ಹಿಂದೂ ಸಂಘಟನೆಗಳನ್ನು ಸ್ಥಾಪಿಸುವುದರ ಉದ್ದೇಶ ಮತ್ತು ಮಹತ್ವ !

ಸದ್ಗುರು (ಡಾ.) ಚಾರುದತ್ತ ಪಿಂಗಳೆ

ನೇಪಾಳದಲ್ಲಿನ ಬೌದ್ಧ ಗುರು ಲಾಮಾ ಘ್ಯಾಛೋ ರಿಮ್ಪೋಛೆ ಇವರೊಂದಿಗೆ ಮಾತನಾಡುತ್ತಿರುವ ಸದ್ಗುರು ಡಾ. ಚಾರುದತ್ತ ಪಿಂಗಳೆ ‘ನನಗೆ ಹಿಂದೂ ಸಂಘಟನೆಯ ದೃಷ್ಟಿ ಯಿಂದ ವಿವಿಧ ರಾಜ್ಯಗಳಲ್ಲಿ ಪ್ರವಾಸ ಮಾಡಬೇಕಾಗುತ್ತದೆ. ಆಗ ಆಯಾ ರಾಜ್ಯಗಳಲ್ಲಿನ ವಿವಿಧ ಹಿಂದೂ ಸಂಘಟನೆಗಳ ಕಾರ್ಯರ್ತರ ಮತ್ತು ಪದಾಧಿಕಾರಿಗಳ ಭೇಟಿಯಾಗುತ್ತದೆ. ಆ ಭೇಟಿಯಲ್ಲಿ ಗಮನಕ್ಕೆ ಬಂದ ಒಂದು ಮಹತ್ವದ ವಿಷಯವೆಂದರೆ, ಹಿಂದೂ ಸಂಘಟನೆಗಳ ಕಾರ್ಯ ಕರ್ತರಿಗೆ ಮಾತ್ರ ಅಲ್ಲ, ಸಂಘಟನೆಗಳ ಪದಾಧಿಕಾರಿಗಳಿಗೂ ಅವರ ಸಂಘಟನೆಯ ಸ್ಥಾಪನೆಯ ಉದ್ದೇಶ ಸುಸ್ಪಷ್ಟವಾಗಿ ಗೊತ್ತಿರುವುದಿಲ್ಲ. ಹಾಗೆಯೇ ಅವರಿಗೆ ಹಿಂದೂಗಳ ರಕ್ಷಣೆ ಅಥವಾ ಹಿಂದೂ ಧರ್ಮದ ರಕ್ಷಣೆ ಎಂದರೇನು ? ಈ ವಿಷಯದಲ್ಲಿಯೂ ಸುಸ್ಪಷ್ಟತೆ ಇರುವುದಿಲ್ಲ. ನಮ್ಮ ಹಿಂದೂ ಬಾಂಧವರು ಕಷ್ಟಪಟ್ಟು ಸಂಘಟನೆಗಳನ್ನು ಸ್ಥಾಪಿಸಿ ಹಿಂದೂ ಧರ್ಮ, ಹಿಂದೂ ಜನರು ಮತ್ತು ರಾಷ್ಟ್ರ ರಕ್ಷಣೆಗಾಗಿ ಪ್ರಯತ್ನಪಡುತ್ತಿದ್ದಾರೆ; ಆದರೆ ಯೋಗ್ಯ ದೃಷ್ಟಿಕೋನದ ಅಭಾವದಿಂದ ಅವರ ಫಲಶ್ರುತಿ ಅತ್ಯಂತ ಕಡಿಮೆ ಇರುತ್ತದೆ. ಅವರಿಗೆ ಅವರ ಧ್ಯೇಯ ತುಂಬಾ ದೂರವಿದೆ ಎಂದು ಅನಿಸುತ್ತದೆ, ಅದರಿಂದ ಅವರಿಗೆ ಕಾರ್ಯದ ವಿಷಯದಲ್ಲಿ ನಿರಾಶೆ ಬರುತ್ತದೆ. ಇದು ಅದಕ್ಕೆ ಸಂಬಂಧಿಸಿದ ಲೇಖನ.

