ಈ ವರ್ಷದ ಅಧಿಕ ಶ್ರಾವಣ ಮಾಸ ಗ್ರಹ ಶಾಂತಿಗಾಗಿ ವಿಶೇಷವಾಗಿ ಉಪಯುಕ್ತ

ಈಗ ನಡೆಯುತ್ತಿರುವ ಅಧಿಕಮಾಸದ ಪ್ರಯುಕ್ತ

೧. ’ಅಧಿಕ ಮಾಸ ’ಅಥವಾ ’ಪುರುಷೋತ್ತಮ ಮಾಸ ’ಎಂದರೆ ಏನು ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಸೌರಮಾನದ ಪ್ರಕಾರ ಒಂದು ವರ್ಷದಲ್ಲಿ ೩೬೫ ದಿನ, ೧೫ ಘಟಿಕಾ, ೩೧ ಪಲ ಮತ್ತು ೩೦ ವಿಪಲ ಇರುತ್ತದೆ. ಹಾಗೂ ಚಂದ್ರಮಾನದ ಪ್ರಕಾರ ಒಂದು ವರ್ಷದಲ್ಲಿ ೩೫೪ ದಿನ, ೨೨ ಘಟಿಕಾ, ೧ ಪಲ ಮತ್ತು ೨೩ ವಿಪಲ ಇರುತ್ತದೆ. ಇದರ ಪ್ರಕಾರ ನಮಗೆ ಹೀಗೆ ತಿಳಿದು ಬರುವುದೇನೆಂದರೆ, ಒಂದು ವರ್ಷದ ಚಕ್ರದಲ್ಲಿ ಸೌರ ವರ್ಷ ಮತ್ತು ಚಾಂದ್ರ ವರ್ಷದ ಪ್ರಕಾರ ೧೧ ದಿನಗಳ ವ್ಯತ್ಯಾಸ ಬರುತ್ತದೆ. ಇದೇ ಕಾರಣದಿಂದ ಹಿಂದೂ ಕಾಲಗಣನೆಯಲ್ಲಿ ಪ್ರತಿ ಮೂರು ವರ್ಷಕ್ಕೆ ಅನುಕ್ರಮವಾಗಿ ಯಾವುದಾದರೂ ಒಂದು ಚಂದ್ರ ಮಾಸವು ಪುನರಾವರ್ತನೆಯಾಗಿ ಒಂದು ಹೆಚ್ಚುವರಿ ಮಾಸವನ್ನು ಸೇರಿಸಿ ಸೌರ ವರ್ಷ ಮತ್ತು ಚಾಂದ್ರ ವರ್ಷದಲ್ಲಿ ಇರುವ ವ್ಯತ್ಯಾಸ ಕಡಿಮೆ ಮಾಡಲಾಗುತ್ತದೆ. ಈ ಹೆಚ್ಚುವರಿ ಮಾಸಕ್ಕೆ ‘ಅಧಿಕ ಮಾಸ ಅಥವಾ ‘ಪುರುಷೋತ್ತಮ ಮಾಸ’ ಎನ್ನುತ್ತಾರೆ. ಆದ್ದರಿಂದ ಸೌರ ವರ್ಷ ಮತ್ತು ಚಾಂದ್ರ ವರ್ಷದಲ್ಲಿ ಒಂದು ಅಂಶದ ವರೆಗೆ ಹೊಂದಾಣಿಕೆ ಮಾಡಲಾಗುತ್ತದೆ ಮತ್ತು ಇದರಿಂದ ಮಾನವ ಜಾತಿಗೆ ಕಾಲಕ್ಕೆ ಸಂಬಂಧಿತ ಸೌರಮಾನ ಮತ್ತು ಚಾಂದ್ರಮಾನದ ಯೋಗ್ಯ ಲಾಭ ದೊರೆಯುತ್ತದೆ ; ಏಕೆಂದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನು ನಮ್ಮ ಆತ್ಮದ ಮತ್ತು ಚಂದ್ರನು ನಮ್ಮ ಮನಸ್ಸಿನ ಕಾರಕನಾಗಿದ್ದಾನೆ. ಈ ರೀತಿಯಿಂದ ಆತ್ಮ ಎಂದರೆ ಪರಲೋಕ ಮತ್ತು ಮನಸ್ಸು ಎಂದರೆ ಇಹಲೋಕ ಇವುಗಳ ಸಾಮರಸ್ಯ ಸಾಧಿಸಲಾಗುತ್ತದೆ ಮತ್ತು ಮನುಷ್ಯನ ಜೀವನದಲ್ಲಿ ಇವೆರಡ ಫಲಶೃತಿ ಸಿಗುತ್ತದೆ.

