೧. ಕಾನೂನಿನ ಯಶಸ್ಸು-ವೈಫಲ್ಯ ಅದರ ಕಾರ್ಯದ ಪರಿಣಾಮವನ್ನು ಅವಲಂಬಿಸಿರುತ್ತದೆ
‘ಅಪರಾಧಿಗಳನ್ನು ಮುಗಿಸುವುದೋ ಅಥವಾ ಅಪರಾಧಿ ವೃತ್ತಿ ಯನ್ನು ಮುಗಿಸುವುದೋ ?’, ಎಂಬ ಮಹತ್ವದ ವಿಷಯದ ಮೇಲೆ ಜಗತ್ತಿನಾದ್ಯಂತ ಅನೇಕ ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯುತ್ತಿದೆ. ಆಗಾಗ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಅಪರಾಧಗಳ ವಿಷಯದಲ್ಲಿ ಪರಿಹಾರೋಪಾಯಗಳನ್ನು ಕಂಡುಹಿಡಿಯಲು ಅನೇಕ ದೇಶಗಳು ವಿವಿಧ ಉಪಾಯಯೋಜನೆಗಳನ್ನು ಮಾಡುತ್ತಿರುತ್ತವೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಮೇಲಿನ ಅತ್ಯಾಚಾರಗಳು ದಿನಗಳೆದಂತೆ ಹೆಚ್ಚುತ್ತಿರುವುದರಿಂದ ನಮ್ಮ ದೇಶದಲ್ಲಿಯೂ ಹಿಂದಿನ ಕಾನೂನುಗಳಲ್ಲಿಯೇ ಆಗಾಗ ಬದಲಾವಣೆಗಳನ್ನು ಮಾಡಿ ಕಠಿಣ ಕಾನೂನುಗಳನ್ನು ತರಲಾಗಿದೆ. ಇಡೀ ದೇಶವನ್ನು ನಿದ್ದೆಗೆಡಿಸಿದ್ದ ನಿರ್ಭಯಾ ಪ್ರಕರಣದ ನಂತರ ‘ಕ್ರಿಮಿನಲ್ ಲಾ ಅಮೆಂಡ್‌ಮೆಂಟ್ ಬಿಲ್ ೨೦೧೩’ ನ್ನು ಸಮ್ಮತಿಸಲಾಯಿತು. ಅದರಲ್ಲಿ ಕಠಿಣ ನಿಯಮಗಳನ್ನು ತರಲಾಯಿತು. ಆದರೆ ಕಾನೂನುಗಳನ್ನು ಮಾಡಿ ಸಮಾಜದಲ್ಲಿ ಪರಿವರ್ತನೆಯಾಗುವುದಿಲ್ಲ. ಆ ಕಾನೂನಿನಂತೆ ಕಾರ್ಯವನ್ನು ಸಮರ್ಪಕವಾಗಿ ಮಾಡಲಾಗುತ್ತಿದೆಯೋ ಇಲ್ಲವೋ ? ಎಂಬುದರ ಮೇಲೆ ಆ ಕಾನೂನಿನ ಯಶಸ್ಸು-ವೈಫಲ್ಯ ಅವಲಂಬಿಸಿರುತ್ತದೆ.
