ಯುಗಾದಿ ಎಂದು ಹೇಳಿದೊಡನೆ ಬ್ರಹ್ಮಧ್ವಜದ ಪೂಜೆ, ರಂಗೋಲಿಗಳು, ಹೊಸ ಉಡುಗೆತೊಡುಗೆಗಳು, ಸಿಹಿತಿಂಡಿ, ಕೇಸರಿ ಧ್ವಜ ಕಣ್ಣೆದುರು ಬರುತ್ತದೆ ಮತ್ತು ಎಲ್ಲಕ್ಕಿಂತ ಮಹತ್ವದ್ದೆಂದರೆ ಹೊಸ ವರ್ಷದ ಶುಭಾಶಯಗಳು ! ಹೌದು ಹಿಂದೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು !
ಹಿಂದೂಗಳ ಯಾವುದೇ ಹಬ್ಬವು ಮನೋರಂಜನೆಯ ವಿಷಯವಾಗಿಲ್ಲ, ಅದು ಮಂಗಲ, ಪಾವಿತ್ರ್ಯ, ಚೈತನ್ಯದ ಆನಂದೋತ್ಸವವಾಗಿದೆ, ಯುಗಾದಿಯೂ ಹಾಗೆಯೇ ಇದೆ ! ಅದರಲ್ಲಿಯೂ ಯುಗಾದಿಯ ಇನ್ನೊಂದು ವೈಶಿಷ್ಟ್ಯವೆಂದರೆ, ಇದು ಇವೆಲ್ಲವನ್ನೂ ತೆಗೆದುಕೊಂಡು ಬರುವುದರ ಜೊತೆಗೆ ಕಾಲದ ಪ್ರತ್ಯಕ್ಷ ಅರಿವನ್ನು ಮಾಡಿಕೊಟ್ಟು ಜೀವವನ್ನು ಹೆಚ್ಚೆಚ್ಚು ಅಂತರ್ಮುಖಗೊಳಿಸುತ್ತದೆ ! ಅಂತರ್ಮುಖಿ ಜೀವಕ್ಕೆ ಈಶ್ವರನ ಕಡೆಗಿನ ಸೆಳೆತವು ಸಹ ಹೆಚ್ಚಾಗುತ್ತದೆ !
ಯಾವಾಗ ಹೊಸ ವರ್ಷದ ಸಂಬಂಧ ಬರುತ್ತದೆಯೋ, ಆಗ ಸಹಜವಾಗಿಯೇ ಕಾಲದೊಂದಿಗೆ ಸಂಬಂಧ ಬರುತ್ತದೆ. ಆದ್ದರಿಂದಲೇ ಯುಗಾದಿಯ ಧಾರ್ಮಿಕ ಕೃತಿಗಳಲ್ಲಿ ಅಭ್ಯಂಗಸ್ನಾನ ಮಾಡುವಾಗ ‘ದೇಶಕಾಲಕಥನ’ ಮಾಡಲು ಹೇಳಲಾಗಿದೆ. ಈ ದೇಶಕಾಲಕಥನದಿಂದ ಪ್ರಾಚೀನ ಹಿಂದೂ ಸಂಸ್ಕೃತಿಯ ಶ್ರೇಷ್ಠತ್ವವು ನಮ್ಮನ್ನು ಆಶ್ಚರ್ಯಚಕಿತಗೊಳಿಸುತ್ತದೆ, ಅಲ್ಲದೇ ಈ ಅತೀ ಪ್ರಚಂಡ ಕಾಲದ ಹಿನ್ನೆಲೆಯಲ್ಲಿ ನಮ್ಮ ಸೂಕ್ಷ್ಮತಮ (ಸೂಕ್ಷ್ಮಾತೀ ಸೂಕ್ಷ್ಮ) ಅಸ್ತಿತ್ವದ ಅರಿವನ್ನೂ ಮಾಡಿಕೊಡುತ್ತದೆ !
ಬ್ರಹ್ಮದೇವನ ಜನ್ಮವಾದಾಗಿನಿಂದ ಇಲ್ಲಿಯ ವರೆಗೆ ಬ್ರಹ್ಮದೇವನಿಗೆ ಎಷ್ಟು ವರ್ಷಗಳಾದವು, ಯಾವ ವರ್ಷದಲ್ಲಿನ ಯಾವ ಮತ್ತು ಎಷ್ಟನೇ ಮನ್ವಂತರ ನಡೆಯುತ್ತಿದೆ; ಈ ಮನ್ವಂತರದಲ್ಲಿನ ಎಷ್ಟನೇ ಮಹಾಯುಗ ಮತ್ತು ಯಾವ ಉಪಯುಗ ನಡೆಯುತ್ತಿದೆ’, ‘ದೇಶಕಾಲಕಥನ’ದಲ್ಲಿ ಇವೆಲ್ಲವುಗಳ ಉಲ್ಲೇಖವಿರುತ್ತದೆ.