ಪಶ್ಚಿಮ ಆಫ್ರಿಕಾದಲ್ಲಿ ಹಿಂದೂ ಧರ್ಮದ ಜ್ಯೋತಿ ಬೆಳಗಿಸಿದ ಮೊದಲ ಹಿಂದೂ ಧರ್ಮಪ್ರಚಾರಕ ಸ್ವಾಮಿ ಘನಾನಂದ !

ಸ್ವಾಮಿ ಘನಾನಂದ

ಪಶ್ಚಿಮ ಆಫ್ರಿಕಾದಲ್ಲಿ ಘಾನಾ ಎಂಬ ಒಂದು ದೇಶವಿದೆ, ‘ಘಾನಾ’ ಎಂದರೆ ‘ಓರ್ವ ಹೋರಾಡುವ ರಾಜ.’ ಅಲ್ಲಿನ ನಾಗರಿಕರು ಹಿಂದೂ ಧರ್ಮವನ್ನು ಒಪ್ಪಿಕೊಳ್ಳುವುದಷ್ಟೇ ಅಲ್ಲ, ಭಾರತೀಯರಂತೆ ಅವರು ದೇವತೆಗಳ ವಿಧಿಪೂರ್ವಕ ಪೂಜೆಯನ್ನೂ ಮಾಡುತ್ತಾರೆ ! ಘಾನಾದಲ್ಲಿ ಕಳೆದ ೫೦ ವರ್ಷಗಳಿಂದ ಶ್ರೀ ಗಣೇಶನ ಸ್ಥಾಪನೆ, ಪೂಜೆ ಮತ್ತು ಮೂರ್ತಿವಿಸರ್ಜನೆಯ ಪರಂಪರೆ ನಡೆಯುತ್ತಾ ಬಂದಿದೆ. ಆಫ್ರಿಕಾದಲ್ಲಿ ಗಣೇಶೋತ್ಸವದ ಪರಂಪರೆ ಹೇಗೆ ಆರಂಭವಾಯಿತು ? ಭಾರತದಿಂದ ೮ ಸಾವಿರದ ೬೫೫ ಕಿ.ಮೀ. ದೂರವಿರುವ ಆಫ್ರಿಕಾದಲ್ಲಿ ಹಿಂದೂ ಧರ್ಮದ ಜ್ಯೋತಿಯನ್ನು ಬೆಳಗಿಸಿದವರು ಯಾರು ? ಎಂಬ ವಿಷಯವನ್ನು ವಿಸ್ತಾರವಾಗಿ ತಿಳಿದುಕೊಳ್ಳೋಣ.

