ಶ್ರೀ ಗಣೇಶ ಚತುರ್ಥಿಯ ಸಮಯದಲ್ಲಿ ಬರುವ ವ್ರತಗಳು

ಹರಿತಾಲಿಕಾ

೧. ತಿಥಿ : ಭಾದ್ರಪದ ಶುಕ್ಲ ತೃತೀಯಾ

೨. ಇತಿಹಾಸ ಮತ್ತು ಉದ್ದೇಶ : ಪಾರ್ವತಿಯು ಈ ವ್ರತ ಮಾಡಿ ಶಿವನನ್ನು ಪ್ರಾಪ್ತ ಮಾಡಿಕೊಂಡಳು; ಮನಸ್ಸಿನಲ್ಲಿದ್ದಂತಹ ವರ ಸಿಗಲು ಹಾಗೂ ಅಖಂಡ ಸೌಭಾಗ್ಯಕ್ಕಾಗಿ ಸ್ತ್ರೀಯರು ಈ ವ್ರತ ಮಾಡುತ್ತಾರೆ.

೩. ವ್ರತ ಮಾಡುವ ಪದ್ಧತಿ : ಮುಂಜಾನೆ ಮಂಗಲಸ್ನಾನ ಮಾಡಿ ಪಾರ್ವತಿ ಮತ್ತು ಅವಳ ಸಖಿಯರ ಮೂರ್ತಿಗಳನ್ನು ತಂದು ಅವುಗಳನ್ನು ಶಿವಲಿಂಗದೊಂದಿಗೆ ಪೂಜಿಸುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಉತ್ತರಪೂಜೆ ಮಾಡಿ ಲಿಂಗ ಮತ್ತು ಮೂರ್ತಿಗಳನ್ನು ವಿಸರ್ಜಿಸುತ್ತಾರೆ.

ಋಷಿಪಂಚಮಿ

೧. ತಿಥಿ : ಭಾದ್ರಪದ ಶುಕ್ಲಪಂಚಮಿ

೨. ಋಷಿ : ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.

೩. ಉದ್ದೇಶ

ಅ. ಯಾವ ಋಷಿಗಳು ತಮ್ಮ ತಪೋಬಲದಿಂದ ಜಗತ್ತಿನಲ್ಲಿರುವ ಮಾನವರ ಮೇಲೆ ಅನಂತ ಉಪಕಾರಗಳನ್ನು ಮಾಡಿದ್ದಾರೆಯೋ, ಮಾನವರ ಜೀವನಕ್ಕೆ ಯೋಗ್ಯದಿಶೆಯನ್ನು ಕೊಟ್ಟಿದ್ದಾರೆಯೋ, ಅಂತಹ ಋಷಿಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ.

ಆ. ಮಾಸಿಕ ಋತು, ಅಶೌಚ ಮತ್ತು ಸ್ಪರ್ಶಾಸ್ಪರ್ಶದಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ ಹಾಗೂ ಗೋಕುಲಾಷ್ಟಮಿಯ ಉಪವಾಸದಿಂದಲೂ ಕಡಿಮೆಯಾಗುತ್ತವೆ.

೪. ವ್ರತ ಮಾಡುವ ಪದ್ಧತಿ

ಅ. ಈ ದಿನ ಸ್ತ್ರೀಯರು ಬೆಳಗ್ಗೆ ಉತ್ರಣೆ ಕಡ್ಡಿಯಿಂದ (ಒಂದು ವನಸ್ಪತಿ) ಹಲ್ಲುಜ್ಜಬೇಕು.

ಆ. ಸ್ನಾನದ ನಂತರ ಪೂಜೆಯ ಮೊದಲು ‘ಮಾಸಿಕ ಋತುಸ್ರಾವದ
ಸಮಯದಲ್ಲಿ ತಿಳಿದು-ತಿಳಿಯದೇ ಮಾಡಿದ ಸ್ಪರ್ಶಗಳಿಂದ ತಗಲುವ ದೋಷಗಳ ನಿವಾರಣೆಗಾಗಿ ಅರುಂಧತಿ ಸಹಿತ ಸಪ್ತರ್ಷಿಗಳನ್ನು ಪ್ರಸನ್ನಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ’, ಎಂದು ಸಂಕಲ್ಪ ಮಾಡಬೇಕು.

ಇ. ಮಣೆಯ ಮೇಲೆ ಅಕ್ಕಿಯ ಎಂಟು ಗುಡ್ಡೆಗಳನ್ನು ಮಾಡಿ ಅವುಗಳ ಮೇಲೆ ೮ ಅಡಿಕೆಯನ್ನಿಟ್ಟು ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯರ ಆವಾಹನೆ ಮತ್ತು ಷೋಡಶೋಪಚಾರ ಪೂಜೆ ಮಾಡಬೇಕು.

