‘ಜ್ಯೋತಿಷ್ಯಶಾಸ್ತ್ರವು ಕಾಲದ (ದೈವಿಕ) ಸ್ವರೂಪವನ್ನು ತಿಳಿದು ಕೊಳ್ಳುವ ಶಾಸ್ತ್ರವಾಗಿದೆ. ಜೀವನದಲ್ಲಿ ಬರುವ ವಿವಿಧ ಸಮಸ್ಯೆಗಳಿಗಾಗಿ ಜ್ಯೋತಿಷ್ಯಶಾಸ್ತ್ರದ ಮಾರ್ಗ ದರ್ಶನವನ್ನು ಪಡೆಯಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಮಾರ್ಗದರ್ಶನ ವನ್ನು ಪಡೆಯುವ ವಿಷಯದಲ್ಲಿ ಯಾವ ಅಂಶಗಳನ್ನು ಗಮನದಲ್ಲಿಡಬೇಕು, ಎಂಬುದನ್ನು ಮುಂದಿನ ಲೇಖನದಿಂದ ತಿಳಿದುಕೊಳ್ಳೋಣ.
೧. ಜ್ಯೋತಿಷಿಗಳಿಗೆ ನಿಖರವಾಗಿ ನಮ್ಮ ಸಮಸ್ಯೆಯನ್ನು ಹೇಳುವುದು ಆವಶ್ಯಕ
ಕೆಲವೊಮ್ಮೆ ಜಾತಕರು (ಪ್ರಶ್ನೆಯನ್ನು ಕೇಳುವ ವ್ಯಕ್ತಿ) ತಮ್ಮ ಸಮಸ್ಯೆಯನ್ನು ಸಂದೇಹಾತ್ಮಕ ಸ್ವರೂಪದಲ್ಲಿ ಜ್ಯೋತಿಷಿಗಳಿಗೆ ಕೇಳುತ್ತಾರೆ, ಉದಾ ‘ನನ್ನ ಜೀವನವು ಬಹಳ ಅಸ್ಥಿರವಾಗಿದೆ, ‘ನನ್ನ ವೈವಾಹಿಕ ಜೀವನದಲ್ಲಿ ಅನೇಕ ಅಡಚಣೆಗಳಿವೆ, ‘ನನ್ನ ಮಾನಸಿಕ ಸ್ಥಿತಿ ಚೆನ್ನಾಗಿಲ್ಲ ಇತ್ಯಾದಿ. ಇಂತಹ ಪ್ರಶ್ನೆಗಳಿಗೆ ನಿರ್ದಿಷ್ಟವಾಗಿ ಮಾರ್ಗದರ್ಶನ ಮಾಡಲು ಬರುವುದಿಲ್ಲ. ಪ್ರಶ್ನೆ ಕೇಳುವವನು ಎಷ್ಟು ನಿರ್ದಿಷ್ಟವಾಗಿ ತನ್ನ ಅಡಚಣೆಗಳನ್ನು ಮಂಡಿಸುವನೋ, ಅವನಿಗೆ ಅಷ್ಟು ಯೋಗ್ಯ ಮಾರ್ಗದರ್ಶನ ನೀಡಲು ಸಾಧ್ಯವಾಗುತ್ತದೆ. ಕೆಲವು ಜನರು ತಮ್ಮ ವಿಶಿಷ್ಟ ಸಮಸ್ಯೆ ಯನ್ನು ಹೇಳದೇ ‘ನನ್ನ ಕುಂಡಲಿಯಲ್ಲಿ ಏನು ಕಾಣಿಸುತ್ತದೆ ? ಅದನ್ನು ಹೇಳಿ, ಎಂದು ಹೇಳುತ್ತಾರೆ. ಹೀಗಾದಾಗ ಪ್ರಶ್ನೆ ಕೇಳುವವನಿಗೆ ಯೋಗ್ಯ ಮಾರ್ಗದರ್ಶನ ಸಿಗುವುದಿಲ್ಲ; ಏಕೆಂದರೆ ನಮ್ಮ ಜೀವನದಲ್ಲಿ ಅನಂತ ವಿಷಯಗಳಿರುತ್ತವೆ.