೧. ಸ್ವಾಮಿ ಘನಾನಂದ ಇವರ ಜನ್ಮ ಮತ್ತು ಆಧ್ಯಾತ್ಮಿಕ ಜಿಜ್ಞಾಸೆ

ಸ್ವಾಮಿ ಘನಾನಂದ ಸರಸ್ವತಿಯವರು ಆಫ್ರಿಕಾದ ಮೊಟ್ಟಮೊದಲ ಹಿಂದೂ ಧರ್ಮಪ್ರಚಾರಕರಾಗಿದ್ದರು. ಅವರು ಮೂಲದಲ್ಲಿ ಹಿಂದೂ ಆಗಿರದಿದ್ದರೂ ಅವರು ಹಿಂದೂ ಧರ್ಮದ ಸ್ವಾಮಿಗಳೆಂದೇ ಗುರುತಿಸಲ್ಪಡುತ್ತಾರೆ. ಅವರು ಹಿಂದೂ ಧರ್ಮದ ಜ್ಯೋತಿಯನ್ನು ಪಶ್ಚಿಮ ಆಫ್ರಿಕಾದ ಘಾನಾ ದೇಶದಲ್ಲಿ ಪ್ರಜ್ವಲಿಸಿ ಅದನ್ನು ಪ್ರಕಾಶಮಯ ಮಾಡಿದರು (ಅದರ ಪ್ರಚಾರ ಮಾಡಿದರು). ಘನಾನಂದ ಇವರು ೧೨ ಸಪ್ಟೆಂಬರ ೧೯೩೭ ರಂದು ಘಾನಾದ ಮಧ್ಯಕ್ಷೇತ್ರದಲ್ಲಿನ ಸೇನ್ಯಾ ಬರಾಕೂ ಊರಲ್ಲಿ ಜನಿಸಿದರು. ಅವರು ಒಂದು ದೇಶಿ (ಸ್ಥಳೀಯ) ಘಾನಾವಾಸಿ ಕುಟುಂಬದ ಸದಸ್ಯರಾಗಿದ್ದರು ಮತ್ತು ಅವರ ತಾಯಿ-ತಂದೆಯರು ಮತಾಂತರಿತ ಕ್ರೈಸ್ತರಾಗಿದ್ದರು. ಘನಾನಂದರಿಗೆ ಮಾತ್ರ ಚಿಕ್ಕ ವಯಸ್ಸಿನಿಂದಲೇ ಬ್ರಹ್ಮಾಂಡದಲ್ಲಿನ ರಹಸ್ಯಗಳನ್ನು ತಿಳಿದುಕೊಳ್ಳುವ ತೀವ್ರ ಇಚ್ಛೆ ಇತ್ತು. ಅದಕ್ಕಾಗಿ ಅವರು ಅವರ ಪ್ರಶ್ನೆಗಳ ಉತ್ತರಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ಹುಡುಕಲು ಪ್ರಯತ್ನಿಸಿದರು.

೨. ಭಾರತದ ವಿಭಜನೆಯ ಸಮಯದಲ್ಲಿ ಸಿಂಧಿ ಕುಟುಂಬದವರು ಆಫ್ರಿಕಾಗೆ ಹೋಗುವುದು ಮತ್ತು ಅವರಿಂದ ಘನಾನಂದರಿಗೆ ಹಿಂದೂ ಧರ್ಮದ ಬಗ್ಗೆ ತಿಳಿಯುವುದು

ಘನಾನಂದರಿಗೆ ಆಧ್ಯಾತ್ಮಿಕ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕುತ್ತಿರುವಾಗ ೧೯೪೭ ರ ಭಾರತದ ವಿಭಜನೆಯ ಸಮಯದಲ್ಲಿ ಘಾನಾಗೆ ಬಂದು ನೆಲೆಸಿದ ಭಾರತದ ಸಿಂಧಿ ಜನರ ಸಂಪರ್ಕವಾಯಿತು. ವಿಭಜನೆಯ ಸಮಯದಲ್ಲಿ ಜನರಿಗೆ ‘ಅವರು ಭಾರತ ಮತ್ತು ಪಾಕಿಸ್ತಾನದಲ್ಲಿ ಎಲ್ಲಿ ಬೇಕಾದರೂ ನೆಲೆಸಬಹುದು’, ಎಂದು ಹೇಳಲಾಗಿತ್ತು. ಆದರೆ ಆ ಸಮಯದ ಭೀಕರ ಪರಿಸ್ಥಿತಿಯನ್ನು ನೋಡಿ ಹಿಂದೂ ಧರ್ಮದೊಂದಿಗೆ ಸಂಬಂಧವಿರುವ ಕೆಲವು ಸಿಂಧಿ ಕುಟುಂಬದವರು ಪಾಕಿಸ್ತಾನದಿಂದ ಭಾರತಕ್ಕೆ ಬರುವ ಬದಲು, ಆಫ್ರಿಕಾದ ಘಾನಾ ದೇಶಕ್ಕೆ ಹೋಗಿ ಅಲ್ಲಿ ನೆಲೆಸಿದರು.

