ಈ ವರ್ಷ ಸಪ್ಟೆಂಬರ್ ೧೯ ರಂದು ಗಣೇಶ ಚತುರ್ಥಿ ಇದೆ. ಈ ನಿಮಿತ್ತ ಲೇಖನ…
೧. ಕುಟುಂಬದಲ್ಲಿ ಯಾರು ಆಚರಿಸಬೇಕು ?
ಗಣೇಶ ಚತುರ್ಥಿ ಯಂದು ಆಚರಿಸಲಾಗುವ ವ್ರತವನ್ನು ‘ಸಿದ್ಧಿವಿನಾಯಕ ವ್ರತ’ ಎನ್ನುತ್ತಾರೆ. ವಾಸ್ತವದಲ್ಲಿ ಇದನ್ನು ಎಲ್ಲ ಕುಟುಂಬಗಳೂ ಆಚರಿಸಬೇಕು. ಅಣ್ಣ ತಮ್ಮಂದಿರೆಲ್ಲರೂ ಒಟ್ಟಿಗೆ ಇದ್ದರೆ, ಅಂದರೆ ಅವರ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿ (ಒಲೆ) ಒಟ್ಟಿಗೆ ಇದ್ದರೆ ಎಲ್ಲರೂ ಸೇರಿ ಒಂದೇ ಮೂರ್ತಿಯ ಪೂಜೆಯನ್ನು ಮಾಡಬೇಕು; ಆದರೆ ದ್ರವ್ಯಕೋಶ ಮತ್ತು ಪಾಕನಿಷ್ಪತ್ತಿಯು ಕಾರಣಾಂತರದಿಂದ ವಿಭಕ್ತವಾಗಿದ್ದರೆ (ಬೇರೆ ಬೇರೆ) ಪ್ರತಿಯೊಬ್ಬರೂ ಅವರವರ ಮನೆಗಳಲ್ಲಿ ಸ್ವತಂತ್ರವಾಗಿ ಗಣೇಶವ್ರತವನ್ನು ಆಚರಿಸಬೇಕು.
೨. ಗಣೇಶಚತುರ್ಥಿಯ ಮಹತ್ವವೇನು ?
ಆಷಾಢ ಹುಣ್ಣಿಮೆಯಿಂದ ಕಾರ್ತಿಕ ಹುಣ್ಣಿಮೆಯವರೆಗಿನ ೧೨೦ ದಿನಗಳ ಕಾಲದಲ್ಲಿ ವಿನಾಶಕಾರಿ, ತಮಪ್ರಧಾನ ಯಮಲಹರಿಗಳು ಪೃಥ್ವಿಗೆ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಈ ಸಮಯದಲ್ಲಿ ಅವುಗಳು ಹೆಚ್ಚು ತೀವ್ರವಾಗಿರುತ್ತವೆÉ. ಈ ಕಾಲಾವಧಿಯಲ್ಲಿ, ಅಂದರೆ ಭಾದ್ರಪದ ಶುಕ್ಲ ಚತುರ್ಥಿಯಿಂದ ಅನಂತ ಚತುರ್ದಶಿಯ ವರೆಗೆ ಗಣೇಶ ಲಹರಿಗಳು ಪೃಥ್ವಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಬರುವುದರಿಂದ ಯಮಲಹರಿಗಳ ತೀವ್ರತೆ ಕಡಿಮೆಯಾಗಲು ಸಹಾಯವಾಗುತ್ತದೆ.
೩. ಗಣೇಶ ಚತುರ್ಥಿಯಂದು ಹೊಸ ಗಣೇಶಮೂರ್ತಿಯನ್ನು ತರುವುದರ ಉದ್ದೇಶವೇನು ?
