ಮಂಗಳದೋಷ – ಕಲ್ಪನೆ ಮತ್ತು ತಪ್ಪುಕಲ್ಪನೆ

‘ವಿವಾಹವನ್ನು ನಿರ್ಧರಿಸುವಾಗ ವಧು -ವರರ ಜಾತಕದಲ್ಲಿ ಮಂಗಳದೋಷದ ವಿಚಾರವನ್ನು ಮಾಡಲಾಗುತ್ತದೆ. ಅನೇಕ ಸಲ ವ್ಯಕ್ತಿಯ ವಿವಾಹವು ಕೇವಲ ‘ಮಂಗಳದೋಷವಿದೆ’ ಎಂದು ಸಹಜವಾಗಿ ಕೂಡಿಬರುವುದಿಲ್ಲ ಮಂಗಳದೋಷದ ಬಗ್ಗೆ ಸಮಾಜದಲ್ಲಿ ತಪ್ಪುಕಲ್ಪನೆ ಇರುವುದು ಕಂಡುಬರುತ್ತದೆ, ಆದರೆ ಈಗ ಅದರ ಪ್ರಮಾಣ ಕಡಿಮೆಯಾಗುತ್ತಿದೆ. ಮಂಗಳದೋಷಗಳ ಬಗೆಗಿನ ಕಲ್ಪನೆಗಳು ಮತ್ತು ತಪ್ಪುಕಲ್ಪನೆಗಳನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.

ಶ್ರೀ. ರಾಜ ಕರ್ವೆ

೧. ಮಂಗಳದೋಷ ಎಂದರೇನು ?

ವ್ಯಕ್ತಿಯ ಜಾತಕದಲ್ಲಿನ ೧, ೪, ೭, ೮ ಮತ್ತು ೧೨ ಈ ಸ್ಥಾನಗಳಲ್ಲಿ ಮಂಗಳ ಗ್ರಹ ಇದ್ದರೆ ಜಾತಕದಲ್ಲಿ ‘ಮಂಗಳದೋಷ’ ಇರುತ್ತದೆ. ವೈವಾಹಿಕ ಜೀವನಕ್ಕಾಗಿ ಇಂತಹ ಮಂಗಳವನ್ನು ತೊಂದರೆ ದಾಯಕ ಮಂಗಳ ಎಂದು ನಂಬಲಾಗುತ್ತದೆ. ವೈವಾಹಿಕ ಜೀವನದಲ್ಲಿ ಸ್ತ್ರೀ ಮತ್ತು ಪುರುಷರ ಭಾವನಾತ್ಮಕ ಸಂಬಂಧವು ಪ್ರೇಮದಿಂದ ಕೂಡಿರುವುದು ಆವಶ್ಯಕವಾಗಿದೆ. ಇದರಿಂದ ಆಯುಷ್ಯದಲ್ಲಿ ಸುಖ ಸಿಗುತ್ತದೆ. ಸುಖವು ‘ಪೃಥ್ವಿ’ ಮತ್ತು ‘ಆಪ’ ಈ ತತ್ತ್ವಗಳಿಗೆ ಸಂಬಂಧಿಸಿದೆ. (ಪೃಥ್ವಿತತ್ತ್ವವು ‘ಸ್ಥೈರ್ಯ’ವನ್ನು ಕೊಡುತ್ತದೆ ಮತ್ತು ಆಪತತ್ತ್ವವು ‘ಆನಂದ’ವನ್ನು (ಹರ್ಷವನ್ನು) ಕೊಡುತ್ತದೆ; ಇದರಿಂದ ಜೀವನದಲ್ಲಿ ಸುಖ ಸಿಗುತ್ತದೆ.) ತದ್ವಿರುದ್ಧ ಮಂಗಳ ಗ್ರಹವು ‘ಅಗ್ನಿತತ್ತ್ವ’ದ್ದಾಗಿರುವುದರಿಂದ ಅದು ಪ್ರಬಲವಾದರೆ ಸುಖಕ್ಕೆ (ಸೌಖ್ಯಕ್ಕೆ) ಮಾರಕವಾಗುತ್ತದೆ. ಕ್ರೋಧ, ಅಹಂಕಾರ, ಕಲಹ, ಅಪಘಾತ, ವಿಚ್ಛೇದನ ಇತ್ಯಾದಿಗಳು ಮಂಗಳ ಗ್ರಹದ ಅನಿಷ್ಟ ಪರಿಣಾಮಗಳಾಗಿವೆ.

