‘ಮಂಕಿಪಾಕ್ಸ್ ರೋಗ : ಲಕ್ಷಣಗಳು, ಉಪಾಯ ಮತ್ತು ಜಾಗರೂಕರಾಗಿರುವುದರ ಆವಶ್ಯಕತೆ !

‘ಮಂಕಿಪಾಕ್ಸ್ ರೋಗದಿಂದ ಶರೀರದ ಮೇಲೆ ಕಾಣಿಸುವ ಬೊಕ್ಕೆಗಳು

ಕಳೆದ ತಿಂಗಳುಗಳ ವರೆಗೆ ‘ಮಂಕಿಪಾಕ್ಸ್ ರೋಗದ ಹೆಸರು ಆಫ್ರಿಕಾದ ಹೊರಗಡೆ ಬೇರೆ ಯಾರಿಗೂ ಗೊತ್ತಿರಲಿಲ್ಲ. ಭಾರತದಲ್ಲಿ ಇಷ್ಟರವರೆಗೆ ೪ ರೋಗಿಗಳು ಪತ್ತೆಯಾಗಿದ್ದಾರೆ. ಜಾಗತಿಕ ಆರೋಗ್ಯ ಸಂಘಟನೆಯ ಮಾಹಿತಿಗನುಸಾರ ಇಷ್ಟರ ವರೆಗೆ ವಿವಿಧ ದೇಶಗಳಲ್ಲಿ ಮಂಕಿಪಾಕ್ಸ್‌ನ ೧೫ ಸಾವಿರದ ೭೩೪ ರೋಗಿಗಳು ಸಿಕ್ಕಿದ್ದಾರೆ. ಈ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಈಗ ಎಲ್ಲ ದೇಶಗಳು ಈ ರೋಗದ ಬಗ್ಗೆ ಜಾಗೃತವಾಗಿವೆ. ಈ ರೋಗದ ಹರಡುವಿಕೆಯನ್ನು ತಡೆಯಲು ಪ್ರತಿಯೊಬ್ಬ ಸಂಶಯ ವ್ಯಕ್ತಿಯ ನೋಂದಣಿ ಮತ್ತು ತಪಾಸಣೆಯನ್ನು ಮಾಡಲಾಗುತ್ತಿದೆ. ಕಳೆದ ಎರಡುವರೆ ವರ್ಷ ಕೊರೋನಾ ಮಹಾಮಾರಿಯೊಂದಿಗೆ ಹೋರಾಡಿದ ನಂತರ ಈಗ ಈ ಹೊಸ ರೋಗವು ಎಲ್ಲರ ಚಿಂತೆಯನ್ನು ಹೆಚ್ಚಿಸಿದೆ.

೧. ‘ಮಂಕಿಪಾಕ್ಸ್’ ರೋಗದ ಪ್ರಾರಂಭ ಮತ್ತು ಜಾಗತಿಕ ಸ್ತರದಲ್ಲಾಗುತ್ತಿರುವ ಅದರ ‘ಉದ್ರೇಕ’

‘ಮಂಕಿಪಾಕ್ಸ್’ ಇದೇನು ಹೊಸ ರೋಗವಲ್ಲ. ೧೯೫೮ ರಲ್ಲಿ ಮೊತ್ತ ಮೊದಲು ಮಂಗಗಳಲ್ಲಿ ಈ ರೋಗ ಪತ್ತೆಯಾಗಿರುವುದರಿಂದ ಇದಕ್ಕೆ ‘ಮಂಕಿಪಾಕ್ಸ್’ ಎಂಬ ಹೆಸರನ್ನು ಕೊಡಲಾಯಿತು. ಇದು ವಿಷಾಣುಗಳಿಂದಾಗುವ ರೋಗ. ಇದರ ವಿಷಾಣುಗಳು ‘ಆರ್ಥೋಪಾಕ್ಸ್’ ಅಂದರೆ ಸಿಡುಬು (ದೇವಿ) ವಿಷಾಣುಗಳಂತಿವೆ. ಸಿಡುಬು(ಚಿಕನ್‌ಪಾಕ್ಸ) ಇದೊಂದು ಪ್ರಕಾರದ ರೋಗವಾಗಿದೆ. ಈ ರೋಗವು ‘ರಿವೋಲಾ’ ಎಂಬ ವಿಷಾಣುಗಳಿಂದ ಹರಡುತ್ತದೆ. ಈ ರೋಗದಿಂದ ನರಮಂಡಲಕ್ಕೆ ಸೋಂಕು ತಗಲುತ್ತದೆ. ಈ ರೋಗದ ಲಕ್ಷಣಗಳೆಂದರೆ ಜ್ವರ ಬರುತ್ತದೆ ಮತ್ತು ಸೋಂಕಾದ ನಂತರ ೩ ರಿಂದ ೪ ದಿನಗಳಲ್ಲಿ ಮೈಮೇಲೆ ಬೊಕ್ಕೆಗಳು ಕಾಣಿಸುತ್ತವೆ. ಈ ಹಿಂದೆ ಗೋವುಗಳಿಗೆ ಆಗುವ ‘ಕೌಪಾಕ್ಸ್’ ಈ ರೋಗದಿಂದ ದೇವಿಯ ರೋಗಕ್ಕೆ ಲಸಿಕೆಯನ್ನು ಕಂಡು ಹಿಡಿಯುವುದರಲ್ಲಿ ಯಶಸ್ಸು ಸಿಕ್ಕಿತ್ತು. ಈ ರೋಗವು ಸಿಡುಬು (ದೇವಿ) ರೋಗದಂತೆಯೇ ಇದೆ; ಆದರೆ ಅದಕ್ಕಿಂತ ಸೌಮ್ಯವಾಗಿದೆ ಮತ್ತು ಮರಣದ ಅಪಾಯವೂ ದೇವಿಯ ರೋಗಕ್ಕಿಂತ ಅತ್ಯಲ್ಪ ಅಂದರೆ ಶೇ. ೩ ರಿಂದ ೬ ರಷ್ಟೇ ಇದೆ.

