ಭಾರತೀಯ ಸೈನಿಕರು ಚೀನಾ ಸೈನಿಕರನ್ನು ಓಡಿಸಿದರು!

  • ತವಾಂಗ ಘಟನೆಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ ಹೇಳಿಕೆ

  • ಚೀನಾ ಸೈನಿಕರು ಭಾರತದ ಗಡಿಯೊಳಗೆ ನುಸುಳಿದ್ದರು!

ನವದೆಹಲಿ – ಡಿಸೆಂಬರ್ 9, 2022 ರ ರಾತ್ರಿ, ಅರುಣಾಚಲ ಪ್ರದೇಶದ ತವಾಂಗ ಎಂಬಲ್ಲಿಯ ಯಾಂಗತ್ಸೇ ಪ್ರದೇಶದಲ್ಲಿ ಚೀನಾದ ಪೀಪಲ್ಸ ಲಿಬರೇಶನ ಆರ್ಮಿಯ ಸೈನಿಕರು ವಾಸ್ತವಿಕ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಿದರು. ಈ ವೇಳೆ ಅವರು ಭಾರತೀಯ ಸೈನಿಕರೊಂದಿಗೆ ಚಕಾಮಕಿ ನಡೆಯಿತು. ಭಾರತೀಯ ಪಡೆಗಳು ಚೀನಾ ಸೈನಿಕರನ್ನು ಒಳನುಸುಳದಂತೆ ತಡೆದು ಅವರನ್ನು ಹಿಮ್ಮೆಟ್ಟುವಂತೆ ಮಾಡಿತು. ಎರಡೂ ಕಡೆಯ ಸೈನಿಕರು ಗಾಯಗೊಂಡಿದ್ದಾರೆ. ಒಬ್ಬ ಭಾರತೀಯ ಸೈನಿಕನೂ ಹುತಾತ್ಮನಾಗಲಿಲ್ಲ ಅಥವಾ ಗಂಭೀರವಾಗಿ ಗಾಯಗೊಂಡಿಲ್ಲ. ಆನಂತರ, ಸ್ಥಳೀಯ ಕಮಾಂಡರ ಡಿಸೆಂಬರ್ 11 ರಂದು ಚೀನಾ ಸೇನೆಯೊಂದಿಗೆ ಧ್ವಜ ಸಭೆ ನಡೆಸಿದರು. ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಸೆಂಬರ್ 13 ರಂದು ಲೋಕಸಭೆಯಲ್ಲಿ ಮಾತನಾಡುತ್ತಾ, ಇಂತಹ ಕೆಲಸಗಳನ್ನು ಮಾಡಬಾರದು ಮತ್ತು ಶಾಂತಿಯನ್ನು ಕಾಪಾಡಿಕೊಳ್ಳಬೇಕೆಂದು ಚೀನಾಗೆ ತಿಳಿಸಲಾಗಿದೆ. ಇದಕ್ಕೂ ಮುನ್ನ ವಿರೋಧ ಪಕ್ಷಗಳು ಈ ವಿಚಾರವಾಗಿ ಸಂಸತ್ತಿನಲ್ಲಿ ಗೊಂದಲ ಸೃಷ್ಟಿಸಿದವು.

