ಸೌದಿ ಅರೇಬಿಯಾದಲ್ಲಿ ಮುಸಲ್ಮಾನರಿಗೆ ‘ಮಕ್ಕಾ’ ಮತ್ತು ‘ಮದಿನಾ’ ಇವು ಪವಿತ್ರ ನಗರಗಳಾಗಿರುವುದರಿಂದ ಅದಕ್ಕೆ ‘ಇಸ್ಲಾಂನ ಕೇಂದ್ರ ಸ್ಥಾನ’ ಎಂದು ಹೇಳಲಾಗುತ್ತದೆ. ಪ್ರತಿವರ್ಷ ಲಕ್ಷಗಟ್ಟಲೆ ಮುಸಲ್ಮಾನರು ಹಜ್ ಯಾತ್ರೆಗಾಗಿ ಸೌದಿ ಅರೇಬಿಯಾಗೆ ಹೋಗುತ್ತಾರೆ ಮತ್ತು ತಮ್ಮ ಜೀವನ ಸಾರ್ಥಕವಾಯಿತು ಎಂದು ತಿಳಿಯುತ್ತಾರೆ; ಆದರೆ ಇತ್ತೀಚೆಗೆ ಸೌದಿ ಅರೇಬಿಯಾದ ರಾಜಧಾನಿ ರಿಯಾಧನಲ್ಲಿ ನಡೆದ ಉತ್ಖನನದಲ್ಲಿ (ಉತ್ಖನನ – ಪುರಾತನ ವಸ್ತುಗಳ ಶೋಧಕ್ಕಾಗಿ ಭೂಮಿಯನ್ನು ಅಗೆಯುವುದು) ೮ ಸಾವಿರ ವರ್ಷಗಳ ಹಿಂದಿನ ಹಿಂದೂ ಧರ್ಮದ ಅವಶೇಷಗಳು ಸಿಕ್ಕಿದ್ದು, ಅದರಿಂದ ಅಲ್ಲಿ ಮೊದಲು ಹಿಂದೂ ಸಂಸ್ಕೃತಿ ನೆಲೆಸಿತ್ತು ಎಂಬುದು ತಿಳಿದುಬಂದಿದೆ.
೧. ‘ಅಲ-ಫಾ’ದಲ್ಲಿ ಭೂಮಿಯನ್ನು ಅಗೆಯುವಾಗ ಪ್ರಾಚೀನ ಮಂದಿರ ಮತ್ತು ಯಜ್ಞವೇದಿಯ ಅವಶೇಷಗಳು ಸಿಗುವುದು
ದೇಶದ ಜನರಿಗೆ ತಮ್ಮ ಪುರಾತನ ವಂಶಪರಂಪರೆಯ ಮಾಹಿತಿ ಸಿಗಬೇಕೆಂದು ಪುರಾತತ್ತ್ವ ವಿಭಾಗದ ತಜ್ಞರು ಸೌದಿ ಅರೇಬಿಯಾದಲ್ಲಿ ಭೂಮಿಯ ಸಮೀಕ್ಷೆ ಮತ್ತು ಭೂಮಿಯ ಉತ್ಖನನದ ಕಾರ್ಯವನ್ನು ಆರಂಭಿಸಿದ್ದಾರೆ. ‘ಸೌದಿ ಅರೇಬಿಯಾದ ಪುರಾತತ್ತ್ವ ತಜ್ಞರಿಗೆ ಸೌದಿ ಅರೇಬಿಯಾದ ದಕ್ಷಿಣ-ಪಶ್ಚಿಮ ಭಾಗದ ‘ಅಲ-ಫಾ’ ಎಂಬಲ್ಲಿ ಭೂಮಿಯನ್ನು ಅಗೆಯುವಾಗ ೮ ಸಾವಿರ ವರ್ಷಗಳ ಹಿಂದಿನ ಮಂದಿರ ಮತ್ತು ಯಜ್ಞವೇದಿ ಸಿಕ್ಕಿವೆ. ಈ ಪ್ರಾಚೀನ ಮಂದಿರದ ಹೆಸರು ‘ರಾಕ್-ಕಟ್’ ಎಂದು ಹೇಳಲಾಗುತ್ತಿದ್ದು ಅದು ಮೌಂಟ್ ತುರ್ವಾಯಿಕ್‌ನ ಸಮೀಪವಿದೆ. ವಿಶೇಷವೆಂದರೆ ಹಿಂದೂಗಳ ಯಜ್ಞವೇದಿಗಳು ಯಾವ ದಿಕ್ಕಿಗೆ ಮುಖಮಾಡಿರುತ್ತವೆಯೋ, ಅದೇ ದಿಕ್ಕಿಗೆ ಅಲ-ಫಾದಲ್ಲಿ ಸಿಕ್ಕಿದ ಯಜ್ಞವೇದಿಗಳ ಮುಖಗಳಿವೆ. ಇದಲ್ಲದೇ ದೇವತೆಗಳ ಚಿತ್ರಗಳನ್ನು ಕೊರೆದಿರುವ ಅನೇಕ ಅವಶೇಷಗಳೂ ಇಲ್ಲಿ ಸಿಕ್ಕಿವೆ.