೧೯೭೦ ರಲ್ಲಿ ‘ಡಾಮಿನಿಕನ್ ರಿಪಬ್ಲಿಕ್ ಆಫ್ ಕಾಂಗೋ’ ಈ ಆಫ್ರಿಕಾ ದೇಶದಲ್ಲಿ ಮೊತ್ತಮೊದಲು ಮಂಕೀಪಾಕ್ಸ್‌ನ ಮಾನವೀ ರೋಗಿಯ ಪತ್ತೆಯಾಗಿತ್ತು. ಅಂದಿನಿಂದ ಈ ರೋಗದ ರೋಗಿಗಳು ಆಫ್ರಿಕಾದ ವಿವಿಧ ದೇಶಗಳಲ್ಲಿ ಕಂಡುಬರುತ್ತವೆ. ಆ ದೇಶಗಳಲ್ಲಿ ನಡುನಡುವೆ ಈ ರೋಗ ಉದ್ರೇಕವಾಗಿ ರೋಗಿಗಳ ಸಂಖ್ಯೆ ಹೆಚ್ಚಾಗುತ್ತದೆ. ನೈಜೇರಿಯಾದಲ್ಲಿ ೨೦೧೭ ರಿಂದ ಈ ರೋಗದ ಉದ್ರೇಕ ಪ್ರಾರಂಭವಾಗಿತ್ತು. ಇಂಗ್ಲೆಂಡ್‌ನಲ್ಲಿ ೭ ಮೇ ೨೦೨೨ ರಂದು ಪತ್ತೆಯಾದ ಮೊದಲ ರೋಗಿಯು ನೈಜೇರಿಯಾದ ಪ್ರವಾಸಿಯಾಗಿದ್ದನು; ಆದರೆ ಅನಂತರ ಜಗತ್ತಿನಾದ್ಯಂತ ಸಿಕ್ಕಿರುವ ಎಲ್ಲ ರೋಗಿಗಳು ಪ್ರವಾಸಿ ರೋಗಿಗಳಾಗಿಲ್ಲ. ಕಳೆದ ಕೆಲವು ಸಮಯದಿಂದ ಈ ರೋಗ ವಿವಿಧ ದೇಶಗಳಲ್ಲಿ ಹರಡುತ್ತಿರುವುದರಿಂದ ಇದಕ್ಕೆ ‘ಜಾಗತಿಕ ಸೋಂಕುರೋಗ (ಪೆಂಡ್ಯಾಮಿಕ)’, ಎಂದು ಹೇಳದೆ ಸದ್ಯ ‘ಜಾಗತಿಕ ಉದ್ರೇಕ’, ಎಂದು ಹೇಳಲಾಗುತ್ತಿದೆ.

