ಪಿತ್ತದೋಷ ನಿವಾರಣೆಗಾಗಿ ಗಣಪತಿ ಪೂಜೆ

ಗಣೇಶೋತ್ಸವ ೨೦೨೩

ಸನಾತನ ಹಿಂದೂ ಧರ್ಮಕ್ಕನುಸಾರ ಆಚರಿಸಲಾಗುವ ಹಬ್ಬ, ಉತ್ಸವ ಮುಂತಾದವುಗಳಿಂದ ಕೇವಲ ಆಧ್ಯಾತ್ಮಿಕ ಮಹತ್ವ ಮಾತ್ರವಲ್ಲ, ಋತುಚಕ್ರಗಳ ವಿಚಾರ ಮಾಡಿ ಅವುಗಳಿಂದ ಶಾರೀರಿಕ ಮತ್ತು ಮಾನಸಿಕ ಮಟ್ಟದಲ್ಲಿಯೂ ಲಾಭವಾಗುತ್ತಿರುತ್ತದೆ. ನಮ್ಮ ಋಷಿಮುನಿಗಳ ಮತ್ತು ಸನಾತನ ವೈದಿಕ ಹಿಂದೂ ಧರ್ಮದ ಅಲೌಕಿಕತ್ವವು ಇದರಿಂದ ಪುನಃ ಒಮ್ಮೆ ಗಮನಕ್ಕೆ ಬರುತ್ತದೆ. ಪ್ರಸ್ತುತ ಲೇಖನದಿಂದ ನಾವು ಭಾದ್ರಪದ ತಿಂಗಳಿನಲ್ಲಿ ಮಾಡಲಾಗುವ ಗಣಪತಿ ಪೂಜೆಯಿಂದ ಶಾರೀರಿಕ ದೃಷ್ಟಿಯಲ್ಲಿ ಏನು ಮಹತ್ವವಿದೆ, ಎಂಬುದನ್ನು ತಿಳಿದುಕೊಳ್ಳೋಣ.

ಸೆಪ್ಟೆಂಬರ್‌-ಅಕ್ಟೋಬರ್‌ ತಿಂಗಳಿನಲ್ಲಿ ಸ್ವಾಭಾವಿಕವಾಗಿ ಶರೀರದಲ್ಲಿ ಪಿತ್ತ ಹೆಚ್ಚಾಗುವುದು ಮತ್ತು ಅದರಿಂದ ವಿವಿಧ ಶಾರೀರಿಕ ತೊಂದರೆಗಳಾಗುವುದು ‘ಸೆಪ್ಟೆಂಬರ್‌-ಅಕ್ಟೋಬರ್‌ ಈ ಎರಡು ತಿಂಗಳಿನಲ್ಲಿ ಒಂದು ರೀತಿಯ ಚಿಕ್ಕ ಬೇಸಿಗೆಕಾಲ ಇರುತ್ತದೆ. ಈ ಬೇಸಿಗೆಯಲ್ಲಿ ಶರೀರಕ್ಕೆ ಹೊರಗಿನಿಂದ ಮಾತ್ರವಲ್ಲ ಶರೀರದ ಒಳಗಿನಿಂದಲೂ ತೊಂದರೆಯಾಗುತ್ತಿರುತ್ತದೆ. ಈ ತೊಂದರೆಯಲ್ಲಿ ಹೆಚ್ಚಳ ವಾಗುತ್ತದೆ. ಈ ದಿನಗಳಲ್ಲಿ ಕೆಲವು ಜನರ ಶರೀರದಲ್ಲಿ ಪಿತ್ತದ ವೇಗವು ಹೆಚ್ಚುತ್ತದೆ. ಆದುದರಿಂದ ಕೆಲವರಿಗೆ ಬೆಳಗ್ಗೆ ೯-೧೦ ಗಂಟೆಗೆ ಮತ್ತು ಸಾಯಂಕಾಲ ೪-೫ ಗಂಟೆಗೆ ಹೊಟ್ಟೆಯಲ್ಲಿ ನೋಯುತ್ತದೆ. ಕೆಲವರಿಗೆ ರಾತ್ರಿ ಬೇಗ ನಿದ್ರೆ ಬರುವುದಿಲ್ಲ. ಕೆಲವರಿಗೆ ಶೌಚದಲ್ಲಿ ರಕ್ತ ಬೀಳುತ್ತದೆ, ಕೆಲವರಿಗೆ ಮೂತ್ರದ ಮೂಲಕ ರಕ್ತ ಬೀಳುತ್ತದೆ. ಕೆಲವರಿಗೆ ಕೈ-ಕಾಲುಗಳ ಉರಿತ ಅಥವಾ ಕಣ್ಣುಗಳು ಉರಿಯುತ್ತವೆ. ಕೆಲವರಿಗೆ ಗಂಟಲಿನಲ್ಲಿ ಉರಿಯುತ್ತದೆ ಮತ್ತು ಹುಳಿ-ಕಹಿ ಪಿತ್ತವು ಗಂಟಲಿನಲ್ಲಿ ಬರುತ್ತದೆ.

