ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲಿನಲ್ಲಿ ಬೈಬಲ್ ಕಡ್ಡಾಯ ಮಾಡುವುದು ವಿದ್ಯಾರ್ಥಿಗಳನ್ನು ಮತಾಂತರಿಸುವ ಸಂಚು ! – ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು – ದಕ್ಷಿಣ ಭಾರತದ ಅನೇಕ ಕ್ರೈಸ್ತ ಕಾನ್ವೆಂಟ್ ಶಾಲೆಗಳಲ್ಲಿ ಹಿಂದೂ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಯಲು ಕಡ್ಡಾಯ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಶಾಲೆಯ ಪ್ರವೇಶಕ್ಕೆ ಹೀಗೊಂದು ನಿಯಮವಿದೆ ಎನ್ನಲಾಗುತ್ತಿದೆ; ಆದರೆ ವಾಸ್ತವದಲ್ಲಿ ಯಾವುದೇ ಖಾಸಗಿ ಶಾಲೆಯ ನಿಯಮವು ಭಾರತದ ಸಂವಿಧಾನಕ್ಕಿಂತ ಮಿಗಿಲಾಗಿಲ್ಲ. ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೆ ತನ್ನ ಧರ್ಮವನ್ನು ಪಾಲಿಸಲು ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುತ್ತದೆ. ಆದರೆ ಅದನ್ನು ಅತಿಕ್ರಮಣ ಮಾಡುವ ಮೂಲಕ ಬೈಬಲ್ ಬೋಧನೆಯನ್ನು ಬಲವಂತಪಡಿಸುವುದು ಸಂವಿಧಾನಬಾಹಿರವಾಗಿದೆ. ಅದೇ ರೀತಿ ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲ್‌ನಲ್ಲಿ ಬೈಬಲ್ ಕಡ್ಡಾಯವಿರುವುದು ವಿದ್ಯಾರ್ಥಿಗಳನ್ನು ಮತಾಂತರಿಸುವ ಸಂಚಾಗಿದೆ ಎಂದು ಹಿಂದೂ ಜನಜಾಗೃತಿ ಸಮಿತಿಯು ಹೇಳಿದೆ.

ವಾಸ್ತವದಲ್ಲಿ ಕ್ರೈಸ್ತ ಶಾಲೆಗಳು ಇತರ ಧರ್ಮದ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಪ್ರವೇಶ ನೀಡುವುದು ಮತ್ತು ಅದನ್ನು ನೀಡುವಾಗ ಬೈಬಲ್ ಕಲಿಯುವುದನ್ನು ಕಡ್ಡಾಯಗೊಳಿಸುವುದು ಅನೈತಿಕ ಮತ್ತು ಕಾನೂನಿಗೆ ವಿರುದ್ಧವಾಗಿದೆ. ವಿದ್ಯಾರ್ಥಿಗಳು ಶಾಲೆಗಳಿಗೆ ಶಿಕ್ಷಣ ಪಡೆಯಲು ಹೋಗುತ್ತಾರೆಯೇ ವಿನಃ ಬೈಬಲ್ ಕಲಿಯಲು ಅಲ್ಲ. ಬೈಬಲ್ ಕಲಿಸಲು ಚರ್ಚ್ ಇದೆ. ಶಾಲೆಗಳು ಶಿಕ್ಷಣ ಸಂಸ್ಥೆಗಳಾಗಿವೆಯೇ ಹೊರತು ಧಾರ್ಮಿಕ ಸಂಸ್ಥೆಗಳಲ್ಲ ಎಂಬುದನ್ನು ಕಾನ್ವೆಂಟ್ ಶಾಲೆಗಳು ನೆನಪಿನಲ್ಲಿಟ್ಟುಕೊಳ್ಳಬೇಕು. ಭಾರತೀಯ ಸಂವಿಧಾನದ 25 ನೇ ವಿಧಿಯು ಎಲ್ಲಾ ಧರ್ಮಗಳ ನಾಗರಿಕರಿಗೆ ಧಾರ್ಮಿಕಸ್ವಾತಂತ್ರ್ಯವನ್ನು ನೀಡುತ್ತದೆ, ಹೀಗಿರುವಾಗ ಹಿಂದೂ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಸಲು ಒತ್ತಾಯಿಸುವುದು ಅಸಾಂವಿಧಾನಿಕವಾಗಿದೆ.

(ಸೌಜನ್ಯ : Tv9 Kannada)