೨. ಸಮಸ್ಯೆಗಳ ನಿವಾರಣೆಗಾಗಿ ‘ಧಾರ್ಮಿಕ ವಿಧಿಗಳನ್ನು ಹೇಳುವುದು, ಇದು ಜ್ಯೋತಿಷ್ಯಶಾಸ್ತ್ರದ ಮುಖ್ಯ ಕಾರ್ಯವಲ್ಲ
ಕೆಲವು ಜನರು ತಮ್ಮ ಸಮಸ್ಯೆಗಳನ್ನು ದೂರಗೊಳಿಸಲು ‘ಯಾವ ಧಾರ್ಮಿಕ ವಿಧಿಯನ್ನು ಮಾಡಬೇಕು ?, ಎಂದು ಕೇಳಲು ಜ್ಯೋತಿಷಿಗಳ ಬಳಿಗೆ ಹೋಗುತ್ತಾರೆ. ‘ಧಾರ್ಮಿಕ ವಿಧಿಗಳನ್ನು ಹೇಳುವುದು, ಇದು ಜ್ಯೋತಿಷ್ಯಶಾಸ್ತ್ರದ ಮುಖ್ಯ ಕಾರ್ಯವಲ್ಲ; ಏಕೆಂದರೆ ನಮ್ಮ ಜೀವನದಲ್ಲಿನ ಸಮಸ್ಯೆಗಳು ಹಿಂದಿನಜನ್ಮಗಳ ತಪ್ಪು ಕರ್ಮಗಳಿಂದ ಉಂಟಾಗಿರುತ್ತವೆ. ಧಾರ್ಮಿಕ ವಿಧಿಗಳನ್ನು ಮಾಡುವುದರಿಂದ ಸಮಸ್ಯೆಗಳ ತೀವ್ರತೆ ಸ್ವಲ್ಪ ಕಾಲದ ಮಟ್ಟಿಗೆ ಕಡಿಮೆಯಾಗುತ್ತದೆ; ಆದರೆ ಸಮಸ್ಯೆ ಶಾಶ್ವತವಾಗಿ ಬಗೆಹರಿಯುವುದಿಲ್ಲ. ಜ್ಯೋತಿಷ್ಯಶಾಸ್ತ್ರವು ಮುಖ್ಯವಾಗಿ ಕಾಲಜ್ಞಾನದ ಶಾಸ್ತ್ರವಾಗಿದೆ. ಜ್ಯೋತಿಷಿಗಳ ಬಳಿಗೆ ಹೋದಾಗ ನಮಗಿರುವ ಸಮಸ್ಯೆಯ ವಿಷಯದಲ್ಲಿ ‘ಪ್ರಾರಬ್ಧದಲ್ಲಿ ಯಾವ ಪರಿಸ್ಥಿತಿ ಇದೆ ? ಮತ್ತು ಮುಂಬರುವ ಕಾಲದಲ್ಲಿ ಹೇಗಿರುತ್ತದೆ ?, ಎಂದು ಮುಖ್ಯವಾಗಿ ತಿಳಿದು ಕೊಳ್ಳಬೇಕು, ಉದಾ. ಯಾರೊಬ್ಬನ ವಿವಾಹ ಕೂಡಿಬರದಿದ್ದರೆ, ‘ಜನ್ಮಕುಂಡಲಿಯಲ್ಲಿ ಮದುವೆಯಿಂದ ದೊರಕುವ ಸುಖ ಹೇಗಿದೆ ?, ‘ಜೊತೆಗಾರರ(ಹುಡುಗ ಅಥವಾ ಹುಡುಗಿ) ಪರಿಚಯ ಯಾವ ಮಾಧ್ಯಮದಿಂದ ಆಗುತ್ತದೆ ?, ‘ವಿವಾಹಕ್ಕಾಗಿ ಅನುಕೂಲ ಯೋಗ ಯಾವಾಗ ಇದೆ ?, ಮುಂತಾದ ವಿಷಯಗಳನ್ನು ತಿಳಿದುಕೊಳ್ಳಬೇಕು. ವಿವಾಹ ಕೂಡಿ ಬರದಿರಲು ಏನಾದರೂ ಆಧ್ಯಾತ್ಮಿಕ ಕಾರಣಗಳಿದ್ದರೆ ಸಹಾಯಕ ಉಪಾಯವೆಂದು ಧಾರ್ಮಿಕ ವಿಧಿಯ ವಿಚಾರ ಮಾಡಬೇಕು.