೨. ಮಂಕಿಪಾಕ್ಸನ ಸಂಸರ್ಗ ಮತ್ತು ಅದಕ್ಕೆ ಉಪಾಯ 

ಮಂಕೀಪಾಕ್ಸ್‌ನ ವಿಷಾಣು ‘ಆರ್.ಎನ್.ಎ.’ (ರೈಬೋನ್ಯೂಕ್ಲಿಯಿಕ್ ಎಸಿಡ್- ಮಾನವೀ ಶರೀರದಲ್ಲಿನ ಪ್ರತಿಯೊಂದು ಜೀವಕೋಶ ದಲ್ಲಿರುವ ಒಂದು ರೀತಿಯ ಆಮ್ಲ) ವಿಷಾಣು (ರೋಗಾಣು) ಆಗಿದೆ. ಈ ವಿಷಾಣು ಮಾನವೀ ಶರೀರದ ಹೊರಗೆ ಹೆಚ್ಚು ಕಾಲ ಉಳಿಯಬಹುದು. ಇದರ ಸಂಸರ್ಗದ ವಿವಿಧ ಮಾರ್ಗಗಳಿವೆ; ಆದರೆ ಹೆಚ್ಚು ಸಮಯದವರೆಗೆ ರೋಗಿಯ ಸಂಪರ್ಕದಲ್ಲಿರುವುದು ಮುಖ್ಯ ಕಾರಣವಾಗಿದೆ. ರೋಗಿಯ ಶರೀರದಲ್ಲಿನ ಸ್ರಾವ, ಬೊಕ್ಕೆಗಳಲ್ಲಿನ ಸ್ರಾವ, ರೋಗಿಯ ಬಟ್ಟೆಗಳು ಮತ್ತು ಹಾಸಿಗೆ, ಬೊಕ್ಕೆಗಳ ಮೇಲಿನ ಪದರು, ಸ್ವಲ್ಪ ಪ್ರಮಾಣದಲ್ಲಿ ಕೆಮ್ಮುವುದು ಮತ್ತು ಸೀನುವುದು ಇತ್ಯಾದಿಗಳಿಂದ ವಿಷಾಣುಗಳ ಸಂಪರ್ಕದಲ್ಲಿರುವ ಜನರಿಗೆ ಹರಡುತ್ತದೆ. ಹೀಗಿದ್ದರೂ ಇದರ ಸಂಸರ್ಗ ಕೆಲವೇ ನಿಮಿಷಗಳಲ್ಲಿ ಆಗುವುದಿಲ್ಲ, ಆದ್ದರಿಂದ ಹೆಚ್ಚು ಸಮಯದ ವರೆಗೆ ಕಾಳಜಿವಹಿಸುವುದು ಆವಶ್ಯಕವಾಗಿದೆ. ಅಂದರೆ ರೋಗಿಯ ಕಾಳಜಿವಹಿಸುವ ವ್ಯಕ್ತಿ ಮತ್ತು ವೈದ್ಯಕೀಯ ಸಿಬ್ಬಂದಿಗಳು ಸೋಂಕನ್ನು ತಡೆಯಲು ಯೋಗ್ಯ ದಕ್ಷತೆಯನ್ನು ವಹಿಸುವುದು ಆವಶ್ಯಕವಾಗಿದೆ. ರೋಗಿಗಳ ಸೇವೆಯನ್ನು ಮಾಡುವಾಗ ಮಾಸ್ಕ್ ಉಪಯೋಗಿಸುವುದು, ಕೈಗಳನ್ನು ಪದೇ ಪದೇ ಸ್ವಚ್ಛಗೊಳಿಸುವುದು, ರೋಗಿಗಳನ್ನು ಕೈಯಿಂದ ಸ್ಪರ್ಶಿಸುವಾಗ ಕೈಗವಸುಗಳನ್ನು (ಗ್ಲೋವ್‌ಸ್) ಉಪಯೋಗಿಸುವುದು, ರೋಗಿಯನ್ನು ಬೇರೆ ಕೋಣೆಯಲ್ಲಿ ಇಡುವುದು ಇತ್ಯಾದಿ ಉಪಾಯಗಳಿಂದ ನಾವು ಸುರಕ್ಷಿತ ರಾಗಿರಬಹುದು.

ಸೋಂಕು ಆಗಿದ್ದರೆ ಸುಮಾರು ೫ ರಿಂದ ೨೧ ದಿನಗಳ ನಂತರ ಲಕ್ಷಣಗಳು ಕಾಣಿಸುತ್ತವೆ. ಆದ್ದರಿಂದ ಸಂಪರ್ಕದಲ್ಲಿನ ವ್ಯಕ್ತಿಗಳನ್ನು ೩ ವಾರ ಪ್ರತ್ಯೇಕವಾಗಿಡುವುದು/ ನಿರೀಕ್ಷಣೆಯಲ್ಲಿಡುವುದು, ಇದು ಯಾವುದೇ ದೇಶದ ಉದ್ರೇಕವನ್ನು ತಡೆಗಟ್ಟಲು ಅತ್ಯಾವಶ್ಯಕವಾಗಿದೆ ಮತ್ತು ಅದಕ್ಕಾಗಿ ಸಂಪರ್ಕ ಕೊಂಡಿಯನ್ನು ಹುಡುಕು ವುದು (ಯಾರ ಸಂಪರ್ಕದಿಂದ ಮತ್ತು ಯಾರಯಾರಿಗೆ ಸಂಸರ್ಗ ಹರಡಿತು ಎಂಬುದನ್ನು ಹುಡುಕುವುದು), ಕೂಡ ತುಂಬಾ ಮಹತ್ವ ದ್ದಾಗಿದೆ. ಇದಕ್ಕಾಗಿ ಜನರ ಮತ್ತು ವೈದ್ಯಕೀಯ ವಿಭಾಗದವರ ಸಹಕಾರ ಆವಶ್ಯಕವಾಗಿದೆ.