೧. ಹಿಂದೂಗಳಲ್ಲಿ ಸ್ವಧರ್ಮದ ಬಗ್ಗೆ ಇರುವ ಅಜ್ಞಾನವೇ, ಹಿಂದೂ ಸಂಘಟನೆಯಲ್ಲಿನ ಮುಖ್ಯ ಅಡಚಣೆ

ವೈಯಕ್ತಿಕ ಭೇಟಿಯಲ್ಲಿ ಹಿಂದುತ್ವನಿಷ್ಠ ಕಾರ್ಯಕರ್ತರು ಅಥವಾ ಪದಾಧಿಕಾರಿಗಳಿಗೆ ‘ನೀವು ಹಿಂದೂ ಸಂಘಟನೆಯನ್ನು ಸ್ಥಾಪಿಸಿರುವುದರ ಉದ್ದೇಶವೇನು ?’ ಅಥವಾ ‘ನಿಮ್ಮ ಸಂಘಟನೆಯ ಧ್ಯೇಯ ಧೋರಣೆ ಏನು ?’, ಎಂದು ಪ್ರಶ್ನಿಸಿದಾಗ ಅವರು, “ತಮ್ಮ ಪರಿಸರದಲ್ಲಿ ಹಿಂದೂಗಳ ರಕ್ಷಣೆಗಾಗಿ ಯಾರೂ ಇಲ್ಲ. ದಂಗೆಗಳಾದಾಗ ಹಿಂದೂಗಳ ರಕ್ಷಣೆಯಾಗ ಬೇಕು. ಆದ್ದರಿಂದ ಹಿಂದೂಗಳ ರಕ್ಷಣೆಗಾಗಿ ಹಿಂದೂ ಸಂಘಟನೆಯನ್ನು ಸ್ಥಾಪಿಸಲಾಗಿದೆ” ಎಂದು ಹೇಳುತ್ತಾರೆ. ಅನಂತರ ಅವರಿಗೆ ಮುಂದಿನ ಕೆಲವು ಪ್ರಶ್ನೆಗಳನ್ನು ಕೇಳಿ ಅವರ ಕಾರ್ಯ, ಹಿಂದುತ್ವ ಮತ್ತು ಹಿಂದೂ ಧರ್ಮದ ವಿಷಯದಲ್ಲಿನ ಅವರ ಸುಸ್ಪಷ್ಟತೆಯನ್ನು ತಿಳಿದುಕೊಂಡೆನು, ಉದಾ. ‘ಯಾವುದಾದರೊಬ್ಬ ವ್ಯಕ್ತಿ ಹಿಂದೂ ಆಗಿದ್ದಾನೆ, ಎಂಬುದನ್ನು ನಾವು ಯಾವುದರಿಂದ ನಿರ್ಧರಿಸುತ್ತೇವೆ ? ಕೇವಲ ಅವನ ಜನ್ಮದಿಂದ ಅಥವಾ ಜನ್ಮದೊಂದಿಗೆ ಅವನ ಆಚರಣೆಯಿಂದ ? ಒಬ್ಬ ವ್ಯಕ್ತಿ ಹಿಂದೂ ಎಂದು ವೈಯಕ್ತಿಕ, ಕೌಟುಂಬಿಕ ಮತ್ತು ಸಾಮಾಜಿಕ ಜೀವನದಲ್ಲಿ ಧರ್ಮಾಚರಣೆ ಎಂದು ಯಾವ ಕೃತಿಗಳನ್ನು ಮಾಡಬೇಕು ? ಹಿಂದೂ ಎಂದು ನಾವು ಯಾವುದಾದರೊಬ್ಬ ವ್ಯಕ್ತಿಗೆ ನಮ್ಮ ಧರ್ಮದ ಬಗ್ಗೆ ಕನಿಷ್ಟ ಯಾವ ಯಾವ ವಿಷಯಗಳ ಮಾಹಿತಿಯನ್ನು ಕೊಡಬೇಕು ?’, ಮುಂತಾದ ಪ್ರಶ್ನೆಗಳನ್ನು ಕೇಳಿದೆ. ಹೆಚ್ಚಿನ ಹಿಂದೂ ಸಂಘಟನೆಗಳ ಪದಾಧಿಕಾರಿಗಳಿಗೆ ಮತ್ತು ಕಾರ್ಯಕರ್ತರಿಗೆ ಈ ಪ್ರಶ್ನೆಗಳ ಉತ್ತರಗಳ ಬಗ್ಗೆ ಅತ್ಯಲ್ಪ ಮಾಹಿತಿ ಇರುವುದು ಅರಿವಾಯಿತು.

೨. ಶಾಲೆಯ ಶಿಕ್ಷಣದಲ್ಲಿ ಧರ್ಮಶಿಕ್ಷಣವನ್ನು ನೀಡಲು ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಎಂಬ ಭೇದವನ್ನು ಮಾಡುವ ನಮ್ಮ ಸರಕಾರ !

