ಮನುಷ್ಯನಿಗೆ ಜ್ಞಾನ, ಧನ ಮತ್ತು ಬಲವನ್ನು ನೀಡುವ ದೀಪಾವಳಿ !

ಅ. ಗೋವತ್ಸ ದ್ವಾದಶಿ

ಮೊದಲ ದಿನ ಗೋವತ್ಸ ದ್ವಾದಶಿ. ಈ ದಿನ ನಾವು ‘ಸವತ್ಸ ಗೋಮಾತೆ’ (ಕರು ಸಹಿತ ಹಸು)ಯನ್ನು ಪೂಜಿಸುತ್ತೇವೆ. ಕೃಷಿ, ಆರೋಗ್ಯ, ಆರ್ಥಿಕ, ಪರಿಸರ ಈ ಎಲ್ಲಾ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಮಾನವನಿಗೆ ಸಮೃದ್ಧಿಯನ್ನು ಕೊಡಬಹುದಾದ ಗೋಮಾತೆಯ  ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ದಿನವಿದು. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಬಲಿಯಾಗಿ ನಾವು ಗೋವನ್ನು ಮರೆತಿದ್ದೇವೆ; ಆದರೆ ಇಂದು ಭೂಮಿ ಮತ್ತು ಅದರ ಮೇಲೆ ವಾಸಿಸುವ ಮಾನವನ ಜೀವ ಅಪಾಯದ ಅಂಚಿನಲ್ಲಿರುವಾಗ ನಮಗೆ ಕಾಣುವ ಏಕೈಕ  ಆಶಾಕಿರಣವೆಂದರೆ ಅದು ಗೋಮಾತೆ. ಹೀಗಾಗಿ ಹಿಂದೂ ಪರಂಪರೆ ಮತ್ತೆ ಪ್ರಜ್ವಲಿಸಬೇಕು ಮತ್ತು ಹಿಂದಿನಂತೆ ನಮ್ಮ ಹತ್ತಿರವಿರುವ ‘ಗೋಧನದಿಂದ’ ನಮ್ಮ ಸಂಪತ್ತನ್ನು ಅಳೆಯುವ ದಿನಗಳು ಬರಬೇಕು. ಇದಕ್ಕಾಗಿ ನಾವು ಶ್ರಮಿಸಬೇಕಾಗುವುದು. ಅದಕ್ಕಾಗಿ ಗೋಮಾತೆಯ ಬಗ್ಗೆ ಕೃತಜ್ಞತೆಯನ್ನು ಇಟ್ಟುಕೊಳ್ಳುವುದು ಇಂದಿನ ಅವಶ್ಯಕತೆಯಾಗಿದೆ.

ವೈದ್ಯೆ ಸುಚಿತ್ರಾ ಕುಲಕರ್ಣಿ

ಆ. ಧನತ್ರಯೋದಶಿ

ಎರಡನೇ ದಿನ ಧನತ್ರಯೋದಶಿ, ಅಂದರೆ ಆರೋಗ್ಯದ ಅಧಿದೇವತೆಯ ಹಬ್ಬ. ಆರೋಗ್ಯಕರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆಯೊಂದಿಗೆ ಹಬ್ಬದ ಮುಂದಿನ ದಿನಗಳು ಪ್ರಾರಂಭವಾಗುತ್ತವೆ. ‘ಆರೋಗ್ಯಕರ ದೀರ್ಘಾಯುಷ್ಯ’ ಕೇವಲ ಪ್ರಾರ್ಥನೆಯಿಂದ ಪ್ರಾಪ್ತವಾಗುವ ವಿಷಯವಲ್ಲ. ಭಗವಾನ್ ಧನ್ವಂತರಿಯ ಆಶೀರ್ವಾದದೊಂದಿಗೆ ಅವನು ಹೇಳಿರುವ ಮಾರ್ಗದಲ್ಲಿ ಸ್ವತಃ ನಿರಂತರ ಯೋಗ್ಯ ಪ್ರಯತ್ನ ಮಾಡುವುದು ಆವಶ್ಯಕವಾಗಿದೆ. ಇದು ಆ ಮಾರ್ಗದಲ್ಲಿ ನಡೆಯಲು ಸಂಕಲ್ಪ ಮಾಡುವ ದಿನವಾಗಿದೆ