೩. ಸಿಂಧಿ ಜನರಿಂದಾಗಿ ಆಫ್ರಿಕಾದ ಜನರಲ್ಲಿ ಹಿಂದೂ ಧರ್ಮದ ಪರಿಚಯ ಹೆಚ್ಚಾಯಿತು ಮತ್ತು ಘನಾನಂದರಿಗೆ ಹಿಂದೂ ಧರ್ಮದ ಸೆಳೆತ ತೀವ್ರವಾಯಿತು 

ಘಾನಾ ದೇಶವು ಭಾರತದ ಸ್ವಾತಂತ್ರ್ಯದ ೫ ತಿಂಗಳು ಮೊದಲು, ಅಂದರೆ ೬ ಮಾರ್ಚ್ ೧೯೪೭ ರಂದು ಆಂಗ್ಲರ ದಾಸ್ಯತ್ವದಿಂದ ಮುಕ್ತವಾಗಿತ್ತು. ಆಫ್ರಿಕಾದ ಜನರು ಸಿಂಧಿ ಕುಟುಂಬ ದವರನ್ನು ಮನಃಪೂರ್ವಕವಾಗಿ ಸ್ವಾಗತಿಸಿದರು ಮತ್ತು ಅವರಿಗೆ ಘಾನಾ ದೇಶದಲ್ಲಿ ನೆಲೆಸಲು ಅನುಮತಿಯನ್ನು ನೀಡಿದರು. ಆಗ ಮೊದಲ ಬಾರಿಗೆ ಆಫ್ರಿಕಾದ ನಾಗರಿಕರಿಗೆ ಹಿಂದೂ ಧರ್ಮದ ಪರಿಚಯವಾಯಿತು. ಕ್ರಮೇಣ ಹಿಂದೂ ಧರ್ಮವು ಘಾನಾದ ಜನರಲ್ಲಿ ಹರಡತೊಡಗಿತು. ಘನಾನಂದರು ಆಗ ೧೦ ವರ್ಷದವರಾಗಿದ್ದರು. ಅವರು ಚಿಕ್ಕ ವಯಸ್ಸಿನಲ್ಲಿಯೇ ಹಿಂದೂ ಧರ್ಮದಲ್ಲಿ ಆಸಕ್ತಿಯನ್ನು ತೋರಿಸತೊಡಗಿದರು. ಹಿಂದೂ ಧರ್ಮದ ಆಕರ್ಷಣೆ ಮೂಡಿದ ನಂತರ ಘನಾನಂದರು ಈಶ್ವರನ ಪೂಜೆಯನ್ನು ಮಾಡಲು ಆರಂಭಿಸಿದರು. ಅಲ್ಲಿಂದಲೇ ಆಫ್ರಿಕಾದಲ್ಲಿ ಪೂಜೆಯ ಪರಂಪರೆ ಆರಂಭವಾಯಿತು. ಕ್ರಮೇಣ ಘಾನಾದಲ್ಲಿ ಶ್ರೀ ಗಣೇಶ, ಶಿವಪಾರ್ವತಿ, ಶ್ರೀಕೃಷ್ಣ ಮುಂತಾದವರ ಪೂಜೆ ಆರಂಭವಾಯಿತು.

೪. ಘನಾನಂದರು ಹಿಂದೂ ಧರ್ಮದಲ್ಲಿನ ರಹಸ್ಯಗಳನ್ನು ಹುಡುಕುತ್ತಾ ಭಾರತವನ್ನು ತಲುಪಿದರು ಮತ್ತು ಅಲ್ಲಿ ಸ್ವಾಮಿ ಕೃಷ್ಣಾನಂದರ ಶಿಷ್ಯರಾದರು