೩. ರೋಗದ ಲಕ್ಷಣಗಳು

ಮಂಕೀಪಾಕ್ಸ್‌ನ ಲಕ್ಷಣಗಳು ಸ್ವಲ್ಪ ಸಿಡುಬಿನಂತೆ (ದೇವಿ ರೋಗ) ಮತ್ತು ಸ್ವಲ್ಪ ಫ್ಲೂ ಅಥವಾ ಕೊರೋನಾದಂತೆ ಅನಿಸುತ್ತವೆ; ಆದರೆ ಎರಡರಲ್ಲಿಯೂ ವ್ಯತ್ಯಾಸವಿದೆ. ಸೋಂಕು ತಗಲಿದನಂತರ ರೋಗದ ಆರಂಭ ಜ್ವರದಿಂದಾಗುತ್ತದೆ. ಅದರ ಜೊತೆಗೆ ತಲೆನೋವು, ಸ್ನಾಯುಗಳ ನೋವು, ಬೆನ್ನುನೋವು ಮತ್ತು ಅತೀ ಆಯಾಸ ಕಂಡು ಬರಬಹುದು; ಮಾತ್ರ ಕಂಕುಳ, ತೊಡೆ ಸಂಧಿ, ಕುತ್ತಿಗೆ ಇವುಗಳಲ್ಲಿನ ದುಗ್ಧರಸ ಗ್ರಂಥಿಗಳಿಗೆ ಭಾವು ಬರುತ್ತದೆ (Lymphadenopathy). ಈ ಲಕ್ಷಣಗಳಿದ್ದರೆ ಹಾಗೆಯೇ ಜ್ವರ ಬಂದನಂತರ ಸುಮಾರು ೩ ದಿನಗಳ ನಂತರ ಶರೀರದ ಮೇಲೆ ವಿಶಿಷ್ಟ ಪ್ರಕಾರದ ಬೊಕ್ಕೆಗಳು ಅಥವಾ ಹುಣ್ಣುಗಳು ಕಾಣಿಸಿದರೆ ಮಂಕೀಪಾಕ್ಸ್ ಈ ರೋಗದ ತಪಾಸಣೆ ಮಾಡುವುದು ಅವಶ್ಯಕವಾಗಿದೆ.

ಮಂಕೀಪಾಕ್ಸ್‌ನ ಬೊಕ್ಕೆಗಳು ಎದ್ದನಂತರ ರೋಗಿಗಳಿಂದ ಸೋಂಕು ಹರಡಲು ಪ್ರಾರಂಭವಾಗುತ್ತದೆ. ಮಂಕೀಪಾಕ್ಸ್‌ನ ಬೊಕ್ಕೆಗಳು ಸಿಡುಬು (ಸ್ಮಾಲಪಾಕ್ಸ) ರೋಗಕ್ಕಿಂತ ಸೌಮ್ಯವಾಗಿದೆ; ಆದರೆ ಸೀತಾಳೆ ಸಿಡುಬು (ಚಿಕನ್‌ಪಾಕ್ಸ) ರೋಗಕ್ಕಿಂತ ಹೆಚ್ಚು ತೀವ್ರವಾಗಿದೆ. ಈ ರೋಗ ಪ್ರಾರಂಭವಾಗುವಾಗ ಮುಖ, ಕೈ ಹಾಗೂ ಪಾದಗಳ ಮೇಲೆ ಹೆಚ್ಚು ಬೊಕ್ಕೆಗಳಿರುತ್ತವೆ ಮತ್ತು ಶರೀರದ ಮೇಲೆ ಕಡಿಮೆಯಿರುತ್ತವೆ. (ಸೀತಾಳೆ ಸಿಡುಬುನಲ್ಲಿ ಮಾತ್ರ ಶರೀರದ ಮೇಲೆ ಹೆಚ್ಚು ಬೊಕ್ಕೆಗಳು ಏಳುತ್ತವೆ.) ಈ ಬೊಕ್ಕೆಗಳು ಮೊದಲು ಕೆಂಪಾಗಿ, ನಂತರ ನೀರು ತುಂಬಿರುವ ಹುಣ್ಣುಗಳ ಹಾಗೆ ಆಗುತ್ತವೆ, ಅವು ನಂತರ ಬಿಳಿ ಅಥವಾ ಹಳದಿಯಾಗಬಹುದು. ಸುಮಾರು ೨ ರಿಂದ ೪ ವಾರಗಳ ನಂತರ ಈ ಬೊಕ್ಕೆಗಳು ಒಣಗಿ ಅವುಗಳ ಮೇಲಿನ ಪದರುಗಳು ಕಳಚಿ ಬೀಳುತ್ತದೆ. ಎಲ್ಲ ಪದರುಗಳು ಒಣಗಿ ಬಿದ್ದುಹೋದ ರೋಗಿಯಿಂದ ಕಾಯಿಲೆ ಹರಡುವುದಿಲ್ಲ.