೨. ಪುರಾತತ್ತ್ವ ತಜ್ಞರು ವರದಿಯಲ್ಲಿ ಜನವಸತಿ, ಮಂದಿರ, ಯಜ್ಞವೇದಿ ಮತ್ತು ಸಿಂಚನ ವ್ಯವಸ್ಥೆ ಇವುಗಳ ಮಾಹಿತಿಯನ್ನು ನೀಡಿದ್ದಾರೆ
ಇದರ ಜೊತೆಗೆ ‘ಈ ಸ್ಥಳದಲ್ಲಿ ಜನವಸತಿಯ ಅವಶೇಷಗಳೊಂದಿಗೆ ೨ ಸಾವಿರ ೮೦೭ ಗೋರಿಗಳೂ ಸಿಕ್ಕಿವೆ. ಈ ಗೋರಿಗಳನ್ನು ಒಂದೇ ಕಾಲದಲ್ಲಿ ಕಟ್ಟಿರದೇ ಬೇರೆ ಬೇರೆ ಕಾಲದಲ್ಲಿ ಕಟ್ಟಿದ್ದಾರೆ. ಇದರಿಂದ ಅಲ್ಲಿ ಒಂದು ಕಾಲದಲ್ಲಿ ಮಾನವ ವಸತಿ ಇತ್ತೆಂಬುದು ತಿಳಿಯುತ್ತದೆ, ಮಂದಿರ ಮತ್ತು ಯಜ್ಞವೇದಿ ಇವು ಹಿಂದೂ ಸಂಸ್ಕೃತಿಯನ್ನು ಪುಷ್ಟೀಕರಿಸುತ್ತವೆ’, ಎಂದು ಪುರಾತತ್ತ್ವ ತಜ್ಞರು ತಮ್ಮ ವರದಿಯಲ್ಲಿ ಹೇಳಿದ್ದಾರೆ. ಉತ್ಖನನದಲ್ಲಿ ಸಿಕ್ಕಿರುವ ಧಾರ್ಮಿಕ ಶಿಲಾಲೇಖನಗಳು ಅಂದಿನ ಜನರಲ್ಲಿದ್ದ ಧರ್ಮದ ಜ್ಞಾನದ ಮಾಹಿತಿ ನೀಡುತ್ತವೆ.
ಈ ವರದಿಗನುಸಾರ ಆ ಕಾಲದಲ್ಲಿ ಜಟಿಲ ಸಿಂಚನ ವ್ಯವಸ್ಥೆಯಿತ್ತು. ಅಲ್ಲಿ ಕಾಲುವೆಗಳು, ನೀರಿನ ಸರೋವರಗಳ ಹೊರತು ನೂರಾರು ಹೊಂಡಗಳನ್ನೂ ತೋಡಲಾಗಿದೆ. ಅವುಗಳ ಮೂಲಕ ಮಳೆಯ ನೀರನ್ನು ಹೊಲಗಳಿಗೆ ಪೂರೈಸಲಾಗುತ್ತಿತ್ತು. ಅದು ಮರುಭೂಮಿಯಾಗಿರುವುದರಿಂದ ಆ ಕಾಲದಲ್ಲಿ ಜನರು ನೀರನ್ನು ಸಂಗ್ರಹಿಸಲು ಕಠಿಣ ಪರಿಶ್ರಮ ಪಡುತ್ತಿದ್ದರು ಎಂಬುದು ಕಂಡುಬರುತ್ತದೆ. ಆ ಕಾಲದಲ್ಲಿ ಜನರು ಕೇವಲ ಕೃಷಿಯನ್ನಷ್ಟೇ ಮಾಡುತ್ತಿರಲಿಲ್ಲ, ಅವರಲ್ಲಿ ಸಂಘರ್ಷ, ಹೋರಾಟಗಳೂ ನಡೆಯುತ್ತಿದ್ದವು. ಬೆಳಕಿಗೆ ಬಂದಿರುವ ಅವಶೇಷಗಳಿಂದ ಅದರ ಮಾಹಿತಿಯೂ ಸಿಕ್ಕಿದೆ. ‘ಇಲ್ಲಿ ಇನ್ನು ಮುಂದೆಯೂ ಸಂಶೋಧನೆಯ ಕಾರ್ಯ ಮುಂದುವರಿಯಲಿದೆ, ಅದರಿಂದ ಇನ್ನೂ ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುವವು’, ಎಂದು ಆಯೋಗವು ಹೇಳಿದೆ.