ಒಟ್ಟಾರೆ ಹಿಂದೂಗಳಿಗೆ ಸ್ವಧರ್ಮದ ಶಿಕ್ಷಣವನ್ನು ತೆಗೆದು ಕೊಳ್ಳುವುದು ಆವಶ್ಯಕವಾಗಿದೆ. ಅದರಿಂದ ಸ್ವಧರ್ಮ ಬೋಧ ಮತ್ತು ಸ್ವರಾಷ್ಟ್ರಬೋಧ ಸಹಜವಾಗಿ ಸಾಧ್ಯವಾಗಲಿದೆ. ಇವುಗಳ ಬೋಧ ಆಗುವುದರಿಂದ ನಿಜವಾದ ಅರ್ಥದಲ್ಲಿ ದೇಶ ಮತ್ತು ಧರ್ಮದ ಶತ್ರುಗಳು ಯಾರು ? ಮತ್ತು ಮಿತ್ರರು ಯಾರು ? ಇದು ತಿಳಿಯುವುದು ಸಹಜ ಸಾಧ್ಯವಾಗುವುದು. ಸ್ವಬೋಧ ಮಾಡಿದಾಗ ಸ್ವಕೀಯ ಮತ್ತು ಪರಕೀಯರಲ್ಲಿನ ಶತ್ರುಬೋಧ ಮತ್ತು ಮಿತ್ರಬೋಧ ತಿಳಿಯುತ್ತದೆ. ಆದ್ದರಿಂದ ದೇಶ ಮತ್ತು ಧರ್ಮದ ರಕ್ಷಣೆಗಾಗಿ ವೈಚಾರಿಕ ಮತ್ತು ಬೌದ್ಧಿಕ ಬಲ ಸಿಗುತ್ತದೆ. ಹೀಗಿರುವಾಗ ಸಂವಿಧಾನವನ್ನು ತಪ್ಪಾಗಿ ಅರ್ಥೈಸಿ ಸಂಪೂರ್ಣ ಭಾರತದ ಶಾಲೆಯ ಶಿಕ್ಷಣದಲ್ಲಿ ಬಹುಸಂಖ್ಯಾತ ಹಿಂದೂಗಳಿಗೆ ಧರ್ಮಶಿಕ್ಷಣದ ಅಧಿಕಾರವನ್ನು ನಿರಾಕರಿಸಲಾಯಿತು. ಸರ್ವಪಕ್ಷೀಯ ಸರಕಾರಗಳ ಈ ಕೃತಿಯು ಸಂವಿಧಾನದ ಸಮಾನತೆಯ ಆಶ್ವಾಸನೆಯನ್ನು ಹಾಳು ಮಾಡುವಂತಹದ್ದಾಗಿದೆ.