 

೨. ಅಧಿಕಮಾಸ ಶುಭವೋ ಅಥವಾ ಅಶುಭ ?

ಅಧಿಕಮಾಸ ಶುಭವೋ ಅಶುಭ ಎಂಬ ಬಗ್ಗೆ ಒಂದು ಕಥೆಯು ಉಲ್ಲೇಖನೀಯವಾಗಿದೆ. ೪ ಯುಗಗಳ ೧೨ ಮಾಸಗಳು, ೬ ಋತುಗಳು ಮತ್ತು ಎಲ್ಲಾ ದಿನಗಳಿಗೆ ಒಬ್ಬೊಬ್ಬರು ಕಾರಕ ದೇವತೆಗಳು ಇರುತ್ತಾರೆ. ಆದರೆ ಕಾಲ ಗಣನೆಯಲ್ಲಿ ಅಧಿಕ ಮಾಸದ ಆಯೋಜನೆಯಾದಾಗ ಅದನ್ನು ’ಮಲಮಾಸ’ ಎಂದರೆ ಅಸ್ವೀಕಾರಾರ್ಹ ಮತ್ತು ತ್ಯಾಜ್ಯ ಎಂದು ತಿರಸ್ಕೃತ ಮಾಡಲಾಯಿತು. ಆದ್ದರಿಂದ ಅಧಿಕಮಾಸ ಬಹಳ ದುಃಖ ಪಟ್ಟಿತು. ಅದು ಭಗವಂತ ಶ್ರೀಹರಿ ವಿಷ್ಣುವಿನ ಬಳಿ ಹೋಗಿ ಪ್ರಾರ್ಥನೆ ಮಾಡಿತು, ಮತ್ತು ತನ್ನ ವೇದನೆಯನ್ನು ಹೇಳಿತು. ಭಗವಂತ ಶ್ರೀಹರಿ ವಿಷ್ಣು ಅಧಿಕಮಾಸಕ್ಕೆ ಹೇಳಿದರು, ‘ನೀನು ದುಃಖಿಸಬೇಡ, ಪುರುಷರಲ್ಲಿ ಸರ್ವಶ್ರೇಷ್ಠನಾಗಿರುವ ನನಗೆ ಪುರುಷೋತ್ತಮ ಎಂಬ ಹೆಸರಿದೆ ಮತ್ತು ಇಂದಿನಿಂದ ನಿನ್ನನ್ನು ಪುರುಷೋತ್ತಮ ಮಾಸವೆಂದು ಗುರುತಿಸಲಾಗುವುದು. ಈ ಪುರುಷೋತ್ತಮ ಮಾಸದಲ್ಲಿ ಮಾಡುವ ಶಾಂತಿ ಕರ್ಮ ಮತ್ತು ಇತರ ಪ್ರಾಪಂಚಿಕ ಕರ್ಮಗಳನ್ನು ನನಗೆ ಸಂಬಂಧ ಪಟ್ಟದ್ದೆಂದು ಪರಿಗಣಿಸಲಾಗುವುದು. ಹಾಗೂ ಅವುಗಳು ಶಾಶ್ವತ ಮತ್ತು ಶ್ರೇಷ್ಠವಾಗಿರುವುವು.

ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ

೩. ಪುರುಷೋತ್ತಮ ಮಾಸದಲ್ಲಿ ಏನು ಮಾಡಬೇಕು ?

ವ್ಯಾವಹಾರಿಕ ದೃಷ್ಟಿಯಿಂದ ಎರಡು ಪ್ರಕಾರದ ಕರ್ಮಗಳಿವೆ.

