ಸರ್ವೋಚ್ಚ ನ್ಯಾಯಾಲಯದ ಅನುಮತಿಯ ನಂತರ ತಮಿಳುನಾಡಿನ ೪೫ ಕಡೆಗಳಲ್ಲಿ RSS ನಿಂದ ಮೆರವಣಿಗೆ !

ಶಾಂತಿ ಕಾಪಾಡಲು ಭಾರೀ ಭದ್ರತೆಯನ್ನು ನಿಯೋಜಿಸುವುದರೊಂದಿಗೆ ಆರ್ ಎಸ್ ಎಸ್ ಸದಸ್ಯರು ಡೋಲುಗಳೊಂದಿಗೆ ಮೆರವಣಿಗೆ ನಡೆಸುತ್ತಿರುವುದು ಕಂಡುಬಂತು

ಚೆನೈ (ತಮಿಳುನಾಡು) – ಏಪ್ರಿಲ್ ೧೬ ರಂದು ಆರ್.ಎಸ್.ಎಸ್. ನಿಂದ ರಾಜ್ಯದ ೪೫ ಕಡೆಗಳಲ್ಲಿ ಭವ್ಯ ಮೆರವಣಿಗೆಯನ್ನು ನಡೆಸಲಾಯಿತು. ರಾಜ್ಯದ ಮುಖ್ಯಮಂತ್ರಿ ಸ್ಟಾಲಿನರವರ ಸರಕಾರವು ಈ ಮೆರವಣಿಗೆಗಳ ಮೇಲೆ ನಿಷೇಧ ಹೇರಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರ ಅನುಮತಿ ನೀಡಲಾಯಿತು. ರಾಜ್ಯ ಸರಕಾರವು, `ಸಂಘದ ಮೆರವಣಿಗೆಯಿಂದ ರಾಜ್ಯದಲ್ಲಿ ಅಸ್ಥಿರತೆ ಉಂಟಾಗಬಹುದು ಮತ್ತು ಅದನ್ನು ಹತೋಟಿಗೆ ತರಲು ಕಠಿಣವಾಗುವುದು’ ಎಂಬ ನೆಪ ಒಡ್ಡಿತ್ತು. ನ್ಯಾಯಾಲಯವು ಆದೇಶದಲ್ಲಿ `ಈ ಮೆರವಣಿಗೆಗಳಲ್ಲಿ ಬಿದಿರಿನ ಬೆತ್ತಗಳನ್ನು ಬಳಸಬಾರದು’ ಎಂದು ನಮೂದಿಸಲಾಗಿತ್ತು. ರಾಜ್ಯದ ಚೆನೈ, ವೆಲ್ಲೊರ, ಹೊಸೂರು, ಸೇಲಂ, ಚೆಂಗಳಪಟ್ಟು, ಕಾಂಚಿಪುರಂ, ತಿರುವಣ್ಣಾಮಲೈ, ಅರಾನಿ, ಕೊಯಿಮತ್ತೂರು, ಮೆಟ್ಟುಪಾಳಯಂ, ಪೆಲ್ಲಾದಂ, ಕರೂರ, ತೆಂಕಾಸಿ, ಕನ್ಯಾಕುಮಾರಿ, ತಿರುಚಿರಾಪಳ್ಳಿ ಮತ್ತು ಮಧುರೈನಂತಹ ಪ್ರಮುಖ ಕಡೆಗಳಲ್ಲಿ ಈ ಮೆರವಣಿಗೆಗಳನ್ನು ನಡೆಸಲಾಯಿತು. ಪೊಲೀಸರು ಈ ಮೆರವಣಿಗೆಗಳಿಗೆ ಭದ್ರತೆ ನೀಡಿದ್ದರು. ರಾಜಧಾನಿ ಚೆನೈನಲ್ಲಿರುವ ಕೊರತ್ತೂರಿನಲ್ಲಿ ನಡೆದ ಮೆರವಣಿಗೆಯಲ್ಲಿ ಕೇಂದ್ರ ಮೀನುಗಾರಿಕೆ ಮತ್ತು ಪಶುಸಂಗೋಪನೆ ಖಾತೆ ರಾಜ್ಯ ಸಚಿವ ಡಿ.ಎಲ್. ಮುರುಗನ್ ರವರು ಸಹಭಾಗಿಯಾಗಿದ್ದರು.