯವಿಲ್ಲ’ ಎಂದು ಹೋಗುವುದನ್ನು ತಡೆಯಲಾಗುತ್ತದೆ. ಇಂತಹ ನೈಸರ್ಗಿಕ ಕೆಲಸಗಳನ್ನು ಹಿಡಿದಿಟ್ಟುಕೊಳ್ಳುವುದರಿಂದ ಅನೇಕ ರೋಗಗಳಿಗೆ ಆಹ್ವಾನ ನೀಡಿದಂತಾಗುತ್ತದೆ.
೨. ಊಟದ ನಂತರ ತಕ್ಷಣ ಮಲಗುವುದು.
೩. ಊಟವನ್ನು ಮಾಡುವಾಗ ಆಗಾಗ ನೀರು ಕುಡಿಯುವುದು.
೪. ರಾತ್ರಿ ಜಾಗರಣೆ ಮಾಡುವುದು.

೨ ಇ. ಮಾನಸಿಕ ಕಾರಣಗಳು :

೧. ಮುಂಗೋಪಿ ವ್ಯಕ್ತಿಗಳಿಗೆ ಆಮ್ಲಪಿತ್ತದ ತೊಂದರೆ ಆಗುವ ಸಾಧ್ಯತೆ ಹೆಚ್ಚಿರುತ್ತದೆ.
೨. ಮಾನಸಿಕ ಒತ್ತಡ ಮತ್ತು ಚಿಂತೆ ಇದ್ದರೆ, ಮೊದಲಿಗೆ ಹಸಿವು ಕಡಿಮೆಯಾಗುತ್ತದೆ ಮತ್ತು ನಂತರ ಆಮ್ಲಪಿತ್ತದ ತೊಂದರೆ ಪ್ರಾರಂಭವಾಗುತ್ತದೆ.

೨ ಈ. ಹವಾಮಾನ :

ನಾವು ಯಾವ ಪ್ರದೇಶದಲ್ಲಿರುತ್ತೇವೆ ಮತ್ತು ಎಂತಹ ಆಹಾರ ತೆಗೆದುಕೊಳ್ಳುತ್ತೇವೆ, ಎಂಬುದನ್ನೂ ಕೂಡ ತಿಳಿದುಕೊಳ್ಳುವುದು ತುಂಬಾ ಮಹತ್ವದ್ದಾಗಿದೆ. ತೇವ ಹವಾಮಾನ, ಎಲ್ಲಿ ತುಂಬಾ ಮಳೆ ಬೀಳುತ್ತದೆಯೋ, ಅಂತಹ ಪ್ರದೇಶದಲ್ಲಿ ಆಮ್ಲಪಿತ್ತದ ತೊಂದರೆಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ನಾವು ಅಂತಹ ಪ್ರದೇಶಗಳಲ್ಲಿ ಇರುತ್ತಿದ್ದರೆ, ನಮಗೆ ಆಹಾರದ ಮೇಲೆ ಬಹಳ ನಿಯಂತ್ರಣವನ್ನಿಡ ಬೇಕಾಗುತ್ತದೆ. ಇಂತಹ ಪ್ರದೇಶದಲ್ಲಿ ನಾವು ಮೇಲೆ ಕೊಟ್ಟಿರುವ ಪದಾರ್ಥಗಳನ್ನು ಸ್ವಲ್ಪ ತಿಂದರೂ ಬೇಗ ಆಮ್ಲಪಿತ್ತದ ತೊಂದರೆ ಆಗುತ್ತದೆ. ಇದರ ವಿರುದ್ಧ ಶುಷ್ಕ ವಾತಾವರಣದ ಪ್ರದೇಶಗಳಲ್ಲಿ ಜೀರ್ಣಶಕ್ತಿ ಉತ್ತಮವಾಗಿದ್ದರೆ ತಕ್ಷಣ ತೊಂದರೆ ಆಗುವುದಿಲ್ಲ; ಆದರೆ ಆಹಾರದಲ್ಲಿ ಮಸಾಲೆಯುಕ್ತ ಮತ್ತು ಇತರ ಇಂತಹ ಪದಾರ್ಥಗಳನ್ನು ಮೇಲಿಂದ ಮೇಲೆ ತಿಂದರೆ ಶುಷ್ಕ ವಾತಾವರಣದಲ್ಲಿರುವವರಿಗೂ ಆಮ್ಲಪಿತ್ತವಾಗುತ್ತದೆ.