೨. ಮಹಿಳೆಯರ ಮೇಲಿನ ಅತ್ಯಾಚಾರಗಳ ವಿರುದ್ಧ ಮಹಾರಾಷ್ಟ್ರ ಸರಕಾರ ತಂದ ‘ಮಹಾರಾಷ್ಟ್ರ ಶಕ್ತಿ ೨೦೨೦’ ಮಸೂದೆ
ಮಹಾರಾಷ್ಟ್ರ ಸರಕಾರವು ಆಂಧ್ರಪ್ರದೇಶದ ‘ದಿಶಾ’ ಕಾನೂನಿನ ಮಾದರಿಯಲ್ಲಿ ‘ಮಹಾರಾಷ್ಟ್ರ ಶಕ್ತಿ ೨೦೨೦’ ರ ಮಾಧ್ಯಮದಿಂದ ಭಾರತೀಯ ದಂಡಸಂಹಿತೆ ಕ್ರಿಮಿನಲ್ ಪ್ರಕ್ರಿಯೆ ಮತ್ತು ‘ಪಾಕ್ಸೋ’ ಕಾನೂನು ಇವುಗಳಲ್ಲಿ ಬದಲಾವಣೆಯನ್ನು ಮಾಡುವ ಬಗ್ಗೆ ಮಸೂದೆಯನ್ನು ತಂದಿತು ಹಾಗೂ ನಂತರ ಅದನ್ನು ಸಮ್ಮತಿಸಲಾಯಿತು. ಅದರಲ್ಲಿ ಸೂಚಿಸಿದ ನಿಯಮಗಳು ಈ ಹಿಂದೆ ಒಂದಲ್ಲ ಒಂದು ಕಾನೂನಿನಲ್ಲಿ ಮೊದಲೇ ಅಸ್ತಿತ್ವದಲ್ಲಿದ್ದವು. ಹಾಗೆಯೇ ಕೆಲವು ವಿಷಯಗಳು ವಾಸ್ತವದಲ್ಲಿ ಎಷ್ಟು ಸಾಧ್ಯವಾಗಬಹುದು, ಎಂಬುದರ ಬಗ್ಗೆ ಸಂಶಯವೆನಿಸುತ್ತದೆ. ಮಹಿಳೆಯರಿಗಾಗಿರುವ ಈ ಕಾನೂನಿನಲ್ಲಿ ಕೆಲವು ವಿಷಯಗಳು ಮಹಿಳೆಯರ ವಿರುದ್ಧವೇ ಇವೆ ಎಂದೆನಿಸುತ್ತವೆ. ಭಾರತೀಯ ದಂಡ ಸಂಹಿತೆಯ ಕಲಮ್ ೩೭೫ ರಲ್ಲಿನ ತಿದ್ದು ಪಡಿಗನುಸಾರ ಸಮ್ಮತಿಯ (consent) ಬಗ್ಗೆ ಒಂದು ವೇಳೆ ಬಲಾತ್ಕಾರಕ್ಕೀಡಾದ ಮಹಿಳೆ ಸಜ್ಞಾನಿ ಆಗಿದ್ದು, ಅಪರಾಧದ ಎಲ್ಲ ಪರಿಸ್ಥಿತಿಗಳಿಗನುಸಾರ ಅದಕ್ಕೆ ಅವಳ ಸಮ್ಮತಿ ಇತ್ತು ಎಂದು ಸಾಬೀತಾದರೆ, ಆ ಸಮ್ಮತಿಯನ್ನು ಅಧಿಕೃತವೆಂದು ತಿಳಿದು ಆ ಘಟನೆಯನ್ನು ಬಲಾತ್ಕಾರ ಎಂದು ತಿಳಿಯಲಾಗುವುದಿಲ್ಲ ಎಂದು ಹೇಳಲಾಗಿದೆ. ಈ ನಿಯಮದಿಂದ ಅನೇಕ ಆರೋಪಿಗಳು ನಿರಪರಾಧಿಯೆಂದು ಬಿಡುಗಡೆಯಾಗುವ ಸಾಧ್ಯತೆಯಿದೆ.