ಒಂದು ಇಂಚು ಕೂಡ ತೆಗೆದುಕೊಳ್ಳಲು ಬಿಡಲಾರೆವು ! – ಗೃಹ ಸಚಿವ ಅಮಿತ ಶಾ

ಕೇಂದ್ರ ಗೃಹ ಸಚಿವ ಅಮಿತ ಶಾಹ

ಭಾರತದ ಒಂದು ಇಂಚು ಭೂಮಿಯನ್ನು ಕೂಡ ಚೀನಾ ತನ್ನ ಹಿಡಿತಕ್ಕೆ ತೆಗೆದುಕೊಂಡಿಲ್ಲ ಮತ್ತು ನಾವು ಅದಕ್ಕೆ ಅವಕಾಶವನ್ನೂ ನೀಡಲಾರೆವು ಎಂದು ಸಂಸತ್ತಿನ ಹೊರಗೆ ಕೇಂದ್ರ ಗೃಹ ಸಚಿವ ಅಮಿತ ಶಾಹ, ಹೇಳಿದರು. ನಮ್ಮ ಸೈನಿಕರು ಶೌರ್ಯ ತೋರಿದರು. ಸೈನ್ಯವು ಶೀಘ್ರದಲ್ಲೇ ಒಳನುಗ್ಗುವವರನ್ನು ಬೆನ್ನಟ್ಟಿತು ಮತ್ತು ನಮ್ಮ ಭೂಮಿಯನ್ನು ರಕ್ಷಿಸಿತು. ಕಾಂಗ್ರೆಸ ಪಕ್ಷ ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಗೆ ಅವಕಾಶ ನೀಡಲಿಲ್ಲ. ‘ನಾವು ನಿಮಗೆ ಉತ್ತರ ನೀಡುವೆವು’ ಎಂದು ಸರಕಾರ ಅವರಿಗೆ ಹೇಳಿತ್ತು. ಹೀಗಿದ್ದರೂ ಅವರು ಸಂಸತ್ತಿನ ಕಲಾಪಕ್ಕೆ ಅವಕಾಶ ನೀಡಲಿಲ್ಲ. ನಾನು ಪ್ರಶ್ನೆ ಗಂಟೆಯ ಪಟ್ಟಿಯನ್ನು ನೋಡಿದೆ ಮತ್ತು ಪ್ರಶ್ನೆ ಸಂಖ್ಯೆ 5 ನೋಡಿದ ನಂತರ ನನಗೆ ಕಾಂಗ್ರೆಸ ಪಕ್ಷದ ಕಾಳಜಿ ಅರ್ಥವಾಯಿತು ! ಅವುಗಳಲ್ಲಿ ಒಂದು ಪ್ರಶ್ನೆಯು, ರಾಜೀವ ಗಾಂಧಿ ಫೌಂಡೇಶನ ನ ವಿದೇಶಿ ಕೊಡುಗೆ ನಿಯಂತ್ರಣಾ ಕಾಯಿದೆ (ಎಫ್‌ಸಿಆರ್‌ಎ) ಪರವಾನೆಯನ್ನು ರದ್ದು ಗೊಳಿಸುವ ಬಗ್ಗೆ ಇತ್ತು. ರಾಜೀವ ಗಾಂಧಿ ಫೌಂಡೇಶನಗೆ 2005-2006 ಮತ್ತು 2006-2007 ಈ ಆರ್ಥಿಕ ವರ್ಷಗಳಲ್ಲಿ 1 ಕೋಟಿ 20 ಲಕ್ಷ ರೂಪಾಯಿ ಅನುದಾನ ಸಿಕ್ಕಿತ್ತು. ಸಂಪೂರ್ಣ ಕಾನೂನು ಪ್ರಕ್ರಿಯೆಯ ನಂತರ ಗೃಹ ಸಚಿವಾಲಯವು ಅದರ ನೋಂದಣಿಯನ್ನು ರದ್ದುಗೊಳಿಸಿದೆ. ಈ ಮೊತ್ತವನ್ನು ಚೀನಾ ರಾಯಭಾರ ಕಚೇರಿಯಿಂದ ಪಡೆಯಲಾಗಿತ್ತು. ಈ ಮೊತ್ತವನ್ನು ಭಾರತ-ಚೀನಾ ಸಂಬಂಧಗಳ ಅಭಿವೃದ್ಧಿಯ ಸಂಶೋಧನೆಗೆ ಬಳಸಲಾಗಿದೆ. 1962 ರಲ್ಲಿ ಕಾಂಗ್ರೆಸ ಅವಧಿಯಲ್ಲಿ ಚೀನಾ ಸಾವಿರಾರು ಎಕರೆ ಭೂಮಿಯನ್ನು ವಶಪಡಿಸಿಕೊಂಡಿತ್ತು.

ಚೀನಾದ ಡ್ರೋನ ಒಳನುಗ್ಗುವಿಕೆಯನ್ನು 3 ಬಾರಿ ವಿಫಲಗೊಳಿಸಿದ ವಾಯುಪಡೆ !

ತವಾಂಗದಲ್ಲಿ ಭಾರತ-ಚೀನೀ ಸೈನಿಕರ ನಡುವಿನ ಸಂಘರ್ಷದ ನಂತರ, ಭಾರತೀಯ ವಾಯುಪಡೆಯು ಅರುಣಾಚಲ ಪ್ರದೇಶದ ಗಡಿಯಲ್ಲಿ ಯುದ್ಧ ವಿಮಾನಗಳ ಉಡ್ಡಯಣವನ್ನು ಪ್ರಾರಂಭಿಸಿದೆ. ಡಿಸೆಂಬರ್ 9 ರ ಬಿಕ್ಕಟ್ಟಿಗೂ ಮೊದಲು ಚೀನಾ, ಅರುಣಾಚಲದ ಗಡಿಯೊಳಗೆ ಡ್ರೋನಗಳನ್ನು ಕಳುಹಿಸಲು ಪ್ರಯತ್ನಿಸಿತ್ತು. ಅದರ ನಂತರ, ಭಾರತೀಯ ವಾಯುಪಡೆಯು ಈ ಪ್ರದೇಶದಲ್ಲಿ ಯುದ್ಧ ವಿಮಾನಗಳನ್ನು ನಿಯೋಜಿಸಿತ್ತು. ಭಾರತೀಯ ಯುದ್ಧ ವಿಮಾನಗಳು ಕಳೆದ ಕೆಲವು ವಾರಗಳಲ್ಲಿ 2-3 ಬಾರಿ ಇಲ್ಲಿನ ಸೇನಾ ಪೋಸ್ಟ್‌ಗಳತ್ತ ಹಾರುತ್ತಿದ್ದ ಚೀನಾದ ಡ್ರೋನ್‌ಗಳನ್ನು ಓಡಿಸಿದವು.