ಸ್ವಾಮಿ ಘನಾನಂದರು ೧೯೬೨ ರಲ್ಲಿ ತಮ್ಮ ೨೫ ನೇ ವಯಸ್ಸಿನಲ್ಲಿ ಘಾನಾದ ರಾಜಧಾನಿ ಅಕರಾಗೆ ಹೋದರು. ಅಲ್ಲಿ ನವೆಂಬರ್ ೨೪ ರಂದು ಅವರು ‘ಡಿವೈನ್ ಮಿಸ್ಟಿಕ್ ಪಾಥ್’ ಎಂಬ ‘ಸೊಸೈಟಿ’ಯನ್ನು ಸ್ಥಾಪಿಸಿದರು ಮತ್ತು ಅವರು ದೇವರ ಭಕ್ತಿಯಲ್ಲಿ ಲೀನರಾದರು; ಆದರೆ ಅವರ ಮನಸ್ಸು ನಿರಂತರವಾಗಿ ಹಿಂದೂ ಧರ್ಮದ ಆಳವನ್ನು ತಿಳಿದುಕೊಳ್ಳಲು ವ್ಯಾಕುಲವಾಗಿತ್ತು. ಸ್ವಾಮಿ ಘನಾನಂದರು ಯಾವಾಗಲೂ ಹಿಂದೂ ಧರ್ಮದ ರಹಸ್ಯಗಳನ್ನು ಹುಡುಕುವುದರಲ್ಲಿ ಮಗ್ನರಾಗಿಯೇ ಇರುತ್ತಿದ್ದರು. ಇದೇ ಜಿಜ್ಞಾಸೆಯಿಂದ ಒಂದು ದಿನ ಅವರು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪ್ರಶ್ನೆಗಳ ಉತ್ತರಗಳನ್ನು ಪಡೆಯಲು ಉತ್ತರಭಾರತಕ್ಕೆ ಹೋದರು. ಅನಂತರ ೧೯೭೫ ರಲ್ಲಿ ಅವರು ಋಷಿಕೇಶದಲ್ಲಿನ ‘ಡಿವೈನ್ ಲೈಫ್ ಸೊಸೈಟಿ’ಯ ಸಹಾಯದಿಂದ ಹಿಂದೂ ಜೀವನ ಪದ್ಧತಿಯ (ಸನಾತನ ಧರ್ಮದ) ಅಧ್ಯಯನವನ್ನು ಆರಂಭಿಸಿದರು. ಆ ಸಮಯದಲ್ಲಿ ಅವರಿಗೆ ಮೊಟ್ಟಮೊದಲ ಬಾರಿ ಸ್ವಾಮಿ ಕೃಷ್ಣಾನಂದರ ಭೇಟಿಯಾಯಿತು. ಸ್ವಾಮಿ ಕೃಷ್ಣಾನಂದರಿಂದ ಘನಾನಂದರು ತುಂಬಾ ಪ್ರಭಾವಿತರಾದರು ಮತ್ತು ಅವರು ಅವರ ಶಿಷ್ಯರಾದರು. ಸ್ವಾಮಿ ಕೃಷ್ಣಾನಂದರು ಘನಾನಂದರಿಗೆ ಸ್ವಾಮಿ ಎಂದು ದೀಕ್ಷೆಯನ್ನು ನೀಡಿದರು.

೫. ಸ್ವಾಮಿ ಘನಾನಂದರಿಂದಾಗಿ ೧೦ ಸಾವಿರಕ್ಕಿಂತಲೂ ಹೆಚ್ಚು ಘಾನಾವಾಸಿಗಳು ಹಿಂದೂ ಧರ್ಮದಂತೆ ಆಚರಣೆಯನ್ನು ಮಾಡಲು ಆರಂಭಿಸುವುದು 

