ಛತ್ತೀಸಗಢದಲ್ಲಿ ಕ್ರೈಸ್ತರಾಗಿದ್ದ 651 ಕುಟುಂಬಗಳು ಹಿಂದೂ ಧರ್ಮಕ್ಕೆ ಘರವಾಪಸಿ !

ಪ್ರತೀಕಾತ್ಮಕ ಛಾಯಾಚಿತ್ರ

ಸಕ್ತಿ (ಛತ್ತೀಸಗಢ) – ಛತ್ತೀಸಗಢದ ಸಕ್ತಿ ಜಿಲ್ಲೆಯಲ್ಲಿ ಕ್ರೈಸ್ತರಾಗಿದ್ದ 651 ಕುಟುಂಬಗಳು ಇತ್ತೀಚೆಗೆ ಹಿಂದೂ ಧರ್ಮಕ್ಕೆ ಮರುಪ್ರವೇಶಿಸಿದ್ದಾರೆ. ಈ ಎಲ್ಲಾ ಕುಟುಂಬಗಳು ಹಿಂದೆ ಹಿಂದೂಗಳಾಗಿದ್ದರು; ಆದರೆ ಕೆಲವು ಕಾರಣಗಳಿಂದ ಅವರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದರು. ಭಾಜಪ ನಾಯಕ ಪ್ರಬಲ ಪ್ರತಾಪ್‌ಸಿಂಹ ಜುದೇವ ಅವರ ಮುಂದಾಳತ್ವದಲ್ಲಿ ‘ಘರ್ ವಾಪಸಿ’ (ಹಿಂದೂ ಧರ್ಮಕ್ಕೆ ಮರು ಪ್ರವೇಶ) ಕಾರ್ಯಕ್ರಮ ನಡೆಯಿತು. ಜುದೇವ ಅವರ ಕುಟುಂಬ 2 ತಲೆಮಾರುಗಳಿಂದ ಈ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅವರು ಮತಾಂತರಗೊಂಡ ಸಾವಿರಾರು ಕುಟುಂಬಗಳನ್ನು ಮತ್ತೆ ಹಿಂದೂ ಧರ್ಮಕ್ಕೆ ಮರಳಿ ಕರೆದುಕೊಂಡು ಬಂದಿದ್ದಾರೆ. ಸಕ್ತಿಯಲ್ಲಿ ನಡೆದ ಬೃಹತ್ ಹಿಂದೂ ಪರಿಷತ್ತಿನಲ್ಲಿ ಈ ಕುಟುಂಬಗಳ ಸದಸ್ಯರು ಹಿಂದೂ ಧರ್ಮಕ್ಕೆ ಪುನರ್ ಪ್ರವೇಶಿಸಿದರು. ಈ ಕಾರ್ಯಕ್ರಮದಲ್ಲಿ ಸಾಧ್ವಿ ಪ್ರಜ್ಞಾ ಹಾಗೂ ಅನೇಕ ಹಿಂದೂ ಸಂತರು ಭಾಗವಹಿಸಿದ್ದರು.

‘ಕ್ರಿಪ್ಟೋ ಕ್ರಿಶ್ಚಿಯನ್ಸ್’ ಅತ್ಯಂತ ದೊಡ್ಡ ಅಪಾಯ ! – ಭಾಜಪ ನಾಯಕ ಪ್ರಬಲ ಪ್ರತಾಪಸಿಂಗ ಜುದೇವ

(‘ಕ್ರಿಪ್ಟೋ ಕ್ರಿಶ್ಚಿಯನ್’ ಎಂದರೆ ಕ್ರೈಸ್ತ ಧರ್ಮವನ್ನು ರಹಸ್ಯವಾಗಿ ಪಾಲನೆ ಮತ್ತು ಪ್ರಸಾರ ಮಾಡುವ ಕ್ರೈಸ್ತರು)

ಈ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಬಲ ಪ್ರತಾಪಸಿಂಹ ಜುದೇವ, ಸನಾತನ ಸಂಸ್ಕೃತಿಗೆ ‘ಕ್ರಿಪ್ಟೋ ಕ್ರಿಶ್ಚಿಯನ್ನರು’ ದೊಡ್ಡ ಅಪಾಯವಾಗಿದ್ದಾರೆ. ಹಿಂದೂ ಸಮಾಜದಲ್ಲಿ ವಾಸಿಸುವ ಈ ‘ಕ್ರಿಪ್ಟೋ-ಕ್ರೈಸ್ತರು’ ಮೋಸದಿಂದ ಮತಾಂತರವನ್ನು ಉತ್ತೇಜಿಸುತ್ತಾರೆ ಮತ್ತು ಕ್ರೈಸ್ತ ಧರ್ಮವನ್ನು ರಹಸ್ಯವಾಗಿ ಪ್ರಚಾರ ಮಾಡುತ್ತಾರೆ. ಅವರ ದುಷ್ಕೃತ್ಯಗಳನ್ನು ಬಯಲಿಗೆಳೆದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತೀ ಅಗತ್ಯವಾಗಿದೆ’, ಎಂದು ಹೇಳಿದರು.