ವಿವಿಧ ರೋಗಗಳಿಗೆ ಶುಂಠಿಯ ಉಪಯೋಗ

ಅನಾರೋಗ್ಯವಾದಾಗ ಗಿಡಮೂಲಿಕೆಯ ಔಷಧಿಗಳನ್ನು ಉಪಯೋಗಿಸಿರಿ !

ಚಳಿಗಾಲ ಮುಗಿದ ಬಳಿಕ ಬರುವ ವಸಂತ ಋತುವಿನಲ್ಲಿ ಹಾಗೆಯೇ ಮಳೆಗಾಲದಲ್ಲಿ ರೋಗಗಳು ಬರಬಾರದೆಂದು ೧ ಲೀಟರ ಕುಡಿಯುವ ನೀರಿನಲ್ಲಿ ಕಾಲು ಚಮಚ ಶುಂಠಿ ಚೂರ್ಣವನ್ನು ಹಾಕಿ ನೀರನ್ನು ಕುದಿ ಬರುವವರೆಗೆ ಕಾಯಿಸಬೇಕು ಮತ್ತು ಈ ನೀರನ್ನು ಬಾಟಲಿಯಲ್ಲಿ ಅಥವಾ ತಂಬಿಗೆಯಲ್ಲಿ ತುಂಬಿಡಬೇಕು. ನೀರಡಿಕೆಯಾದಾಗ, ಈ ನೀರನ್ನು ಸ್ವಲ್ಪ ಸ್ವಲ್ಪ ಕುಡಿಯಬೇಕು.

ಶುಂಠಿಯನ್ನು ಯಾವಾಗ ಉಪಯೋಗಿಸಬಾರದು ?

ಉಷ್ಣ ಪದಾರ್ಥಗಳಿಂದ ತೊಂದರೆಯಾಗುವುದು, ಬಾಯಿಹುಣ್ಣು, ಮೈ ಉರಿ, ಊರಿಮೂತ್ರ, ಮೈಮೇಲೆ ಗುಳ್ಳೆಗಳೇಳುವುದು ಮುಂತಾದ ಉಷ್ಣತೆಯ ಲಕ್ಷಣಗಳು ಇರುವಾಗ ಬೇಸಿಗೆ ಮತ್ತು ಮಳೆಗಾಲದ ಬಳಿಕ ಬರುವ ಶರದ ಋತುವಿನಲ್ಲಿ (ಅಕ್ಟೋಬರ) ಈ ಕಾಲಾವಧಿಯಲ್ಲಿ ಶುಂಠಿಯನ್ನು ಕಡಿಮೆ ಉಪಯೊಗಿಸಬೇಕು ಅಥವಾ ಉಪಯೋಗಿಸಬಾರದು. ಶುಂಠಿಯ ಉಪಯೋಗದಿಂದ ಉಷ್ಣತೆಯ ಲಕ್ಷಣಗಳು ಕಂಡು ಬಂದರೆ ಶುಂಠಿ ಸೇವಿಸುವುದನ್ನು ನಿಲ್ಲಿಸಿ, ಲಿಂಬು ಶರಬತ ಕುಡಿಯಬೇಕು.

೧. ಶೀತ(ನೆಗಡಿ) :  ಕಾಲು ಚಮಚೆ ಶುಂಠಿ, ಅರ್ಧ ಚಮಚ ತುಪ್ಪ ಮತ್ತು ೧ ಚಮಚ ಜೇನುತುಪ್ಪ ಇವುಗಳ ಮಿಶ್ರಣವನ್ನು ಮಾಡಿ ದಿನದಲ್ಲಿ ೨-೩ ಸಲ ಅಗಿದು ತಿನ್ನಬೇಕು.