೩. ಸ್ವಬೋಧದ ಹೊರತು ಮಿತ್ರಬೋಧ ಮತ್ತು ಶತ್ರುಬೋಧ ಇದು ಹಿಂದೂ ಸಂಘಟನೆಗೆ ವಿನಾಶಕಾರಿ ಭ್ರಮೆ

ಬಹಳಷ್ಟು ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಪ್ರಸಾರ ಮಾಡುವಾಗ ಅಥವಾ ಇತರ ಸಂಘಟನೆಗಳೊಂದಿಗೆ ಮಾತನಾಡುವಾಗ, “ನಿಮಗೆ ಇಸ್ಲಾಮ್ ಧರ್ಮ ಮತ್ತು ಕುರಾಣ ಇವುಗಳ ಬಗ್ಗೆ ಮಾಹಿತಿಬೇಕು. ಈ ಮಾಹಿತಿ ಇಲ್ಲದಿದ್ದರೆ, ನೀವು ‘ಗಝವಾ-ಎ-ಹಿಂದ್’, ದಾರುಲ್ -ಎ-ಇಸ್ಲಾಮ್’, ‘ಐಸಿಸ್’, ‘ಅಲ್-ಕಾಯದಾ’ ಇತ್ಯಾದಿ ಸಂಘಟನೆಗಳ ಜಾಗತಿಕ ಮತ್ತು ಸ್ಥಳೀಯ ಜಿಹಾದ್‌ನ ಬಗ್ಗೆ ನಿಮಗೆ ತಿಳಿಯುವುದಿಲ್ಲ, ಆದ್ದರಿಂದ ನಿಮ್ಮಿಂದ ಹಿಂದೂಗಳ ರಕ್ಷಣೆಯನ್ನು ಮಾಡಲಾಗದು ಎಂದು ಹೇಳುತ್ತಾರೆ. ಕೆಲವು ಹಿಂದುತ್ವನಿಷ್ಠ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು, “ನಿಮಗೆ ‘ಕ್ರೈಸ್ತರ ವಿಷಯದಲ್ಲಿ ಮಾಹಿತಿ ಬೇಕು. ಬೈಬಲ್‌ನಲ್ಲಿ ಏನು ಬರೆದಿದ್ದಾರೆ, ಅದರ ಬಗ್ಗೆ ಮಾಹಿತಿ ಇರಬೇಕು, ಹಾಗಿದ್ದರೆ ಮಾತ್ರ ಕ್ರೈಸ್ತರ ಧೂರ್ತ ಪ್ರಸಾರದ, ಅವರ ಜಾಗತಿಕ ಸ್ತರದಲ್ಲಿ ಅವರಿಂದಾಗುತ್ತಿರುವ ಮತಾಂತರಕ್ಕೆ ಪ್ರತಿಕಾರ ಮಾಡಬಹುದು” ಎಂದು ಹೇಳುತ್ತಾರೆ. ಜನಸಂಖ್ಯೆಯನ್ನು ಹೆಚ್ಚಿಸಿ ಜಗತ್ತನ್ನು ಕ್ರೈಸ್ತಮಯಗೊಳಿಸುವುದು, ಪೋಪ್‌ಸಹಿತ ಎಲ್ಲ ಕ್ರೈಸ್ತ ಧರ್ಮಪ್ರಚಾರಕರ ಕನಸಾಗಿದೆ. ಈ ಅಂಶಗಳು ಯೋಗ್ಯವಾಗಿದ್ದರೂ ಒಬ್ಬ ಹಿಂದೂ ಸಂಘಟಕನಿಗೆ ಸ್ವಧರ್ಮದ ವಿಷಯದಲ್ಲಿ ಆವಶ್ಯಕ ಮಾಹಿತಿ ಇಲ್ಲದಿದ್ದರೆ ಮತ್ತು ಇತರ ಪಂಥೀಯರ ವಿಷಯದಲ್ಲಿ ಹೆಚ್ಚು ಮಾಹಿತಿ ಇದ್ದರೆ, ಈ ಸ್ಥಿತಿ ಅಡಿಪಾಯವಿಲ್ಲದ ಕಟ್ಟಡದಂತೆ ಆಗುತ್ತದೆ, ಎಂಬುದನ್ನು ಗಮನಿಸಬೇಕು. ಇದರಿಂದ ಹಿಂದೂ ಧರ್ಮ ಮತ್ತು ಭಾರತದ ರಕ್ಷಣೆ ಮಾಡಲು ಸಾಧ್ಯವಿಲ್ಲ. ಒಟ್ಟಾರೆ, ಸ್ವಬೋಧವಿಲ್ಲದ, ಮಿತ್ರಬೋಧ ಮತ್ತು ಶತ್ರುಬೋಧ ಇದು ಹಿಂದೂ ಸಂಘಟನೆಗೆ ಒಂದು ವಿನಾಶಕಾರಿ ಭ್ರಮೆ ಆಗುತ್ತಿದೆ.

೪. ಧರ್ಮಶಿಕ್ಷಣ ಸಿಗದಿರುವ ಹಿಂದೂಗಳ ದಯನೀಯ ಸ್ಥಿತಿ !