೨. ಮಂಗಳದೋಷದಿಂದಾಗುವ ಹಾನಿ

‘ಮಂಗಳದೋಷದಿಂದ ಹೆಚ್ಚಾಗಿ ಮದುವೆಗೆ ಅಡಚಣೆಗಳು ಬಂದು ವಿವಾಹವಾಗಲು ವಿಳಂಬವಾಗುತ್ತದೆ’, ಇಂತಹ ಅನುಭವವಿದೆ. ಹಾಗೆಯೇ ಮಂಗಳ ಗ್ರಹವು ಜಾತಕದಲ್ಲಿನ ಯಾವ ಸ್ಥಾನದಲ್ಲಿರುತ್ತದೆಯೋ, ಆ ಸ್ಥಾನಕ್ಕೆ ಸಂಬಂಧಿಸಿದ ಸಮಸ್ಯೆಗಳು ಉದ್ಭವಿಸುತ್ತವೆ. ಮಂಗಳ ಗ್ರಹ ಪ್ರಥಮ ಸ್ಥಾನದಲ್ಲಿದ್ದರೆ ವ್ಯಕ್ತಿಯ ಸ್ವಭಾವ ಆಕ್ರಮಕವಾಗಿರುವುದು, ಚತುರ್ಥ ಸ್ಥಾನದಲ್ಲಿದ್ದರೆ ಕೌಟುಂಬಿಕ ಸುಖ ಸಿಗದಿರುವುದು, ಸಪ್ತಮ ಸ್ಥಾನದಲ್ಲಿದ್ದರೆ ಪತಿ- ಪತ್ನಿಯರಲ್ಲಿ ಹೊಂದಾಣಿಕೆ ಆಗದಿರುವುದು, ಅಷ್ಟಮ ಸ್ಥಾನದಲ್ಲಿದ್ದರೆ ಅಪಘಾತದ ಪ್ರಸಂಗ ಬರುವುದು ಮತ್ತು ಹನ್ನೆರಡನೇ ಸ್ಥಾನದಲ್ಲಿದ್ದರೆ ಆರ್ಥಿಕ ಅಥವಾ ಆರೋಗ್ಯದ ಹಾನಿಯಾಗುವುದು, ಸಾಮಾನ್ಯವಾಗಿ ಈ ಪರಿಣಾಮಗಳು ಕಂಡುಬರುತ್ತವೆ; ಆದರೆ ಇಂತಹ ಪರಿಣಾಮಗಳಾಗುವುದು ‘ಜಾತಕದಲ್ಲಿನ ಮಂಗಳ ಗ್ರಹವು ಎಷ್ಟು ಬಲಿಷ್ಠವಾಗಿದೆ ? ಮತ್ತು ಅದರೊಂದಿಗೆ ಇತರ ಗ್ರಹಗಳ ಯೋಗ ಹೇಗಿದೆ ?’, ಇವುಗಳನ್ನು ಅವಲಂಬಿಸಿರುತ್ತದೆ. ಆದ್ದರಿಂದ ಮಂಗಳದೋಷವಿರುವ ಪ್ರತಿಯೊಬ್ಬ ವ್ಯಕ್ತಿಗೆ ತೀವ್ರ ಅನಿಷ್ಟ ಫಲಗಳು ಸಿಗುತ್ತವೆ, ಎಂದೇನಿಲ್ಲ.

೩. ‘ಜಾತಕದಲ್ಲಿ ಮಂಗಳದೋಷವಿದೆಯೇ?’, ಎಂಬುದನ್ನು ಜ್ಯೋತಿಷಿಗಳಿಂದ ಖಚಿತಪಡಿಸಿಕೊಳ್ಳಬೇಕು.

ಜಾತಕದಲ್ಲಿ ೧, ೪, ೭, ೮ ಮತ್ತು ೧೨ ಈ ಸ್ಥಾನಗಳಲ್ಲಿರುವ ಮಂಗಳ ಗ್ರಹವು ಬಲಿಷ್ಠವಾಗಿರದಿದ್ದರೆ ಅದರ ಪರಿಣಾಮಗಳು ಸೌಮ್ಯವಾಗಿರುತ್ತವೆ, ಪಂಚಾಂಗದಲ್ಲಿ ಇಂತಹ ಅನೇಕ ಅಪವಾದಗಳನ್ನು ಕೊಡಲಾಗಿದೆ, ಇವುಗಳಿಂದ ಮಂಗಳದೋಷವಿದೆ ಎಂದು ತಿಳಿದುಕೊಳ್ಳುವುದಿಲ್ಲ, ಉದಾ. ಮಂಗಳವು ಅವನ ನೀಚ ರಾಶಿಯಲ್ಲಿ (ಕರ್ಕ ರಾಶಿಯಲ್ಲಿ) ಇರುವುದು, ಮಂಗಳವು ಮಿಥುನ ಅಥವಾ ಕನ್ಯಾ ರಾಶಿಯಲ್ಲಿರುವುದು, ಮಂಗಳದ ಮೇಲೆ ಶುಭ ಗ್ರಹದ ದೃಷ್ಟಿ ಇರುವುದು ಇತ್ಯಾದಿ. ಈ ಅಪವಾದಗಳಿಂದ ಮಂಗಳದೋಷವಿರುವ ಶೇ. ೬೦ ರಿಂದ ಶೇ. ೭೦ ರಷ್ಟು ಜಾತಕಗಳಲ್ಲಿ ಮಂಗಳದೋಷವು ಸೌಮ್ಯವಾಗಿರುತ್ತದೆ. ಆದ್ದರಿಂದ ಮಂಗಳ ದೋಷದ ಸಂದರ್ಭದಲ್ಲಿ ‘ಜಾತಕದಲ್ಲಿ ನಿಜವಾಗಿಯೂ ಮಂಗಳ ದೋಷವಿದೆಯೇ ?’, ಎಂಬುದನ್ನು ಜ್ಯೋತಿಷಿಗಳಿಂದ ಖಚಿತಪಡಿಸಿಕೊಳ್ಳಬೇಕು.