೪. ಮಂಕೀಪಾಕ್ಸ್’ನ ವೈರಾಣು ಸಿಡುಬು (ದೇವಿ) ವೈರಾಣುವಿಗೆ ಸಮಾನವಾಗಿವೆ

ಮಂಕೀಪಾಕ್ಸ್’ನ ವೈರಾಣು ಸಿಡುಬು (ದೇವಿ) ವೈರಾಣುವಿನ ಸಮೀಪದ್ದಾಗಿರುವುದರಿಂದ ಅದರ ಮೇಲಿನ ಲಸಿಕೆ ಮಂಕೀಪಾಕ್ಸ್‌ಗೆ ಶೇ. ೮೫ ರಷ್ಟು ಸುರಕ್ಷೆಯನ್ನು ನೀಡಬಹುದು; ಆದರೆ ಸಿಡುಬು ರೋಗ ೧೯೮೦ ರಲ್ಲಿ ಜಗತ್ತಿನಾದ್ಯಂತ ಇಲ್ಲವಾಗಿದ್ದರಿಂದ ಅದರ ಮೇಲಿನ ಲಸಿಕೆಯನ್ನು ನಿಲ್ಲಿಸಲಾಯಿತು. ೧೯೮೦ ರ ನಂತರ ಜನಿಸಿದ ಜನರಿಗೆ ದೇವಿಯ ಲಸಿಕೆ ಸಿಗದಿರುವುದರಿಂದ ಅವರಿಗೆ ಮಂಕೀಪಾಕ್ಸ್ ಕಾಯಿಲೆಯ ಅಪಾಯ ಹೆಚ್ಚು ಪ್ರಮಾಣದಲ್ಲಿದೆ. ೪೨ ವರ್ಷಗಳ ಮೇಲಿನ ವ್ಯಕ್ತಿಗಳಿಗೆ ದೇವಿಯ ಲಸಿಕೆ ಸಿಕ್ಕಿದ್ದರೂ ಅದರ ಪರಿಣಾಮ ಕಡಿಮೆಯಾಗಿರುವ ಸಾಧ್ಯತೆಯಿದೆ. ಅದ್ದರಿಂದ ರೋಗಿಗಳ ಸಂಪರ್ಕವಾದರೆ ಕುಟುಂಬದಲ್ಲಿ ಎಲ್ಲರೂ ಕಾಳಜಿ ವಹಿಸಬೇಕು.

೫. ಮಂಕೀಪಾಕ್ಸ್‌ನ ವಿರುದ್ಧ ವಿವಿಧ ದೇಶಗಳು ಮಾಡುತ್ತಿರುವ ಉಪಾಯ

ಜೈವಿಕ ಯುದ್ಧದ ಭೀತಿಯಿಂದ ಅಮೇರಿಕಾದಂತಹ ದೇಶಗಳು ಸಿಡುಬಿನ (ದೇವಿಯ) ಲಸಿಕೆಯನ್ನು ಸಂಗ್ರಹಿಸಿಟ್ಟಿದ್ದಾರೆ ಮತ್ತು ಮಂಕೀಪಾಕ್ಸ್‌ನ ವಿರುದ್ಧದ ಒಂದು ಹೊಸ ಲಸಿಕೆಗೆ ಅಲ್ಲಿ ಮನ್ನಣೆ ಸಿಕ್ಕಿದೆ. ಆದುದರಿಂದ ಸಂಸರ್ಗ ಬರುವಂತಹ ವ್ಯಕ್ತಿಗಳಿಗೆ (ಡಾಕ್ಟರರು, ದಾದಿಗಳು) ಮತ್ತು ಸಂಪರ್ಕದಲ್ಲಿರುವ ವ್ಯಕ್ತಿಗಳಿಗೆ ಲಸಿಕೆಯನ್ನು ನೀಡುವ ನಿರ್ಣಯವನ್ನು ಭವಿಷ್ಯದಲ್ಲಿ ತೆಗೆದುಕೊಳ್ಳುವ ಸಾಧ್ಯತೆಯಿದೆ; ಆದರೆ ‘ಕೊರೋನಾದಂತೆ ಸಾರ್ವಜನಿಕ ಲಸೀಕರಣ ಮಾಡುವ ಸ್ಥಿತಿ ಬರಲಿಕ್ಕಿಲ್ಲ’, ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಕೆಲವು ದೇಶಗಳು ಪ್ರತ್ಯೇಕತೆಯ ತಂತ್ರವನ್ನು ಪ್ರಭಾವಪೂರ್ಣವಾಗಿ ಉಪಯೋಗಿಸುತ್ತಿವೆ. ಉದಾ. ಬೆಲ್ಜಿಯಮ್‌ನಲ್ಲಿ ಕಾಯಿಲೆ ಖಚಿತವಾಗಿ ಗೊತ್ತಾದ ನಂತರ ರೋಗಿಯ ಎಲ್ಲ ಬೊಕ್ಕೆಗಳು ಮಾಯುವ ವರೆಗೆ ಪ್ರತ್ಯೇಕವಾಗಿಡುವುದರೊಂದಿಗೆ ಸಂಪರ್ಕವನ್ನು ನಿಷೇಧಿಸಲು ಹೇಳಲಾಗುತ್ತದೆ. ಬ್ರಿಟನ್‌ನಲ್ಲಿ ರೋಗಿಯ ಸಂಪರ್ಕದಲ್ಲಿನ ವ್ಯಕ್ತಿಗಳಿಗೆ ೨೧ ದಿನಗಳ ವರೆಗೆ ತಾವಾಗಿಯೇ ಬೇರೆ ಇರಲು ಸೂಚನೆಯನ್ನು ನೀಡಲಾಗಿದೆ.