ಸರಕಾರ ಈ ಮಾಹಿತಿಯನ್ನು ಮೊದಲೇ ಸಂಸತ್ತಿಗೆ ಏಕೆ ತಿಳಿಸಲಿಲ್ಲ ? – ಸಂಸದ ಓವೈಸಿ ಪ್ರಶ್ನೆ

ಎಂಐಎಂ ಸಂಸದ ಅಸಾದುದ್ದೀನ ಓವೈಸಿ

ಎಂಐಎಂ ಸಂಸದ ಅಸಾದುದ್ದೀನ ಓವೈಸಿ ಅವರು ತವಾಂಗ ಪ್ರಕರಣದ ಬಗ್ಗೆ ಮಾತನಾಡುತ್ತಾ, ಭಾರತ ಮತ್ತು ಚೀನಾ ಸೈನಿಕರ ನಡುವೆ ಡಿಸೆಂಬರ್ 9 ರಂದು ಘರ್ಷಣೆ ನಡೆದಿತ್ತು; ಈ ಕಾಲಾವಧಿಯಲ್ಲಿ ಸಂಸತ್ತಿನ ಕಲಾಪ ನಡೆಯುತ್ತಿದ್ದಾಗ ಅದೇ ದಿನ ಸರಕಾರ ಅದರ ಬಗ್ಗೆ ಏಕೆ ತಿಳಿಸಲಿಲ್ಲ? 3 ದಿನಗಳ ನಂತರ ಮಾಧ್ಯಮಗಳು ‘ನಮ್ಮ ವೀರ ಸೈನಿಕರು ಗಾಯಗೊಂಡಿದ್ದಾರೆ’ ಎಂದು ನಮಗೆ ಹೇಳುತ್ತಿವೆ ಎಂದರು.
ದೇಶದ ಸೇನೆಯ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ; ಆದರೆ ದೇಶ ದುರ್ಬಲ ನಾಯಕತ್ವವನ್ನು ಹೊಂದಿದೆ. ಚೀನಾದ ಹೆಸರು ಹೇಳುವಾಗಲೂ ಮೋದಿ ಸರಕಾರ ಹೆದರುತ್ತದೆ.

ಭಾರತದ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ! – ಚೀನಾ

ತವಾಂಗ ಪ್ರಕರಣದಲ್ಲಿ ‘ಗಡಿಯಲ್ಲಿನ ಪರಿಸ್ಥಿತಿ ಸ್ಥಿರವಾಗಿದೆ’ ಎಂದು ಚೀನಾ ಹೇಳಿದೆ ಎಂದು ಸುದ್ದಿ ಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ. ಮತ್ತೊಂದೆಡೆ, ತವಾಂಗ ಗಡಿಯಲ್ಲಿನ ಘರ್ಷಣೆಗೆ ಸಂಬಂಧಿಸಿದಂತೆ ಚೀನಾ ಮಾಧ್ಯಮಗಳು ಯಾವುದೇ ಸುದ್ದಿಯನ್ನು ಬಿಡುಗಡೆ ಮಾಡಿಲ್ಲ. ಚೀನಾ ಸರ್ಕಾರದ ಮುಖವಾಣಿ ಗ್ಲೋಬಲ್ ಟೈಮ್ಸ್‌ನ ಆಂಗ್ಲ ಆವೃತ್ತಿಯ ಸಂಪಾದಕ ಹೂ ಶಿಜಿನ್ ಅವರ ಒಂದು ಪೋಸ್ಟ್ ಚೀನಾದ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ‘ಭಾರತ ಮತ್ತು ಚೀನಾ ನಡುವಿನ ಸಂಘರ್ಷದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ’ ಎಂದು ಅದು ಹೇಳಿದೆ.

ಸಂಪಾದಕೀಯ ನಿಲುವು

ಚೀನಾ ಇಂತಹ ಆಕ್ರಮಣಗಳನ್ನು ಮಾಡುತ್ತಲೇ ಇರಲಿದೆ. ಅದಕ್ಕೆ ತಕ್ಕ ಪಾಠ ಕಲಿಸಿದಾಗ ಮಾತ್ರ ಅದರ ಇಂತಹ ಆಕ್ರಮಣಗಳು ನಿಲ್ಲುವವು. ಭಾರತವು ಅದಕ್ಕಾಗಿ ಪ್ರಯತ್ನಿಸಬೇಕು!