ಶರೀರದಲ್ಲಿ ಹೆಚ್ಚಾಗುವ ಈ ಪಿತ್ತ ನಿವಾರಣೆಗೆ ಶಾಸ್ತ್ರಶುದ್ಧ ಉಪಾಯವೆಂದರೆ ಶ್ರೀ ಗಣೇಶನ ಪೂಜೆ !

ಪ್ರತಿವರ್ಷ ಭಾದ್ರಪದ ಆಶ್ವಯುಜ ತಿಂಗಳಿನಲ್ಲಿ ಶರೀರದಲ್ಲಿನ ಪಿತ್ತದೋಷವು ಹೆಚ್ಚುತ್ತದೆ. ಗಣಪತಿ ಪೂಜೆಯ ವಿಧಿಗಳಿಂದ ಈ ಹೆಚ್ಚಳವಾದ ಪಿತ್ತದೋಷವು ಕಡಿಮೆಯಾಗಲು ಸಹಾಯವಾಗುತ್ತದೆ.

ಅ. ಗಣಪತಿಯ ಅಲಂಕಾರ, ಗಣಪತಿಯ ಪ್ರಸಾದ, ರಾತ್ರಿಯ ಗಾಯನ ಮುಂತಾದ ಲಲಿತ ಕಾರ್ಯಕ್ರಮಗಳೆಲ್ಲವೂ ಪಿತ್ತದೋಷದ ನಿವಾರಣೆಗಾಗಿಯೇ ಆಗಿವೆ.

ಆ. ಗಣಪತಿಗಾಗಿ (ನೈವೇದ್ಯಕ್ಕಾಗಿ) ಬೆಲ್ಲ-ಕೊಬ್ಬರಿಯನ್ನು ಹಾಕಿ ಬೇಯಿಸಿದ ಮೋದಕಗಳು ಅಥವಾ ಕಡುಬುಗಳಿರುತ್ತವೆ. ಈ ಪದಾರ್ಥಗಳೂ ಪಿತ್ತನಾಶಕವಾಗಿವೆ.

ಇ. ಉತ್ತುತ್ತೆ, ಕೊಬ್ಬರಿ, ಕಲ್ಲುಸಕ್ಕರೆ, ಒಣದ್ರಾಕ್ಷಿ ಮತ್ತು ಕಸಕಸೆ ಈ ೫ ಪದಾರ್ಥಗಳನ್ನು ಪುಡಿ ಮಾಡಿ ಪ್ರಸಾದವೆಂದು ತಯಾರಿಸಿದ ಪಂಚಖಾದ್ಯವನ್ನು ಆರತಿ ಮಾಡಿದ ನಂತರ ಹಂಚುತ್ತಾರೆ. ಅದೂ ಪಿತ್ತನಾಶಕವಾಗಿದೆ.

ಈ. ಗಣಪತಿಯ ಅಲಂಕಾರವನ್ನು ಮಾಡುವಾಗ ಬಾಳೀಲೆ ಗಳನ್ನು ಬಳಸುತ್ತಾರೆ ಮತ್ತು ರಂಗೋಲಿ ಬಿಡಿಸುತ್ತಾರೆ. ಲಾವಂಚ, ಗುಲಾಬಿ, ಗಂಧ ಇತ್ಯಾದಿ ಸುವಾಸನೆಗಳನ್ನು ಉಪಯೋಗಿಸುತ್ತಾರೆ. ಅವುಗಳಿಂದಲೂ ಪಿತ್ತನಾಶವಾಗಲು ಸಹಾಯವಾಗುತ್ತದೆ.

ಉ. ಗಣಪತಿಯ ಮೂರ್ತಿಗಳನ್ನು ಮಣ್ಣಿನಿಂದ ತಯಾರಿಸು ತ್ತಾರೆ. ಅದನ್ನು ವಿಸರ್ಜನೆ ಮಾಡಲು ನದಿ ಅಥವಾ ಸಮುದ್ರಗಳಲ್ಲಿ ಆಳದವರೆಗೆ ನೀರಿನಲ್ಲಿ ಹೋಗುತ್ತಾರೆ. ಈ ಕಾರಣದಿಂದಲೂ ಭಕ್ತನ ಶರೀರದ ಮೇಲೆ ಪಿತ್ತನಾಶಕ ದ್ರವವಾದ ನೀರಿನಿಂದ ಅನುಕೂಲಕರ ಪರಿಣಾಮವಾಗುತ್ತದೆ.’

– ವೈದ್ಯೆ (ಸೌ.) ಮಂಜಿರಿ ಜೋಗ.