೪. ಉಪಾಯಗಳನ್ನು ಮಾಡಿದರೆ ಮಂಗಳದೋಷ ನಾಶವಾಗುತ್ತದೆಯೇ ?

ಜಾತಕದಲ್ಲಿ ಪ್ರಬಲ ಮಂಗಳದೋಷ ಇದ್ದರೆ ಮಂಗಳ ಗ್ರಹದ ಶಾಂತಿ ಮತ್ತು ಜಪವನ್ನು ಮಾಡಲಾಗುತ್ತದೆ. ಈ ಉಪಾಯಗಳನ್ನು ಮಾಡುವುದರಿಂದ ಮಂಗಳ ಗ್ರಹದ ದುಷ್ಪರಿಣಾವು ಕಡಿಮೆಯಾಗಿ ವಿವಾಹ ಕೂಡಿಬರಲು ಮತ್ತು ವಿವಾಹವು ಯಾವುದೇ ತೊಂದರೆಗಳು ಬರದೇ ನೆರವೇರಲು ಸಹಾಯವಾಗುತ್ತದೆ. ಶಾಂತಿ ಮತ್ತು ಜಪದ ಪರಿಣಾಮವು ೫ ರಿಂದ ೬ ತಿಂಗಳ ವರೆಗೆ ಮಾತ್ರ ಉಳಿಯುತ್ತದೆ. ಶಾಂತಿ ಮತ್ತು ಜಪದಿಂದ ಮಂಗಳದೋಷವು ಶಾಶ್ವತವಾಗಿ ನಾಶವಾಗುವುದಿಲ್ಲ; ಏಕೆಂದರೆ ಗ್ರಹದೋಷವೆಂದರೆ ನಾವು ಹಿಂದಿನ ಜನ್ಮದಲ್ಲಿ ಮಾಡಿದ ಅಯೋಗ್ಯ ಕರ್ಮಗಳ ಪರಿಣಾಮವಾಗಿರುತ್ತದೆ.

೫. ಮಂಗಳದೋಷವಿದ್ದರೆ ವ್ಯಕ್ತಿಯು ವಹಿಸಬೇಕಾದ ಕಾಳಜಿ

ಮಂಗಳದೋಷವು ಹೆಚ್ಚಾಗಿ ವೈವಾಹಿಕ ಜೀವನದಲ್ಲಿ ತೊಂದರೆದಾಯಕವಾಗಿರುವುದರಿಂದ ವ್ಯಕ್ತಿಯು ತಾಳ್ಮೆ ಮತ್ತು ಸಹನಶೀಲತೆಯನ್ನು ಹೆಚ್ಚಿಸುವುದು ಆವಶ್ಯಕವಾಗಿರುತ್ತದೆ. ಇತರರನ್ನು ಅರ್ಥಮಾಡಿಕೊಳ್ಳುವುದು, ಅವರ ಅಭಿಪ್ರಾಯಗಳನ್ನು ಗೌರವಿಸುವುದು, ಮನಮುಕ್ತವಾಗಿ ಮಾತನಾಡುವುದು, ಇತರರಿಗೆ ತಾವಾಗಿಯೇ ಸಹಾಯ ಮಾಡುವುದು, ಮುಂತಾದ ಗುಣಗಳನ್ನು ಹೆಚ್ಚಿಸಿಕೊಳ್ಳಲು ಪ್ರಯತ್ನಿಸಿದರೆ ವೈವಾಹಿಕ ಜೀವನವು ಸುಖದಾಯಕವಾಗುತ್ತದೆ. ಇದರ ಜೊತೆಗೆ ಕುಟುಂಬದವರಿಗಾಗಿ ಸಮಯಕೊಡುವುದು, ಆರ್ಥಿಕ ನಿರ್ಣಯಗಳನ್ನು ವಿಚಾರ ಮಾಡಿ  ತೆಗೆದುಕೊಳ್ಳುವುದು ಮತ್ತು ಆಯುಧ, ಯಂತ್ರ, ವಾಹನ ಇತ್ಯಾದಿ ವಸ್ತುಗಳನ್ನು ಎಚ್ಚರಿಕೆಯಿಂದ ಉಪಯೋಗಿಸುವುದು ಆವಶ್ಯಕವಾಗಿದೆ.’

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೧.೧೧.೨೦೨೨)