೩. ಸೌದಿ ಅರೇಬಿಯಾಗೆ ಸಾವಿರಾರು ವರ್ಷಗಳಿಂದ ಮೂರ್ತಿಪೂಜೆಯ ಸಂಬಂಧವಿದೆ ! – ಇತಿಹಾಸಕಾರರ ಹೇಳಿಕೆ
ಸೌದಿ ಅರೇಬಿಯಾದಲ್ಲಿಯೇ ಮಂದಿರ ಮತ್ತು ಯಜ್ಞವೇದಿಗಳ ಅವಶೇಷಗಳು ಸಿಕ್ಕಿರುವುದರಿಂದ ಅಲ್ಲಿನ ಜನರಲ್ಲಿ ಮೂರ್ತಿಪೂಜೆಯ ಬಗ್ಗೆ ಚರ್ಚೆ ಆರಂಭವಾಗಿದೆ. ಈ ಮಾಹಿತಿಯು ಈಗ ಭೂಮಿಯನ್ನು ಅಗೆದ ಮೇಲೆ ಹೊರ ಬಂದಿದ್ದರೂ, ಸೌದಿ ಅರೇಬಿಯಾಕ್ಕೆ ಸಾವಿರಾರು ವರ್ಷಗಳಿಂದಲೂ ಮೂರ್ತಿಪೂಜೆಯ ಸಂಬಂಧವಿದೆ ಎಂದು ಅನೇಕ ಇತಿಹಾಸಕಾರರು ಈ ಮೊದಲೇ ಹೇಳಿದ್ದಾರೆ. ಇಸ್ಲಾಮ್ ನಲ್ಲಿ ಮಕ್ಕಾದಲ್ಲಿನ ‘ಕಾಬಾ’ ಈ ಸ್ಥಳವನ್ನು ಪವಿತ್ರ ಸ್ಥಳ ಎಂದು ನಂಬಲಾಗುತ್ತದೆ. ಭಗವಾನ ಶಿವ ಮತ್ತು ಕಾಬಾ ಇವುಗಳಿಗೆ ಪ್ರಾಚೀನ ಕಾಲದಿಂದ ಸಂಬಂಧವಿದೆ ಎಂದು ಮೊದಲ ಶತಮಾನದ ರೋಮನ್ ಇತಿಹಾಸಕಾರ ದಯೌದ್ರಸ್ ಸಲಸ್ ಇವರು ಹೇಳುತ್ತಾರೆ.