೩. ಒಂದು ಸಮಸ್ಯೆಗಾಗಿ ಅನೇಕ ಜ್ಯೋತಿಷಿಗಳ ಕಡೆಗೆ ಹೋಗುವುದನ್ನು ತಪ್ಪಿಸಬೇಕು
ಕೆಲವೊಮ್ಮೆ ಜನ್ಮಕುಂಡಲಿಯ ಮೂಲಕ ಸಿಗುವ ಉತ್ತರಗಳು ಪ್ರಶ್ನೆ ಕೇಳುವವನ ಮನಸ್ಸಿನ ವಿರುದ್ಧವಿರುತ್ತವೆ. ಇಂತಹ ಸಮಯದಲ್ಲಿ ಕೆಲವು ಪ್ರಶ್ನೆ ಕೇಳುವವರು ತಮಗೆ ಬೇಕಾದಂತಹ ಉತ್ತರ ಸಿಗುವವರೆಗೆ ಅನೇಕ ಜ್ಯೋತಿಷಿಗಳ ಬಳಿಗೆ ಹೋಗಿ ಅವರ ಮಾರ್ಗದರ್ಶನ ಪಡೆಯುತ್ತಾರೆ. ಹೀಗೆ ಮಾಡಿದರೆ ಪ್ರಶ್ನೆ ಕೇಳುವವರು ವಸ್ತುಸ್ಥಿತಿಯಿಂದ ದೂರ ಹೋಗುತ್ತಾರೆ. ಯಾವ ಜ್ಯೋತಿಷಿಗಳ ಪರಿಚಯ ನಮಗೆ ಮೊದಲಿನಿಂದಲೂ ಇದೆಯೋ, ಅವರ ಮೇಲೆ ವಿಶ್ವಾಸವಿದೆಯೋ, ಅಂತಹ ಜ್ಯೋತಿಷಿಗಳಿಂದಲೇ ಮಾರ್ಗದರ್ಶನವನ್ನು ಪಡೆಯಬೇಕು.
೪. ಓರ್ವ ಜ್ಯೋತಿಷಿಗಳು ಹೇಳಿದ ದೈವೀ ಉಪಾಯ ಸರಿಯಾಗಿದೆಯೇ ? ಎಂದು ಇನ್ನೊಬ್ಬ ಜ್ಯೋತಿಷಿಗೆ ಕೇಳುವುದು ಯೋಗ್ಯವಲ್ಲ
ಕೆಲವು ಪ್ರಶ್ನೆ ಕೇಳುವವರು, ಓರ್ವ ಜ್ಯೋತಿಷಿಗಳು ಸಮಸ್ಯೆಯ ನಿವಾರಣೆಗಾಗಿ ಹೇಳಿದ ದೈವೀ ಉಪಾಯ ಯೋಗ್ಯವಾಗಿದೆಯೇ ? ಎಂದು ಇನ್ನೊಬ್ಬ ಜ್ಯೋತಿಷಿಗಳಲ್ಲಿ ಕೇಳುತ್ತಾರೆ. ಈ ರೀತಿ ಮಾಡುವುದು, ಎಂದರೆ ಒಬ್ಬ ವೈದ್ಯನು ಹೇಳಿದ ಔಷಧಿ ಮತ್ತು ಅದರ ಪ್ರಮಾಣ(ಅಳತೆ) ಸರಿಯಾಗಿದೆಯೇ ? ಎಂದು
ಇನ್ನೊಬ್ಬ ವೈದ್ಯನಿಗೆ ಕೇಳಿದಂತಾಗುತ್ತದೆ. ಜ್ಯೋತಿಷ್ಯಶಾಸ್ತ್ರವು ಪೂರ್ತಿಯಾಗಿ ಭೌತಿಕ ಸ್ವರೂಪದ ವಿಜ್ಞಾನವಲ್ಲ. ಅದು ದೈವದೊಂದಿಗೆ (ಪ್ರಾರಬ್ಧದೊಂದಿಗೆ) ಸಂಬಂಧಿಸಿದ ಶಾಸ್ತ್ರ ವಾಗಿದೆ. ಧರ್ಮಶಾಸ್ತ್ರದಲ್ಲಿ ಒಂದೇ ಸಮಸ್ಯೆಗೆ ಅನೇಕ ದೈವೀ ಉಪಾಯಗಳನ್ನು ಹೇಳಿರುತ್ತಾರೆ, ಹಾಗೆಯೇ ಸಂಬಂಧಪಟ್ಟ ಜ್ಯೋತಿಷಿಗಳ ಪ್ರಕೃತಿ, ಅಧ್ಯಯನ, ಅನುಭವ ಮತ್ತು ಸಾಧನೆ ಇವುಗಳಿಗನುಸಾರ ಉಪಾಯಗಳಲ್ಲಿ ವೈವಿಧ್ಯವಿರುತ್ತದೆ. ಆದುದರಿಂದ ಓರ್ವ ಜ್ಯೋತಿಷಿಗಳು ಹೇಳಿದ ದೈವೀ ಉಪಾಯ ಸರಿಯಾಗಿದೆಯೇ ? ಎಂದು ಇನ್ನೊಬ್ಬ ಜ್ಯೋತಿಷಿಗಳಲ್ಲಿ ಆದಷ್ಟು ಕೇಳಬಾರದು.