೬. ಮಂಕೀಪಾಕ್ಸ್ ರೋಗಕ್ಕೆ ಉಪಾಯ 

ಈ ಕಾಯಿಲೆಗೆ ಯಾವುದೇ ಪ್ರಭಾವಿ ಔಷಧ ಇಲ್ಲ. ಈ ಕಾಯಿಲೆಗೆ ಸಿಡುಬಿನ (ದೇವಿಯ) ಮೇಲಿನ ಔಷಧ ನಡೆಯು ತ್ತದೆ; ಆದರೆ ಅದು ಬಹಳ ದುಬಾರಿ ಆಗಿದ್ದು ಎಲ್ಲ ಕಡೆಗೆ ಲಭ್ಯವಿಲ್ಲ. ಈ ರೋಗವು ಸಿಡುಬಿನಂತೆ ೨ ರಿಂದ ೪ ವಾರಗಳಲ್ಲಿ ಗುಣವಾಗುತ್ತದೆ. ಆದ್ದರಿಂದ ಈ ಅವಧಿಯಲ್ಲಿ ಲಕ್ಷಣಗಳಿಗನುಸಾರ ಉಪಚಾರ, ಅಂದರೆ ವಿಶ್ರಾಂತಿ, ನೀರಿನ ಪ್ರಮಾಣವನ್ನು ಯೋಗ್ಯವಾಗಿಡುವುದು, ಸ್ವಚ್ಛತೆಯನ್ನು ಇಡುವುದು ಅಂದರೆ ವಿಷಾಣುವಿನ ಸಂಸರ್ಗ ಆಗದಂತೆ ನೋಡಿಕೊಳ್ಳುವುದು, ಸೋಂಕಾದರೆ (ಬೊಕ್ಕೆಗಳಲ್ಲಿ ಹಳದಿ ಬಣ್ಣದ ರಸಿಕೆ ತುಂಬಿದರೆ ಎಂಟಿಬಾಯೋಟಿಕ್ಸ ಗಳನ್ನು ತೆಗೆದುಕೊಳ್ಳುವುದು ಇಷ್ಟು ಉಪಾಯಗಳನ್ನು ಮಾಡಿದರೆ ಸಾಕಾಗುತ್ತದೆ.) ಬೊಕ್ಕೆಗಳು ಎದ್ದ ಮೇಲೆ ಹೆಚ್ಚಾಗಿ ಜ್ವರ ಕಡಿಮೆಯಾಗುತ್ತದೆ; ಆದರೆ ಬೊಕ್ಕೆಗಳು ಒಣಗಿದ ನಂತರ ಅವುಗಳ ಕಲೆಗಳು ಮಾತ್ರ ಶರೀರದ ಮೇಲೆ ಉಳಿಯಬಹುದು. ಈ ಬೊಕ್ಕೆಗಳು ಗುಪ್ತಾಂಗದ ಮೇಲೆ, ಬಾಯಿಯಲ್ಲಿ ಹಾಗೆಯೇ ಕಣ್ಣುಗಳಲ್ಲಿಯೂ ಏಳಬಹುದು ಮತ್ತು ಇದರಿಂದ ಹೆಚ್ಚು ತೊಂದರೆಯಾಗುವ ಸಾಧ್ಯತೆಯಿರುತ್ತದೆ. ಕಣ್ಣುಗಳಲ್ಲಿ ಬೊಕ್ಕೆಗಳು ಬಂದರೆ ದೃಷ್ಟಿ ಹೋಗುವ ಅಪಾಯವೂ ಇರುತ್ತದೆ.

೭. ರೋಗನಿರೋಧಕಶಕ್ತಿ ಕಡಿಮೆಯಿರುವ ಮತ್ತು ಗರ್ಭಿಣಿ ಸ್ತ್ರೀಯರಿಗೆ ಇದು ಅಪಾಯಕಾರಿ ರೋಗವಾಗಿದೆ 

ಈ ರೋಗ ಚಿಕ್ಕ ಮಕ್ಕಳಿಗೆ ಹೆಚ್ಚು ಗಂಭೀರ ರೀತಿಯಲ್ಲಿ ಬರಬಹುದು. ಆದ್ದರಿಂದ ಜ್ವರ ಮತ್ತು ಬೊಕ್ಕೆಗಳು ಕಂಡುಬಂದರೆ ಕೂಡಲೇ ಡಾಕ್ಟರರ ಸಲಹೆಯನ್ನು ಆವಶ್ಯ ಪಡೆಯಬೇಕು. ಯಾವುದೇ ವ್ಯಕ್ತಿಯಲ್ಲಿ ಯಾವುದೇ ಕಾರಣದಿಂದ ‘ಇಮ್ಯುನಿಟಿ’ (ರೋಗನಿರೋಧಕಶಕ್ತಿ) ಕಡಿಮೆಯಿದ್ದರೆ, ಉದಾ. ಏಡ್ಸ್ ರೋಗಿಗಳು, ಸ್ಟಿರಾಯಿಡ್‌ಗಳ ಉಪಯೋಗ ಮಾಡುವವರು, ಇತರ ಗಂಭೀರ ಕಾಯಿಲೆಗೊಳಗಾದ ವ್ಯಕ್ತಿಗಳು ರೋಗಿಗಳ ಸಂಪರ್ಕದಲ್ಲಿ ಬರಬಾರದು ಮತ್ತು ರೋಗವಾದರೆ ವೈದ್ಯಕೀಯ ಸಲಹೆಗನುಸಾರ ಕಾಳಜಿ ವಹಿಸಬೇಕು. ಗರ್ಭಿಣಿ ಸ್ತ್ರೀಯರನ್ನು ಈ ಕಾಯಿಲೆಯಿಂದ ದೂರವಿಡಬೇಕು; ಏಕೆಂದರೆ ಇದರಿಂದ ಗರ್ಭಪಾತದ ಮತ್ತು ನವಜಾತ ಶಿಶುವಿಗೆ ಜನನದಿಂದಲೆ ರೋಗವಾಗುವ ಅಪಾಯವಿರುತ್ತದೆ.

