ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಗಣೇಶೋತ್ಸವವನ್ನು ಬಹಳ ಉತ್ಸಾಹದಿಂದ ಮತ್ತು ಸಾರ್ವಜನಿಕವಾಗಿ ಆಚರಿಸ ಲಾಗುತ್ತದೆ. ಹೀಗಿದ್ದರೂ, ಇತರ ರಾಜ್ಯಗಳಲ್ಲಿಯೂ ಪೌರಾಣಿಕ ಇತಿಹಾಸವಿರುವ ಶ್ರೀ ಗಣೇಶನ ಅನೇಕ ಪ್ರಾಚೀನ ದೇವಸ್ಥಾನಗಳಿವೆ. ಆ ಪ್ರಾಚೀನ ದೇವಸ್ಥಾನಗಳಲ್ಲಿ ಒಂದೆಂದರೆ ಭಗವಾನ ಶ್ರೀಕೃಷ್ಣನು ಪೂಜಿಸಿದ ಗಣಪತಿಪುರಾ (ಗುಜರಾತ)ದ ಸ್ವಯಂಭೂ ಶ್ರೀ ಗಣೇಶ !
ಈ ಗಣೇಶೋತ್ಸವ ಕಾಲದಲ್ಲಿ ಅಜ್ಞಾತ, ಪುರಾತನ ದೇವಸ್ಥಾನಗಳ ದರ್ಶನವಾಗುವುದೆಂದರೆ, ಇದು ಶ್ರೀ ಗಣೇಶನ ಕೃಪೆಯೇ ಆಗಿದೆ ! ಈ ಸಂಕಟದಿಂದ ಪಾರಾಗಲು ಮತ್ತು ಭಕ್ತರ ಆರೋಗ್ಯದ ರಕ್ಷಣೆಗಾಗಿ ಶ್ರೀ ಗಣೇಶನ ಚರಣಗಳಲ್ಲಿ ಪ್ರಾರ್ಥನೆ ಮಾಡೋಣ ! ಆ ವಿಘ್ನಹರ್ತನ ಚರಣಗಳಲ್ಲಿ ದೃಢ ಶ್ರದ್ಧೆಯನ್ನಿಟ್ಟು ಮನಃಪೂರ್ವಕವಾಗಿ ಶ್ರೀ ಗಣೇಶನ ಉಪಾಸನೆಯನ್ನು ಮಾಡೋಣ ! ಪ್ರಾಚೀನ ಗಣಪತಿ ದೇವಸ್ಥಾನದ ಇತಿಹಾಸ !
೧. ‘ಗುಜರಾತ ರಾಜ್ಯದ ರಾಜಧಾನಿ ಕರ್ಣಾವತಿಯಿಂದ ೫೦ ಕಿ.ಮೀ. ದೂರದಲ್ಲಿ ‘ಗಣಪತಿಪುರಾ’ ಎಂಬ ಹೆಸರಿನ ಗ್ರಾಮವಿದೆ. ಆ ಸ್ಥಳದಲ್ಲಿ ಗುಜರಾತನ ಅತ್ಯಂತ ಪ್ರಾಚೀನವಾದ ಸ್ವಯಂಭೂ ಗಣಪತಿಯ ದೇವಸ್ಥಾನವಿದೆ : ”೫,೫೦೦ ವರ್ಷಗಳ ಹಿಂದೆ ಶ್ರೀಕೃಷ್ಣನು ಮತ್ತು ಪಾಂಡವರು ಈ ಗಣಪತಿಯ ಪೂಜೆಯನ್ನು ಮಾಡಿದ್ದರು. ‘ಈ ಗಣಪತಿಯ ಪೂಜೆ ಮಾಡಿದ ನಂತರ ಶ್ರೀಕೃಷ್ಣನು ದ್ವಾರಕೆಯಲ್ಲಿದ್ದು ಅನೇಕ ವರ್ಷಗಳವರೆಗೆ ರಾಜ್ಯವಾಳಿದನು’, ಎಂಬ ನಂಬಿಕೆಯಿದೆ ಎಂದು ಈ ದೇವಸ್ಥಾನದ ಪೂಜಾರಿಯು ನಮಗೆ ಹೇಳಿದರು. ಈ ಗಣಪತಿಯ ಹೆಸರು ‘ಸಿದ್ಧಿವಿನಾಯಕ’ ಎಂದಾಗಿದೆ. ಭಗವಾನ ಶ್ರೀಕೃಷ್ಣನು ಈ ಗಣೇಶನ ಪೂಜೆಯನ್ನು ಮಾಡುತ್ತಿದ್ದನು. ಆದುದರಿಂದ ಈ ಸ್ಥಾನಕ್ಕೆ ಈ ಮೊದಲು ‘ಗಣೇಶ ದ್ವಾರಕಾ’ ಎಂದು ಕರೆಯಲಾಗುತ್ತಿತ್ತು. ಆಗ ಪಾಂಡವರು ಶ್ರೀಕೃಷ್ಣನನ್ನು ಭೇಟಿಯಾಗಲು ದ್ವಾರಕೆಗೆ ಹೋಗುತ್ತಿದ್ದರು, ಆಗ ಪ್ರತಿಸಲ ಈ ಗಣಪತಿಯ ದರ್ಶನವನ್ನು ಪಡೆದು ಮುಂದೆ ಹೋಗುತ್ತಿದ್ದರು.