ಪ್ರತಿಯೊಬ್ಬ ವ್ಯಕ್ತಿಯು ತನ್ನ ದೈನಂದಿನ ಅಥವಾ ಕೌಟುಂಬಿಕ ಜೀವನದಲ್ಲಿ ಪ್ರತ್ಯಕ್ಷದಲ್ಲಿ ಧರ್ಮವನ್ನು ಆಚರಿಸಿ ಧರ್ಮ ವನ್ನು ಜೀವಂತವಾಗಿಡಲು ಸತತವಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ. ಇಷ್ಟು ಮಾತ್ರವಲ್ಲ ಧರ್ಮಶಾಸ್ತ್ರ, ವೈಯಕ್ತಿಕ ಮತ್ತು ಸಾಮಾಜಿಕ ಧಾರ್ಮಿಕ ಕೃತಿಗಳ ಉದ್ದೇಶ ಮತ್ತು ಅದರ ಕಾರಣವನ್ನು ತಿಳಿದುಕೊಳ್ಳಬೇಕು. ತದ್ವಿರುದ್ಧ ಹೆಚ್ಚಿನ ಹಿಂದೂ ಸಂಘಟನೆಗಳ ಪದಾಧಿಕಾರಿಗಳು ಅಥವಾ ಕಾರ್ಯಕರ್ತರಿಗೆ ವೈಯಕ್ತಿಕ ಆಚರಣೆಯಿಂದ ಪ್ರತಿದಿನ ಹಿಂದೂ ಧರ್ಮದ ರಕ್ಷಣೆಯನ್ನು ಹೇಗೆ ಮಾಡಬೇಕು ? ಎಂಬ ವಿಷಯದ ಬಗ್ಗೆ ಸ್ವಲ್ಪವೂ ಮಾಹಿತಿ ಇರುವುದಿಲ್ಲ. ಇದು ಧರ್ಮದ ಮೇಲಿನ ಒಂದು ಸಂಕಟವೇ ಆಗಿದೆ. ನಾನು ಒಂದು ರಾಜ್ಯಕ್ಕೆ ಹೋಗಿದ್ದಾಗ ಅಲ್ಲಿನ ಒಂದು ನಗರದಲ್ಲಿ ಒಂದು ಸಂಘಟನೆಯ ಕಾರ್ಯಕರ್ತರ ಸಂಪರ್ಕ ವಾಯಿತು. ಆಗ ಬಹಳಷ್ಟು ಜನರು, ನಮಗೆ ಮಂದಿರಕ್ಕೆ ಹೋಗಲು ಮತ್ತು ನೌಕರಿ ವ್ಯವಸಾಯದಿಂದಾಗಿ ನಿಯಮಿತ ಹಬ್ಬ ಮತ್ತು ಉತ್ಸವಗಳನ್ನು ಆಚರಿಸಲು ಕೂಡ ಸಮಯ ಸಿಗುವುದಿಲ್ಲ ಎಂದು ಹೇಳಿದರು. ಅವರಿಗೆ ತಮ್ಮ ಹುಟ್ಟುಹಬ್ಬ ವನ್ನು ಆಂಗ್ಲ ದಿನಾಂಕದ ಬದಲು ಭಾರತೀಯ ಪಂಚಾಂಗದ ತಿಥಿಗನುಸಾರ ಆಚರಿಸಬೇಕು, ಎಂಬುದೂ ಗೊತ್ತಿರಲಿಲ್ಲ. ಆದ್ದರಿಂದ ಸ್ವಬೋಧ ಇಲ್ಲ ಮತ್ತು ಧರ್ಮಶಿಕ್ಷಣ ಇಲ್ಲದ ಕಾರಣ ಸ್ವಧರ್ಮದ ಆಚರಣೆಯ ತಳಮಳವಿಲ್ಲ. ನಾವು ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡುತ್ತಿದ್ದೇವೆ, ಎಂಬುದೂ ಕೂಡ ಅವರಿಗೆ ಅರಿವಿಲ್ಲ. ಇದರ ಬಗ್ಗೆ ಎಲ್ಲರೂ ವಿಚಾರ ಮಾಡುವ ಸಮಯ ಬಂದಿದೆ. ಹಿಂದೂ ಸಂಘಟನೆಗಳ ಪದಾಧಿಕಾರಿಗಳ ಸ್ಥಿತಿ ಹೀಗಿದೆ, ಹೀಗಿರುವಾಗ ಸಾಮಾನ್ಯ ಹಿಂದೂಗಳ ಸ್ಥಿತಿ ಹೇಗಿರಬಹುದು, ಎಂಬುದನ್ನು ಕಲ್ಪನೆ ಮಾಡದಿರುವುದೇ ಒಳ್ಳೆಯದು ! ಕಳೆದ ೭೫ ವರ್ಷಗಳಲ್ಲಿ ಹಿಂದೂಗಳಿಗೆ ಶಾಲೆಯ ಶಿಕ್ಷಣದಿಂದ ಅಥವಾ ದೇವಸ್ಥಾನಗಳಿಂದ ಧರ್ಮಶಿಕ್ಷಣ ಸಿಗಲಿಲ್ಲ. ಆದ್ದರಿಂದ ಅವರ ಸ್ಥಿತಿ ಹೀಗಾಗಿದೆ.

– ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ
(ಮುಂದುವರಿಯುವುದು)