೮. ಈ ರೋಗ ವಿವಿಧ ದೇಶಗಳಲ್ಲಿ ಹರಡುವುದರ ಕಾರಣಗಳನ್ನು ಕಂಡುಹಿಡಿಯುವುದು ಆರಂಭವಾಗಿದೆ

ಸದ್ಯ ಕಂಡುಬರುವ ಹೊಸ ವೈರಾಣುವಿನಲ್ಲಿ (ರೋಗಾಣುವಿನಲ್ಲಿ) ಉತ್ಪರಿವರ್ತನೆ (ರೂಪಾಂತರಿತವಾಗುವುದು) ಕಂಡುಬಂದಿದೆ. ‘ಈ ಬದಲಾವಣೆಯಿಂದ ವೈರಾಣುವಿಗೆ ಮಾನವರಲ್ಲಿ ಹರಡುವ ಲಾಭ ಸಿಕ್ಕಿರಬಹುದು’, ಎಂದು ವಿಜ್ಞಾನಿಗಳ ಅನುಮಾನವಿದೆ. ‘ಕೊರೊನಾದಿಂದ ಎಲ್ಲರ ರೋಗನಿರೋಧಕ ಶಕ್ತಿಯ ಮೇಲೆ ದುಷ್ಪರಿಣಾಮವಾಗಿರುವುದರಿಂದ ಈ ಕಾಯಿಲೆಯನ್ನು  ಯೋಗ್ಯ ರೀತಿಯಲ್ಲಿ ಎದುರಿಸಲು ಸಾಧ್ಯವಾಗದಿರಬಹುದು’, ಎಂಬುದು ಕೂಡ ಒಂದು ಅನುಮಾನವಿದೆ. ಇಷ್ಟು ವರ್ಷಗಳ ನಂತರ ಈ ರೋಗವು ಆಫ್ರಿಕಾವನ್ನು ಬಿಟ್ಟು ಹೊರಗಿನ ವಿವಿಧ ದೇಶಗಳಲ್ಲಿ ಹರಡುವ ಕಾರಣವನ್ನು ಶೋಧಿಸಲಾಗುತ್ತಿದೆ. ಆದ್ದರಿಂದ ಕಾಲಕಾಲಕ್ಕೆ ನೀಡುವ ಸೂಚನೆಗಳನ್ನು ಪಾಲಿಸುವುದು, ದೇಶದ ಸುರಕ್ಷತೆಗಾಗಿ ಮಹತ್ವದ್ದಾಗಿದೆ.

೯. ಮಂಕೀಪಾಕ್ಸ್ ರೋಗವು ದೇಶದಲ್ಲಿ ವಿಶಿಷ್ಟ ಸ್ಥಳದ ರೋಗ ಆಗದಂತೆ ನೋಡಿಕೊಳ್ಳುವುದು ಮಹತ್ವದ್ದಾಗಿದೆ !

ಅಮೇರಿಕಾದಲ್ಲಿ ೨೦೦೩ ರಲ್ಲಿ ಈ ಕಾಯಿಲೆಯ ಉದ್ರೇಕ ವಾಗಿತ್ತು. ಆಗ ‘ಪ್ರೈರಿ’ (Prairie) ಜಾತಿಯ ನಾಯಿಗಳಲ್ಲಿ ಇದರ ಸೋಂಕು ಹರಡಿದ್ದರಿಂದ ಅವುಗಳಿಂದ ಮಾನವನಲ್ಲಿ ಈ ರೋಗ ಹರಡಿತ್ತು. ಇದು ಮುಖ್ಯವಾಗಿ ಪ್ರಾಣಿಗಳಿಗೆ ಬರುವ ರೋಗವಾಗಿದ್ದರಿಂದ ಮಂಗ, ನಾಯಿ ಹಾಗೆಯೇ ಚಿಕ್ಕ ಪ್ರಾಣಿಗಳಲ್ಲಿ, ಅಂದರೆ ಇಲಿ, ಹೆಗ್ಗಣ, ಅಳಿಲು, ಇಂತಹ ಪ್ರಾಣಿಗಳಲ್ಲಿಯೂ ಸೋಂಕು ಹರಡುವ ಸಾಧ್ಯತೆಯಿದೆ. ಯಾವುದಾದರೊಂದು ದೇಶ ದಲ್ಲಿ ಹೀಗೆ ಘಟಿಸಿದರೆ ಅದು ವಿಶಿಷ್ಟ ಸ್ಥಳದಲ್ಲಿರುವ ಜನರಿಗೆ ಆಗುವ ರೋಗ (ಎಂಡೆಮಿಕ್ – endemic) ಆಗಬಹುದು ಮತ್ತು ಅದರ ನಿಯಂತ್ರಣ ಸ್ವಲ್ಪ ಕಠಿಣವಾಗಬಹುದು. ಮಂಕೀಪಾಕ್ಸ್ ಈ ರೋಗವು ಸಿಡುಬುರೋಗದ ಹಾಗೆ ಉಚ್ಚಾಟನೆಯಾಗಲು ಸಹಜ ಸಾಧ್ಯವಿಲ್ಲ. ಈ ರೋಗವನ್ನು ದೇಶದಲ್ಲಿ ವಿಶಿಷ್ಟ ಸ್ಥಳದಲ್ಲಿ ಆಗದಂತೆ ನೋಡಿಕೊಳ್ಳುವುದು ಮಹತ್ವದ್ದಾಗಿದೆ.