ದೀಕ್ಷೆ ಪಡೆದ ನಂತರ ಸ್ವಾಮಿ ಘನಾನಂದರು ಘಾನಾಕ್ಕೆ ಹಿಂತಿರುಗಿ ಬಂದರು. ಸ್ವಾಮಿ ಘನಾನಂದರು ಅಲ್ಲಿ ೫ ಹೊಸ ದೇವಸ್ಥಾನಗಳನ್ನು ಕಟ್ಟಿದರು, ಅದು ‘ಎಎಚ್‌ಎಮ್ನ ಆಧಾರಶಿಲೆ ಆಯಿತು. ಅದಲ್ಲದೆ ಅವರು ೧೯೭೫ ರಲ್ಲಿ ಆಫ್ರಿಕಾದ ಘಾನಾದಲ್ಲಿ ಮೊಟ್ಟಮೊದಲ ಆಫ್ರಿಕನ್ ಹಿಂದೂ ಮಠವನ್ನು ಸ್ಥಾಪಿಸಿದರು. ಹಿಂದೂ ಧರ್ಮದ ಶ್ರೇಷ್ಠ ಪ್ರಚಾರಕರು ಮತ್ತು ಧರ್ಮಗುರುಗಳಾದ ಸ್ವಾಮಿ ಘನಾನಂದರು ೧೮ ಜನವರಿ ೨೦೧೬ ರಂದು ಇಹಲೋಕವನ್ನು ತ್ಯಜಿಸಿದರು. ೭೮ ವರ್ಷ ವಯಸ್ಸಿನ ಘನಾನಂದರು ಪ್ರಚಾರ ಮಾಡಿದ ಹಿಂದೂ ಧರ್ಮದ ಖ್ಯಾತಿಯು ಇಂದು ಕೂಡ ಘಾನಾದಲ್ಲಿ ರೂಢಿಯಲ್ಲಿದೆ. ಸದ್ಯ ೧೦ ಸಾವಿರಕ್ಕಿಂತಲೂ ಹೆಚ್ಚು ಜನರು ಹಿಂದೂ ಧರ್ಮವನ್ನು ಪಾಲಿಸುತ್ತಿದ್ದಾರೆ. ಇವರಲ್ಲಿನ ಎಲ್ಲರೂ ಸ್ವೇಚ್ಛೆಯಿಂದ ಹಿಂದೂ ಧರ್ಮವನ್ನು ಸ್ವೀಕರಿಸಿದ್ದಾರೆ. ಘಾನಾದ ರಾಜಧಾನಿ ಅಕರಾದಲ್ಲಿ ಬಹು ದೊಡ್ಡ ಶಿವಮಂದಿರವಿದೆ. ಘಾನಾದಲ್ಲಿ ಪ್ರತಿವರ್ಷ ಗಣೇಶಚತುರ್ಥಿ, ರಥಯಾತ್ರೆ ಮತ್ತು ಹಿಂದೂ ಹಬ್ಬಗಳನ್ನು ಆಚರಿಸಲಾಗುತ್ತದೆ. ಪ್ರತಿವರ್ಷ ಗಣೇಶಚತುರ್ಥಿಯ ಸಮಯದಲ್ಲಿ ಘಾನಾದ ನಾಗರಿಕರು ಮತ್ತು ಘಾನಾದಲ್ಲಿನ ಹಿಂದೂಗಳು ಶ್ರೀ ಗಣೇಶನ ಮೂರ್ತಿಯನ್ನು ತರುತ್ತಾರೆ. ಅನಂತರ ೩ ದಿನ ಶ್ರೀ ಗಣೇಶನ ಪೂಜೆಯನ್ನು ಮಾಡಿ,  ಶ್ರೀ ಗಣೇಶನಮೂರ್ತಿಯ ವಿಸರ್ಜನೆಯನ್ನು ಮಾಡುತ್ತಾರೆ. ಇಲ್ಲಿನ ಜನರಲ್ಲಿ ‘ಎಲ್ಲ ಕಡೆಗೂ ಸಮುದ್ರವಿದ್ದು ಶ್ರೀ ಗಣೇಶನು ಸಮುದ್ರದ ಮಾಧ್ಯಮದಿಂದ ಎಲ್ಲರ ಮೇಲೂ ಕೃಪೆ ಮಾಡುತ್ತಾನೆ’, ಎಂಬ ನಂಬಿಕೆ ಇದೆ.