೩. ಕಾನೂನಿನಲ್ಲಿ ಬಲಾತ್ಕಾರಕ್ಕಾಗಿ ಮರಣದಂಡನೆಯ ಶಿಕ್ಷೆಯನ್ನು ವಿಧಿಸುವ ನಿಯಮವನ್ನು ಮಾಡಲಾಗಿದೆ
ಈ ಕಾನೂನಿಗನುಸಾರ ಸಾಮೂಹಿಕ ಬಲಾತ್ಕಾರದ ಶಿಕ್ಷೆಯಲ್ಲಿ ಹೆಚ್ಚಳವನ್ನು ಮಾಡಲಾಗಿದೆ. ಈ ಮೊದಲು ಯಾವುದೇ ಮಹಿಳೆಯ ಮೇಲೆ ಬಲಾತ್ಕಾರವಾದರೆ ಮರಣದಂಡನೆಯ ಶಿಕ್ಷೆ ಇರಲಿಲ್ಲ; ಈ ಕಾನೂನಿನಲ್ಲಿ ಅಂತಹ ವ್ಯವಸ್ಥೆಯಿದೆ. ಪ್ರಸ್ತುತ ಕಾನೂನಿನಲ್ಲಿ ಸಾಮೂಹಿಕ ಬಲಾತ್ಕಾರದ ಅಪರಾಧಕ್ಕಾಗಿ ಎಷ್ಟು ದಂಡ ಇರಬೇಕು, ಎಂಬುದನ್ನು ನಮೂದಿಸಿರಲಿಲ್ಲ. ಈಗ ಅದನ್ನು ಸ್ಪಷ್ಟವಾಗಿ ನಮೂದಿಸಲಾಗಿದೆ. ಈ ದಂಡವು ಸಂತ್ರಸ್ತ ಹುಡುಗಿ ೧೨ ವರ್ಷಗಳ ಕೆಳಗಿನವಳಾಗಿದ್ದರೆ, ೨೫ ಲಕ್ಷಗಳ ವರೆಗೆ, ಅವಳು ೧೬ ವರ್ಷಕ್ಕಿಂತ ಕೆಳಗಿನವಳಾಗಿದ್ದರೆ, ೨೦ ಲಕ್ಷದ ವರೆಗೆ ಆಗ ಬಹುದು. ಹೆಚ್ಚುವರಿ ದಂಡದ ಮೊತ್ತವು ಆವಶ್ಯಕವಾಗಿತ್ತು; ಏಕೆಂದರೆ ಯಾವ ಮಹಿಳೆ ಸಾಮೂಹಿಕ ಬಲಾತ್ಕಾರದ ಅಪರಾಧಕ್ಕೆ ಬಲಿ ಯಾಗಿರುತ್ತಾಳೆಯೋ, ಅವಳು ಜೀವಮಾನವಿಡೀ ಅದರ ಪರಿಣಾಮ ವನ್ನು ಭೋಗಿಸಬೇಕಾಗುತ್ತದೆ; ಆದರೆ ಮರಣ ದಂಡನೆಯ ಶಿಕ್ಷೆಯನ್ನು ವಿಧಿಸುವುದು ಯೋಗ್ಯವೆನಿಸುವುದಿಲ್ಲ; ಏಕೆಂದರೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಅನೇಕ ನಿರ್ಣಯ ಗಳಲ್ಲಿ ಮರಣದಂಡನೆಯನ್ನು ಅತ್ಯಂತ ಅಪರೂಪದಲ್ಲಿನ ಅಪರೂಪ ಹತ್ಯೆಯ ಖಟ್ಲೆಯಲ್ಲಿಯೇ ನೀಡಬೇಕೆಂದು ಪದೇ ಪದೇ ಹೇಳಿದೆ. ‘ಅಪರಾಧಿಯನ್ನು ಮುಗಿಸಿಬಿಟ್ಟರೆ ಭವಿಷ್ಯದಲ್ಲಿ ಅಪರಾಧಗಳು ನಿಲ್ಲಬಹುದೇ ?’, ಎಂಬ ವಿಚಾರ ಮಾಡುವುದೂ ಆವಶ್ಯಕವಾಗಿದೆ. ಹತ್ಯೆಯ ಅಪರಾಧಕ್ಕೆ ಗಲ್ಲುಶಿಕ್ಷೆ ಇದೆ ಹಾಗೂ ಬಲಾತ್ಕಾರದ ಅಪರಾಧಕ್ಕೂ ಗಲ್ಲುಶಿಕ್ಷೆಯೇ ಇದ್ದರೆ ಅಪರಾಧಿಯು ಪುರಾವೆಯನ್ನು ನಾಶ ಮಾಡಲು ಪೀಡಿತೆಯ ಹತ್ಯೆ ಮಾಡುವ ವಿಚಾರ ಮಾಡಬಹುದು.
