Oxford University : ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಮಮತಾ ಬ್ಯಾನರ್ಜಿ ಭಾಷಣಕ್ಕೆ ವಿದ್ಯಾರ್ಥಿಗಳಿಂದ ಅಡ್ಡಿ: ‘ಹಿಂದಿರುಗಿ ಹೋಗಿ’ ಎಂದು ಘೋಷಣೆ

ಬಂಗಾಳದ ಹಿಂಸಾಚಾರ, ಮಹಿಳೆಯರ ಅಭದ್ರತೆ ಕುರಿತು ಆಕ್ರೋಶಿತ ವಿದ್ಯಾರ್ಥಿಗಳಿಂದ ಮಮತಾ ಬ್ಯಾನರ್ಜಿ ಅವರಿಗೆ ಪ್ರಶ್ನೆಗಳ ಸುರಿಮಳೆ !

ಲಂಡನ್ – ವಿಶ್ವಪ್ರಸಿದ್ಧ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಕೆಲ್ಲಾಗ್ ಕಾಲೇಜಿನಲ್ಲಿ ಭಾಷಣದ ಸಮಯದಲ್ಲಿ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ವಿದ್ಯಾರ್ಥಿಗಳ ವಿರೋಧವನ್ನು ಎದುರಿಸಬೇಕಾಯಿತು. ಪ್ರತಿಭಟನಾಕಾರರು ಬಂಗಾಳದ ಹಿಂಸಾಚಾರ, ಆರ್.ಜಿ. ಕರ್ ವೈದ್ಯಕೀಯ ಕಾಲೇಜಿನ ಅತ್ಯಾಚಾರ ಪ್ರಕರಣ ಮತ್ತು ಸಂದೇಶಖಾಲಿ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಪ್ರಶ್ನೆಗಳನ್ನು ಕೇಳಿದರು. ವಿದ್ಯಾರ್ಥಿಗಳು ‘ಮಮತಾ ಬ್ಯಾನರ್ಜಿ ಹಿಂದಿರುಗಿ ಹೋಗಿ’ ಎಂದು ಜೋರಾಗಿ ಘೋಷಣೆಗಳನ್ನು ಕೂಗಿದರು. ಇದಕ್ಕೆ ಮಮತಾ ಬ್ಯಾನರ್ಜಿ, ‘ಇಲ್ಲಿ ರಾಜಕೀಯ ಮಾಡಬೇಡಿ, ಇದು ರಾಜಕೀಯದ ವೇದಿಕೆಯಲ್ಲ. ನನ್ನ ರಾಜ್ಯಕ್ಕೆ ಬಂದು ನನ್ನೊಂದಿಗೆ ರಾಜಕೀಯ ಮಾಡಿ’ ಎಂದು ಹೇಳಿದರು. (ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಲು ತಪ್ಪಿಸಿಕೊಳ್ಳುವ ಮಮತಾ ಬ್ಯಾನರ್ಜಿ! – ಸಂಪಾದಕರು)

1. ಪ್ರತಿಭಟನಾಕಾರರ ಗದ್ದಲದಿಂದ ಮಮತಾ ಬ್ಯಾನರ್ಜಿ ತಮ್ಮ ಭಾಷಣವನ್ನು ನಿಲ್ಲಿಸಬೇಕಾಯಿತು. ‘ಸ್ಟೂಡೆಂಟ್ಸ್ ಫೆಡರೇಶನ್ ಆಫ್ ಇಂಡಿಯಾ’ (‘ಎಸ್‌ಎಫ್‌ಐ – ಯುಕೆ’) ಈ ಪ್ರತಿಭಟನೆಯ ಜವಾಬ್ದಾರಿಯನ್ನು ವಹಿಸಿಕೊಂಡಿತು. ಮಮತಾ ಬ್ಯಾನರ್ಜಿ ಅವರ ಸುಳ್ಳು ಹೇಳಿಕೆಗಳ ವಿರುದ್ಧ ಈ ಪ್ರತಿಭಟನೆ ಎಂದು ಆ ಸಂಘಟನೆ ಹೇಳಿದೆ.

2. ವಿದೇಶದಲ್ಲಿ ವಾಸಿಸುವ ಬಂಗಾಳಿ ಹಿಂದೂಗಳು ಸಹ ಮಮತಾ ಬ್ಯಾನರ್ಜಿ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ತೆಗೆದುಹಾಕಲು ಬಯಸುತ್ತಾರೆ; ಏಕೆಂದರೆ ಅವರು ಬಂಗಾಳದ ಪರಂಪರೆಯನ್ನು ನಾಶಪಡಿಸಿದ್ದಾರೆ ಎಂದು ಭಾಜಪ ಹೇಳಿದೆ.

3. ಭಾರತವು 2060 ರ ವೇಳೆಗೆ ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುತ್ತದೆಯೇ? ಎಂಬ ಪ್ರಶ್ನೆಗೆ ಮಮತಾ ಬ್ಯಾನರ್ಜಿ ಒಪ್ಪಲಿಲ್ಲ ಮತ್ತು ಈ ಬಗ್ಗೆ ತಮ್ಮದೇ ಆದ ವಿಭಿನ್ನ ಅಭಿಪ್ರಾಯವಿದೆ ಎಂದು ಹೇಳಿದರು.

4. ಮಮತಾ ಬ್ಯಾನರ್ಜಿ ಅವರ ಭಾಷಣದ ವೀಡಿಯೊವನ್ನು ಪ್ರಸಾರ ಮಾಡುತ್ತಾ ಭಾಜಪ ನಾಯಕ ಅಮಿತ್ ಮಾಳವೀಯ ಅವರು, ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆಯಾಗುವುದರ ಬಗ್ಗೆ ಮಮತಾ ಬ್ಯಾನರ್ಜಿ ಅವರಿಗೆ ಸಮಸ್ಯೆ ಇದೆ. ಇದು ನಾಚಿಕೆಗೇಡಿನ ಸಂಗತಿ. ವಿದೇಶದಲ್ಲಿ ಅವರು ಸಾಂವಿಧಾನಿಕ ಹುದ್ದೆಯನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.