ಇ. ನರಕ ಚತುರ್ದಶಿ

ಮೂರನೇ ದಿನ ನರಕ ಚತುರ್ದಶಿ. ವ್ಯಕ್ತಿ ಅಥವಾ ಸಮಷ್ಟಿ ಜೀವನವನ್ನು ನರಕವನ್ನಾಗಿಸುವ ಎಲ್ಲಾ ದುರ್ಗುಣಗಳನ್ನು ನಾಶ ಮಾಡುವ ದಿನವಿದು ! ಈ ದಿನ ಬೆಳಗ್ಗೆ ಬೇಗ ಏಳುವುದು ಪರಂಪರೆಯಾಗಿದೆ. ಬೆಳಗ್ಗೆ ಬೇಗ ಏಳುವುದರಿಂದಾಗುವ ಲಾಭಗಳು ನಮಗೆಲ್ಲರಿಗೂ ತಿಳಿದಿವೆ. ಬ್ರಹ್ಮಮುಹೂರ್ತದಲ್ಲಿ (ಅಂದರೆ ಸುಮಾರು ನಾಲ್ಕೂವರೆಯಿಂದ ಐದು ಗಂಟೆಯ ಸಮಯದಲ್ಲಿ) ಏಳುವುದು ಮಲ ವಿಸರ್ಜನೆಗೆ ಅನುಕೂಲಕರವಾಗಿದೆ. ಇದರಿಂದ ಶರೀರ ಶುದ್ಧ ಮತ್ತು ಹಗುರಾಗುತ್ತದೆ. ಶರೀರದ ಕ್ರಿಯೆಗಳು ಸುಧಾರಿಸುತ್ತವೆ. ಚೆನ್ನಾಗಿ ಹಸಿವಾಗುತ್ತದೆ. ಕಫ ಹೆಚ್ಚಾಗುವುದಿಲ್ಲ, ಇದರಿಂದ ಶರೀರ ಸ್ಥೂಲವಾಗುವುದಿಲ್ಲ. ಆಲಸ್ಯ ದೂರವಾಗಿ ಉತ್ಸಾಹ ಬರುತ್ತದೆ. ವ್ಯಾಯಾಮ, ಅಭ್ಯಂಗ, ಸ್ನಾನ, ಪೂಜೆಯಂತಹ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಬಲಪಡಿಸುವ ಕೆಲಸಗಳನ್ನು ಮಾಡಲು ಸಮಯ ಸಿಗುತ್ತದೆ.

