ಯುಗಾದಿ ಪಾಡ್ಯದಂದು (ಮಾರ್ಚ್ ೨೨) ಮಾಡಬೇಕಾದ ಧಾರ್ಮಿಕ ಕೃತಿಗಳು

ಯಾವುದೇ ಹಬ್ಬ ಬಂದರೆ ಆ ಹಬ್ಬದ ವೈಶಿಷ್ಟ್ಯದಂತೆ ಮತ್ತು ನಮ್ಮ ಪದ್ಧತಿಯಂತೆ ನಾವು ಏನಾದರೂ ಮಾಡುತ್ತಿರುತ್ತೇವೆ; ಆದರೆ ಧರ್ಮದಲ್ಲಿ ಹೇಳಿದಂತಹ ಇಂತಹ ಪಾರಂಪರಿಕ ಕೃತಿಯ ಹಿಂದಿನ ಅಧ್ಯಾತ್ಮಶಾಸ್ತ್ರವನ್ನು ಗಮನದಲ್ಲಿಟ್ಟುಕೊಂಡರೆ ಅದರ ಮಹತ್ವವು ನಮಗೆ ಹಿಡಿಸುತ್ತದೆ. ಇಲ್ಲಿ ನಾವು ಯುಗಾದಿಯಂದು ಮಾಡಬೇಕಾದ ಧಾರ್ಮಿಕ ಕೃತಿಗಳ ಮಾಹಿತಿಯನ್ನು ತಿಳಿದುಕೊಳ್ಳೋಣ. ಈ ವರ್ಷ ಯುಗಾದಿ ಮಾರ್ಚ್ ೨೨ ರಂದು ಇದೆ.

ಅಭ್ಯಂಗಸ್ನಾನ

ಶರೀರಕ್ಕೆ ಎಣ್ಣೆ ಹಚ್ಚಿ ಅದನ್ನು ತಿಕ್ಕಿ ತ್ವಚೆಯಲ್ಲಿ ಇಂಗಿಸಿ ನಂತರ ಬಿಸಿ ನೀರಿನಿಂದ ಸ್ನಾನ ಮಾಡುವುದೆಂದರೆ ಅಭ್ಯಂಗಸ್ನಾನ. ಯುಗಾದಿಪಾಡ್ಯದಂದು ಮುಂಜಾನೆ ಬೇಗನೇ ಎದ್ದು ಮೊದಲು ಅಭ್ಯಂಗ ಸ್ನಾನ ಮಾಡಬೇಕು. ಅಭ್ಯಂಗಸ್ನಾನ ಮಾಡುವಾಗ ದೇಶಕಾಲಕಥನ ಮಾಡಬೇಕು

ತೋರಣ ಕಟ್ಟುವುದು

ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪುಹೂವುಗಳೊಂದಿಗೆ ಕಟ್ಟಬೇಕು; ಏಕೆಂದರೆ ಕೆಂಪು ಬಣ್ಣವು ಶುಭ ಸೂಚಕವಾಗಿದೆ.

ಸಂವತ್ಸರ ಪೂಜೆ

ಮೊದಲು ನಿತ್ಯಕರ್ಮ ಮಾಡಿ ದೇವರ ಪೂಜೆಯನ್ನು ಮಾಡಬೇಕು. ‘ವರ್ಷದ ಪಾಡ್ಯದಂದು ಮಹಾಶಾಂತಿ ಮಾಡಬೇಕು. ಶಾಂತಿಯ ಪ್ರಾರಂಭದಲ್ಲಿ ಬ್ರಹ್ಮದೇವನ ಪೂಜೆಯನ್ನು ಮಾಡಿ ಪೂಜೆಯಲ್ಲಿ ಅವನಿಗೆ ದವನವನ್ನು (ಸುವಾಸನೆಯ ಎಲೆಗಳನ್ನು) ಅರ್ಪಿಸಬೇಕು. ಅನಂತರ ಹೋಮ-ಹವನ ಮತ್ತು ಬ್ರಾಹ್ಮಣಸಂತರ್ಪಣೆ ಮಾಡಬೇಕು. ತರುವಾಯ ಅನಂತರೂಪಗಳಲ್ಲಿ ಅವತರಿಸುವ ಶ್ರೀವಿಷ್ಣುವಿನ ಪೂಜೆ ಮಾಡಿ ‘ನಮಸ್ತೇ ಬಹುರೂಪಾಯ ವಿಷ್ಣವೇ ನಮಃ |’,ಎನ್ನುವ ಮಂತ್ರವನ್ನು ಹೇಳಿ ಅವನಿಗೆ ನಮಸ್ಕರಿಸಬೇಕು. ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡಬೇಕು.