೪. ಶಕ್ತಿ ಕಾನೂನಿನಲ್ಲಿ ದೋಷಾರೋಪ ಅರ್ಜಿಯನ್ನು ಸಲ್ಲಿಸಿದ ನಂತರ ೬೦ ದಿನಗಳಲ್ಲಿ ಪ್ರಕರಣವನ್ನು ಇತ್ಯರ್ಥಗೊಳಿಸಬೇಕು ಎಂಬ ನಿಯಮವಿದೆ !
ಅರ್ಧಕ್ಕಿಂತ ಹೆಚ್ಚು ಅಪರಾಧಗಳಲ್ಲಿ ಆರೋಪಿಗಳು ಪರಿಚಯ ದವರು ಅಥವಾ ಸಂಬಂಧಿಕರಾಗಿರುವುದರಿಂದ ಬಲಾತ್ಕಾರಕ್ಕಾಗಿ ಮರಣದಂಡನೆಯ ಶಿಕ್ಷೆಯನ್ನು ವಿಧಿಸಿದರೆ ಇಂತಹ ಅಪರಾಧದ ವಿಷಯದಲ್ಲಿ ಪೊಲೀಸರಿಗೆ ನೀಡುವ ಮಾಹಿತಿಯ ಪ್ರಮಾಣವು ಕಡಿಮೆಯಾಗಬಹುದು ಅಥವಾ ಮಾಹಿತಿಯನ್ನು ನೀಡಿದ ನಂತರವೂ ಇಂತಹ ಸಂತ್ರಸ್ತ ಹುಡುಗಿಗೆ ಅಥವಾ ಮಹಿಳೆಗೆ ಅವಳ ಇತರ ಸಂಬಂಧಿಕರು ಸಾಕ್ಷಿಯನ್ನು ತಿರುಗಿಸಲು ತೊಂದರೆಗಳನ್ನು ಕೊಡಬಹುದು. ಹೀಗಾದರೆ ಆರೋಪಿ ನಿರಪರಾಧಿಯೆಂದು ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಾಗುತ್ತದೆ. ಈ ಕಾನೂನಿನಂತೆ ದೋಷಾರೋಪ ಅರ್ಜಿಯನ್ನು ಸಲ್ಲಿಸಿದ ೬೦ ದಿನಗಳಲ್ಲಿ ಪ್ರಕರಣವನ್ನು ಪೂರ್ಣಗೊಳಿಸುವುದು ಆವಶ್ಯಕವಾಗಿದೆ. ಈ ವ್ಯವಸ್ಥೆ ಚೆನ್ನಾಗಿದೆ ಎಂದೆನಿಸಿದರೂ ಪ್ರತ್ಯಕ್ಷದಲ್ಲಿ ಇದು ಎಷ್ಟರಮಟ್ಟಿಗೆ ಸಾಧ್ಯವಾಗಬಹುದು, ಎಂಬುದನ್ನು ನೋಡಬೇಕಾಗುವುದು. ‘ಪೊಕ್ಸೋ’ ಕಾನೂನಿನ ಕಲಮ್ ೩೫ ಕ್ಕನುಸಾರ ಒಂದು ವರ್ಷದ ಒಳಗೆ ಪ್ರಕರಣವನ್ನು ಮುಗಿಸಬೇಕು, ಎನ್ನುವ ವಿಶೇಷ ವ್ಯವಸ್ಥೆಯನ್ನು ೨೦೧೨ ರಿಂದ ಮಾಡಲಾಗಿದೆ, ಆದರೂ ಅದು ಇದು ವರೆಗೆ ಪೂರ್ಣವಾಗಲು ಸಾಧ್ಯವಾಗಿಲ್ಲ. ಆದ್ದ ರಿಂದ ೬೦ ದಿನಗಳಲ್ಲಿ ಪ್ರಕರಣವನ್ನು ಮುಗಿಸಬೇಕು ಎನ್ನುವ ವಿಷಯ ಪ್ರತ್ಯಕ್ಷ ಎಷ್ಟರಮಟ್ಟಿಗೆ ಸಾಧ್ಯವಿದೆ, ಎಂಬುದರ ಬಗ್ಗೆ ಸಂಶಯವಿದೆ.