ಇ ೧. ಅಭ್ಯಂಗಸ್ನಾನದಿಂದ ಶರೀರವು ದಷ್ಟ-ಪುಷ್ಟವಾಗಿ ಆಯುಷ್ಯ ಹೆಚ್ಚಾಗುತ್ತದೆ : ನರಕ ಚತುರ್ದಶಿಯ ದಿನ ಅಭ್ಯಂಗಸ್ನಾನವನ್ನು ಮಾಡಬೇಕು. ಬೆಳಗಿನ ತಂಪಾದ ಗಾಳಿಯಲ್ಲಿ, ದೇಹಕ್ಕೆ ಬೆಚ್ಚಗಿನ ಎಣ್ಣೆಯನ್ನು ಹಚ್ಚಿ ಮಾಲಿಶ ಮಾಡಬೇಕು ಮತ್ತು ಪರಿಮಳಯುಕ್ತ ಉಟಣೆಯನ್ನು ಹಚ್ಚಿ ಬಿಸಿನೀರಿನಿಂದ ಸ್ನಾನ ಮಾಡಬೇಕು. ರಾಜಯೋಗ ಎನ್ನುವುದು ಇದಕ್ಕಿಂತ ಭಿನ್ನ ಏನಿರಬಹುದು ? ಅಭ್ಯಂಗವು ವೃದ್ಧಾಪ್ಯ, ಶ್ರಮ ಮತ್ತು ವಾತ ಇವುಗಳನ್ನು ದೂರವಿಡುತ್ತದೆ. ಇದರಿಂದ ದೀರ್ಘಕಾಲದ ವರೆಗೆ ಆರೋಗ್ಯ ಉತ್ತಮವಾಗಿರುತ್ತದೆ, ದೇಹವು ದಷ್ಟ-ಪುಷ್ಟ ಮತ್ತು ಬಲವಾಗುತ್ತದೆ, ಆಯುಷ್ಯವು ಹೆಚ್ಚಾಗುತ್ತದೆ, ನಿದ್ರೆ ಚೆನ್ನಾಗಿ ಬರುತ್ತದೆ ಮತ್ತು ಚರ್ಮವು ಸುಂದರವಾಗಿರುತ್ತದೆ. ಉಟಣೆಯಿಂದ ಶರೀರ ಸುಗಂಧಿ, ಸುಕೋಮಲ ಮತ್ತು ಸ್ಥಿರ (ಕಂಪನರಹಿತ) ಆಗುತ್ತದೆ. ಅನಂತರ ಬಿಸಿನೀರಿನಿಂದ ಸ್ನಾನ ಮಾಡುವುದರಿಂದ ಜೀರ್ಣಶಕ್ತಿ ಮತ್ತು ಹಸಿವು ಹೆಚ್ಚಾಗುತ್ತದೆ, ಶಕ್ತಿ ಮತ್ತು ಬಲವನ್ನು ನೀಡುತ್ತದೆ, ಹಾಗೆಯೇ ತುರಿಕೆ, ಮಲ, ಬೆವರು, ಶ್ರಮ, ಸೋಮಾರಿತನ, ಬಾಯಾರಿಕೆ, ಉರಿಯೂತ ಮತ್ತು ಪಾಪ (ಸ್ನಾನದಿಂದ ತನು-ಮನಕ್ಕೆ ಉಂಟಾಗುವ ಸಂತೋಷವು ಮನಸ್ಸಿನಲ್ಲಿ ಕೆಟ್ಟ ವಿಚಾರಗಳ, ಅಂದರೆ ಪಾಪಗಳಿಗೆ ಅವಕಾಶವನ್ನು ಕೊಡುವುದಿಲ್ಲ.) ಅವುಗಳನ್ನು ನಾಶಪಡಿಸುತ್ತದೆ. ಇದರರ್ಥ ಅಭ್ಯಂಗಸ್ನಾನ ಈ ಒಂದೇ ಒಂದು ಕೃತಿಯಿಂದ ನಮಗೆ ಎಷ್ಟೋ ಲಾಭಗಳಾಗುತ್ತವೆ.   ಅಭ್ಯಂಗಸ್ನಾನದ ನಂತರ, ಹೊಸ ಬಟ್ಟೆ ಮತ್ತು ಆಭರಣಗಳನ್ನು ಧರಿಸಿ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನ ಪಡೆಯುವುದು, ನೆರೆಹೊರೆಯವರಿಗೆ ಸಿಹಿತಿಂಡಿ ಹಂಚುವುದು, ಇವೆಲ್ಲದರಿಂದ ಉತ್ಸಾಹ, ಸಮೂಹ ಸಹವಾಸ ಮತ್ತು ಆನಂದ ಎಲ್ಲೆಡೆ ಹರಡುತ್ತದೆ.