ಮನೆಯಲ್ಲಿ ಪೂಜೆಗಾಗಿ ಗಣಪತಿಯನ್ನು ಇಟ್ಟಿರುವಾಗಲೂ ನೂತನ ಮೂರ್ತಿಯನ್ನು ತರುವ ಉದ್ದೇಶವು ಮುಂದಿನಂತಿದೆ. ಗಣೇಶ ಚತುರ್ಥಿಯ ಸಮಯದಲ್ಲಿ ಗಣೇಶ ಲಹರಿಗಳು ಅತಿ ಹೆಚ್ಚಿನ ಪ್ರಮಾಣದಲ್ಲಿ ಪೃಥ್ವಿಗೆ ಬರುತ್ತವೆ. ನಿತ್ಯದ ಪೂಜೆಯಲ್ಲಿರುವ ಮೂರ್ತಿಯಲ್ಲಿ ಅವುಗಳ ಆವಾಹನೆ ಮಾಡಿದರೆ ಅದರಲ್ಲಿ ಬಹಳಷ್ಟು ಶಕ್ತಿ ಬರಬಹುದು. ಇಂತಹ ಹೆಚ್ಚು ಶಕ್ತಿ ಇರುವ ಮೂರ್ತಿಯ ಎಲ್ಲ ಬಗೆಯ ಪೂಜೆ ಅರ್ಚನೆಗಳನ್ನು ವರ್ಷಪೂರ್ತಿ ಸರಿಯಾಗಿ ಮಾಡುವುದು ಕಠಿಣವಾಗಿರುತ್ತದೆ; ಏಕೆಂದರೆ ಅದಕ್ಕೆ ಕರ್ಮಕಾಂಡದ ಬಹಳಷ್ಟು ಬಂಧನಗಳನ್ನು ಪಾಲಿಸಬೇಕಾಗುತ್ತದೆ. ಈ ಕಾರಣ ಕ್ಕಾಗಿಯೇ ಗಣೇಶ ಲಹರಿಗಳನ್ನು ಆವಾಹನೆ ಮಾಡಲು ಹೊಸ ಮೂರ್ತಿಯನ್ನು ಉಪಯೋಗಿಸಿ ನಂತರ ಅದನ್ನು ವಿಸರ್ಜನೆ ಮಾಡುತ್ತಾರೆ. ಗಣೇಶ ಲಹರಿಗಳಲ್ಲಿನ ಸತ್ತ್ವ, ರಜ ಮತ್ತು ತಮದ ಪ್ರಮಾಣವು ೫:೫:೫ ಹೀಗಿದ್ದರೆ ಸಾಮಾನ್ಯ ವ್ಯಕ್ತಿಯಲ್ಲಿ ಅದರ ಪ್ರಮಾಣವು ೧:೩:೫ ಹೀಗೆ ಇರುತ್ತದೆ; ಆದ್ದರಿಂದ ಸಾಮಾನ್ಯ ವ್ಯಕ್ತಿಯು ಗಣೇಶ ಲಹರಿಗಳನ್ನು ಹೆಚ್ಚು ಸಮಯದ ವರೆಗೆ ಗ್ರಹಣ ಮಾಡಲಾರನು.
೪. ಶಾಸ್ತ್ರೋಕ್ತ ವಿಧಿ ಮತ್ತು ರೂಢಿ ಇವುಗಳ ಅವಧಿ
‘ಭಾದ್ರಪದ ಶುಕ್ಲ ಚತುರ್ಥಿಯ ದಿನ ಮಣ್ಣಿನ ಗಣಪತಿ ಯನ್ನು ತಯಾರಿಸಿ, ಅದನ್ನು ಎಡಗೈ ಮೇಲಿಟ್ಟು ಅಲ್ಲಿಯೇ ಸಿದ್ಧಿವಿನಾಯಕ ಹೆಸರಿನಿಂದ ಪ್ರಾಣಪ್ರತಿಷ್ಠೆ ಮತ್ತು ಪೂಜೆಯನ್ನು ಮಾಡಿ ಕೂಡಲೇ ವಿಸರ್ಜನೆ ಮಾಡಬೇಕು ಎಂಬ ಶಾಸ್ತ್ರವಿದೆ. ಆದರೆ ಮಾನವರು ಉತ್ಸವಪ್ರಿಯರಾಗಿರುವುದರಿಂದ ಇಷ್ಟರಿಂದ ಅವರಿಗೆ ಸಮಾಧಾನವಾಗಲಿಲ್ಲ. ಆದುದರಿಂದ ಒಂದೂವರೆ, ಐದು, ಏಳು ಅಥವಾ ಹತ್ತು ದಿನ ಗಣಪತಿಯ ಮೂರ್ತಿ ಯನ್ನು ಇಟ್ಟು ಉತ್ಸವ ಮಾಡತೊಡಗಿದರು. ಕೆಲವರು ಗಣಪತಿಯನ್ನು ಗೌರಿಯ ಜೊತೆಗೆ ವಿಸರ್ಜನೆ ಮಾಡುತ್ತಾರೆ. ಯಾರಾದರೊಬ್ಬರ ಕುಲದಲ್ಲಿ ಗಣಪತಿಯನ್ನು ಐದು ದಿನ ಇಡುವ ಪದ್ಧತಿ ಇದ್ದು ಅವರು ಅದನ್ನು ಒಂದೂವರೆ ಅಥವಾ ಏಳು ದಿನ ಇಡಬೇಕಾಗಿದ್ದರೆ ಅವರು ಹಾಗೆ ಮಾಡಬಹುದು. ಇದಕ್ಕೆ ಯಾವುದೇ ಅಧಿಕಾರಯುತ ವ್ಯಕ್ತಿಯನ್ನು ಕೇಳುವ ಆವಶ್ಯಕತೆಯಿಲ್ಲ. ತಮ್ಮ ತಮ್ಮ ರೂಢಿಗನುಸಾರ ಮೊದಲನೆಯ, ಎರಡನೆಯ, ಮೂರನೆಯ, ಆರನೆಯ, ಏಳನೆಯ ಅಥವಾ ಹತ್ತನೆಯ ದಿನ ಗಣೇಶಮೂರ್ತಿಯ ವಿಸರ್ಜನೆ ಮಾಡಬೇಕು.