೧೦. ಸೋಂಕನ್ನು ತಪ್ಪಿಸಲು ಯೋಗ್ಯ ಕೃತಿಗಳನ್ನು ಮಾಡಿದರೆ ಭಾರತವನ್ನು ಈ ರೋಗದಿಂದ ಸುರಕ್ಷಿತವಾಗಿಡಬಹುದು !

ಸದ್ಯ ಪ್ರತಿಯೊಬ್ಬ ಶಂಕಿತ ರೋಗಿಯನ್ನು ಗುರುತಿಸುವುದು, ಅತ್ಯಾವಶ್ಯಕವಾಗಿದೆ. ಜ್ವರ ಮತ್ತು ಮೈಮೇಲೆ ಬೊಕ್ಕೆಗಳಿದ್ದರೆ ವೈದ್ಯಕೀಯ ವಿಭಾಗದವರಿಗೆ (Government Health Department) ಈ ವಿಷಯವನ್ನು ತಿಳಿಸಿರಿ ಮತ್ತು ಇತರರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಬೇಡಿರಿ. ಈ ರೋಗ ಎಲ್ಲ ವಯಸ್ಸಿನ ಜನರಿಗೆ ಆಗಬಹುದು. ವಿದೇಶಗಳ ಪ್ರವಾಸ ಮಾಡಿ ಬಂದವರು ಹೆಚ್ಚಿನ ಕಾಳಜಿಯನ್ನು ವಹಿಸಬೇಕು. ೨೧ ದಿನಗಳ ವರೆಗೆ ತಮ್ಮ ನಿರೀಕ್ಷಣೆಯನ್ನು ಕಾಳಜಿಪೂರ್ವಕ ಮಾಡಬೇಕು. ಎಲ್ಲ ಡಾಕ್ಟರರು ಜ್ವರದ ರೋಗಿಗಳ ತಪಾಸಣೆ ಮಾಡುವಾಗ ‘ಬೊಕ್ಕೆಗಳಿವೆಯೇ ? ದುಗ್ದರಸ ಗ್ರಂಥಿಗಳ (ಲಿಂಫ ಗ್ಲ್ಯಾಂಡ) ಬೆಳವಣಿಗೆ ಆಗಿದೆಯೆ ? ಎಂಬುದನ್ನು ತಪಾಸಣೆ ಮಾಡುವುದು ಆವಶ್ಯಕವಾಗಿದೆ ಮತ್ತು ಪ್ರತಿಯೊಬ್ಬ ಶಂಕಿತ ರೋಗಿಯನ್ನು ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ ದಾಖಲಿಸಬೇಕು. ಈ ಕಾಯಿಲೆಗೂ ಒಂದು ತಪಾಸಣೆಯನ್ನು ವಿಕಸನಗೊಳಿಸಲಾಗಿದೆ. ಈ ಕಾಯಿಲೆಯ ವಿಷಯದಲ್ಲಿ ಪಕ್ಷಪಾತ ಮತ್ತು ಕಲಂಕಿತ ಅಭಿಪ್ರಾಯ ಉತ್ಪನ್ನವಾಗದಂತೆ ನೋಡಿಕೊಂಡು ಯೋಗ್ಯ ಕಾಳಜಿ ವಹಿಸಿದರೆ ಹಾಗೆಯೇ ತಪ್ಪು ಮಾಹಿತಿಗಳಿಗೆ ಬಲಿಯಾಗದೆ ಕಾಯಿಲೆ ಮತ್ತು ಅದರ ಸೋಂಕನ್ನು ತಪ್ಪಿಸಲು ಯೋಗ್ಯ ಕೃತಿಗಳನ್ನು ಮಾಡಿದರೆ ಭಾರತವನ್ನು ಸುರಕ್ಷಿತವಾಗಿಡಲು ಸಾಧ್ಯ ವಾಗುವುದು. ಇದಕ್ಕೆ ಶಾಸ್ತ್ರೀಯ ದೃಷ್ಟಿಕೋನ ಮತ್ತು ಜನರ ಸಹಕಾರದ ಅವಶ್ಯಕತೆಯಿದೆ. ನಾವೆಲ್ಲರೂ ಮಂಕೀಪಾಕ್ಸ್‌ನಿಂದ ಸುರಕ್ಷಿತ ವಾಗಿರಲು ಜಾಗರೂಕರಾಗಿದ್ದು ಅದನ್ನು ದೂರವಿಡೋಣ !

– ಡಾ. ಪ್ರಿಯಾ ಪ್ರಭು-ದೇಶಪಾಂಡೆ, ಸಹಪ್ರಾಧ್ಯಾಪಕಿ, ಸರಕಾರಿ ವೈದ್ಯಕೀಯ ಮಹಾವಿದ್ಯಾಲಯ, ಮೀರಜ್. (ಆಧಾರ : ಸಾಪ್ತಾಹಿಕ ‘ವಿವೇಕ’)