೨. ಶೀತದಿಂದ (ನೆಗಡಿಯಿಂದ) ತಲೆ ನೋವು : ತಲೆ ನೋವಿನ ತೊಂದರೆಯಾದಾಗ ಬೇಕಾದಷ್ಟು  ಶುಂಠಿಯ ಚೂರ್ಣದಲ್ಲಿ ಬಿಸಿನೀರು ಬೆರೆಸಿ ಹಣೆಯ ಮೇಲೆ ತೆಳ್ಳಗಿನ ಲೇಪನವನ್ನು ಮಾಡಬೇಕು ಮತ್ತು ೧ ಗಂಟೆಯ ಬಳಿಕ ಅದನ್ನು ಬಿಸಿ ನೀರಿನಿಂದ ತೊಳೆದು ತೆಗೆಯಬೇಕು. ಲೇಪನವನ್ನು ತೊಳೆದ ಬಳಿಕ ಆ ಸ್ಥಳದಲ್ಲಿ  ಉರಿಯುತ್ತಿದ್ದರೆ ಅದು ಕಡಿಮೆಯಾಗಲು ಆ ಭಾಗದ ಮೇಲೆ ಲಿಂಬೆಹಣ್ಣಿನ ರಸವನ್ನು ತಿಕ್ಕಬೇಕು.

೩. ಯಾವುದೇ ರೀತಿಯ ಕೆಮ್ಮು ಮತ್ತು ಎದೆಯಲ್ಲಿ ಕಫವಾಗುವುದು : ಕೆಮ್ಮು ಬಂದಾಗ ಕಾಲು ಚಮಚೆ ಶುಂಠಿ, ಅರ್ಧ ಚಮಚೆ ತುಪ್ಪ ಮತ್ತು ೧ ಚಮಚೆ ಜೇನುತುಪ್ಪವನ್ನು ಬೆರೆಸಿ ಆ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ನೆಕ್ಕಬೇಕು.

೪. ಬಾಯಿಗೆ ರುಚಿ ಇಲ್ಲದಿರುವುದು, ಹಸಿವೆಯಾಗದಿರುವುದು, ಹೊಟ್ಟೆನೋವಾಗಿ ಶೌಚವಾಗುವುದು, ಆಮಶಂಕೆಯಾಗುವುದು, ಅತಿಸಾರ ಮತ್ತು ಅಜೀರ್ಣವಾಗುವುದು : ಕಾಲು ಚಮಚ ಶುಂಠಿ, ಕಾಲು ಚಮಚ ತುಪ್ಪ ಮತ್ತು ಕಾಲು ಚಮಚ ಬೆಲ್ಲದ ಮಿಶ್ರಣವನ್ನು ಮಾಡಿ ದಿನದಲ್ಲಿ ೨-೩ ಸಲ, ಸಾಧ್ಯವಿದ್ದಷ್ಟು ಊಟದ ಅರ್ಧ ಗಂಟೆ ಮೊದಲು ಅಗಿದು ತಿನ್ನಬೇಕು.

೫. ಗಂಟಲು ಮತ್ತು ಎದೆ ಉರಿ, ಗಂಟಲಿನಲ್ಲಿ ಹುಳಿತೇಗು, ಹೊಟ್ಟೆ ತೊಳೆಸುವಿಕೆ (ವಾಕರಿಕೆ ಬರುವುದು) ಮತ್ತು ವಾಂತಿ : ತೊಂದರೆಯಾದಾಗ  ಅಥವಾ ದಿನದಲ್ಲಿ ೩-೪ ಸಲ ಕಾಲುಚಮಚ  ಶುಂಠಿ ಮತ್ತು ೧ ಚಮಚ ಸಕ್ಕರೆಯ ಪುಡಿಯನ್ನು ಮಿಶ್ರಣ ಮಾಡಿ ಜಗಿದು ತಿನ್ನಬೇಕು.

ಶುಂಠಿಯ ಇತರ ಉಪಯೋಗಗಳು

ಅಡಿಗೆಯನ್ನು ತಯಾರಿಸುವಾಗ ಮಸಾಲೆಯ ರೂಪದಲ್ಲಿ ಶುಂಠಿ ಉಪಯೋಗವಾಗುತ್ತದೆ. ದಿನನಿತ್ಯದ ಚಹಾದಲ್ಲಿ ರುಚಿಗಾಗಿ ಶುಂಠಿಯನ್ನು ಹಾಕಿ ಕುಡಿಯಬೇಕು. ಮಧ್ಯಾಹ್ನದ ಊಟದ ಬಳಿಕ ಮಜ್ಜಿಗೆ ಕುಡಿಯುತ್ತಿದ್ದರೆ, ಅದರಲ್ಲಿ ರುಚಿಗಾಗಿ ಶುಂಠಿ ಮತ್ತು ಸೈಂಧವ ಲವಣ ಹಾಕಿ ಕುಡಿಯಬೇಕು.