೨. ಒಬ್ಬ ರೈತನಿಗೆ ಹೊಲವನ್ನು ಉಳುವಾಗ ಸ್ವಯಂಭೂ ಗಣಪತಿಯ ಮೂರ್ತಿ ದೊರಕಿ ಶ್ರೀ ಗಣೇಶನ ಇಚ್ಛೆಯಿಂದಲೇ ಒಂದು ಸ್ಥಳದಲ್ಲಿ ಆ ಮೂರ್ತಿಯ ಸ್ಥಾಪನೆಯಾಗಿ ಆ ಸ್ಥಾನಕ್ಕೆ ‘ಗಣಪತಿಪುರಾ’ ಎಂಬ ಹೆಸರು ಬೀಳುವುದು : ಕಲಿಯುಗದಲ್ಲಿ ಅನೇಕ ವರ್ಷ ಈ ದೇವಸ್ಥಾನದ ಬಗ್ಗೆ ಯಾರಿಗೂ ಗೊತ್ತಿರ ಲಿಲ್ಲ. ೮೦೦ ವರ್ಷಗಳ ಹಿಂದೆ ಕರ್ಣಾವತಿಯ ಹತ್ತಿರವಿರುವ ‘ಕೋಟ’ ಎಂಬ ಗ್ರಾಮದಲ್ಲಿ ಒಬ್ಬ ರೈತನಿಗೆ ಹೊಲವನ್ನು ಉಳು ವಾಗ ಸ್ವಯಂಭೂ ಗಣಪತಿಯ ಮೂರ್ತಿಯು ಸಿಕ್ಕಿತು. ಈ ಮೂರ್ತಿಯ ಕಿವಿಯಲ್ಲಿ ಕುಂಡಲಗಳು, ಚರಣಗಳಲ್ಲಿ ಬಂಗಾರದ ಕಡಗಗಳು ಹಾಗೂ ತಲೆಯ ಮೇಲೆ ಮುಕುಟ ಮತ್ತು ಸೊಂಟಕ್ಕೆ ಸೊಂಟ ಪಟ್ಟಿಯೂ ಇತ್ತು.
ಈ ಮೂರ್ತಿಯು ಸಿಕ್ಕಿದ ನಂತರ ಸ್ವಲ್ಪ ಸಮಯದಲ್ಲಿಯೇ ಅಕ್ಕಪಕ್ಕದ ಅನೇಕ ಗ್ರಾಮಗಳ ಜನರು ಸೇರಿದರು ಮತ್ತು ಪ್ರತಿಯೊಬ್ಬರಿಗೂ, ‘ಈ ಮೂರ್ತಿ ನಮ್ಮ ಗ್ರಾಮದ ದೇವಸ್ಥಾನ ದಲ್ಲಿಯೇ ಸ್ಥಾಪನೆ ಆಗಬೇಕು’ ಎಂದೆನಿಸುತ್ತಿತ್ತು. ನಂತರ ಎಲ್ಲರ ಒಪ್ಪಿಗೆಯಂತೆ ಎತ್ತು ಇರದಿರುವ ಎತ್ತಿನಬಂಡಿಯಲ್ಲಿ ಮೂರ್ತಿಯನ್ನು ಇಡಲಾಯಿತು. ಮೂರ್ತಿಯನ್ನು ಇಟ್ಟ ನಂತರ ಎತ್ತಿನಬಂಡಿಯು ತಕ್ಷಣ ತನ್ನಷ್ಟಕ್ಕೆ ಮುಂದೆ ಸಾಗಿ ಒಂದು ಸ್ಥಳದಲ್ಲಿ ನಿಂತ ತಕ್ಷಣ, ಅಲ್ಲಿ ಗಣಪತಿಯ ಮೂರ್ತಿಯು ತನ್ನಷ್ಟಕ್ಕೆ ಗಾಡಿಯಿಂದ ಕೆಳಗೆ ಬಂದಿತು. ಮೂರ್ತಿಯನ್ನು ಸ್ಥಾಪಿಸಿದಂತಹ ಸ್ಥಾನಕ್ಕೆ ‘ಗಣಪತಿಪುರಾ’ ಎಂಬ ಹೆಸರು ಬಿದ್ದಿತು. ಈ ಮೂರ್ತಿಗೆ ತುಪ್ಪ ಮತ್ತು ಸಿಂಧೂರ ಲೇಪಿಸಿರುವುದರಿಂದ ಮೂರ್ತಿಯು ಸಿಂಧೂರ ಬಣ್ಣದ್ದಾಗಿದೆ.’
– ಸಂಕಲನಕಾರರು : ಶ್ರೀ. ವಿನಾಯಕ ಶಾನಭಾಗ, ಚೆನ್ನೈ, ತಮಿಳುನಾಡು. (೩೦.೩.೨೦೧೯)