ಜೆರುಸಲೆಮ್ – ನಮ್ಮ ಸರಕಾರವು ಸೇನೆಯ ಮೇಲಿನ ಎಲ್ಲಾ ನಿರ್ಬಂಧಗಳನ್ನು ಹಿಂಪಡೆದಿದೆ. ಆದ್ದರಿಂದ ನಮ್ಮ ಸೈನ್ಯವು ಹಮಾಸ್ ಸ್ಥಳಗಳ ಮೇಲೆ ಹಿಡಿತ ಸಾಧಿಸಿದ್ದು, ನಾವು ಈಗ ಪೂರ್ಣ ಶಕ್ತಿಯೊಂದಿಗೆ ದಾಳಿ ನಡೆಸಲಿದ್ದೇವೆ. ನಾವು ಗಾಜಾಪಟ್ಟಿಯ ನಕ್ಷೆಯನ್ನೇ ಬದಲಾಯಿಸುತ್ತೇವೆ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರು ತಮ್ಮ ಪಡೆಗಳನ್ನು ಉದ್ದೇಶಿಸಿ ಮಾತನಾಡುವಾಗ ಎಚ್ಚರಿಕೆ ನೀಡಿದ್ದಾರೆ. ‘ದಿ ಟೈಮ್ಸ್ ಆಫ್ ಇಸ್ರೇಲ್’ ಪತ್ರಿಕೆ ಈ ಸುದ್ದಿಯನ್ನು ಪ್ರಸಾರ ಮಾಡಿದೆ.
ಗ್ಯಾಲಂಟ್ ತಮ್ಮ ಮಾತನ್ನು ಮುಂದುವರಿಸಿ, ನಮ್ಮ ಸೇನೆಗೆ ಪರಿಸ್ಥಿತಿಯನ್ನು ಬದಲಾಯಿಸುವ ಶಕ್ತಿ ಇದೆ. ನಾವು ತುಂಬಾ ನೋವನ್ನು ಅನುಭವಿಸಿದ್ದೇವೆ. ಈಗ ನಿಮಗೆ ಬದಲಾವಣೆಯನ್ನು ನೋಡಲು ಸಿಗುವುದು. ಹಮಾಸ್ ಗೂ ಗಾಜಾ ಪಟ್ಟಿಯ ಸ್ಥಿತಿಯಲ್ಲಿ ಬದಲಾವಣೆ ಬೇಕಾಗಿತ್ತು, ಅದನ್ನು ಈಗ ನಾವು ಮಾಡಿ ತೋರಿಸುತ್ತೇವೆ. ಗಾಜಾ ಪಟ್ಟಿಯ ಪರಿಸ್ಥಿತಿ 180 ಡಿಗ್ರಿಗಳಷ್ಟು ಬದಲಾಯಿಸಲಾಗುವುದು. ಇನ್ನು ಮುಂದೆ ಗಾಜಾ ಪಟ್ಟಿ ಜಗತ್ತಿಗೆ ಎಂದಿಗೂ ಅದರ ಮೂಲ ರೂಪದಲ್ಲಿ ಮತ್ತೆ ಕಾಣಿಸುವುದಿಲ್ಲ. ನಾವು ಸಂಪೂರ್ಣ ಶಕ್ತಿಯೊಂದಿಗೆ ಮತ್ತು ಯಾವುದೇ ರಾಜಿ ಇಲ್ಲದೆ ಹೋರಾಡುತ್ತೇವೆ ಎಂದು ಹೇಳಿದರು.