ಬ್ರಹ್ಮಧ್ವಜವನ್ನು ಏರಿಸುವುದು

೧. ಬ್ರಹ್ಮಧ್ವಜವನ್ನು ಸೂರ್ಯೋದಯದ ನಂತರ ಕೂಡಲೇ ನಿಲ್ಲಿಸ ಬೇಕಿರುತ್ತದೆ. ಅಪವಾದಾತ್ಮಕ ಸ್ಥಿತಿಯಲ್ಲಿ (ಉದಾ. ತಿಥಿಕ್ಷಯ) ಪಂಚಾಂಗವನ್ನು ನೋಡಿ ಬ್ರಹ್ಮಧ್ವಜವನ್ನು ನಿಲ್ಲಿಸಬೇಕು.

೨.  ದೊಡ್ಡ ಕೋಲಿನ ತುದಿಗೆ ಹಸಿರು ಅಥವಾ ಹಳದಿ ಬಣ್ಣದ ಜರಿಯ ಖಣವನ್ನು ಕಟ್ಟುತ್ತಾರೆ. ಅದರ ಮೇಲೆ ಸಕ್ಕರೆಯ ಗಂಟು, ಬೇವಿನ ಚಿಗುರೆಲೆ, ಮಾವಿನ ಎಲೆ ಮತ್ತು ಕೆಂಪು ಹೂವುಗಳ ಹಾರವನ್ನು ಕಟ್ಟಿ ಮೇಲೆ ಬೆಳ್ಳಿಯ ಅಥವಾ ತಾಮ್ರದ ಕಲಶದಿಂದ ಶೃಂಗರಿಸಿ ಧ್ವಜವನ್ನು ನಿಲ್ಲಿಸುತ್ತಾರೆ. ಅದರ ಮುಂದೆ ಸುಂದರವಾದ ರಂಗೋಲಿ ಹಾಕುತ್ತಾರೆ.

೩. ‘ಬ್ರಹ್ಮಧ್ವಜಾಯ ನಮಃ ಎಂದು ಹೇಳಿ ಸಂಕಲ್ಪಪೂರ್ವಕ ಪೂಜಿಸಬೇಕು.

ಪಂಚಾಂಗ ಶ್ರವಣ

ಜ್ಯೋತಿಷಿಯ ಪೂಜೆ ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗ ಅರ್ಥಾತ್‌ ವರ್ಷಫಲದ ಶ್ರವಣ ಮಾಡಬೇಕು.

ಬೇವಿನ ಪ್ರಸಾದ

ಕಹಿ ಬೇವಿನ ಹೂವು, ಚಿಗುರೆಲೆಗಳು, ನೆನೆಸಿದ ಕಡಲೆ ಕಾಳು ಅಥವಾ ಬೇಳೆ, ಜೇನು, ಜೀರಿಗೆ ಮತ್ತು ಸ್ವಲ್ಪ ಇಂಗು ಇವೆಲ್ಲವನ್ನು ಬೆರೆಸಿ ಪ್ರಸಾದ ತಯಾರಿಸುತ್ತಾರೆ ಮತ್ತು ಅದನ್ನು ಎಲ್ಲರಿಗೂ ಹಂಚುತ್ತಾರೆ.

ಭೂಮಿಯನ್ನು ಉಳುವುದು

ಯುಗಾದಿಯಂದು ಭೂಮಿಯನ್ನು ಉಳಬೇಕು. ಭೂಮಿಯನ್ನು ಉಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜದ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಉಳಲು ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ-ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆ ಹಾಕಬೇಕು.

ದಾನ

ಯಾಚಕರಿಗೆ ಅನೇಕ ವಿಧದ ದಾನ ಕೊಡಬೇಕು, ಅರವಟಿಗೆ (ಜಲಮಂದಿರ) ನಿರ್ಮಿಸಿ ನೀರಿನ ದಾನ ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.