ಈ. ಈ ದಿನ ಗೆಡ್ಡೆಗೆಣಸುಗಳ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಎತ್ತುಗಳ ಶ್ರಮದಿಂದ ತಯಾರಾದ ಯಾವುದೇ ಆಹಾರ ವನ್ನು ಸೇವಿಸಬಾರದು ಎಂದು ಹೇಳಲಾಗಿದೆ.

ಉ. ಮರುದಿನ ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯ ವಿಸರ್ಜಿಸಬೇಕು. ೧೨ ವರ್ಷಗಳ ನಂತರ ಅಥವಾ ೫೦ ನೇ ವಯಸ್ಸಿನ ನಂತರ ಈ ವ್ರತದ ಉದ್ಯಾಪನೆ ಮಾಡಬಹುದು.

ಜೇಷ್ಠಾ ಗೌರಿ

೧. ತಿಥಿ : ಭಾದ್ರಪದ ಶುಕ್ಲಾಷ್ಟಮಿ

೨. ವ್ರತ ಮಾಡುವ ಪದ್ಧತಿ

ಅ. ಈ ವ್ರತವು ಮೂರು ದಿನಗಳ ವರೆಗೆ ನಡೆಯುತ್ತದೆ. ಪ್ರಾಂತ್ಯಗಳಿಗನುಸಾರ ಈ ವ್ರತವನ್ನು ಮಾಡುವ ವಿವಿಧ ಪದ್ಧತಿಗಳಿವೆ. ಇದರಲ್ಲಿ ಧಾತುವಿನ (ಲೋಹದ), ಮಣ್ಣಿನ ಪ್ರತಿಮೆಯನ್ನು ಮಾಡಿ ಅಥವಾ ಕಾಗದದ ಮೇಲೆ ಶ್ರೀ ಲಕ್ಷ್ಮೀಯ ಚಿತ್ರವನ್ನು ಬಿಡಿಸಿ, ಮತ್ತೆ ಕೆಲವು ಕಡೆಗಳಲ್ಲಿ ನದಿದಡದಿಂದ ಐದು ಸಣ್ಣ ಕಲ್ಲುಗಳನ್ನು ತಂದು ಅವುಗಳನ್ನು ಗೌರಿ ಎಂದು ಪೂಜಿಸುತ್ತಾರೆ. ಕೆಲವು ಕಡೆಗಳಲ್ಲಿ ಪರಿಮಳದ ಹೂವುಗಳನ್ನು ಬಿಡುವ ವನಸ್ಪತಿಯ ಸಸಿಗಳನ್ನು ಒಟ್ಟಿಗೆ ಕಟ್ಟಿ ಅವುಗಳಿಂದ ಮೂರ್ತಿಯನ್ನು ತಯಾರಿಸುತ್ತಾರೆ ಮತ್ತು ಅದರ ಮೇಲೆ ಮಣ್ಣಿನ ಮುಖವಾಡ ಮಾಡುತ್ತಾರೆ. ಆ ಮೂರ್ತಿಗೆ ಸೀರೆಯನ್ನು ಉಡಿಸಿ ಆಭರಣ ಗಳಿಂದ ಅಲಂಕರಿಸುತ್ತಾರೆ.

ಆ. ಗೌರಿಯ ಸ್ಥಾಪನೆ ಮಾಡಿದ ನಂತರ ಮರುದಿನ ಅವಳ ಪೂಜೆಯನ್ನು ಮಾಡಿ ನೈವೇದ್ಯವನ್ನು ತೋರಿಸುತ್ತಾರೆ.

ಇ. ಮೂರನೆಯ ದಿನ ನದಿಯಲ್ಲಿ ಗೌರಿಯ ವಿಸರ್ಜನೆ ಮಾಡುತ್ತಾರೆ ಮತ್ತು ಹಿಂತಿರುಗಿ ಬರುವಾಗ ನದಿಯಲ್ಲಿನ ಸ್ವಲ್ಪ ಮರಳು/ಮಣ್ಣನ್ನು ಮನೆಗೆ ತಂದು ಮನೆಯೆಲ್ಲ ಹರಡುತ್ತಾರೆ.’

– ಪರಾತ್ಪರ ಗುರು ಪರಶರಾಮ ಪಾಂಡೆ ಮಹಾರಾಜರು

(ಆಧಾರ : ಸನಾತನ ನಿರ್ಮಿತ ಗ್ರಂಥ ‘ಶ್ರೀ ಗಣಪತಿ’)