೫. ಮಹಿಳೆಯರ ಮೇಲಿನ ಅತ್ಯಾಚಾರಗಳನ್ನು ತಡೆಯಲು ಹಿಂದಿನ ಎಲ್ಲ ಕಾನೂನುಗಳನ್ನು ಯೋಗ್ಯ ರೀತಿಯಲ್ಲಿ ಪಾಲಿಸುವುದು ಆವಶ್ಯಕ !
ಈ ಕಾನೂನಿನಲ್ಲಿ ಇಂತಹ ಅಪರಾಧಗಳ ತನಿಖೆಯನ್ನು ಆರೋಪಿಯ ಬಂಧನದ ನಂತರ ೧೫ ದಿನಗಳಲ್ಲಿ ಪೂರ್ಣ ಗೊಳಿಸಬೇಕು, ಎಂದು ಸೂಚಿಸಲಾಗಿದೆ. ಒಂದು ವೇಳೆ ಅವರಿಗೆ ಅದನ್ನು ೧೫ ದಿನಗಳಲ್ಲಿ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ಅದರ ಬಗ್ಗೆ ಪೊಲೀಸರು ಲಿಖಿತವಾಗಿ ಕಾರಣವನ್ನು ನೀಡಬೇಕಾಗುತ್ತದೆ. ಅನಂತರ ಅವರಿಗೆ ೭ ದಿನಗಳ ಹೆಚ್ಚುವರಿ ಅವಧಿಯನ್ನು ನೀಡಲಾಗುತ್ತದೆ. ಇಂತಹ ಗಂಭೀರ ಅಪರಾಧಗಳಲ್ಲಿ ೧೫ ದಿನಗಳಲ್ಲಿ ತನಿಖೆಯಾಗುವುದು ಸಾಧ್ಯ ವಿಲ್ಲ, ಎಂಬುದು ವಾಸ್ತವಿಕವಾಗಿದೆ. ಅತ್ಯಾಚಾರವಾಗಿರುವ ಮಹಿಳೆ ಅಥವಾ ಹುಡುಗಿಯ ಮಾನಸಿಕತೆ ಸ್ಥಿರವಾಗಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದ್ದರಿಂದ ನಿರ್ದಿಷ್ಟ ದಿನಗಳಲ್ಲಿಯೇ ತನಿಖೆ ಪೂರ್ಣವಾಗಬಹುದು ಎಂದು ಹೇಳಲು ಸಾಧ್ಯವಿಲ್ಲ. ಆದ್ದರಿಂದ ಇರುವ ಎಲ್ಲ ಕಾನೂನುಗಳನ್ನು ಯೋಗ್ಯ ರೀತಿಯಲ್ಲಿ ಪಾಲಿಸಿದರೆ ಮಹಿಳೆಯರ ಮೇಲಿನ ಅತ್ಯಾಚಾರಗಳು ನಿಲ್ಲಬಹುದು ಎಂದೆನಿಸುತ್ತದೆ.’
– ನ್ಯಾಯವಾದಿ ಪ್ರಕಾಶ ಸಾಳಸಿಂಗೀಕರ್, ವಿಶೇಷ ಸರಕಾರಿ ನ್ಯಾಯವಾದಿಗಳು, ಮುಂಬಯಿ.