ಚಿಕ್ಕ ಮಕ್ಕಳಿಗೆ ಮತ್ತು ಅಪ್ರಾಪ್ತರಿಗೆ ಬೈಬಲ್ ಕಲಿಸಿ ಆದರ್ಶ ನಾಗರಿಕರೆಂದು ರೂಪಿಸುವುದಾಗಿ ಹೇಳುವುದು ಹಾಸ್ಯಾಸ್ಪದವಾಗಿದೆ; ಆದರ್ಶ ನಾಗರಿಕರಾನ್ನಾಗಿ ಮಾಡಲು ಬೈಬಲ್ ಅನ್ನೇ ಏಕೆ ಕಲಿಸಬೇಕು ? ಹಾಗಾದರೆ ಹಿಂದೂ ಮಕ್ಕಳಿಗೆ ಶ್ರೀಮದ್ಭಗವದ್ಗೀತೆಯನ್ನು ಏಕೆ ಕಲಿಸಬಾರದು ? ಅಲ್ಲದೇ ಯಾವ ಕ್ರೈಸ್ತ ವಿದ್ಯಾರ್ಥಿಗಳು ನಾಸ್ತಿಕರಿದ್ದು ಯಾರು ಬೈಬಲ್ ಕಲಿಯಲು ಇಷ್ಟಪಡುವುದಿಲ್ಲವೋ ಅಂತಹ ವಿದ್ಯಾರ್ಥಿಗಳಿಗೆ ಬೈಬಲ್ ಕಲಿಸಲು ಒತ್ತಾಯಿಸುವುದು ಅವರ ಅಭಿವ್ಯಕ್ತಿಸ್ವಾತಂತ್ರ್ಯದ ವಿರುದ್ಧವಾಗುವುದಿಲ್ಲವೇ ? ಶಾಲೆಯ ಮುಖ್ಯೋಪಾಧ್ಯಾಯರು ಶಾಲೆಯಲ್ಲಿ ಬೈಬಲ್ ಕಡ್ಡಾಯದ ನಿಯಮ ಹಳೆಯದಾಗಿದೆ, ಆದ್ದರಿಂದ ಅದು ಸರಿಯಾಗಿದೆ ಎಂದು ಹೇಳುತ್ತಾರೆ; ಆದರೆ ವಾಸ್ತವದಲ್ಲಿ ನಮ್ಮ ದೇಶದಲ್ಲಿ ಸಂವಿಧಾನ ಮತ್ತು ಕಾನೂನುಗಳು ಶಾಲಾ ನಿಯಮಗಳಿಗಿಂತ ಮೇಲಿವೆ. ಆದ್ದರಿಂದ ಸಂವಿಧಾನ ಮತ್ತು ಕಾನೂನಿನ ಚೌಕಟ್ಟಿನಲ್ಲಿಯೇ ಶಾಲೆಗಳನ್ನು ನಡೆಸಬೇಕು. ಸಂವಿಧಾನ ಮತ್ತು ಕಾನೂನುಗಳನ್ನು ಶಾಲಾ ನಿಯಮಗಳ ಪ್ರಕಾರ ರಚಿಸಲಾಗಿಲ್ಲ. ಹಾಗಾಗಿ ಶಾಲಾ ನಿಯಮಗಳು ಸಂವಿಧಾನಬಾಹಿರವಾಗಿದ್ದರೆ, ಅವುಗಳನ್ನು ಬದಲಾಯಿಸಬೇಕು. ಇದು ಹಳೆಯದಾಗಿದೆ ಎಂಬ ಕಾರಣಕ್ಕೆ ಸರಿ ಎಂದು ಹೇಳಲಾಗದು.

ಇದೇ ಕಾನ್ವೆಂಟ್ ಶಾಲೆಯು ಧರ್ಮದ ಹೆಸರಿನಲ್ಲಿ ಜೂನ್ 21 ರ ಯೋಗ ದಿನಾಚರಣೆಯನ್ನು ವಿರೋಧಿಸುತ್ತದೆ. ಯೋಗ ದಿನವನ್ನು ಜಗತ್ತಿನಾದ್ಯಂತದ ಕ್ರೈಸ್ತ, ಮುಸಲ್ಮಾನ, ಬೌದ್ಧ ದೇಶಗಳಲ್ಲಿ ಆಚರಿಸಲಾಗುತ್ತದೆ; ಆದರೆ ಭಾರತದಲ್ಲಿ, ಯೋಗ ದಿನವನ್ನು ಹಿಂದೂ ಆಚರಣೆಯಾಗಿದೆ ಎಂದು ಹಾಗೂ ಶಾಲೆಗಳು ಸೆಕ್ಯುಲರ್ ಇದೆ ಎಂದು ಹೇಳುತ್ತಾ ಅದನ್ನು ನಿರಾಕರಿಸಲಾಗುತ್ತದೆ. ಹಾಗಾದರೆ ಸೆಕ್ಯುಲರ್ ದೇಶದ ಶಾಲೆಯಲ್ಲಿ ಬೈಬಲ್ ಅನ್ನು ಹೇಗೆ ಕಡ್ಡಾಯ ಮಾಡಬಹುದು ? ಆದ್ದರಿಂದ, ಕ್ರೈಸ್ತ ಶಾಲೆಗಳು ಮೊದಲು ಬೈಬಲನ್ನು ಕಡ್ಡಾಯ ಮಾಡುವ ಹೆಸರಿನಲ್ಲಿ ಕ್ರೈಸ್ತ ಧರ್ಮದ ಪ್ರಸಾರ ಮಾಡುವುದನ್ನು ನಿಲ್ಲಿಸಬೇಕು, ಇಲ್ಲದಿದ್ದರೆ ಅದನ್ನು ಪ್ರಬಲವಾಗಿ ವಿರೋಧಿಸಲಾಗುತ್ತದೆ. ಕರ್ನಾಟಕ ಸರಕಾರ ಮತ್ತು ಶಿಕ್ಷಣ ಇಲಾಖೆಯು ಕ್ರೈಸ್ತ ಶಾಲೆಗಳು ಈ ರೀತಿ ಬಲವಂತವಾಗಿ ಧರ್ಮಪ್ರಚಾರ ಮಾಡುವುದರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ರಾಜ್ಯದಲ್ಲಿ ಕಾನೂನು ಸರ್ವೋಚ್ಚವಾಗಿದೆ ಎಂಬುದನ್ನು ಸಂಬಂಧಪಟ್ಟವರಿಗೆ ತೋರಿಸಬೇಕು ಎಂದು ಸಮಿತಿಯು ಹೇಳಿದೆ.