೩. ಆಮ್ಲಪಿತ್ತದ ತೊಂದರೆ ಇರುವವರಿಗೆ ಪಥ್ಯದ ಆಹಾರ

ಅ. ತಮ್ಮ ಆಹಾರದಲ್ಲಿ ಗೋದಿಯ ಫುಲಕೆ (ಎಣ್ಣೆ ಹಚ್ಚದ ಚಪಾತಿ), ರೊಟ್ಟಿ, ಹಳೆ ಅಕ್ಕಿಯ ಅನ್ನ ಇವುಗಳನ್ನು ಸೇರಿಸಬೇಕು.
ಆ. ತರಕಾರಿಗಳಲ್ಲಿ ಹಾಲು ಕುಂಬಳಕಾಯಿ, ಕೆಂಪು ಕುಂಬಳ ಕಾಯಿ, ಬೆಂಡೆಕಾಯಿ, ಪಡವಲ ಕಾಯಿ, ಎಲೆಕೋಸು, ತುಪ್ಪಿರಿ ಕಾಯಿ, ಹರಿವೆಸೊಪ್ಪು ಈ ತರಕಾರಿಗಳನ್ನು ತಿನ್ನಬಹುದು. ಮೇಲಿಂದ ಮೇಲೆ ಹಾಗಲಕಾಯಿ, ಮೆಂತೆಸೊಪ್ಪು, ನುಗ್ಗಿಕಾಯಿ ಇಂತಹ ತರಕಾರಿಗಳನ್ನು ತಿನ್ನುವುದನ್ನು ತಡೆಯಬೇಕು. ಸಾರು ಮಾಡುವಾಗ ಹುಣಸೆಹಣ್ಣಿನ ಬದಲು ಕೊಕಮ್‌ ಬಳಸಬೇಕು.
ಇ. ಗೋದಿ ಹುಗ್ಗಿ (ಸಿಹಿ ಪಾಯಸ), ಅಕ್ಕಿಯ ಬೇಯಿಸಿದ ಪದಾರ್ಥಗಳು, ಹೆಸರುಕಾಳು – ಅಕ್ಕಿಯ ಖಿಚಡಿ, ಜೋಳದ ಹಿಟ್ಟಿನ ದೋಸೆ, ಇಂತಹ ಪದಾರ್ಥಗಳನ್ನು ತಿನ್ನಬೇಕು.
ಈ. ಹಣ್ಣುಗಳಲ್ಲಿ ದ್ರಾಕ್ಷಿ, ಅಂಜೂರ, ದಾಳಿಂಬೆ, ನೆಲ್ಲ್ಲಿಕಾಯಿ, ಸೇಬು, ಬಾಳೆಕಾಯಿ, ಕೊಬ್ಬರಿ, ಖರ್ಜೂರ ಈ ಹಣ್ಣುಗಳನ್ನು ತಿನ್ನಬಹುದು.
ಉ. ಹಾಲು, ತುಪ್ಪ, ಬೆಣ್ಣೆ ಇವುಗಳನ್ನು ಸೇವಿಸಬೇಕು. ಮೊಸರು, ಮಜ್ಜಿಗೆಯನ್ನು ತಡೆಯಬೇಕು.
ಊ. ಯಾವುದೇ ಚಟ್ನಿಯನ್ನು ಮಾಡುವಾಗ ಕೊತ್ತಂಬರಿ, ಕೊಬ್ಬರಿ, ಧನಿಯಾ-ಜೀರಿಗೆಯನ್ನು ಹಾಕಿ ಮಾಡಬೇಕು.
ಎ. ಅಡುಗೆಯನ್ನು ಮಾಡುವಾಗ ಎಣ್ಣೆಯನ್ನು ಕಡಿಮೆ ಪ್ರಮಾಣದಲ್ಲಿ ಬಳಸಬೇಕು.
ಐ. ತಿಂಡಿಗಾಗಿ ಭತ್ತದ ಅರಳುಗಳ ಕಡಿಮೆ ಎಣ್ಣೆಯನ್ನು ಹಾಕಿ ಮಾಡಿದ ಚೂಡಾ, ರಾಜಗಿರಿ ವಡೆ ಅಥವಾ ಉಂಡೆ, ಕೊಬ್ಬರಿಯ ವಡೆಗಳನ್ನು ತಿನ್ನಬಹುದು. ಶೇವು, ಚೂಡಾ, ಖಾರಾಶೇವು (ಮಿಕ್ಷ್ಚರ), ಚಿಪ್ಸ್ ಇಂತಹ ಪದಾರ್ಥಗಳನ್ನು ತಿನ್ನಬಾರದು.

೪. ಆಮ್ಲಪಿತ್ತಕ್ಕಾಗಿ ಕೆಲವು ಮನೆಮದ್ದುಗಳು

ಅ. ಬೆಳಗ್ಗೆ ಖಾಲಿ ಹೊಟ್ಟೆಗೆ ಗುಲಕಂದ್, ಗುಳಂಬ ತಿನ್ನಬೇಕು.
ಆ. ತುಳಸಿಯ ಬೀಜಗಳನ್ನು ರಾತ್ರಿ ಒಂದು ಬಟ್ಟಲಿನಲ್ಲಿ ನೆನೆಹಾಕಿ ಅವುಗಳನ್ನು ಬೆಳಗ್ಗೆ ಖಾಲಿಹೊಟ್ಟೆಯಲ್ಲಿ ತಿನ್ನಬೇಕು ಮತ್ತು ನೀರು ಕುಡಿಯಬೇಕು.
ಇ. ರಾತ್ರಿ ೧ ಲೋಟಾ ನೀರಿನಲ್ಲಿ ಅರ್ಧ ಚಮಚದಷ್ಟು ಧನಿಯಾ ಹಾಗೂ ಜೀರಿಗೆ ಪುಡಿ ನೆನೆಹಾಕಬೇಕು ಮತ್ತು ಬೆಳಗ್ಗೆ ಆ ನೀರನ್ನು ಸೋಸಿ ಖಾಲಿಹೊಟ್ಟೆಯಲ್ಲಿ ಕುಡಿಯಬೇಕು. ರುಚಿಗೆ ಸ್ವಲ್ಪ ಕಲ್ಲುಸಕ್ಕರೆಯನ್ನು ಹಾಕಬಹುದು.
ಈ. ತಾಜಾ ದಾಳಿಂಬೆಯ ಅಥವಾ ನೆಲ್ಲಿಕಾಯಿಯ ರಸವನ್ನು ಕುಡಿಯಬೇಕು.

– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪುಣೆ (೧೩.೮.೨೦೨೩)