೪. ‘ಮಕ್ಕಾದಲ್ಲಿ ವಿಶಾಲ ಶಿವಲಿಂಗ ಇತ್ತು’ – ರೋಮನ್ ಮತ್ತು ಭಾರತೀಯ ಇತಿಹಾಸಕಾರರ ಹೇಳಿಕೆ
ಸದ್ಯ ಕಾಬಾಕ್ಕೆ ಹೋಗಲು ಮುಸಲ್ಮಾನೇತರರಿಗೆ ಅನುಮತಿಯಿಲ್ಲ. ಹಜ್ ಯಾತ್ರೆಯ ಸಮಯದಲ್ಲಿ ಮುಸಲ್ಮಾನರು ಕಾಬಾದ ಪೂಜೆಯನ್ನು ಮಾಡುತ್ತಾರೆ ಮತ್ತು ಅದರ ಚುಂಬನವನ್ನು ತೆಗೆದುಕೊಳ್ಳುತ್ತಾರೆ. ಅನೇಕ ಜನರು ಇದು ಭಗವಾನ ಶಂಕರನ ರೂಪವಾಗಿದೆ ಎಂದು ನಂಬುತ್ತಾರೆ. ‘ಇಂದು ಯಾವ ಜಾಗದಲ್ಲಿ ಮಕ್ಕಾ ಇದೆಯೋ, ಆ ಜಾಗದಲ್ಲಿ ಹಿಂದೆ ‘ಮಕ್ಕೇಶ್ವರ ಮಹಾದೇವ’ನ ಮಂದಿರವಿತ್ತು’, ಎಂದೂ ಕೂಡ ಹೇಳಲಾಗುತ್ತದೆ. ‘ಈ ಸ್ಥಳದಲ್ಲಿಯೇ ಕಪ್ಪು ಕಲ್ಲಿನ ರೂಪದಲ್ಲಿ ವಿಶಾಲ ಶಿವಲಿಂಗ ಇತ್ತು ಮತ್ತು ಈಗ ಅದು ಭಗ್ನ ಸ್ಥಿತಿಯಲ್ಲಿದೆ’, ಎಂದು ರೋಮನ್ ಇತಿಹಾಸಕಾರನು ಬರೆದ ಲೇಖನವು ಸೌದಿ ಅರೇಬಿಯಾದ ಮೂರ್ತಿಪೂಜೆಯನ್ನು ಪುಷ್ಟೀಕರಿಸುತ್ತದೆ.
ಭಾರತೀಯ ಇತಿಹಾಸಕಾರರಾದ (ದಿ.) ಪು. ನಾ. ಓಕ್ ಇವರು ಕೂಡ ತಮ್ಮ ಪುಸ್ತಕದಲ್ಲಿ ಮಕ್ಕಾದ ಬಗ್ಗೆ ‘ಮಕ್ಕಾಗೆ ಇಸ್ಲಾಮ್ ತಲುಪುವ ಮೊದಲು ಅಲ್ಲಿ ಮೂರ್ತಿ ಪೂಜೆಯ ಪರಂಪರೆಯಿತ್ತು’, ಎಂದು ಬರೆದಿದ್ದಾರೆ. ‘ಒಂದು ಕಾಲದಲ್ಲಿ ಅಲ್ಲಿ ಹಿಂದೂ ದೇವತೆಗಳ ಮಂದಿರವಿತ್ತು’, ಎಂಬುದು ಅವರ ಅಭಿಪ್ರಾಯವಾಗಿದೆ.
ಮಕ್ಕಾದಲ್ಲಿನ ಕಲ್ಲನ್ನು ಹಿಂದೂಗಳು ಮತ್ತು ಕೆಲವು ಇತಿಹಾಸಕಾರರು ಭಗವಾನ ಶಂಕರನ ರೂಪವೆಂದು ನಂಬುತ್ತಾರೆ, ಆದರೆ ಇಸ್ಲಾಂನ ಅನುಯಾಯಿಗಳು ಮಾತ್ರ ಅದನ್ನು ನಂಬುವುದಿಲ್ಲ. ಮುಸಲ್ಮಾನರು ಮಕ್ಕಾದಲ್ಲಿನ ಆ ಶಿಲೆಯು ಆದಮ್ ಮತ್ತು ಈವ್ಹ್ ಇವರೊಂದಿಗೆ (ಪೃಥ್ವಿಯಲ್ಲಿನ ಮೊದಲ ಮಾನವರು) ಜನ್ನತದಿಂದ (ಸ್ವರ್ಗದಿಂದ) ಬಂದಿದೆ ಎಂದು ನಂಬುತ್ತಾರೆ. ಈಗ ಮಾತ್ರ ಸೌದಿ ಅರೇಬಿಯಾದಲ್ಲಿಯೇ ಮಂದಿರ, ಯಜ್ಞವೇದಿ ಮತ್ತು ಮೂರ್ತಿಪೂಜೆಯ ಅಸ್ತಿತ್ವವು ಕಂಡುಬಂದಿರುವುದರಿಂದ ಹಿಂದೂ ಸಂಸ್ಕೃತಿಯ ಪ್ರಾಚೀನತೆಯು ಮತ್ತೊಮ್ಮೆ ಸ್ಪಷ್ಟವಾಗಿದೆ.
(ಆಧಾರ : ದೈನಿಕ ‘ಮುಂಬಯಿ ತರುಣ ಭಾರತ’, ೫.೮.೨೦೨೨)