ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಹಾಗೆಯೇ ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರುವುದು ಅವಶ್ಯಕವಾಗಿರುತ್ತದೆ. ಏಕೆಂದರೆ ಇಂತಹ ಕೃತಿಯಿಂದಲೇ ಹೆಚ್ಚು ಫಲವು ದೊರೆಯುತ್ತದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ ಹಾಗೂ ಕೃತಿಗಳನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ಮುಂದೆ ನೀಡಲಾಗಿದೆ.
ಪೂಜೆಯ ಆರಂಭಿಕ ಕೃತಿಗಳ ಶಾಸ್ತ್ರ !
ದತ್ತನ ಪೂಜೆಯನ್ನು ಪ್ರಾರಂಭಿಸುವ ಮೊದಲು ಹಣೆಯ ಮೇಲೆ ಕಿರುಬೆರಳಿನ ಹತ್ತಿರದ ಬೆರಳಿನಿಂದ (ಅನಾಮಿಕಾದಿಂದ) ವಿಷ್ಣುವಿನಂತೆ ಎರಡು ನೇರ ರೇಖೆಗಳಲ್ಲಿ ಗಂಧವನ್ನು ಹಚ್ಚಿಕೊಳ್ಳಬೇಕು. ಈ ರೀತಿ ಗಂಧವನ್ನು ಹಚ್ಚಿಕೊಳ್ಳುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ. ಹಾಗೆಯೇ ಗಂಧದಲ್ಲಿನ ಸಾತ್ತ್ವಿಕತೆಯಿಂದ ಭಾವಜಾಗೃತಿಯಾಗಿ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ಇದರಿಂದಾಗಿ ಪೂಜೆಯಿಂದ ಪ್ರಾಪ್ತವಾಗುವ ಚೈತನ್ಯವನ್ನು ಅಧಿಕ ಪ್ರಮಾಣದಲ್ಲಿ ಗ್ರಹಣ ಮಾಡಲು ಸಾಧ್ಯವಾಗುತ್ತದೆ. ದತ್ತನ ಪೂಜೆ ಮಾಡುವಾಗ ದತ್ತನಿಗೆ ಗಂಧವನ್ನು ಅನಾಮಿಕಾದಿಂದ ಹಚ್ಚಬೇಕು. ಹಾಗೆಯೇ ಬಲಗೈಯ ಹೆಬ್ಬೆರಳು ಮತ್ತು ಅನಾಮಿಕಾವನ್ನು ಜೋಡಿಸಿದ ಚಿಟಿಕೆಯಿಂದ ದತ್ತನ ಚರಣಗಳಲ್ಲಿ ಮೊದಲು ಅರಿಶಿಣ ಆಮೇಲೆ ಕುಂಕುಮವನ್ನು ಅರ್ಪಿಸಬೇಕು. ನೈರ್ಮಾಲ್ಯವನ್ನು ತೆಗೆಯುವಾಗಲೂ ಹೆಬ್ಬೆರಳು ಮತ್ತು ಅನಾಮಿಕ ಬೆರಳುಗಳನ್ನೇ ಉಪಯೋಗಿಸಬೇಕು. ಹೆಬ್ಬೆರಳು ಮತ್ತು ಅನಾಮಿಕಾ ಈ ಬೆರಳುಗಳನ್ನು ಜೋಡಿಸುವುದರಿಂದಾಗುವ ಮುದ್ರೆಯಿಂದ ಶರೀರದಲ್ಲಿನ ಅನಾಹತಚಕ್ರವು ಜಾಗೃತವಾಗಿ ಭಕ್ತಿಭಾವವು ಉತ್ಪನ್ನವಾಗಲು ಸಹಾಯವಾಗುತ್ತದೆ.
ದತ್ತತತ್ತ್ವವನ್ನು ಆಕರ್ಷಿಸುವ ಬಣ್ಣ ಮತ್ತು ಸುಗಂಧ
ಜಾಜಿ ಮತ್ತು ನಿಶಿಗಂಧ ಹೂವುಗಳಲ್ಲಿ ದತ್ತತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಎಲ್ಲಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ದತ್ತನಿಗೆ ಈ ಹೂವುಗಳನ್ನು ಅರ್ಪಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ. ದೇವತೆಗಳ ಚರಣಗಳಲ್ಲಿ ಹೂವುಗಳನ್ನು ವಿಶಿಷ್ಟ ಸಂಖ್ಯೆಗಳಲ್ಲಿ ಮತ್ತು ವಿಶಿಷ್ಟ ರಚನೆಯಲ್ಲಿ ಅರ್ಪಿಸುವುದರಿಂದ ಹೂವಿನ ಕಡೆಗೆ ಆಯಾಯ ದೇವತೆಗಳ ತತ್ತ್ವವು ಬೇಗನೆ ಆಕರ್ಷಿತವಾಗುತ್ತದೆ. ಆದುದರಿಂದ ದತ್ತನ ಪೂಜೆಯ ವಿಷಯದಲ್ಲಿ ಈ ಗಂಧದ ಊದುಬತ್ತಿಯನ್ನು ಉಪಯೋಗಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವದ ಲಾಭವಾಗುತ್ತದೆ. ದತ್ತನೊಂದಿಗೆ ಇತರ ಎಲ್ಲ ದೇವತೆಗಳಿಗೆ ಎಷ್ಟು ಊದುಬತ್ತಿಯನ್ನು ಬೆಳಗಬೇಕು ಎನ್ನುವ ಶಾಸ್ತ್ರವು ಮುಂದಿನಂತಿದೆ. ಒಂದು ಎಂಬುದು ಅದ್ವೈತದ ಪ್ರತೀಕವಾದರೆ ಎರಡು ದ್ವೈತದ ಪ್ರತೀಕವಾಗಿದೆ. ಪ್ರಾಥಮಿಕ ಹಂತದಲ್ಲಿ ಉಪಾಸಕನು ದೇವರು ಮತ್ತು ತಾನು ಹೀಗೆ ದ್ವೈತದ ಸ್ಥಿತಿಯನ್ನು ಅನುಭವಿಸುತ್ತಿರುತ್ತಾನೆ; ಆದ್ದರಿಂದ ಅವನು ಎರಡು ಊದುಬತ್ತಿಗಳನ್ನು ಬೆಳಗುವುದು ಹೆಚ್ಚು ಯೋಗ್ಯವಾಗಿದೆ.