೫. ಚಿಕ್ಕ-ಪುಟ್ಟ ವಿಷಯಗಳಿಗಾಗಿ ಜ್ಯೋತಿಷ್ಯಶಾಸ್ತ್ರದ ಸಲಹೆ ಪಡೆಯುವುದನ್ನು ತಪ್ಪಿಸಬೇಕು
ಕೆಲವು ಜನರು ಚಿಕ್ಕ-ಚಿಕ್ಕ ವಿಷಯಗಳಿಗಾಗಿ ಜ್ಯೋತಿಷ್ಯ ಶಾಸ್ತ್ರದ ಸಲಹೆಯನ್ನು ಪಡೆಯುತ್ತಾರೆ, ಉದಾ. ‘ಪರೀಕ್ಷೆಯಲ್ಲಿ ತೇರ್ಗಡೆಯಾಗುವನೇ ?, ‘ಇಂತಹ ಸರಕಾರಿ ಕೆಲಸ ಆಗುವುದೇ ?, ‘ಇಂತಹ ಕೆಲಸ ನನಗೆ ಸಿಗುವುದೇ ? ಇತ್ಯಾದಿ. ಹೀಗಾದರೆ ವ್ಯಕ್ತಿಯು ದೈವವಾದಿಯಾಗುನ (ಯಾವುದೇ ಕ್ರಿಯಮಾಣವನ್ನು ಬಳಸದೇ ಅದೃಷ್ಟವನ್ನು ನಂಬುವವನಾಗುವ) ಅಪಾಯ ಉಂಟಾಗುತ್ತದೆ. ಪ್ರಾರಬ್ಧವು ಜೀವನದಲ್ಲಿನ ಒಂದು ಸತ್ಯವಾಗಿದ್ದರೂ, ಧರ್ಮವು ಪ್ರಯತ್ನಗಳಿಗೇ ಮಹತ್ವ ನೀಡಿದೆ. ಆದುದರಿಂದ ಜೀವನದಲ್ಲಿನ ಮಹತ್ವದ ಘಟನೆ ಅಥವಾ ಸಮಸ್ಯೆ ಗಳ ಸಂದರ್ಭದಲ್ಲಿಯೇ ಜ್ಯೋತಿಷ್ಯಶಾಸ್ತ್ರದ ಮಾರ್ಗದರ್ಶನವನ್ನು ಪಡೆಯುವುದು ಉಪಯುಕ್ತವಾಗಿದೆ.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೨.೨೦೨೩)
ವಾಚಕರಲ್ಲಿ ನಿವೇದನೆಜ್ಯೋತಿಷ್ಯಶಾಸ್ತ್ರದ ಮಾರ್ಗದರ್ಶನವನ್ನು ಮಾಡುವ ಜ್ಯೋತಿಷಿಗಳ ಬಗ್ಗೆ ತಮಗೆ ಬಂದ ಒಳ್ಳೆಯ-ಕೆಟ್ಟ ಅನುಭವಗಳನ್ನು ನಮಗೆ ಮುಂದಿನ ಅಂಚೆ ವಿಳಾಸಕ್ಕೆ ಅಥವಾ ವಿ-ಅಂಚೆ ವಿಳಾಸಕ್ಕೆ ತಿಳಿಸಿರಿ. ಅಂಚೆ ವಿಳಾಸ : ಶ್ರೀ. ಆಶಿಷ ಸಾವಂತ, ಛಿ/o ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಭಗವತೀಕೃಪಾ ಅಪಾರ್ಟ್‌ಮೆಂಟ್ಸ್, ಎಸ್-೧, ಎರಡನೇ ಮಹಡಿ, ಬಿಲ್ಡಿಂಗ್ ಎ, ಢವಳಿ, ಫೋಂಡಾ, ಗೋವಾ. ೪೦೩೪೦೧ ವಿ-ಅಂಚೆ : [email protected] |