ಅ. ಪೌಷ್ಟಿಕ ಕರ್ಮ, ಎಂದರೆ ಸಾಂಸಾರಿಕ ವ್ಯವಹಾರಗಳಿಗೆ ಸಂಬಂಧ ಪಟ್ಟ ಕರ್ಮಗಳು

ಆ. ಶಾಂತಿಕರ್ಮ, ಎಂದರೆ ಪಾರಲೌಕಿಕ ಅಥವಾ ಧಾರ್ಮಿಕ ಆಧ್ಯಾತ್ಮಿಕ ಕರ್ಮಗಳು

ಅಧಿಕಮಾಸದಲ್ಲಿ ಶಾಂತಿಕರ್ಮ ಎಂದರೆ ಧಾರ್ಮಿಕ ಕರ್ಮ ಉದಾ. ವ್ರತ, ಉಪವಾಸ, ಜಪ, ಧ್ಯಾನ, ಉಪಾಸನೆ, ನಿಸ್ವಾರ್ಥ ಯಜ್ಞ ಇತ್ಯಾದಿಗಳನ್ನು ಅತ್ಯಂತ ಉತ್ಸಾಹದಿಂದ ಮಾಡಬೇಕು. ಇದರಲ್ಲಿ ತೀರ್ಥಯಾತ್ರೆ ಮತ್ತು ಗಂಗಾ ಸ್ನಾನ ಮಾಡಬೇಕು. ಹಿರಿಯ ಮಹಾಪುರುಷರ ಮತ್ತು ಸಂತರ ಸಹವಾಸದಲ್ಲಿ ಸತ್ಸಂಗ ನಡೆಸುವುದು. ಉಪಾಸನೆ ಮತ್ತು ಧ್ಯಾನದ ಬಗ್ಗೆ ಆತ್ಮಚಿಂತನೆ ಮಾಡಬೇಕು. ಅಧಿಕಮಾಸದಲ್ಲಿ ದಾನಕ್ಕೆ ವಿಶೇಷ ಮಹತ್ವವಿದೆ. ಧರ್ಮಕಾರ್ಯ ಮತ್ತು ಮುಮುಕ್ಷತ್ವದಲ್ಲಿ ಜಿಗುಟುತನ ಇರಬೇಕು. ಅಧಿಕಮಾಸದಲ್ಲಿ ದೀಪ ಅಥವಾ ಧ್ವಜ ದಾನ ಮಾಡಬೇಕು. ಶ್ರೀರಾಮ ಪ್ರವಚನ, ಭಾಗವತ ಪ್ರವಚನ, ಶ್ರೀಮದ್ ಭಗವದ್ಗೀತೆಯ ೧೫ ನೆಯ ಅಧ್ಯಾಯವಾದ ಪುರುಷೋತ್ತಮ ಅಧ್ಯಾಯದ ಪಠಣ ಮತ್ತು ಶ್ರವಣ ಮಾಡುವುದು ಪುಣ್ಯಪ್ರದ ಎಂದು ಪರಿಗಣಿಸಲಾಗಿದೆ. ಅಧಿಕಮಾಸದಲ್ಲಿ ಭಗವಂತ ಶ್ರೀಹರಿ ವಿಷ್ಣುವಿನ ವಿಶೇಷ ಪೂಜೆ ಮಾಡಬೇಕು ಮತ್ತು ‘ಓಂ ನಮೋ ಭಗವತೇ ವಾಸುದೇವಾಯ ಈ ನಾಮಜಪ ಹೆಚ್ಚೆಚ್ಚು ಮಾಡಬೇಕು.

೪. ಪುರುಷೋತ್ತಮ ಮಾಸದಲ್ಲಿ ಏನು ಮಾಡಬಾರದು ?

ಅ. ಅಧಿಕಮಾಸದಲ್ಲಿ ‘ಪೋಷಕ ಕಾರ್ಯ, ಎಂದರೆ ಸಾಂಸಾರಿಕ ವ್ಯವಹಾರಕ್ಕೆ ಸಂಬಂಧಪಟ್ಟ ಕಾರ್ಯಗಳನ್ನು ಎಂದರೆ ವಿವಾಹ, ಗೃಹಪ್ರವೇಶ, ಉಪನಯನ, ಮುಂಡನ ಮುಂತಾದ ಶುಭಕಾರ್ಯಗಳನ್ನು ಮಾಡಬಾರದು.

ಆ. ಅಪವಿತ್ರ ವರ್ತನೆ ಮಾಡಬಾರದು.

ಇ. ಅಖಾದ್ಯ ಮತ್ತು ಅಪೇಯ ಆಹಾರವನ್ನು ಸೇವಿಸಬಾರದು.

ಈ. ಅಧಿಕಮಾಸದಲ್ಲಿ ಹೊಸ ಕೆಲಸದ ಶುಭಾರಂಭ ಮಾಡಬಾರದು. ಆದರೂ ನಿಸ್ವಾರ್ಥದಿಂದ ಸಮಾಜೋಪಯೋಗಿ ಕಾರ್ಯ ಮಾಡಲು ಅಡ್ಡಿ ಇಲ್ಲ.

ಉ. ಬಟ್ಟೆ, ಆಭರಣ, ಮನೆ, ಅಂಗಡಿ, ವಾಹನ ಮುಂತಾದವು ಖರೀದಿಸಬಾರದು. ತಿಂಗಳ ಮಧ್ಯದಲ್ಲಿ ಶುಭ ಮುಹೂರ್ತ ಇದ್ದರೆ ಜ್ಯೋತಿಷ್ಯರ ಸಲಹೆ ಪ್ರಕಾರ ಆಭರಣ ಖರೀದಿ ಮಾಡಬಹುದು.