೫. ಮೂರ್ತಿಯು ಭಗ್ನವಾದರೆ ಏನು ಮಾಡಬೇಕು ?
ಮೂರ್ತಿಯ ಪ್ರಾಣಪ್ರತಿಷ್ಠೆಯನ್ನು ಮಾಡುವುದಕ್ಕಿಂತ ಮೊದಲು ಯಾವುದಾದರೊಂದು ಅವಯವಕ್ಕೆ ಏಟಾದರೆ ಅಥವಾ ಭಿನ್ನವಾದರೆ ಚಿಂತಿಸುವ ಕಾರಣವಿಲ್ಲ, ಅದರ ಬದಲು ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ವಿಸರ್ಜನೆಗಾಗಿ ಅಕ್ಷತೆ ಹಾಕಿದ ನಂತರ (ದೇವತ್ವವು ಹೋದ ನಂತರ) ಅವಯವಗಳಿಗೆ ಏಟಾದರೆ ಅಥವಾ ಭಿನ್ನವಾದರೆ ಆ ಮೂರ್ತಿ ಯನ್ನು ನಿತ್ಯದಂತೆ ವಿಸರ್ಜನೆ ಮಾಡಬೇಕು. ಪ್ರಾಣಪ್ರತಿಷ್ಠೆಯಾದ ನಂತರ ಅವಯವಕ್ಕೆ ಏಟಾದರೆ ಅಥವಾ ಮುರಿದರೆ ಆ ಮೂರ್ತಿಗೆ ಅಕ್ಷತೆಯನ್ನು ಅರ್ಪಿಸಿ ವಿಸರ್ಜಿಸಬೇಕು. ಈ ಘಟನೆಯು ಗಣೇಶ ಚತುರ್ಥಿಯ ದಿನವೇ ನಡೆದರೆ ಬೇರೆ ಮೂರ್ತಿಯನ್ನು ತಂದು ಪೂಜಿಸಬೇಕು. ಎರಡನೆಯ ಅಥವಾ ಮೂರನೆಯ ದಿನ ನಡೆದರೆ ಹೊಸ ಮೂರ್ತಿಯನ್ನು ತಂದು ಪೂಜಿಸಬೇಕಾಗಿಲ್ಲ. ಮೂರ್ತಿಯು ಸಂಪೂರ್ಣ ಭಗ್ನವಾದರೆ ಕುಲಪುರೋಹಿತರ ಸಲಹೆಯಂತೆ ಯಥಾವಕಾಶ ‘ಅದ್ಭುತ ದರ್ಶನ ಶಾಂತಿ’ಯನ್ನು ಮಾಡಿಸಬೇಕು. ಗಣೇಶ ಚತುರ್ಥಿಯಂದು ದೀಪಪತನ (ದೀಪ ಆರಿ ಹೋಗುವುದು), ಅರೆಯುವ ಕಲ್ಲು, ಬೀಸುವ ಕಲ್ಲು ಅಥವಾ ಸಾಣೆಕಲ್ಲು ಒಡೆದು ಹೋಗುವುದು, ಕೆಸುವಿನ ಎಲೆಗೆ ಹೂವು ಬರುವುದು, ಮೂರ್ತಿಭಗ್ನ ಇತ್ಯಾದಿ ಘಟನೆಗಳಾದರೆ ಆ ಕುಟುಂಬದಲ್ಲಿ ದ್ರವ್ಯ ಹಾನಿ, ಗಂಭೀರ ರೋಗ ಅಥವಾ ಅಪಮೃತ್ಯು ಆಗುವ ಸಾಧ್ಯತೆಯಿರುತ್ತದೆ; ಅದಕ್ಕಾಗಿ ಮೇಲೆ ಕೊಟ್ಟಿರುವ ಪರಿಹಾರಗಳನ್ನು ಶ್ರದ್ಧೆಯಿಂದ ಮಾಡಬೇಕು.
ಪೂಜೆಯ ವಿಷಯದಲ್ಲಿ ಕೆಲವು ಸೂಚನೆಗಳು
ಅ. ಪೂಜೆಯ ಮೊದಲು ಮಡಿವಸ್ತ್ರ ಅಥವಾ ಪೀತಾಂಬರ ಅಥವಾ ಮಡಿವಸ್ತ್ರ (ಧೋತರ) ಮತ್ತು ಉತ್ತರೀಯವನ್ನು ಧರಿಸಿರಬೇಕು. |