ಇ. ಲಕ್ಷ್ಮೀ ಪೂಜೆ

ನಿಜ ಹೇಳಬೇಕಾದರೆ ಕಲಿಯುಗದಲ್ಲಿ ಮನುಷ್ಯನಿಗೆ ಲಕ್ಷ್ಮೀ ಪೂಜೆಯ ಮಹತ್ವವನ್ನು ಹೇಳುವ ಅವಶ್ಯಕತೆಯೇ ಇಲ್ಲ. ಅವಳು ಯಾವಾಗಲೂ ತಮ್ಮ ಮನೆಯಲ್ಲಿಯೇ ಇರಬೇಕೆಂದು ಪ್ರತಿಯೊಬ್ಬರ ಮನಸ್ಸಿನ ಇಚ್ಛೆಯಾಗಿದೆ; ಆದರೆ ಈ ಲಕ್ಷ್ಮಿಯಷ್ಟು ಚಂಚಲೆ ಜಗತ್ತಿನಲ್ಲಿ ಬೇರೆ ಯಾರೂ ಇಲ್ಲ. ಅವಳು ಯಾರ ಬಳಿಯೂ ಹೋಗುತ್ತಾಳೆ, ನಿಜ; ಆದರೆ ಅವಳು ಬಯಸಿದಾಗ ಹೊರಗೆ ಬರುತ್ತಾಳೆ. ಇದನ್ನು ತಿಳಿದು ಅವಳನ್ನು ತಮ್ಮ ಮನೆಗೆ ಆಕರ್ಷಿಸಲು ಈ ದಿನ ಮನೆಯನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. ಇದರೊಂದಿಗೆ ಸಂತರು ಹೇಳಿದಂತೆ ಲಕ್ಷ್ಮೀ ಮಾತೆಯನ್ನು ಪ್ರಸನ್ನಗೊಳಿಸಿಕೊಳ್ಳುವ ಉಪಾಯಗಳೂ ಬೇಕು. ಸಂತ ತುಕಾರಾಮ ಮಹಾರಾಜರು ಹೇಳಿದಂತೆ ‘ಒಳ್ಳೆಯ ವ್ಯವಹಾರ ಮಾಡಿ ಹಣ ಗಳಿಸಬೇಕು ಮತ್ತು ಅದರಲ್ಲಿ ಆಸಕ್ತಿಯನ್ನು ಇಟ್ಟುಕೊಳ್ಳದೇ ಅದನ್ನು ವೆಚ್ಚ ಮಾಡಬೇಕು ಹಾಗೆಯೇ ಯೋಗ್ಯ ಕೆಲಸಕ್ಕಾಗಿ (ಸತ್ಪಾತ್ರೆ ದಾನಕ್ಕಾಗಿ) ಅದರ ಉಪಯೋಗವಾಗಬೇಕು. ಕೇವಲ ಸ್ವಂತ ಭೌತಿಕ ಉಪಭೋಗದ ಬಯಕೆ ಅಪಾಯಕಾರಿಯಾಗಿದೆ. ಸಮರ್ಥ ರಾಮದಾಸ ಸ್ವಾಮಿಗಳು ಹೇಳುತ್ತಾರೆ, ‘ನಾರಾಯಣ’ನನ್ನು ನಿಮ್ಮ ಹೃದಯದಲ್ಲಿ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಿ, ಅಂದರೆ ಅವನ ಅಖಂಡ ನಾಮಸ್ಮರಣೆ, ಧ್ಯಾನ, ಚಿಂತನೆಯನ್ನು ಮಾಡಿ. ಇದರಿಂದ ಅವನೊಂದಿಗಿರುವ ಲಕ್ಷ್ಮಿಯೂ ತಾನಾಗಿ ಬರುತ್ತಾಳೆ.

ಸಂತ ಶ್ರೇಷ್ಠ ಜ್ಞಾನೇಶ್ವರ ಮಹಾರಾಜರು ಹೇಳುತ್ತಾರೆ,  ‘ಜೀವನಕ್ಕೆ ತಗುಲಿರುವ ಅವಿವೇಕದ ಮಸಿಯನ್ನು ಒರೆಸಿ, ವಿವೇಕದ ದೀಪವನ್ನು ನಿರಂತರ ಹಚ್ಚುವುದೇ ಯೋಗಿಗಳ ದೀಪಾವಳಿಯಾಗಿದೆ. ಈ ಜ್ಞಾನರೂಪಿ ಬೆಳಕಿಗೆ ಮರುಳಾಗಿ ಲಕ್ಷ್ಮೀ ಖಂಡಿತವಾಗಿಯೂ ಬರುತ್ತಾಳೆ.