೫. ಈ ವರ್ಷದ ಪುರುಷೋತ್ತಮ ಮಾಸದ ವಿಶೇಷ ಮಹತ್ವ

ಈ ವರ್ಷ ಅಧಿಕಮಾಸವೆಂದು ಶ್ರಾವಣ ಮಾಸ ಪುನರಾವರ್ತನೆ ಆಗಿದೆ ಮತ್ತು ಇದೇ ಶ್ರಾವಣ ಮಾಸದಿಂದ ಸಾಧನೆಗೆ ಪೂರಕವಾಗಿ ಪವಿತ್ರ ಚಾತುರ್ಮಾಸ ಕೂಡ ಆರಂಭವಾಗಿದೆ. ಶ್ರಾವಣ ಮಾಸ ಇದು ಸ್ವತಃ ಅತಿಶಯ ಪವಿತ್ರವಾಗಿದೆ. ಏಕೆಂದರೆ ಇದು ದೇವಾಧಿದೇವ ಭಗವಂತ ಶ್ರೀ ಶಂಕರನಿಗೆ ಸಂಬಂಧಪಟ್ಟದ್ದಾಗಿದೆ. ಹಾಗೂ ಅಧಿಕಮಾಸದ ರೂಪದಲ್ಲಿ ಪುರುಷೋತ್ತಮ ಮಾಸಕ್ಕೆ ಭಗವಂತ ಶ್ರೀ ಹರಿ ವಿಷ್ಣುವಿನ ವಿಶೇಷ ಆಶೀರ್ವಾದ ಲಭಿಸಿದೆ. ಆದ್ದರಿಂದ ಈ ಸಾರಿ ಶ್ರಾವಣ ಮಾಸ ವಿಶೇಷವಾಗಿ ಹರಿ ಮತ್ತು ಹರ ಇವರಿಬ್ಬರಿಗೂ ಸಂಬಂಧ ಪಟ್ಟದಾಗಿದೆ ಎಂದು ಹೇಳಬಹುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಾಧಿದೇವ ಮಹಾದೇವ ಭಗವಂತ ಶಂಕರನಿಗೆ ಗ್ರಹಾಧ್ಯಕ್ಷ ಅಂದರೆ ಗ್ರಹಗಳ ಸ್ವಾಮಿ ಅನ್ನುತ್ತಾರೆ. ಆದ್ದರಿಂದ ಈ ವರ್ಷ ಅಧಿಕ ಶ್ರಾವಣ ಮಾಸ ಗ್ರಹ ಶಾಂತಿಗಾಗಿ ವಿಶೇಷ ಉಪಯುಕ್ತವಾಗಿದೆ.

ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ, ಸಭಾಪತಿ (ಏಷಿಯಾ ಚಾಪ್ಟರ್), ವಿಶ್ವಜ್ಯೋತಿಷ್ಯ ಮಹಾಸಂಘ, ಪಾಟಲಿಪುತ್ರ, ಬಿಹಾರ (೧೩.೭.೨೦೨೩)

ಇತ್ತೀಚಿಗೆ ಒಂದು ಹೊಸ ಪದ್ದತಿ ಆರಂಭವಾಗಿದೆ ಅದೇನೆಂದರೆ, ಅಧಿಕಮಾಸದಲ್ಲಿ ಹೆಣ್ಣು ಮಕ್ಕಳು ತಾಯಿಗೆ ಉಡಿ ತುಂಬುವುದು. ಹೀಗೆ ಮಾಡಬಾರದು. ಇದಕ್ಕೆ ಯಾವುದೇ ಶಾಸ್ತ್ರದಾರವಿಲ್ಲ. ನಮ್ಮ ಭಾವನೆ ಎಷ್ಟು ಒಳ್ಳೆಯದಾಗಿದ್ದರು ಕೂಡ ಅಯೋಗ್ಯ ಕಾಲದಲ್ಲಿ ಮತ್ತು ಸಮಯದಲ್ಲಿ ಮಾಡಿದ ಕಾರ್ಯವು ಶುಭ ಫಲ ನೀಡುವುದಿಲ್ಲ, ಆದರೆ ಅಯೋಗ್ಯ ಕರ್ಮದ ಫಲ ಅಶುಭವಾಗಿರುತ್ತದೆ . (೨೮.೭.೨೦೨೩)