ಉಪಾಸಕನು ಭಕ್ತಿಯ ಮುಂದಿನ ಹಂತದಲ್ಲಿ ಒಂದು ಊದುಬತ್ತಿಯನ್ನು ಬೆಳಗಬಹುದು. ದೇವರಿಗೆ ಊದುಬತ್ತಿಯನ್ನು ಬೆಳಗುವಾಗ ಅದನ್ನು ತನ್ನ ಬಲಗೈಯ ತೋರು ಬೆರಳು ಮತ್ತು ಹೆಬ್ಬೆರಳಿನಿಂದ ಹಿಡಿದು ಗಡಿಯಾರದ ಮುಳ್ಳು ತಿರುಗುವ ದಿಶೆಯಲ್ಲಿ ಮೂರು ಬಾರಿ ಬೆಳಗಬೇಕು. (ಆಧಾರ : ಸನಾತನವು ಪ್ರಕಾಶಿಸಿದ ಕಿರುಗ್ರಂಥ ‘ದತ್ತ’)
ಶ್ರೀ ದತ್ತಜಯಂತಿ (ಡಿಸೆಂಬರ್ ೭)ಇದು ಒಂದು ಸಾಂಪ್ರದಾಯಿಕ ಜನ್ಮೋತ್ಸವ. ಮಾರ್ಗಶಿರ ಹುಣ್ಣಿಮೆಯಂದು ಮೃಗಶಿರ ನಕ್ಷತ್ರದಲ್ಲಿ ಸಾಯಂಕಾಲ ದತ್ತನ ಜನ್ಮವಾಯಿತು. ಇತಿಹಾಸ ‘ಹಿಂದಿನ ಕಾಲದಲ್ಲಿ ಪೃಥ್ವಿಯ ಮೇಲೆ ಸ್ಥೂಲ ಮತ್ತು ಸೂಕ್ಷ್ಮರೂಪದಲ್ಲಿ ಅಸುರೀ ಶಕ್ತಿಗಳು ದೊಡ್ಡ ಪ್ರಮಾಣದಲ್ಲಿ ಹೆಚ್ಚಾಗಿದ್ದವು. ಅವರನ್ನು ದೈತ್ಯರೆಂದು ಕರೆಯಲಾಗುತ್ತಿತ್ತು. ದೇವಗಣರು ಆ ಅಸುರೀ ಶಕ್ತಿಗಳನ್ನು ನಾಶಗೊಳಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದವು. ಆಗ ಬ್ರಹ್ಮದೇವನ ಆಜ್ಞೆಗನುಸಾರ ಬೇರೆ ಬೇರೆ ಕಡೆಗಳಲ್ಲಿ ವಿವಿಧ ರೂಪಗಳಲ್ಲಿ ದತ್ತನಿಗೆ ಅವತಾರ ತಾಳಬೇಕಾಯಿತು. ಅನಂತರ ದೈತ್ಯರು ನಾಶವಾದರು. ಆ ದಿನವನ್ನು ‘ದತ್ತಜಯಂತಿ’ಯೆಂದು ಆಚರಿಸಲಾಗುತ್ತದೆ. ಮಹತ್ವ ದತ್ತಜಯಂತಿಯಂದು ಪೃಥ್ವಿಯ ಮೇಲೆ ದತ್ತತತ್ತ್ವವು ನಿತ್ಯದ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ದಿನ ಮನಃಪೂರ್ವಕ ದತ್ತನ ನಾಮಜಪಾದಿ ಉಪಾಸನೆಯನ್ನು ಮಾಡಿದರೆ ದತ್ತತತ್ತ್ವದ ಆದಷ್ಟು ಹೆಚ್ಚು ಲಾಭವಾಗಲು ಸಹಾಯವಾಗುತ್ತದೆ. ಜನ್ಮೋತ್ಸವವನ್ನು ಆಚರಿಸುವುದು ದತ್ತಜಯಂತಿಯನ್ನು ಆಚರಿಸುವ ಸಂಬಂಧದಲ್ಲಿ ಶಾಸ್ತ್ರೋಕ್ತ ವಿಶಿಷ್ಟ ವಿಧಿವಿಧಾನಗಳು ಕಂಡು ಬರುವುದಿಲ್ಲ. ಈ ಉತ್ಸವದ ಮೊದಲು ಏಳು ದಿನ ಗುರುಚರಿತ್ರೆಯ ಪಾರಾಯಣವನ್ನು ಮಾಡುವ ಪದ್ಧತಿಯಿದೆ. ಇದಕ್ಕೆ ಗುರುಚರಿತ್ರೆ ಸಪ್ತಾಹ ಎನ್ನುತ್ತಾರೆ. ಭಜನೆ, ಪೂಜೆ ಮತ್ತು ಕೀರ್ತನೆ ಇತ್ಯಾದಿ ಭಕ್ತಿಯ ವಿಧಗಳು ಪ್ರಚಲಿತವಾಗಿವೆ. (ಆಧಾರ : ಸನಾತನ ನಿರ್ಮಿತ ಗ್ರಂಥ ‘ದತ್ತ’) |