ಪಿಲಿಭಿತ (ಉತ್ತರ ಪ್ರದೇಶ)ಇಲ್ಲಿ 3 ಖಲಿಸ್ತಾನಿ ಭಯೋತ್ಪಾದಕರು ಹತ

ಮೂವರು ಪಾಕಿಸ್ತಾನ, ಗ್ರೀಸ್ ಮತ್ತು ಬ್ರಿಟನ್‌ನಲ್ಲಿರುವ ಸಹಚರರೊಂದಿಗೆ ಸಂಬಂಧ ಹೊಂದಿರುವುದು ಬಹಿರಂಗ

ಪಿಲಿಭಿತ (ಉತ್ತರ ಪ್ರದೇಶ) – ಇಲ್ಲಿ ಡಿಸೆಂಬರ್ 23 ರ ಮುಂಜಾನೆ ನಡೆದ ಚಕಮಕಿಯಲ್ಲಿ ಉತ್ತರ ಪ್ರದೇಶ ಮತ್ತು ಪಂಜಾಬ್ ಪೊಲೀಸರು 3 ಖಲಿಸ್ತಾನಿ ಭಯೋತ್ಪಾದಕರನ್ನು ಹತ್ಯೆಗೈದಿದ್ದಾರೆ. ಹಾಗೂ ಈ ಚಕಮಕಿಯಲ್ಲಿ 2 ಪೊಲೀಸರು ಗಾಯಗೊಂಡಿದ್ದಾರೆ. ಈ ಮೂವರೂ ಭಯೋತ್ಪಾದಕರು ಖಲಿಸ್ತಾನಿ ಭಯೋತ್ಪಾದಕ ಸಂಘಟನೆ ‘ಖಲಿಸ್ತಾನ್ ಜಿಂದಾಬಾದ್ ಫೋರ್ಸ್’ಗೆ ಸೇರಿದವರಾಗಿದ್ದರು. ಗುರ್ವಿಂದರ ಸಿಂಗ್, ವೀರೇಂದ್ರ ಸಿಂಗ್ ಉರ್ಫ್ ರವಿ ಮತ್ತು ಜಸ್ಪ್ರೀತ ಸಿಂಗ್ ಉರ್ಫ್ ಪ್ರತಾಪ್ ಸಿಂಗ್ ಎಂದು ಗುರುತಿಸಲಾಗಿದ್ದೂ ಮೂವರೂ ಪಂಜಾಬ್‌ನ ಗುರುದಾಸಪುರ ನಿವಾಸಿಗಳಾಗಿದ್ದಾರೆ. ಇದೇ ಭಯೋತ್ಪಾದಕರು ಡಿಸೆಂಬರ್ 19 ರಂದು ಗುರುದಾಸಪುರ ಜಿಲ್ಲೆಯ ಪೊಲೀಸ್ ಪೋಸ್ಟ್ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದರು. ಈ ಭಯೋತ್ಪಾದಕರಿಂದ 2 ಎಕೆ-47 ರೈಫಲ್‌ಗಳು, 2 ಪಿಸ್ತೂಲ್‌ಗಳು ಮತ್ತು ದೊಡ್ಡ ಪ್ರಮಾಣದ ಕಾಟ್ರೆಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹಾಗೂ ಕಳ್ಳತನವಾಗಿದ್ದ ದ್ವಿಚಕ್ರವಾಹನವನ್ನೂ ವಶಪಡಿಸಿಕೊಳ್ಳಲಾಗಿದೆ. ಪುರಣಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾಗಿತ್ತು. ಈ ಭಯೋತ್ಪಾದಕರು ಪಾಕಿಸ್ತಾನದಲ್ಲಿರುವ ತಮ್ಮ ಸಂಘಟನೆಯ ಮುಖ್ಯಸ್ಥ ರಂಜಿತಸಿಂಗ್ ನೀತಾ ಅವರೊಂದಿಗೆ ಸಂಬಂಧ ಹೊಂದಿದ್ದರು. ಹಾಗೆಯೇ ಅವರು ಗ್ರೀಸ್ ಮತ್ತು ಬ್ರಿಟನ್‌ನಲ್ಲಿರುವ ತಮ್ಮ ಸಹಚರರೊಂದಿಗೆ ಸಂಬಂಧವನ್ನು ಹೊಂದಿದ್ದರು. ಬ್ರಿಟನ್‌ನ ಸಿಖ್ ಸೈನಿಕರೊಬ್ಬ ಈ ಸಂಘಟನೆಯೊಂದಿಗೆ ಸಂಬಂಧ ಹೊಂದಿದ್ದಾನೆ.