ಉ. ಬಲಿಪಾಡ್ಯ

ಬಲಿರಾಜನು ಅಸುರರ ವಂಶದಲ್ಲಿ ಜನಿಸಿದ್ದನು; ಆದರೆ ಅವನು ಉತ್ತಮ ಆಡಳಿತ ನಡೆಸಿದನು ಮತ್ತು ಧರ್ಮವನ್ನು ಪಾಲಿಸಿದನು. ಅದರಿಂದ ಪ್ರಸನ್ನನಾಗಿ ಈಶ್ವರನು ಅವನಿಗೆ ಪಾತಾಳದ ರಾಜ ಮತ್ತು ಚಿರಂಜೀವಿತ್ವ ಈ ಎರಡು ವಿಷಯಗಳನ್ನು ನೀಡಿದನು. ಜನ್ಮದಿಂದ ನಾವೆಲ್ಲರೂ ಕ್ಷುದ್ರರಾಗಿರುತ್ತೇವೆ; ಆದರೆ ಜ್ಞಾನ, ಧಾರ್ಮಿಕ ನಡುವಳಿಕೆ ಮತ್ತು ಈಶ್ವರನ ಕೃಪೆ ಇವುಗಳ ಮಾಧ್ಯಮದಿಂದ ನಮ್ಮ ಕಲ್ಯಾಣವಾಗುತ್ತದೆ. ಇದು ಈ ಕಥೆಯ ಭಾವಾರ್ಥವಾಗಿದೆ. ಅದನ್ನು ತಿಳಿದುಕೊಂಡು ಬದುಕುವ ಕಲೆಯನ್ನು ಕಲಿಯಬೇಕು. ಅದಕ್ಕಾಗಿ ಬಲಿಪಾಡ್ಯದಷ್ಟು ಉತ್ತಮ ಮುಹೂರ್ತ ಇನ್ನು ಯಾವುದು ಇರಲು ಸಾಧ್ಯವಿದೆ !

ಊ. ಸಹೋದರ ತದಿಗೆ ಅಥವಾ ಯಮದ್ವಿತೀಯ

ದೀರ್ಘಾಯುಷ್ಯಕ್ಕಾಗಿ ಯಮನನ್ನು ಜಯಿಸಲೇಬೇಕು; ಆದರೆ ಮನುಷ್ಯನೇನು ಅಮರವಾಗಿಲ್ಲ. ಈ ದೇಹ ಝರ್ಜರಿತವಾದಾಗ ‘ಕಾಲ’ ಎಂದೆನಿಸಿಕೊಳ್ಳುವ ಈ ಯಮನು ಬರಬೇಕೆಂದು ಅನಿಸತೊಡಗುತ್ತದೆ. ಮರಣವು ಮಾನವ ಶರೀರದ ಅಂತಿಮ ಸತ್ಯವಾಗಿದೆ ಮತ್ತು ಅದರ ಅರಿವನ್ನು ಇಟ್ಟುಕೊಂಡರೆ ಮಾತ್ರ ಅಂತರಂಗದಲ್ಲಿ ನಾರಾಯಣನನ್ನು ಇಟ್ಟುಕೊಳ್ಳಬಹುದು. ಅದಕ್ಕಾಗಿ ಯಮನೊಂದಿಗೆ ಸ್ನೇಹ ಸಾಧಿಸುವ ದಿನ ಇದಾಗಿದೆ. ಪಾಡ್ಯದಂದು ಸ್ತ್ರೀಯರು ತಮ್ಮ ನೆಂಟರಲ್ಲಿನ ವಿವಿಧ ಪುರುಷರಿಗೆ ಮತ್ತು ಸಹೋದರ ತದಿಗೆಯಂದು ಸಹೋದರರಿಗೆ ಆರತಿ ಮಾಡುತ್ತಾರೆ. ಈ ಸಮಾರಂಭದಲ್ಲಿ ಪರಸ್ಪರರ ಆರೋಗ್ಯಪೂರ್ಣ ದೀರ್ಘಾಯುಷ್ಯ ದೊರೆಯಲೆಂದು ಹಾರೈಸುತ್ತಾರೆ. ಇದೂ ಕೂಡ ಅಷ್ಟೇ ಮಹತ್ವದ್ದಾಗಿದೆ.

– ವೈದ್ಯೆ ಸುಚಿತ್ರಾ ಕುಲಕರ್ಣಿ

(ಆಧಾರ: ಸಾಪ್ತಾಹಿಕ ‘ವಿವೇಕ, ೨೮ ಅಕ್ಟೋಬರ್ ೨೦೧೬)